ಕೆಲವೊಂದಿಷ್ಟು ತರಕಾರಿಗಳು ಸೀಮಿತ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಅಂಥ ಅಪರೂಪದ ಬೆಳೆಗಳಲ್ಲಿ ಕತ್ತಿ ಅವರೆಯೂ ಒಂದು. ಕತ್ತಿಯಂತೆ ಚಪ್ಪಟೆಯಾಗಿ, ಸ್ವಲ್ಪ ಡೊಂಕಾಗಿರುವ ಈ ಅವರೆಯನ್ನು ಕತ್ತಿ ಅವರೆ ಅಥವಾ ಚಪ್ಪಟೆ ಅವರೆ ಎಂದು ಕರೆಯುತ್ತಾರೆ. canavacia ensiformis ಇದರ ಸಸ್ಯಶಾಸ್ತ್ರೀಯ ಹೆಸರು. ಇದು Fabaceae ಕುಟುಂಬಕ್ಕೆ ಸೇರಿದೆ. ರುಚಿಯಾದ ಈ ತರಕಾರಿ ಗಿಡವನ್ನು ಮೊದಲು ಕೈತೋಟಗಲ್ಲಿ ಮನೆಯ ಖರ್ಚಿಗಾಗಿ ಮಾತ್ರ ಬೆಳೆಯಲಾಗುತ್ತಿತ್ತು. ಆದರೆ, ಈಗೀಗ ಕೆಲವೆಡೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಕೆಲವು ಕಡೆ ಮಾರುಕಟ್ಟೆಗಳಲ್ಲಿಯೂ ಅಲ್ಪ ಪ್ರಮಾಣದಲ್ಲಿ ಅಪರೂಪಕ್ಕೆ ದೊರೆಯುವ ತರಕಾರಿ ಇದಾಗಿದೆ.
ಬೆಳೆಯುವ ವಿಧಾನ
ಭೂಮಿಯನ್ನು ಹದಗೊಳಿಸಿ, ಬಲಿತ ಬೀಜಗಳನ್ನು ಒಂದು ಅಡಿ ಅಂತರದಲ್ಲಿ ಬಿತ್ತನೆ ಮಾಡಬೇಕು. ನೆಟ್ಟ ಎರಡು ವಾರಗಳಲ್ಲಿಯೇ ಬಳ್ಳಿಯ ಬೆಳವಣಿಗೆ ಪ್ರಾರಂಭ. ಬಳ್ಳಿಯು ಸರಿಯಾಗಿ ಹಬ್ಬಲು ಚಪ್ಪರ ಮಾಡಬೇಕು. ಇಲ್ಲವಾದರೆ ಯಾವುದಾದರೂ ಮರಗಳಿಗೆ ಹಬ್ಬಲು ಬಿಡಬೇಕು (ಕೈತೋಟಗಳಲ್ಲಿ) ಗಿಡ ನೆಟ್ಟ ಎರಡು ತಿಂಗಳಿನಲ್ಲೇ ಕಾಯಿ ಬಿಡಲು ಪ್ರಾರಂಭಿಸುತ್ತದೆ.
ಎಲ್ಲೆಲ್ಲಿ ಬೆಳೆಯಬಹುದು?
ಕರಾವಳಿ, ಮಲೆನಾಡು, ಅರೆಮಲೆನಾಡಿನ ಭಾಗಗಳಲ್ಲಿ ಈ ಬೆಳೆ ಬೆಳೆಯಬಹುದು. ನೀರಿನ ಅಭಾವವಿರುವ ಕೃಷಿ ಭೂಮಿಯಲ್ಲಿ ಹನಿ ನೀರಾವರಿ ಪದ್ಧತಿಯಲ್ಲೂ ಅಧಿಕ ಇಳುವರಿ ಪಡೆಯಬಹುದು. ಕಲಘಟಗಿ, ಹಾವೇರಿ- ಹಾನಗಲ್ ಭಾಗದ ರೈತರು ಇದನ್ನು ಮಿಶ್ರಬೆಳೆಯಾಗಿ ಬೆಳೆಯುತ್ತಿದ್ದಾರೆ. ಆದರೆ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಕೈತೋಟದಲ್ಲಿ ಮನೆಯ ಬಳಕೆಗೆ ಮಾತ್ರ ಬೆಳೆಯುತ್ತಾರೆ.
ಆದಾಯ
ಹವಾಗುಣಕ್ಕೆ ಅನುಗುಣವಾಗಿ ಈ ತರಕಾರಿ ಗಿಡವನ್ನು ಆಯಾ ಭಾಗಕ್ಕೆ ತಕ್ಕಂತೆ ಬೇರೆ ಬೇರೆ ಋತುವಿನಲ್ಲಿ ಬೆಳೆಯಬಹುದು. ಚೆನ್ನಾಗಿ ಬೆಳೆ ಬಂದರೆ ಎಕರೆಗೆ 4ರಿಂದ 8 ಟನ್ ಇಳುವರಿ ಕೇವಲ 3 ತಿಂಗಳಿನಲ್ಲಿ ಪಡೆಯಬಹುದೆಂಬುದು ಕಲಘಟಗಿಯ ಯುವ ರೈತ ಸಂಗಮೇಶ ಅವರ ಅಭಿಪ್ರಾಯ. ಮಾರುಕಟ್ಟೆಯಲ್ಲಿ ಕಿಲೋ ಒಂದಕ್ಕೆ ರು. 30ರಿಂದ ರು. 60ರ ತನಕ ಮಾರಾಟವಾಗುವ ಈ ಅಪರೂಪದ ತರಕಾರಿಗೆ ಬೇಡಿಕೆಯೂ ಅಧಿಕ. <
-ಪ್ರೊ. ಶಿವಾನಂದ ಎಸ್. ಭಟ್ಟ