ಈ ಭೂಮಿ ನಮ್ಮ ಪೂರ್ವಜರಿಂದ ಬಂದ ಬಳುವಳಿ. ಇದನ್ನು ಮತ್ತಷ್ಟು ಸಮೃದ್ಧ, ಸುಂದರ, ಸುಭದ್ರವಾಗಿ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಇದನ್ನು ಅರಿತು ಕೃಷಿ ಕೈಗೊಂಡರೆ ರೈತರ ಬಾಳು ಹಸನಾಗುತ್ತದೆ. ಇದಕ್ಕೊಂದು ತಾಜಾ ನಿದರ್ಶನ ಶಂಕರ ಹನುಮಂತ ಲಂಗಟಿ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗುಂಡೇನಟ್ಟಿ ಗ್ರಾಮದವರಾದ ಇವರು ಓದಿದ್ದು ಕೇವಲ 3ನೇ ತರಗತಿ. 14 ವರ್ಷದ ಬಾಲಕರಾಗಿದ್ದಾಗ ಅವರ ತಂದೆ ನಿಧನರಾದರು. ಚಿಕ್ಕಂದಿನಿಂದಲೇ ದನ ಕಾಯುವ ಕಾಯಕ ಶುರು. ಆಗ ಅವರಿಗೆ ದನವೊಂದಕ್ಕೆ ಸಿಗುತ್ತಿದ್ದುದು 1 ಮಾತ್ರ. ಬಿಡುವಿನ ವೇಳೆಯಲ್ಲಿ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ 'ಕೃಷಿರಂಗ' ಕಾರ್ಯಕ್ರಮ ಕೇಳುತ್ತಿದ್ದರು. ಆ ಕಾರ್ಯಕ್ರಮವೇ ಅವರನ್ನು ರೈತರಾಗಬೇಕೆಂಬ ಆಸೆ ಚಿಗುರಿಸಿತು. ಮೆಲ್ಲನೆ ಕೃಷಿಗೆ ಸಂಬಂಧಿಸಿದ ತರಬೇತಿ, ಉಪನ್ಯಾಸ ಕಾರ್ಯಕ್ರಮಗಳಿಗೆ ಹಾಜರಾಗಿ ತರಬೇತಿ ಪಡೆಯತೊಡಗಿದರು.
ನಂತರ ಕೃಷಿ ಕ್ಷೇತ್ರಕ್ಕೆ ಧುಮುಕಿದರು. 4 ಎಕರೆ ಜಮೀನಲ್ಲಿ ಆರಂಭದಲ್ಲಿ ದ್ವಿದಳ ಧಾನ್ಯ ಬೆಳೆಯಲು ಮನಸ್ಸು ಮಾಡಿದರು. ಇವರ ಉತ್ಸಾಹ ನೋಡಿ ಮುಗಧ ಬತ್ತ ಸಂಶೋಧನಾ ಕೇಂದ್ರದವರು 24 ನಾಟಿ ತಳಿ ನೀಡಿ ಪ್ರೋತ್ಸಾಹಿಸಿದರು. ಬತ್ತದ ಜತೆ ಇತರೆ ಏಕದಳ ಧಾನ್ಯ ಅದರಲ್ಲೂ ವಿಶೇಷವಾಗಿ ಸಿರಿಧಾನ್ಯಗಳ ಬೆಳೆ ಬೆಳೆಯಲು ಕೈಹಾಕಿದರು.
ಹಸಿರೆಲೆ ಗೊಬ್ಬರ
ಲಂಗಟಿ ಅವರು ಮಣ್ಣಿನ ಸಾರ ಸಂರಕ್ಷಣೆಗಾಗಿ ಹಸಿರೆಲೆ ಗೊಬ್ಬರ ಮಾತ್ರ ಬಳಸುತ್ತಾರೆ. ಬೇರಿಗೆ ಬಲ ತುಂಬಲು ಗೋಮೂತ್ರ, ಸಗಣಿ, ಬೆಲ್ಲ, ದ್ವಿದಳ ಧಾನ್ಯದ ಹಿಟ್ಟು ಫಲವತ್ತಾದ ಮಣ್ಣು ಇವೇ ಮೊದಲಾದವುಗಳನ್ನು ಉಪಯೋಗಿಸಿ 'ಜೀವಾಮೃತ' ತಯಾರಿಸಿ ಜಮೀನಿಗೆ ಹಾಕಿದರು.
