ರೋಸ್‌ಮರಿ ಎನ್ನುವುದು ಒಂದು ಸುವಾಸನಾಭರಿತ, ನಿತ್ಯ ಹರಿದ್ವರ್ಣ ಸಸ್ಯ. ಈ ಸಸ್ಯದ ಮೂಲ ತವರು ಮೆಡಿಟೇರಿಯನ್ ಪ್ರದೇಶ. ಚೂಪಾದ ಎಲೆ ಹೊಂದಿರುವ ರೋಸ್‌ಮರಿ ಬಿಳಿ, ಗುಲಾಬಿ, ನೀಲಿ ಹಾಗೂ ನೇರಳೆ ಬಣ್ಣದ ಹೂವು ಬಿಡುತ್ತದೆ. ಈ ಸಸ್ಯವನ್ನು ಸಸ್ಯಶಾಸ್ತ್ರ ವಿಭಾಗದಲ್ಲಿ ರೋಸ್‌ಮರಿನಸ್ ಅಫಿಷನಲಿಸ್ ಎಂದು ಕರೆಯಲಾಗುತ್ತದೆ. ಇದನ್ನು ಉದ್ಯಾನಗಳಲ್ಲಿ ಅಲಂಕಾರಿಕ ಸಸ್ಯವನ್ನಾಗಿ ಬೆಳೆಯಲಾಗುತ್ತದೆ.
ಅಡುಗೆ, ಸುಗಂಧ ದ್ರವ್ಯದಲ್ಲೂ ಬಳಕೆ
ಕೇವಲ ಅಲಂಕಾರಿಕ ಸಸ್ಯವಾಗಿ ಮಾತ್ರವಲ್ಲ, ಇದನ್ನು ಅಡುಗೆಯಲ್ಲೂ ಬಳಸಲಾಗುತ್ತದೆ. ಇದರ ಎಲೆಗಳನ್ನು ಹಸಿಯಾಗಿ ಇಲ್ಲವೇ ಒಣಗಿಸಿಯೂ ವಿದೇಶಿಗರು ಇದನ್ನು ಬೇರೆ ಬೇರೆ ಅಡುಗೆ ತಯಾರಿಸುವಲ್ಲಿ ಬಳಸುತ್ತಾರೆ. ಅಡುಗೆಯ ರುಚಿ ಮತ್ತು ಪರಿಮಳ ಹೆಚ್ಚಿಸಲು ಭಾರತದಲ್ಲಿ ಕೊತ್ತಂಬರಿ ಬಳಸದಂತೆ ಇದನ್ನು ವಿದೇಶಿಗರು ಹೆಚ್ಚಾಗಿ ಬಳಸುತ್ತಾರೆ. ಇದರ ಬಳಕೆಯಿಂದ ನೆನಪಿನ ಶಕ್ತಿ ವೃದ್ಧಿಸುವುದರೊಟ್ಟಿಗೆ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ 6 ಈ ಸಸ್ಯದಿಂದ ಹೇರಳವಾಗಿ ಸಿಗುತ್ತದೆ. ಇದನ್ನು ಸುಗಂಧ ದ್ರವ್ಯಗಳ ತಯಾರಿಕೆ, ಶ್ಯಾಂಪು ಸೇರಿದಂತೆ ವಿವಿಧ ಅಲಂಕಾರಿಕ ಹಾಗೂ ಪರಿಮಳಯುಕ್ತ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಬರದ ನಾಡಿಗೆ ವರದಾನ
ಈ ಸಸ್ಯದ ಇನ್ನೊಂದು ವಿಶೇಷವೆಂದರೆ ಅತ್ಯಂತ ಕಡಿಮೆ ನೀರಿನಲ್ಲಿಯೂ ಬೆಳೆಯುತ್ತದೆ. ತೇವಮಿಶ್ರಿತ ತಂಪು ಗಾಳಿಯಿಂದ ಕೂಡಿದ ವಾತಾವರಣವಿದ್ದರೂ ಇದನ್ನು ಬೆಳೆಯಬಹುದು. ಯಾವುದೇ ರೀತಿಯ ಭೂಮಿಯಲ್ಲೂ ಇದು ಬೆಳೆಯುತ್ತದೆ. ಹಾಗಾಗಿ ಅತಿ ಕಡಿಮೆ ಮಳೆಯಾಗುವ ಜಿಲ್ಲೆಯ ರೈತರು ಇದನ್ನು ಬೆಳೆದು ಉತ್ತಮ ಲಾಭ ಪಡೆಯಬಹುದು. ಅತಿಯಾದ ನೀರು ಅಥವಾ ಮಳೆಯಾಗುವ ಪ್ರದೇಶದಲ್ಲಿ ಇದು ಬೆಳೆಯುವುದಿಲ್ಲ. ಹೂವಿನ ಕುಂಡಗಳಲ್ಲಿಯೂ ರೋಸ್‌ಮರಿ ಬೆಳೆಯಬಹುದಾಗಿದೆ.
