ರಾಜ್ಯದ ಪ್ರಮುಖ ಬೆಳೆಗಳಲ್ಲಿ ಉದ್ದು ಒಂದು. ಇದು ಕೂಡ ಮಣ್ಣಿನ ಫಲವತ್ತತೆ ಹೆಚ್ಚಿಸುವ ಗುಣಧರ್ಮ ಹೊಂದಿದೆ.
ಬೆಳೆಯುವ ವಿಧಾನ
ಸಾಮಾನ್ಯವಾಗಿ ರಾಜ್ಯದಲ್ಲಿ ಉದ್ದನ್ನು ಮಳೆಯಾಶ್ರಿತವಾಗಿಯೇ ಹೆಚ್ಚು ಬೆಳೆಯುತ್ತಾರೆ. ಹಾಗಾಗಿ ಮುಂಗಾರು ಹಂಗಾಮು ಅಂದರೆ ಜೂನ್ ತಿಂಗಳು ಉದ್ದು ಬಿತ್ತನೆಗೆ ಸಕಾಲ. ಇದನ್ನು ಬಿತ್ತುವುದಕ್ಕಿಂತ ಪೂರ್ವದಲ್ಲಿ ಜಮೀನನ್ನು ಚೆನ್ನಾಗಿ ಉಳುಮೆ ಮಾಡಿ ಹದ ಮಾಡಿರಬೇಕು. ಬಳಿಕ ಕೂರಿಗೆಯಿಂದ ಬೀಜ ಬಿತ್ತನೆ ಮಾಡಬೇಕು. ಎಕರೆಗೆ 7ಕೆ.ಜಿ.ಯಷ್ಟು ಬೀಜ ಬೇಕಾಗುತ್ತದೆ. ಇದನ್ನು ಶೂನ್ಯ ಬಂಡವಾಳ ಕೃಷಿ ಮೂಲಕವೂ ಬೆಳೆಯಬಹುದು. ಈ ವಿಧಾನದ ಮೂಲಕ ಬೆಳೆಯುವುದಾದರೆ ಬೀಜದ ಜತೆಗೆ ಘನ ಜೀವಾಮೃತವನ್ನು ಹಾಕಬೇಕು. ಬಿತ್ತಿದ ಒಂದು ತಿಂಗಳ ನಂತರ ಯಡೆ ಹೊಡೆಯಬೇಕು. ಬಿತ್ತಿದ ಎರಡೂವರೆ ತಿಂಗಳಿಗೆ ಫಸಲು ಕೈಗೆ ಬರುತ್ತದೆ. ಚೆನ್ನಾಗಿ ನಿರ್ವಹಣೆ ಮಾಡಿದರೆ ಎಕರೆಗೆ 6 ಕ್ವಿಂಟಲ್ ಇಳುವರಿ ಪಡೆಯಬಹುದು.
ರೋಗಗಳು
ಎಲೆಮುರುಟು ರೋಗ, ಬೂದಿ ರೋಗ, ಹಳದಿ ನಂಜು ರೋಗ, ಸಸ್ಯ ಹೇನು, ಎಲೆ ತಿನ್ನುವ ಕೀಟ, ನುಸಿ ಮೊದಲಾದ ರೋಗ ಕಾಡಬಹುದು. ದ್ರವ ಜೀವಾಮೃತ ಸಿಂಪಡಿಸುವುದರಿಂದ ಹಲವು ರೋಗಗಳನ್ನು ತಡೆಯಬಹುದು.
ತಳಿಗಳು
ರಾಜ್ಯದಲ್ಲಿ ಸ್ಥಳೀಯ ತಳಿಗಳೇ ಹೆಚ್ಚು ಬಳಕೆಯಲ್ಲಿವೆ. ಜತೆಗೆ ಪಿಡಿಎಂ- 84- 178, ಪಿಎಸ್- 16, ಪೂಸಾ ಬೈಸಾಕಿ ಸೇರಿದಂತೆ ಮೊದಲಾದ ತಳಿಗಳು ಚಾಲ್ತಿಯಲ್ಲಿವೆ.
ಮಣ್ಣು
ಹೆಚ್ಚು ಇಳುವರಿ ಪಡೆಯಬೇಕೆಂದರೆ ಕಪ್ಪು ಮಣ್ಣು ಉತ್ತಮ. ಉಳಿದಂತೆ ಕೆಂಪು, ಮರಳು ಮಿಶ್ರಿತ ಕೆಂಪು ಮಣ್ಣಲ್ಲಿ ಬೆಳೆಯಬಹುದು.
ದ್ರವ ಜೀವಾಮೃತ
10 ಕೆ.ಜಿ. ದೇಸಿ ಆಕಳ ಸಗಣಿ, 10 ಲೀ. ಗೋಮೂತ್ರ, 2 ಕೆ.ಜಿ. ದ್ವಿದಳ ಧಾನ್ಯದ ಹಿಟ್ಟು, 2 ಕೆ.ಜಿ. ಬೆಲ್ಲ, ಒಂದು ಮುಷ್ಟಿ ಮಣ್ಣನ್ನು 200 ಲೀಟರ್ ನೀರಿನಲ್ಲಿ ಬೆರೆಸಿ ಕಲೆಸಬೇಕು. ಈ ರೀತಿ ದಿನಕ್ಕೆ ಮೂರು ಬಾರಿಯಂತೆ 2 ದಿನ ಮಾಡಬೇಕು. ಬಳಿಕ ಅದನ್ನು ಜಮೀನಿನಲ್ಲಿ ಸಿಂಪಡಿಸಬೇಕು. ಇದನ್ನು ಔಷಧವಾಗಿ, ಗೊಬ್ಬರವಾಗಿಯೂ ಬಳಸಬಹುದು.
ಹೆಚ್ಚಿನ ಮಾಹಿತಿಗೆ ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾಜಾಪುರ ಗ್ರಾಮದ ರೇವಣಸಿದ್ದಪ್ಪ ಪಾಟೀಲ್(ಮೊ. 97314 95666) ಅವರನ್ನು ಸಂಪರ್ಕಿಸಬಹುದು.
- ಮಹೇಶ್ ಅರಳಿ