ಮಳೆ ನೀರು ಹರಿದು ವ್ಯರ್ಥವಾಗುವುದನ್ನು ತಡೆಯಲು ಜಮೀನಿನಲ್ಲಿ ಹೊಂಡ ಕಟ್ಟಿದ್ದಾರೆ. ಬೆಳೆಗಳಿಗೆ ನೀರಿನ ಕೊರತೆ ಉಂಟಾದಾಗ ಹೊಂಡದ ನೀರನ್ನು ಹರಿಸುತ್ತಾರೆ. ಹೊಂಡದಲ್ಲಿ ಮೀನು ಸಾಕಿದ್ದಾರೆ. ಹೊಂಡದ ಸುತ್ತ ಮಾವು, ಚಿಕ್ಕು, ನುಗ್ಗೆ ಸೇರಿದಂತೆ ಹಲವು ಬಗೆಯ ಗಿಡಗಳನ್ನು ನೆಟ್ಟಿದ್ದಾರೆ.
ದೇಸಿ ಬೀಜ ಬ್ಯಾಂಕ್
ಗುಂಡೇನಟ್ಟಿ ಗ್ರಾಮದಲ್ಲಿ 'ಸಿದ್ಧಾರೂಢ ಸಾವಯವ ಬಳಗ ಮತ್ತು ದೇಸಿ ಬೀಜ ತಳಿಗಳ ಬ್ಯಾಂಕ್' ಸ್ಥಾಪನೆಯಾಗಿದೆ. ಸುಮಾರು 40 ರೈತರು ಅದರ ಸದಸ್ಯರು. 80 ಬಗೆಯ ದೇಸಿ ಬೀಜ ತಳಿಗಳು, 15 ಬಗೆಯ ದ್ವಿದಳ ಧಾನ್ಯಗಳು, 2 ಬಗೆಯ ಎಣ್ಣೆಕಾಳುಗಳು ಮತ್ತು 45 ನಮೂನೆಯ ತರಕಾರಿ ನಾಟಿ ಬೀಜಗಳು ಬ್ಯಾಂಕ್‌ನಲ್ಲಿ ಲಭ್ಯ. ಬೀಜ ಬ್ಯಾಂಕ್‌ನಲ್ಲಿ ಬೀಜದ ಸಂಗ್ರಹಣೆ ಮಾಡಿ ಕಾಪಾಡುತ್ತಾರೆ. ಇಂಥ ಚಟುವಟಿಕೆ ಗಮನಿಸಿ ಕೃಷಿ ಇಲಾಖೆಯು ಗುಂಡೇನಟ್ಟಿಯನ್ನು 'ಸಾವಯವ ಗ್ರಾಮ' ಎಂದು ಘೋಷಿಸಿದ್ದಾರೆ.
ಪ್ರಶಸ್ತಿಗಳು
ಶಂಕರ ಲಂಗಟಿ ಅವರ ಸಾಧನೆ ಗುರುತಿಸಿ ಹಲವು ಸಂಘ- ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದ್ದಾರೆ. 'ಕೃಷಿ ಋಷಿ' ಎಂಬ ಬಿರುದು ಪಡೆದಿದ್ದಾರೆ. ಬೆಂಗಳೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯಗಳು ಸೇರಿದಂತೆ ತೋಟಗಾರಿಕೆ ಇಲಾಖೆಯವರು ಗೌರವಿಸಿದ್ದಾರೆ. ಮಾಹಿತಿಗಾಗಿ ಶಂಕರ ಲಂಗಟಿ (ಮೊ. 9972150328) ಸಂಪರ್ಕಿಸಬಹುದು.
- ಡಾ. ತೇಜಸ್ವಿನಿ ಯಕ್ಕುಂಡಿಮಠ