ಸಾಧಕ ರೈತ
ಗದಗ ತಾಲೂಕಿನ ಕಳಸಾಪುರದ ಮಹಾದೇವಪ್ಪ ಲಮಾಣಿ ರೋಸ್‌ಮರಿ ಎನ್ನುವ ವಾಣಿಜ್ಯ ಬೆಳೆ ಬೆಳೆದು, ಅಧಿಕ ಲಾಭ ಗಳಿಸುವುದರ ಮೂಲಕ ರೈತರಿಗೆ ಮಾದರಿಯಾಗಿದ್ದಾರೆ. ಧಾರವಾಡದ ಕೃಷಿ ವಿವಿಯಲ್ಲಿ ರೋಸ್‌ಮರಿಯ ಬಗ್ಗೆ ಮಾಹಿತಿ ಪಡೆದ ಇವರು ಪ್ರಾಯೋಗಿಕವಾಗಿ 2 ಎಕರೆ ಜಮೀನಿನಲ್ಲಿ ಬೆಳೆದು ಅದರಿಂದ ಬಂದ ಲಾಭ ಕಂಡು, ಈಗ 30 ಎಕರೆ ಜಮೀನಿನಲ್ಲಿ ಬೆಳೆಯುತ್ತಿದ್ದಾರೆ. ಬಿಎಸ್ಸಿ ಅಗ್ರಿ ಓದಿರುವ ಅವರು ಎಕರೆಗೆ 11 ಸಾವಿರ ಗಿಡದಂತೆ ಇದನ್ನು ನಾಟಿ ಮಾಡಿ 50 ಸಾವಿರದವರೆಗೂ ಹಣ ವ್ಯಯಿಸಿದ್ದಾರೆ. ಖರ್ಚಿನ ರಡು ಪಟ್ಟು ಲಾಭ ಪಡೆಯುತ್ತಿದ್ದೇನೆ ಎನ್ನುತ್ತಾರೆ ಮಹಾದೇವಪ್ಪ ಲಮಾಣಿ.
ಮಹಾದೇವಪ್ಪ ಅಕ್ಕಪಕ್ಕದ ರೈತರಿಗೂ ಇದರ ಮಹತ್ವ ತಿಳಿಸಿ ರೋಸ್‌ಮರಿ ಬೆಳೆಯುವಂತೆ ಪ್ರೇರಣೆ ನೀಡಿದ್ದಾರೆ. ಮೊದಲೆಲ್ಲ ಬೆಳೆಯುತ್ತಿದ್ದ ಬೆಳೆಗಳಿಂದ ನಷ್ಟ ಅಭವಿಸುತ್ತಿದ್ದ ರೈತರು ಈಗ ಲಾಭ ಗಳಿಸುತ್ತಿದ್ದಾರೆ. ಇಲ್ಲಿ ಬೆಳೆದ ರೋಸ್‌ಮರಿಯನ್ನು ಒಪ್ಪಂದದ ಮೂಲಕ ಸರಬರಾಜು ಮಾಡಲಾಗುತ್ತಿದ್ದು, ಮಹಾದೇವಪ್ಪ ಅವರೇ ರೈತರ ಬಳಿ ಇದನ್ನು ಕೊಳ್ಳುತ್ತಿದ್ದಾರೆ.
- ಪಿ.ಎಚ್. ರಾಠೋಡ, ಪಕ್ಕದ ಹೊಲದ ರೈತ
ವರ್ಷಕ್ಕೆ ಮೂರು ಬಾರಿ ಕಟಾವಾಗುವ ಈ ಬೆಳೆಯಿಂದ ಹೆಚ್ಚಿನ ಲಾಭ ಪಡೆಯಬಹುದು. ಅಲ್ಲದೆ, ನೀರಿನ ಅವಶ್ಯಕತೆ ಹೆಚ್ಚಾಗಿ ಇಲ್ಲದೇ ಇರೋದ್ರಿಂದ ಗದಗದಂಥ ಬರಪೀಡಿತ ಪ್ರದೇಶದಲ್ಲಿ ರೋಸ್‌ಮರಿ ಹುಲುಸಾಗಿ ಬೆಳೆಯುತ್ತದೆ. ಇದನ್ನು ಬೆಳೆಯಲು ತೋಟಗಾರಿಕಾ ಇಲಾಖೆ ಸಹಾಯಧನ ಕಲ್ಪಿಸುತ್ತದೆ.
- ಯುವರಾಜ್, ತೋಟಗಾರಿಕಾ ಇಲಾಖೆ, ಗದಗ
- ಶಿವಕುಮಾರ ಕುಷ್ಟಗಿ