ಅಡಕೆಯೇ ಪ್ರಮುಖ ಬೆಳೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ರೈತರು ಉಪ ಬೆಳೆಯಾಗಿ ಪ್ರಥಮ ಬಾರಿಗೆ ಹಲಸು ಬೆಳೆಯಲು ಅಣಿಯಾಗಿದ್ದು, ಇದಕ್ಕೆ ಸರ್ಕಾರವೂ ಸಹಾಯಧನ ನೀಡುತ್ತಿದೆ.
ವಿಷಯುಕ್ತ ತರಕಾರಿಗಳಿಗಿಂತ ಸಹಜವಾಗಿ ಬೆಳೆಯುವ ಹಲಸು ಉತ್ತಮ ತರಕಾರಿ ಎಂಬುದು ಇತ್ತೀಚೆಗೆ ಸಾಬೀತಾಗುತಿದ್ದು, ಉತ್ತರ ಭಾರತಕ್ಕೂ ರಫ್ತಾಗುತ್ತಿದೆ. ಹಲಸುಸ್ನೇಹಿಗಳೆಲ್ಲ ಒಂದೆಡೆ ಕಲೆತು ಸ್ನೇಹಿಕೂಟವನ್ನು ರಾಜ್ಯದ ವಿವಿಧೆಡೆ ರಚಿಸಿ ಖಾಸಗಿ ಮಟ್ಟದಲ್ಲಿ ಹಲಸಿಗೆ ಮರ್ಯಾದೆ ದೊರಕಿಸುವಲ್ಲಿ ಶ್ರಮಿಸುತ್ತಿದ್ದಾರೆ.
ಸರ್ಕಾರಿ ಮಟ್ಟದಲ್ಲೂ ತೋಟಗಾರಿಕಾ ಬೆಳೆ ಪ್ರೋತ್ಸಾಹಿಸಲು ರಾಜ್ಯದ ವಿವಿಧೆಡೆ 'ಹಲಸು ಗುಚ್ಛ' ಪ್ರಾರಂಭಿಸಲಾಗಿದೆ. ದ.ಕ. ಜಿಲ್ಲೆಯ ವಿಟ್ಲ ಮತ್ತು ವಾರಣಾಶಿ ಪರಿಸರದಲ್ಲಿ 'ವಾರಣಾಶಿ ಹಲಸು ಬೆಳೆಗಾರರ ಸಂಘ' ಸ್ಥಾಪಿಸಿ 'ಹಲಸು ಗುಚ್ಛ' ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹೆಕ್ಟೇರ್‌ಗಟ್ಟಲೆ ಪ್ರದೇಶದಲ್ಲಿ ಕೇವಲ ಹಲಸನ್ನೇ ಬೆಳೆಸುವ ಪ್ರಯೋಗಕ್ಕೆ ಕೆಲವು ಪ್ರಗತಿಪರ ಕೃಷಿಕರು ಮುಂದಾಗಿದ್ದಾರೆ.
ಏನಿದು ಯೋಜನೆ?
ಕಾಂಪ್ರಹೆನ್ಸಿವ್ ಹಾರ್ಟಿಕಲ್ಚರ್ ಡೆವಲಪ್‌ಮೆಂಟ್ ಯೋಜನೆಯಡಿ ಕೆಲವು ನಿರ್ದಿಷ್ಟ ತೋಟಗಾರಿಕಾ ಬೆಳೆ ಗುರುತಿಸಿ ಅವುಗಳನ್ನು ಬೆಳೆಸಲು ಪ್ರೋತ್ಸಾಹಿಸಲಾಗುತ್ತದೆ. ಸರ್ಕಾರದ ವತಿಯಿಂದ 3 ವರ್ಷಗಳವರೆಗೆ ನಿರ್ವಹಣೆಗಾಗಿ ಶೇ.50 ಸಹಾಯಧನ ನೀಡಿ ಬೆಳೆ ಬೆಳೆಸಲಾಗುತ್ತದೆ. ಜಿಲ್ಲೆಯಲ್ಲಿ 5 ಹೆಕ್ಟೇರ್ (12.5 ಎಕರೆ) ಪ್ರದೇಶದಲ್ಲಿ ಕೇವಲ ಹಲಸನ್ನೆ ಪ್ರಮುಖ ಬೆಳೆಯಾಗಿ ಬೆಳೆಸಲು ರೈತರು ಮುಂದಾಗಿದ್ದಾರೆ.
ಇದಕ್ಕೆಂದೇ 8- 10 ರೈತರು ಸೇರಿ ಒಂದು ಸೊಸೈಟಿ ರಚಿಸಿ ನೋಂದಾಯಿಸಿದ್ದಾರೆ. ರೈತ ಪ್ರತಿನಿಧಿಗಳು ಮತ್ತು ತೋಟಗಾರಿಕಾ ತಾಲೂಕು ಅಧಿಕಾರಿ ಸೊಸೈಟಿ ಸದಸ್ಯರಾಗಿರುತ್ತಾರೆ.
