ಒಂದು ರುಪಾಯಿ ನೀಡಿ ನಿಮಗೆ ಬೇಕಾದ ಸಸಿ ಕೊಳ್ಳಿ, ಮರ ಬೆಳೆಸಿ.
- ಇದೇನಿದು ಒಂದು ರುಪಾಯಿಗೆ ಸಸಿ? ಅಚ್ಚರಿಯಾಯಿತೆ? ಅರಣ್ಯ ಪ್ರದೇಶ ಬೆಳೆಸುವ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೆ ತಂದಿರುವ 'ಟ್ರೀ ಪಟ್ಟಾ' (ಮರದ ಮಾಲೀಕನ ಖಾತರಿ ಮಾಡುವ ದಾಖಲೆ) ಯೋಜನೆ ಇದು.
ರೈತರು ಮಾತ್ರ ಈ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದಿಲ್ಲ. ನಗರ ಪ್ರದೇಶದ ಜನರೂ ಮರ ಬೆಳೆಸಬಹುದು. ಅದರಿಂದ ಬರುವ ಫಲ, ಹೂವು, ಸೌದೆ, ಸೊಪ್ಪನ್ನು ರೈತನೇ ಬಳಸಿಕೊಳ್ಳಬಹುದು. 3 ವರ್ಷದ ನಂತರ ಮರ ಯಾರಿಗೆ ಸೇರಿದ್ದು ಎಂಬುದಕ್ಕೆ 'ಟ್ರೀ ಪಟ್ಟಾ' ನೀಡಲಾಗುತ್ತದೆ. ಮರ ರಕ್ಷಿಸುವುದು ಆತನ ಜವಾಬ್ದಾರಿ.
ನಶಿಸುತ್ತಿರುವ ಅರಣ್ಯ ಬೆಳೆಸಿ ಹಸಿರೀಕರಣ ಹೆಚ್ಚಿಸಲು ಶ್ರಮಿಸುತ್ತಿರುವ ಅರಣ್ಯ ಇಲಾಖೆಗೆ ರೈತರು ಸಹಕರಿಸಬೇಕಿದೆ. ಸದ್ಯ ಸುಮಾರು 1300 ಗ್ರಾಮಗಳಲ್ಲಿ ಮಾತ್ರ ಈ ಯೋಜನೆ ಚಾಲ್ತಿಯಲ್ಲಿದೆ. ನೀವು ಸಸಿ ಕೊಳ್ಳಿ, ಮರ ಬೆಳೆಸಿ ಪರಿಸರ ಉಳಿಸಿ.
ಏನಿದು ಯೋಜನೆ?
ಅರಣ್ಯ ಸಂಪತ್ತು ನಶಿಸುತ್ತಿರುವ ಹಿನ್ನೆಲೆಯಲ್ಲಿ ಶ್ರೀಗಂಧ ಸೇರಿ ಎಲ್ಲಾ ಬಗೆಯ ಮರ ಬೆಳೆಸುವ ಉದ್ದೇಶದಿಂದ 'ಕೃಷಿ ಅರಣ್ಯ ಪ್ರೋತ್ಸಾಹ' ಎಂಬ ಯೋಜನೆಯಡಿ ಇದನ್ನು 1993ರಲ್ಲಿ ಅನುಷ್ಠಾನಕ್ಕೆ ತರಲಾಗಿತ್ತು. ಈ ಯೋಜನೆಯಡಿ ರೈತರಿಗೆ ಅಗತ್ಯವಿರುವ ಸಸಿಗಳನ್ನು ಕಡಿಮೆ ಬೆಲೆಗೆ (1) ವಿತರಿಸಲಾಗುವುದು. ಮೂರು ವರ್ಷದ ನಂತರ ಬದುಕುಳಿದ ಗಿಡಗಳ ರಕ್ಷಣೆ, ಪೋಷಣೆ ರೈತರದ್ದು. ಗಿಡ ಕತ್ತರಿಸಿದರೂ/ ಮುರಿದರೂ ಅದು ರೈತನ ಸ್ವತ್ತು. ಸಸಿ ಮರವಾಗಿ ಬೆಳೆದ ಬಳಿಕ ಕಡಿದು ಮಾರಿದರೆ ಬಂದ ಹಣದಲ್ಲಿ ಸರ್ಕಾರಕ್ಕೆ ಶೇ.25ರಷ್ಟು ನೀಡಬೇಕು.
ಮುಂಚಿತ ನೋಂದಣಿ
ರೈತ ಸಸಿ ಕೊಳ್ಳಬೇಕೆಂದಿದ್ದಲ್ಲಿ ಮೇ/ ಜೂನ್‌ನಲ್ಲಿ ಸಂಬಂಧಪಟ್ಟ ಅರಣ್ಯ ಇಲಾಖೆ ಕಚೇರಿಗಳಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು. ಬೇಕಾದ ಸಸಿ ಯಾವುದು ಎಂಬುದನ್ನು ತಿಳಿಸಿ, ಎಲ್ಲಿ ಬೆಳೆಸಲಾಗುವುದು ಎಂಬ ವಿವರ ಕೊಡಬೇಕು.
ಹೆಸರು ನೋಂದಣಿ ಆದ ಸುಮಾರು 15 ದಿನಗಳ ನಂತರ ಸಸಿ ರೈತನ ಕೈ ಸೇರಲಿದೆ. ನಾಟಿ ವೇಳೆ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಇರುತ್ತಾರೆ. ಪ್ರತಿತಿಂಗಳು ಅವರು ಸ್ಥಳಕ್ಕೆ ಭೇಟಿ ನೀಡಿ ಸಸಿಗಳನ್ನು ಪರಿಶೀಲಿಸುತ್ತಾರೆ. ನಿರ್ವಹಣೆಗೆ ಅಗತ್ಯ ಸೌಲಭ್ಯ ಕಲ್ಪಿಸುತ್ತಾರೆ. ಜತೆಗೆ ರೈತನೂ ಅತ್ತ ಗಮನಹರಿಸಬೇಕು.
ಒಬ್ಬ ರೈತ ಒಂದು ಬಾರಿ 500 ಸಸಿ ಪಡೆಯಬಹುದು.
ಯಾವ ಮರಕ್ಕೆ ಆದ್ಯತೆ?
ಶ್ರೀಗಂಧ, ತೇಗ, ಹೊನ್ನೆ, ಸಾಗುವಾನಿ, ನೇರಳೆ, ಹುಣಸೆ, ಮಾವು, ಹೆಬ್ಬೇವು, ಬಿದಿರು, ಹಲಸು, ಬೀಟೆ, ಹೊಂಗೆ, ಮಾವು, ಬೇವು, ಹೆಬ್ಬಲಸು, ಸಿಲ್ವರ್ ಸೇರಿದಂತೆ ಇತರ ಸಸಿಗಳನ್ನು ಪಡೆಯಬಹುದು.
ಎಲ್ಲಿ ನೆಡಬಹದು?
ಸ್ವಂತ ಜಮೀನು, ಜಮೀನಿನ ಸುತ್ತಮುತ್ತ ಇರುವ ಸರ್ಕಾರಿ ಜಮೀನು, ತಮ್ಮ ಊರಿನ ರಸ್ತೆ ಬದಿ ಗಿಡ ನೆಡಬಹುದು.
ಸಮಿತಿ ರಚನೆ
ಕೆಲ ಗ್ರಾಮಗಳಲ್ಲಿ ಸಮಿತಿ ರಚಿಸಿದ್ದು, ರೈತರು ಆಸಕ್ತಿ ತೋರಿದ್ದಾರೆ. ಎಲ್ಲಾ ಗ್ರಾಮಗಳ ರೈತರು ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂಬುದು ಇಲಾಖೆ ಉದ್ದೇಶ.
- ಬಿ. ಶಿವನಗೌಡ, ಸಹಾಯಕ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ(ಅಭಿವೃದ್ಧಿ), ಅರಣ್ಯ ಇಲಾಖೆ
-ಶಾಂತ ತಮ್ಮಯ್ಯ