ಕಾಡು ಹಣ್ಣುಗಳ ಸವಿ ಬಲ್ಲವರೇ ಬಲ್ಲರು. ಇದರ ಹಿಂದೆ ರೋಚಕವಾದ ಬಾಲ್ಯವಿದೆ, ಕಾಡುವ ನೆನಪಿದೆ. ಮಕ್ಕಳಿಗೆ ಸೇಬು, ಕಿತ್ತಳೆಗಳ ಗುರುತು ಸಿಗುವ ಮೊದಲೇ ಮಾವು, ಹಲಸು ತಿಂದು ಗೊತ್ತು. ಮಿಕ್ಕಂತೆ ನಾಲಗೆಯ ರುಚಿಯನ್ನು ಕಾಡು ಹಣ್ಣುಗಳು ನೀಗಿಸುತ್ತಿದ್ದುವು. ವಿಷರಹಿತವಾದ, ನೈಸರ್ಗಿಕವಾದ ಹಣ್ಣುಗಳು ಆರೋಗ್ಯಕ್ಕೂ ದೊಡ್ಡ ಕಾಣ್ಕೆ ನೀಡಿತ್ತು.
ಹಳ್ಳಿ ಬದುಕಿನ ಅನುಭವ ಇದ್ದವರು ಒಮ್ಮೆ ಬಾಲ್ಯದತ್ತ ಹೊರಳಿ. ಶಾಲಾರಂಭದಿಂದ ಶೈಕ್ಷಣಿಕ ಅವಧಿ ಮುಗಿಯುವ ತನಕ ಕಾಡು ಹಣ್ಣುಗಳ ಸಹವಾಸ ಪಠ್ಯಕ್ಕಂಟಿಕೊಂಡೇ ಸಾಗುವ ಬದುಕು. ಶಾಲೆ ಒಂದೆಡೆ, ಮನೆ ಇನ್ನೊಂದೆಡೆ. ಮೈಲುಗಟ್ಟಲೆ ಕಾಡು ದಾರಿಯ ಕಾಲ್ನಡಿಗೆ. ಹತ್ತು ಗಂಟೆಗೆ ಶಾಲೆ ಶುರು. ಎಂಟು ಗಂಟೆಗೆ ಬುತ್ತಿ ಕಟ್ಟಿಸಿಕೊಂಡು ಹೆಗಲಿಗೆ ಚೀಲ ಸಿಕ್ಕಿಸಿ ಹೊರಟರೆ ಸಾಕು, ದಾರಿಯುದ್ದಕ್ಕೂ ಕಾಡು ಹಣ್ಣುಗಳ ಬೇಟೆ.
ಸಂಜೆ ನಾಲ್ಕು ಗಂಟೆಗೆ ಶಾಲೆ ಬಿಟ್ಟರೆ, ಮನೆ ತಲಪುವಾಗ ಆರು ದಾಟಿರುತ್ತದೆ. ಮನೆಯಲ್ಲಿ ಸುಳ್ಳು ಹೇಳಿದರೂ ಅಂಗಿಯಲ್ಲಿರುವ ಬೇಟೆಯ ಕುರುಹು ನಿಜವನ್ನು ಬಯಲು ಮಾಡುತ್ತದೆ. ಸೈಕಲ್ ಕಲಿಯಲು ಇನ್ನೊಬ್ಬರ ಅವಲಂಬನೆ ಬೇಕು. ಆದರೆ, ಮರಹತ್ತಲು ಬೇಡ. ಹಣ್ಣಿನ ನೆವದಿಂದ ಮರಗಳೇ, ಮರ ಹತ್ತಿಸುವ ಟ್ರೈನಿಂಗ್ ಕೊಡುತ್ತವೆ!
ಜೂನ್‌ನಲ್ಲಿ ಕುಂಟಾಲ ಹಣ್ಣಿನ (ಕುಂಟು ನೇರಳೆ) ಋತು. ಮುಂದಿನ ಮೇನಲ್ಲಿ ನಾಯಿ ನೇರಳೆ ಹಣ್ಣು. ಇವುಗಳ ಮಧ್ಯದ ಋತುಗಳಲ್ಲಿ ವಿವಿಧ ವೈವಿಧ್ಯ ಹಣ್ಣುಗಳು. ಮುಳ್ಳು ಅಂಕೋಲೆ ಹಣ್ಣು, ಮುಳ್ಳಿನೆಡೆಯಿಂದ ಇಣುಕುವ ಬೆಲ್ಲಮುಳ್ಳು, ಹುಳಿಮಜ್ಜಿಗೆ ಕಾಯಿ, ಕೇಪುಳ ಹಣ್ಣು, ಕಡು ಕೇಸರಿ ವರ್ಣದ ಮಣ್ಣಮಡಿಕೆ ಹಣ್ಣು, ಜೇಡರ ಬಲೆಯ ಒಳಗಿರುವಂತೆ ಕಾಣುವ ಜೇಡರ ಹಣ್ಣು, ನೆಲ್ಲಿಕಾಯಿ, ಹುಣಸೆ, ಅಂಬಟೆ, ನಾಣಿಲು, ಚೂರಿ ಮುಳ್ಳಿನ ಹಣ್ಣು, ಅಬ್ಳುಕ, ಪೇರಳೆ, ಹೆಬ್ಬಲಸು, ಪುನರ್ಪುಳಿ, ರಂಜೆ, ಕೊಟ್ಟೆಮುಳ್ಳು, ಶಾಂತಿಕಾಯಿಗಳ ಸಿಹಿ-ಹುಳಿ ರುಚಿಗಳನ್ನು ಸವಿದ ನಾಲಗೆಗಳ ಭಾಗ್ಯ. ಮಲೆನಾಡಿನಲ್ಲಿ ಮೊಗೆದು ತಿನ್ನುವಷ್ಟು ಹಣ್ಣುಗಳ ಸಂಪತ್ತಿದೆ. ಹೆಸರುಗಳಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿವೆ.
ಶರೀರಕ್ಕೆ ಬೇಕಾದ ವಿಟಮಿನ್‌ಗಳು ಹಣ್ಣಿನ ಸಹವಾಸದಲ್ಲಿ ಲಭ್ಯ. 'ಎ', 'ಬಿ'... ಮಿಟಮಿನ್ ಅಂತ ಹೆಸರಿಸಲು ಬಾರದಿರಬಹುದು. ಆದರೆ, ಸಣ್ಣ- ಪುಟ್ಟ ದೇಹದ ಆರೋಗ್ಯದ ವ್ಯತ್ಯಾಸಗಳಿಗೆ ಇಂಥದ್ದೇ ಹಣ್ಣು ತಿನ್ನಬೇಕು ಎಂಬುದು ಅಲಿಖಿತ ಜ್ಞಾನ. ಉದಾ: ಬಾಯಿಹುಣ್ಣು ಬಂದಾಗ ಕೊಟ್ಟೆಮುಳ್ಳು ಹಣ್ಣು ತಿನ್ನಲೇ ಬೇಕು ಅಂತ ಹಿರಿಯರು ಹೇಳುತ್ತಿದ್ದರು.
ಒಂದು ಕಾಲಘಟ್ಟದಲ್ಲಿ ಅನಿವಾರ್ಯವಾಗಿದ್ದ ಕಾಡು ಹಣ್ಣುಗಳ ಹಿಂದೆ ಬದುಕು ಕಟ್ಟುವ ಕಾಯಕವಿತ್ತು. ಈಗ ಅನಿವಾರ್ಯವಿಲ್ಲ. ಕಾರಣ, ಆಧುನಿಕ ಜೀವನ ಶೈಲಿ. ಆರೋಗ್ಯಕ್ಕೆ ಹಾಳು ಅಂತ ಗೊತ್ತಿದ್ದೂ ತಿನ್ನಬೇಕಾದ ಸ್ಥಿತಿ. ಜತೆಗೆ ಅಂತಸ್ತು ಕಾಪಾಡುವ ಭರ. ಮಕ್ಕಳಿಗೆ ಸೇಬು, ದ್ರಾಕ್ಷಿಗಳ ಹೊರತಾದ ಬೇರೊಂದು ಪ್ರಪಂಚದ ಪರಿಚಯವಿರುವುದಿಲ್ಲ. ಮಗನಿಗೆ ಹೇಳಲು ಹಳ್ಳಿ ಮೂಲದ ಅಪ್ಪನಿಗೆ ಪುರುಸೊತ್ತಿಲ್ಲ. ಒಂದು ವೇಳೆ ಅಲ್ಲೋ ಇಲ್ಲೋ ಹಣ್ಣುಗಳು ಕಾಣಸಿಕ್ಕರೆ ಅದು ತಿನ್ನಲು ಆಗುತ್ತದೆ ಎಂದು ಹೇಳುವವರಿಲ್ಲ.
ಹಳ್ಳಿಗೆ ರಸ್ತೆಗಳು ಬಂದಿವೆ. ಕಾಡು ದಾರಿ ಮಾಯವಾಗಿದೆ. ಸೇಬು, ದ್ರಾಕ್ಷಿ, ದಾಳಿಂಬೆಗಳು... ಹಳ್ಳಿಯ ಚಹದಂಗಡಿಯಲ್ಲೂ ಲಭ್ಯ. ಅಭಿವೃದ್ಧಿಗಾಗಿ ಕಾಡುಗಳು ನಾಶವಾಗುತ್ತಿವೆ. ಹಣ್ಣುಗಳ ಸಹವಾಸದಲ್ಲಿ ಬದುಕಿದ ವಿದ್ಯಾರ್ಥಿಗಳು ಪ್ರೌಢರಾಗಿದ್ದು, ಕೆಲವರು ನಗರ ಸೇರಿದ್ದಾರೆ. ಅವರಿಗೆ ಮದುವೆಯಾಗಿದೆ. ಅವರ ಮಕ್ಕಳನ್ನು ಅಳಿದುಳಿದ ಕಾಡು ಹಣ್ಣಿನ ಮರಗಳು ಕೈಬೀಸಿ ಕರೆಯುತ್ತಿವೆ, ಉತ್ಕೃಷ್ಟವಾದ ಹಣ್ಣುಗಳಿವೆ, ತಿನ್ನಿ ಅಂತ ಕೂಗುತ್ತಿವೆ. ಹಣ ಕೊಟ್ಟರೆ ಸಾಕು, ಕಿಲೋಗಟ್ಟಲೆ ಕೊಳ್ಳಬಹುದಾದ ರಂಗುರಂಗಿನ ಹಣ್ಣುಗಳ ಮಧ್ಯ ಕಾಡು ಹಣ್ಣಿನ ಕೂಗು ಕೇಳಿಸದು. ಕಾಡುಗಳು ಕ್ಷೀಣಿಸುತ್ತಿದ್ದಂತೆ ಕಾಡುಹಣ್ಣುಗಳ ಸಂಭ್ರಮಕ್ಕೀಗ ಇಳಿಲೆಕ್ಕ.
- ನಾ. ಕಾರಂತ ಪೆರಾಜೆ