ಸೊಸೈಟಿಯಿಂದ ಕಳೆದ ಬಾರಿ ಕಿಲೋ ಒಂದಕ್ಕೆ ರು. 5ರಂತೆ ಮುಂಬೈಗೆ 30 ಟನ್ ಹಲಸನ್ನು ಐಸ್‌ಕ್ರೀಮ್‌ಗಾಗಿ ಮಾರಲಾಗಿತ್ತು. ಈ ವರ್ಷ ಇದುವರೆಗೆ 16 ಟನ್ ಮಾರಲಾಗಿದೆ. ಸೀಸನ್ ಮುಗಿಯುವವರೆಗೆ ಇದು ಮತ್ತಷ್ಟು ಹೆಚ್ಚುತ್ತದೆ.
ರೈತರ, ಬೆಳೆಗಾರರ ಸಮಾವೇಶ
'ರೈತರಲ್ಲಿ ಈಗೀಗ ಹಲಸು ಬೆಳೆ ಬೆಳೆಯಬಹುದು ಎಂಬ ಬಗ್ಗೆ ಅರಿವು ಮೂಡುತ್ತಿದೆ. ಹಲಸಿಗಿರುವ ಮಾರುಕಟ್ಟೆಯ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗುವುದು. ಇದಕ್ಕಾಗಿ ಜುಲೈನಲ್ಲಿ ಅಡ್ಯನಡ್ಕದಲ್ಲಿ ಸೊಸೈಟಿ ವತಿಯಿಂದ ಹಲಸು ಬೆಳೆಗಾರರ, ಮಾರಾಟಗಾರರ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಗುಚ್ಛವನ್ನು ಇಡೀ ಜಿಲ್ಲೆಗೆ ವಿಸ್ತರಿಸಬೇಕು' ಎಂಬುದು ಹಲಸು ಬೆಳೆಗಾರರ ಸಂಘದ ಅಧ್ಯಕ್ಷ ಮುಳಿಯ ವೆಂಕಟಕೃಷ್ಣ ಶರ್ಮ ಅಭಿಪ್ರಾಯ.
ರಾಜ್ಯದ ಬೆಳಗಾವಿ, ಗದಗ ಜಿಲ್ಲೆಗಳಲ್ಲೂ ರೈತರು ಹಲಸು ಬೆಳೆಯಲು ಮುಂದಾಗಿದ್ದಾರೆ. ಚಿತ್ರದುರ್ಗದಲ್ಲಿ ಈಗಾಗಲೇ ಹಲಸು ಮತ್ತು ನೇರಳೆ ಹಣ್ಣು ಸೇರಿಸಿ ಇಲಾಖೆ ವತಿಯಿಂದ ಗುಚ್ಛ ಪ್ರಾರಂಭಿಸಲಾಗಿದೆ. ಎಲ್ಲ ತೋಟಗಾರಿಕಾ ಬೆಳೆಗಳ ಉತ್ತೇಜನಕ್ಕಾಗಿ ಬೇರೆ ಬೇರೆ ಜಿಲ್ಲೆಗಳಲ್ಲಿ ವಿವಿಧ ಬೆಳೆಗಳನ್ನು ಗುಚ್ಛ ಯೋಜನೆಯಡಿ ಸಹಾಯಧನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.
ಸಹಾಯಧನ ಆಫರ್
ರೈತರು ಮತ್ತೆ ಹಲಸು ಬೆಳೆಯಲು ಮುಂದೆ ಬಂದಲ್ಲಿ ರಾಜ್ಯ ಸರ್ಕಾರದ ಮಾರ್ಗದರ್ಶನದಂತೆ ಸಹಾಯಧನ ಮುಂದುವರಿಸಲಾಗುವುದು.
- ಪ್ರವೀಣ್, ತೋಟಗಾರಿಕಾ ಇಲಾಖೆ ಕಚೇರಿ ಸಹಾಯಕ
ಬೆಳೆ ವಿಸ್ತರಣೆ
ದಕ್ಷಿಣ ಕನ್ನಡ ಪರಿಸರದಲ್ಲಿ ಈಗ 5 ಹೆಕ್ಟೇರ್ ಪ್ರದೇಶದಲ್ಲಿ ಹಲಸು ಬೆಳೆಯಲಾಗುತ್ತಿದ್ದು, ಮುಂದೆ 30 ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಸ್ತರಿಸಬೇಕೆಂದು ಉದ್ದೇಶಿಸಲಾಗಿದೆ.
- ಡಾ. ಕೃಷ್ಣಮೂರ್ತಿ, ವಾರಣಾಶಿ ಪ್ರತಿಷ್ಠಾನ
- ರಾಘವೇಂದ್ರ ಅಗ್ನಿಹೋತ್ರಿ
ಚಿತ್ರಗಳು: ಉದಯ ವಿಟ್ಲ