ಬೇಸಿಗೆ ಆಗಮಿಸಿದೆ. ಕಳೆದ ಮಳೆಗಾಲ ಸರಿಯಾಗಿ ಮಳೆಯಾಗದೆ ಎಲ್ಲೆಲ್ಲೂ ನೀರಿಗೆ ತತ್ವಾರ. ಕುಡಿವ ನೀರಿಗೂ ಸಂಚಕಾರ. ಹೀಗಿರುವಾಗ ತೋಟ- ತುಡಿಕೆಗಳಿರುವ ರೈತರ ಸಂಕಟ ಹೇಳತೀರದು. ಬೆಳೆದು ನಿಂತಿರುವ ತೋಟಗಳನ್ನು ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಹತ್ತು ಕೊಳವೆ ಬಾವಿ ಕೊರೆಸಿದರೆ ಒಂದೆರಡರಲ್ಲಿ ಮಾತ್ರ ನೀರು ಲಭ್ಯ. ಅತ್ತ ಹಣವೂ ಇಲ್ಲ, ಇತ್ತ ನೀರೂ ಸಿಗುತ್ತಿಲ್ಲ. ಒಂದು ವೇಳೆ ನೀರು ಸಿಕ್ಕರೂ ಒಂದೆರಡು ತಿಂಗಳಲ್ಲೇ ಒಣಗುವ ಕೊಳವೆ ಬಾವಿಗಳೇ ಹೆಚ್ಚು. ಹೀಗಿರುವಾಗ ಕಡಿಮೆ ನೀರಿನಲ್ಲೆ ತೋಟ ಉಳಿಸಿಕೊಳ್ಳುವ ಬಗೆ ಹೇಗೆ ಇಲ್ಲಿದೆ ಇಬ್ಬರು ರೈತರ ಜಾಣ್ಮೆ.
ಮಧುಗಿರಿ ತಾಲೂಕು ಬಡವನಹಳ್ಳಿಯ ರಂಗನಾಥರ ಅಡಕೆ ತೋಟಕ್ಕೆ ಕಾಲಿಟ್ಟಾಗ ನೆಲ ಕಾಣದಂತೆ ಹಸಿರು ತುಂಬಿತ್ತು. ಸಿರಿಧಾನ್ಯವಾದ ಕೊರಲೆಯನ್ನು ಇಡೀ ತೋಟಕ್ಕೆ ಚೆಲ್ಲಿದ್ದರು. ತುಂಬಾ ವರ್ಷಗಳಿಂದಲೂ ಪ್ರತಿವರ್ಷ ಬೇಸಿಗೆಗೆ ಮುನ್ನ ಅಂದರೆ ಡಿಸೆಂಬರ್, ಜನವರಿಯಲ್ಲಿ ಇದೇ ಪದ್ಧತಿ ಅನುಸರಿಸುತ್ತಿದ್ದಾರೆ. ಬೇಸಿಗೆಯಲ್ಲಿ ಸಹಜವಾಗಿಯೇ ಅಡಕೆ ಮರಗಳು ಹೆಚ್ಚು ನೀರು ಕೇಳುತ್ತವೆ. ಆದರೆ, ಅಂತರ್ಜಲ ಕುಸಿತದಿಂದ ಕೊಳವೆ ಬಾವಿಯಲ್ಲೆ ನೀರಿನ ಪ್ರಮಾಣ ಕಡಿಮೆ. ಜೊತೆಗೆ ವಿದ್ಯುತ್ ಅಭಾವವೂ ಉಂಟಾಗಿ ಯಥೇಚ್ಛ ನೀರು ಹಾಯಿಸುವುದು ಕಷ್ಟ ಸಾಧ್ಯ. ಮುಚ್ಚಿಗೆ ಹಾಕಲು ಅಷ್ಟೊಂದು ತರಗು, ಎಲೆ ಸಿಗುವುದು ದುರ್ಲಭ. ಅಲ್ಲದೆ, ಒಣಗಿದ ತ್ಯಾಜ್ಯ ಹಾಕಿದರೆ ಬೇಸಿಗೆಯಲ್ಲಿ ಬೆಂಕಿಯ ಭಯ ಬೇರೆ. ಹಾಗಾಗಿ ಇವೆಲ್ಲ ತಾಪತ್ರಯಗಳಿಗೆ ಮುಕ್ತಿ ಎಂದರೆ ಕೊರಲೆ ಹಾಕುವುದು.
ಅಡಕೆ ತೋಟಕ್ಕೆ ಕೊರಲೆ ಚೆಲ್ಲುವುದರಿಂದ ಎರಡು ಲಾಭಗಳಿವೆ. ಒಂದು- ತೋಟಕ್ಕೆ ಜೀವಂತ ಮುಚ್ಚಿಗೆಯಾಗಿ ಮೇಲ್ಮಣ್ಣಿಗೆ ಬಿಸಿಲಿನಿಂದ ರಕ್ಷಣೆ, ಆ ಮೂಲಕ ನೀರಿನ ಉಳಿತಾಯ. ಎರಡು- ಬೇಸಿಗೆಯಲ್ಲಿ ದನ- ಕರುಗಳಿಗೆ ಮೇವಿನ ಪೂರೈಕೆ. ಕೊರಲೆ ಮೂರು ತಿಂಗಳಿಗೆಲ್ಲಾ ಕಟಾವಾಗುತ್ತದೆ. ಇದರ ಮೇವು ಅತಿ ಮೃದು. ಜಾನುವಾರುಗಳಿಗೆ ಅಚ್ಚುಮೆಚ್ಚು. ಜುಲೈನಲ್ಲಿ ಮುಂಗಾರು ಮಳೆ ಬಂದು ಹೊಲಗಳಲ್ಲಿ ಹಸಿರು ಮೇವು ಬೀಳುವವರೆಗೆ ಕೊರಲೆ ಹುಲ್ಲು ಕಾಪಾಡುತ್ತದೆ. ಬೇಸಿಗೆಯಲ್ಲಿ ಇತರರು ಒಣಹುಲ್ಲು ಹಾಕುತ್ತಾ ಕಾಲ ಕಳೆದರೆ ರಂಗನಾಥ್ ಮತ್ತವರ ನಾಲ್ವರು ಅಣ್ಣ-ತಮ್ಮಂದಿರ ಮನೆಗಳಲ್ಲಿ ಹಸಿ ಮೇವು ಇರುತ್ತದೆ.
