ಅಡುಗೆಯಲ್ಲಿ ಕೊತ್ತಂಬರಿಗೆ ಅಗ್ರಸ್ಥಾನ. ಇದು ಅಡುಗೆಗೆ ಸುಗಂಧ ಬರುವಂತೆ ಮಾಡುತ್ತದೆ. ಅಲ್ಲದೆ ರುಚಿಯನ್ನು ಹೆಚ್ಚಿಸುವುದುಂಟು. ಕೊತ್ತಂಬರಿ ರಕ್ತಹೀನತೆಗೆ ಮತ್ತು ಹಲವಾರು ರೋಗಗಳಿಗೆ ಮದ್ದು ಕೂಡ ಹೌದು.
ಬೆಳೆಯುವ ವಿಧಾನ
ಬಿತ್ತುವ ಮೊದಲು ಕೊತ್ತಂಬರಿ ಬೀಜವನ್ನು 12 ಗಂಟೆ ನೀರಲ್ಲಿ ನೆನೆಹಾಕುವುದು ಉತ್ತಮ. ಬಳಿಕ ಹದ ಮಾಡಿದ ಜಮೀನಲ್ಲಿ ನಾಟಿ ಮಾಡಬೇಕು. ಸಾಲಿನಿಂದ ಸಾಲಿಗೆ 25 ಸೆಂ.ಮೀ. ಅಂತರ ಮತ್ತು ಸಸಿಯಿಂದ ಸಸಿಗೆ 15 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ಎಕರೆಗೆ 6- 7 ಕೆ.ಜಿ. ಬೀಜ ಬೇಕಾಗುತ್ತದೆ. ಬಿತ್ತಿದ 10 ದಿನದಲ್ಲಿ ಮೊಳಕೆಯೊಡೆಯುತ್ತದೆ. ನೀರಾವರಿಯಾದರೆ ಆಗಾಗ ನೀರು ಹಾಯಿಸಬೇಕು. ಕಳೆ, ರೋಗ ಬಾರದಂತೆ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಸರಾಸರಿ 100 ದಿನದೊಳಗೆ ಕಟಾವಿಗೆ ಬರುತ್ತದೆ. ಮಾರುಕಟ್ಟೆ ನೋಡಿಕೊಂಡು ಕಟಾವು ಮಾಡಬೇಕು.
ಮಣ್ಣು
ನೀರಾವರಿಗಾದರೆ ಸಾವಯವ ಅಂಶವಿರುವ ಎಲ್ಲ ನಮೂನೆಯ ಮಣ್ಣಲ್ಲಿ ಹಾಗೂ ಮಳೆಯಾಶ್ರಿತವಾದರೆ ನೀರು ಹಿಡಿದಿಟ್ಟುಕೊಳ್ಳುವ ಮಣ್ಣಲ್ಲಿ ಚೆನ್ನಾಗಿ ಬೆಳೆಯುತ್ತದೆ. ಅಕ್ಟೋಬರ್- ಫೆಬ್ರವರಿಯಲ್ಲಿ ಬಿತ್ತನೆಗೆ ಸಕಾಲ. ನೀರಾವರಿಯಾದರೆ ವರ್ಷದ ಎಲ್ಲ ತಿಂಗಳಲ್ಲೂ ನಾಟಿ ಮಾಡಬಹುದು.
ತಳಿಗಳು
ಸಿಓ- 2, ಸಿಮ್ಕೊ ಎಸ್- 33, ಮೊರಾಕ್ಕಾನ್, ಲ್ಯಾಮ್ ಸಿಎಸ್- 6, ಗ್ವಾಲಿಯರ್- 5365 ಸೇರಿದಂತೆ ಮೊದಲಾದ ತಳಿಗಳು ಚಾಲ್ತಿಯಲ್ಲಿವೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯಬಹುದು.