ಹಸಿರು ಹುಳು, ಸೊಳ್ಳೆಗಳ ಕಾಟದಿಂದ ಕಡಿಮೆ ಭತ್ತದ ಇಳುವರಿ ಪಡೆಯುತ್ತಿರುವ ರೈತರ ಮಧ್ಯೆ ಯಾವುದೇ ರೋಗ, ಕೀಟ ಬಾಧೆ ಇಲ್ಲದೆ ಎಕರೆಗೆ 65 (ಒಂದು ಚೀಲದಲ್ಲಿ 70 ಕೆ.ಜಿ. ಭತ್ತ ಇರುತ್ತದೆ) ಚೀಲ ಬತ್ತ ಬೆಳೆದು ಎಲ್ಲರೂ ಮೂಗಿನ ಬೆರಳಿಡುವಂಥ ಸಾಧನೆಯನ್ನು ದಾವಣಗೆರೆ ತಾಲೂಕಿನ ಅತ್ತಿಗೆರೆ ಗ್ರಾಮದ ರೈತ ಕೆ.ವಿ. ಚಂದ್ರಶೇಖರಪ್ಪ ಮಾಡಿದ್ದಾರೆ.
ರಾಜ್ಯದಲ್ಲೇ ಎಕರೆಗೆ ಅತಿ ಹೆಚ್ಚು ಅಂದರೆ 65 ಚೀಲ ಭತ್ತ ಬೆಳೆದು ಸಾಧನೆ ಮಾಡಿದ ಕೀರ್ತಿ ಅತ್ತಿಗೆರೆ ಕೆ.ವಿ. ಚಂದ್ರಶೇಖರಪ್ಪಗೆ ಸಲ್ಲುತ್ತದೆ. ಭೂತಾಯಿ ನಂಬಿದ ಮಕ್ಕಳನ್ನು ಎಂದಿಗೂ ಕೈಬಿಡುವುದಿಲ್ಲ ಎಂಬುದಕ್ಕೆ ಚಂದ್ರಶೇಖರಪ್ಪ ಸಾಕ್ಷಿ.
ಪ್ರಸ್ತುತ ಮಾರುಕಟ್ಟೆಯಲ್ಲೂ ಭತ್ತಕ್ಕೆ ಉತ್ತಮ ಧಾರಣೆ ಉಂಟು. ಕೈತುಂಬಾ ಬಂದ ಭತ್ತ ಮಾರಿ, ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳುವ ಆಲೋಚನೆ ರೈತ ಚಂದ್ರಶೇಖರಪ್ಪ ಅವರದ್ದಾಗಿದೆ.
ಜೈವಿಕ ಗೊಬ್ಬರ
ಧಾರವಾಡ ಕೃಷಿ ವಿಶ್ವವಿದ್ಯಾನಿಲಯದಡಿ ಕ್ರಿಯಾಜೆನ್ ಕಂಪನಿ ಉತ್ಪಾದಿಸುವ ಡಿಎನ್‌ಪಿ ಜೈವಿಕ ಗೊಬ್ಬರ ಬಳಸಿ, ಈ ಬಾರಿ ಬತ್ತ ಬೆಳೆದಿದ್ದ ಚಂದ್ರಶೇಖರಪ್ಪ ಸ್ವತಃ ನಂಬಲಾಗದಷ್ಟು ಫಸಲು ಬಂದ ಖುಷಿಯಲ್ಲಿದ್ದಾರೆ. ಡಿಎನ್‌ಪಿ ಜೈವಿಕ ಗೊಬ್ಬರ ಬಳಸಿದ್ದು, ರಾಸಾಯನಿಕ ಗೊಬ್ಬರ ಕೈಬಿಟ್ಟಿದ್ದೇ ಹೆಚ್ಚು ಇಳುವರಿಗೆ ಕಾರಣ. ಭೂಮಿಗೆ ರಾಸಾಯನಿಕ ಗೊಬ್ಬರದ ವಿಷವುಣಿಸುವ ಬದಲು, ಸಾವಯವ ಗೊಬ್ಬರ ಬಳಸುವಂತೆ ಮನವಿ ಮಾಡುತ್ತಾರೆ.
ರೋಗ ಕಮ್ಮಿ
ಯೂರಿಯಾ ಕಡಿಮೆ ಮಾಡಿ, ಪೋಷಕಾಂಶದ ಕಡೆ ಒತ್ತು ನೀಡಿದ್ದರಿಂದ ಭತ್ತದ ಬೆಳೆಗೆ ರೋಗ ಕಡಿಮೆಯಾಗಿವೆ. ಮುಖ್ಯವಾಗಿ ಸಾರಜನಕ, ನೀರಿನ ಮಿತ ಬಳಕೆಯಾಗಿದೆ. ಬೆಳೆ ಮಧ್ಯೆ ನೀರನ್ನು ನಿಲ್ಲಿಸಲಾಗಿತ್ತು. ಎಲ್ಲಾ ಅಂಶಗಳಿಂದಾಗಿ 13 ಎಕರೆಯಲ್ಲಿ, ಎಕರೆಗೆ 63ರಿಂದ 65 ಚೀಲ ಬತ್ತದ ಇಳುವರಿ ಬಂದಿದೆ ಎನ್ನುತ್ತಾರೆ.
ಶೇ.80 ಸಾವಯವ
ಧಾರವಾಡ ಕೃಷಿ ವಿವಿಯಲ್ಲೇ ತಯಾರಾದ ಡಿಎನ್‌ಪಿ ಜೈವಿಕ ಗೊಬ್ಬರ 5 ವರ್ಷಗಳಿಂದ ರೈತರಿಗೆ ನೀಡಲಾಗಿತ್ತು. ಕ್ರಿಯಾಜೆನ್ ಕಂಪನಿ ಮೂಲಕ ಜೈವಿಕ ಗೊಬ್ಬರ ತಯಾರಿಸುತ್ತಿದ್ದು, ಡೈನಾಮಿಕ್ ನ್ಯೂಟ್ರಿಯನ್ ಪ್ರೊವೈಡರ್ ಹೆಸರಿನ ಡಿಎನ್‌ಪಿಯಲ್ಲಿ ಸೂಕ್ಷ್ಮ ಮತ್ತು ಲಘು ಪೋಷಕಾಂಶವಿರುತ್ತದೆ. ಇದರಲ್ಲಿ ಶೇ.80 ಸಾವಯವ ಅಂಶವಿದೆ. ಇದೇ ಹೆಚ್ಚು ಇಳುವರಿಗೆ ಕಾರಣ.
- ಹರೀಶ, ಧಾರವಾಡ ಕೃಷಿ ವಿವಿ ಕಿರಿಯ ವಿಜ್ಞಾನಿ
- ನಾಗರಾಜ್ ಬಡದಾಳ್