ಎಕರೆಗೆ ಐದಾರು ಕಿಲೋ ಬಿತ್ತಬೇಕಾಗುತ್ತದೆ. ತೋಟವನ್ನು ಒಂದು ಬಾರಿ ಉಳುಮೆ ಮಾಡಿ ನಂತರ ಕೊರಲೆಯನ್ನು ತೆಳುವಾಗಿ ಬಿತ್ತಿ ಹಲುವೆ ಹೊಡೆಯಬೇಕು. ಹನಿ ನೀರಾವರಿ ಅಥವಾ ತುಂತುರು ನೀರಾವರಿ ಅಳವಡಿಸಿರುವ ತೋಟಗಳಿಗೆ ಕೊರಲೆ ಹಾಕುವುದು ತುಸು ಕಷ್ಟ. ಹಾಯಿ ನೀರಾವರಿ ಇರುವ ತೋಟಗಳಿಗೆ ಯಾವುದೇ ತೊಂದರೆಯಿಲ್ಲ.
ತುರುವೇಕೆರೆ ತಾಲೂಕು ದಬ್ಬೆಗಟ್ಟದ ನಾಗರಾಜು ಅಡಕೆ ತೋಟ ಉಳಿಸಲು ಮತ್ತೊಂದು ಉಪಾಯ ಮಾಡಿದ್ದಾರೆ. ಮಳೆಗಾಲದಲ್ಲಿ ತೊಗರಿ ಬಿತ್ತಿ ಬೆಳೆಬಂದಾಗ ಕಾಯಿಭರಿತ ಗೊನೆಗಳನ್ನು ಮಾತ್ರ ಕಟಾವು ಮಾಡಿಕೊಂಡು ಗಿಡಗಳನ್ನು ತೋಟದಲ್ಲೇ ಉಳಿಸುತ್ತಾರೆ. ಆಳೆತ್ತರ ಬೆಳೆದಿರುವ ತೊಗರಿ ಗಿಡಗಳು ಎಲೆಯುದುರಿಸುತ್ತಾ, ಹೊಸ ಚಿಗುರು ಬಿಡುತ್ತಾ ಮಣ್ಣನ್ನು ಬಿಸಿಲಿನಿಂದ ತಡೆದಿವೆ. ಇಲ್ಲಿಯೂ ಹಲವು ಅನುಕೂಲಗಳಿವೆ. ತೊಗರಿ ಬೇರುಗಳು ಸಾರಜನಕ ಸ್ಥಿರೀಕರಿಸುವ ಗುಣ ಹೊಂದಿದ್ದು, ಮಣ್ಣನ್ನು ಫಲವತ್ತುಗೊಳಿಸುತ್ತವೆ. ಎಲೆಗಳುದುರಿ ಕಳಿತು ಗೊಬ್ಬರವಾಗುತ್ತವೆ. ನಾಗರಾಜು ತಮ್ಮ ಅಡಕೆ, ತೆಂಗಿನ ತೋಟಗಳಿಗೆ ವರ್ಷಪೂರ್ತಿ ಒಂದಲ್ಲಾ ಒಂದು ದ್ವಿದಳ ಧಾನ್ಯದ ಬೆಳೆಗಳನ್ನು ಬಿತ್ತುತ್ತಲೇ ಇರುತ್ತಾರೆ. ಒಂದೇ ಬೋರ್‌ವೆಲ್‌ನಲ್ಲಿ ಇಷ್ಟೆಲ್ಲಾ ನಿರ್ವಹಣೆ ಮಾಡ್ತೀವಿ, ತೋಟನ ಖಾಲಿ ಬಿಟ್ರೆ ತೊಂದ್ರೆ ಅದುಕ್ಕೆ ಯಾವಾಗ್ಲೂ ಬೆಳೆ ಹಾಕಿರ್ತಿವಿ ಎನ್ನುತ್ತಾರೆ ನಾಗರಾಜು.
ರಂಗನಾಥ್ ಹಾಗೂ ನಾಗರಾಜು ಅವರ ಉದಾಹರಣೆ ಕೇವಲ ಪ್ರಾತಿನಿಧಿಕ. ಹೀಗೇ ಮಾಡಬೇಕೆಂದೇನಿಲ್ಲ. ಸ್ಥಳೀಯ ಲಭ್ಯ ಸರಳ ಉಪಾಯಗಳ ಬಗ್ಗೆ ಚಿಂತಿಸಿ ಜಾರಿಗೊಳಿಸಬೇಕು. ಕೊರಲೆ ಬೀಜ ಬೇಕಾದವರು ಸಂಪರ್ಕಿಸಿ, ರಂಗನಾಥ್-9449368655. <
= ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com