ನಿಂಬೆಯಂತೆಯೇ ಸುಗಂಧವುಳ್ಳ ಲೆಮನ್ ಗ್ರಾಸ್ ಹುಲ್ಲಿನ ಕೃಷಿ ಭಾರತದಲ್ಲೇ ಆರಂಭವಾದರೂ ಕೇರಳದ ಉತ್ತರ ಭಾಗ ಮಹಾರಾಷ್ಟ್ರ ಉತ್ತರ ಪ್ರದೇಶಗಳ ಹೊರತು ಬೇರೆ ರಾಜ್ಯಗಳ ರೈತರು ಅದರತ್ತ ಲಕ್ಷ್ಯ ಹರಿಸಿಲ್ಲ.
ಆದರೆ, ಚೈನಾ, ಥಾಯ್ಲೆಂಡ್, ಮಡಗಾಸ್ಕರ್, ಬಾಂಗ್ಲಾದೇಶ, ವೆಸ್ಟ್ ಇಂಡೀಸ್, ಮಧ್ಯ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಇದರ ಹೇರಳ ಕೃಷಿಯಿದೆ. ಕೇರಳದಲ್ಲಿ ಶತಮಾನಕ್ಕಿಂತ ಹಿಂದೆಯೇ ಅದನ್ನು ವ್ಯವಸ್ಥಿತವಾಗಿ ಬೆಳೆದಿದ್ದಲ್ಲದೆ ಕೇರಳಿಯರು ವಲಸೆ ಹೋದಲ್ಲಿಗೂ ಇದನ್ನು ಪರಿಚಯಿಸಿದರು.
ಲೆಮನ್ ಗ್ರಾಸ್
ಸಿಂಬೋಪೋಗಾನ್ ಪ್ಲೆಕ್ಸುಯೋಸಸ್ ಸಸ್ಯವರ್ಗಕ್ಕೆ ಸೇರಿದ ನಿಂಬೆಹುಲ್ಲಿಗೆ ಇನ್ನೊಂದು ಹೆಸರು ಈಸ್ಟ್ ಇಂಡಿಯನ್ ಲೆಮನ್ ಗ್ರಾಸ್. ಇದರ ಎಲೆಸಹಿತ ಕಾಂಡದಿಂದ ತೆಗೆದ ಸುಗಂಧಿತ ಎಣ್ಣೆ ಭಾರತದಿಂದ ರಫ್ತಾಗುವ ಸುಗಂಧ ತೈಲಗಳ ಸಾಲಿನ ಆರಂಭದಲ್ಲಿದೆ. ಸೋಪು ಸೆಂಟು ಕೇಶವರ್ಧಕ ಶಾಂಪೂ ಮತ್ತಿತರ ಸುಗಂಧ ದ್ರವ್ಯಗಳು ಸೌಂದರ್ಯ ಪ್ರಸಾಧನಗಳಲ್ಲದೆ ಸೋಂಕು ಮತ್ತು ಕೀಟ ನಿವಾರಿಸುವ ಔಷಧಿಯೂ ಇದೇ ತೈಲದಿಂದ ತಯಾರಾಗುತ್ತವೆ.
ನಾನಾ ಸತ್ವಾಂಶ
ನಿಂಬೆಹುಲ್ಲಿನ ತೈಲದಲ್ಲಿ ಫಾರ್ನಿಸೋಲ್, ಸಿಟ್ರಾಲ್ ಟ್ರಪಿನೀನ್, ಸೈಮೀನ್, ಮೈರಿಸೀನ್, ಜೆರೆನಿಯಾಲ್ ಮುಂತಾದ ಹಲವಾರು ಸತ್ವಾಂಶಗಳಿವೆ. ಇದರಲ್ಲಿರುವ ಅಯನೋನ್ ಸತ್ವದಿಂದ 'ಎ' ಜೀವಸತ್ವ ತಯಾರಿಸುತ್ತಾರೆ. ಹಲ್ಲುನೋವು ಜ್ವರ ಹಾಗೂ ತಲೆನೋವು ನಿವಾರಿಸುವ ಮದ್ದುಗಳಲ್ಲಿ ನಿಂಬೆಹುಲ್ಲಿನ ತೈಲ ಬೆರೆಯುತ್ತದೆ.
ಪೊದೆಗಳಿಲ್ಲದ ಗುಡ್ಡ ಪ್ರದೇಶಗಳು ಅಗಳಿಗೆ ಎತ್ತರಿಸಿದ ಮಣ್ಣು ಮುಂತಾದ ನೆರಳಿಲ್ಲದ ಪ್ರದೇಶದಲ್ಲಿ ನಿಂಬೆಹುಲ್ಲನ್ನು ನಾಟಿ ಮಾಡಲಾಗುತ್ತದೆ. ಬೇಸಿಗೆಯಲ್ಲಿ ನೀರು ಹಾಕಲು ಅನುಕೂಲವಿದ್ದರೆ ಅತಿ ಕಡಿಮೆ ನೀರು ಹಾಕಿದರೂ ವರ್ಷದಲ್ಲಿ ಹತ್ತು ಸಲ ಹುಲ್ಲನ್ನು ಕತ್ತರಿಸಿ ತೈಲ ತೆಗೆಯಬಹುದು. ನೀರಿಲ್ಲದಿದ್ದರೆ ಆರೇ ಕೊಯ್ಲು. ಹತ್ತು ಸೆಂ.ಮೀ. ಎತ್ತರವಾದಾಗ ಹುಲ್ಲನ್ನು ಕತ್ತರಿಸಿ, ನೆರಳಿನಲ್ಲಿ ಸಂಗ್ರಹಿಸಿ ಸಣ್ಣದಾಗಿ ಕತ್ತರಿಸುತ್ತಾರೆ. ಪ್ರತಿ ಸಲ ಕೊಯ್ಲಿನಲ್ಲೂ ಹೆಕ್ಟೇರಿಗೆ ಹದಿನೈದು ಟನ್ ಹುಲ್ಲು ಸಿಗುತ್ತದೆ. ಇದರಲ್ಲಿ ಪ್ರತಿಶತ ಐದರಷ್ಟು ತೈಲವಿರುತ್ತದೆ. ನಾಟಿ ಮಾಡಿದ ಮೂರು ತಿಂಗಳಿನಲ್ಲೇ ಮೊದಲ ಕೊಯ್ಲಿಗೆ ಸಿದ್ಧ. ಎರಡನೆಯ ವರ್ಷದಿಂದ ಇಳುವರಿ ಹೆಚ್ಚು. ಹೆಕ್ಟೇರಿಗೆ ಮೂರರಿಂದ ನಾಲ್ಕು ಕ್ವಿಂಟಾಲ್ ತೈಲ ದೊರಕುತ್ತದೆ.
ತಳಿಗಳು
ನಿಂಬೆಹುಲ್ಲಿನಲ್ಲಿ ಹಾವೇರಿ ಕೃಷ್ಣ ಆರ್, ಆರ್‌ಐಸಿ, ಕೆಪಿ ಮುಂತಾಗಿ ಆರೇಳು ತಳಿಗಳಿವೆ. ಒಮ್ಮೆ ನೆಟ್ಟರೆ ಐದು ವರ್ಷಗಳ ತನಕ ಅತ್ಯಧಿಕ ಲಾಭ ತರುವ ಕೃಷಿ ಇದು. ಆಮೇಲೆ ಇಳುವರಿ ತಗ್ಗುವ ಕಾರಣ ಹೊಸದಾಗಿ ನಾಟಿ ಮಾಡಬೇಕು. ಹೆಚ್ಚು ಗೊಬ್ಬರದ ಖರ್ಚಿಲ್ಲದೆ ಬೆಳೆಯುತ್ತದೆ. ವೈನ್ ಮತ್ತು ಸಾಸ್‌ಗಳಿಗೆ ಸುಗಂಧ ನೀಡಲು ಇದರ ತೈಲಕ್ಕೆ ಬಹು ಬೇಡಿಕೆಯಿದೆ. ಆದರೆ, ತೈಲ ತೆಗೆಯಲು ಇನ್ನೂ ಹಳೆಯ ಭಟ್ಟಿಯಿಳಿಸುವ ವಿಧಾನವೇ ಬಳಕೆಯಿರುವ ಕಾರಣ ತೈಲದ ಪ್ರಮಾಣ ಕಡಮೆ ಸಿಗುತ್ತದೆ. ಅದಕ್ಕೆ ಕಾರಣ ತೈಲ ತೆಗೆಯುವ ವಾತಾವರಣದಲ್ಲಿ ಗಾಳಿಯಾಡುತ್ತಿದ್ದರೆ ತೈಲ ಆವಿಯಾಗುತ್ತದೆ. ಹುಲ್ಲು ಸಂಗ್ರಹಣೆಗೆ ತುಂಬ ನೆರಳಿರುವ ಸ್ಥಳ ಬೇಕು ಹುಲ್ಲು ಕತ್ತರಿಸಿ ನಾಲ್ಕು ದಿನಗಳೊಳಗೆ ತೈಲ ತೆಗೆಯದೆ ಹೋದರೆ ತೈಲದ ಅಂಶ ಕಡಿಮೆಯಾಗುತ್ತದೆ. ಇದೆಲ್ಲ ಕಾರಣಗಳಿಂದಾಗಿ ರೈತರನ್ನು ಇದು ಆಕರ್ಷಿಸಿಲ್ಲ.
ಪೋಷಕಾಂಶ
ತೈಲ ತೆಗೆದ ಹುಲ್ಲನ್ನು ದನಗಳ ಮೇವಿಗೆ ಬಳಸಬಹುದು. ಅದಕ್ಕೆ ಪೋಷಕಾಂಶ ಬೆರೆಸಿ ಸತ್ವಯುತ ಮೇವು ತಯಾರಿಸಬಹುದು. ಇದರ ಕಾಂಪೋಸ್ಟ್ ಗೊಬ್ಬರ ಮತ್ತು ಬೂದಿ ಕೃಷಿಗೆ ಅಧಿಕ ಪೋಷಕಾಂಶಗಳೆನಿಸಿವೆ.
- ಪ. ರಾಮಕೃಷ್ಣ ಶಾಸ್ತ್ರಿ