ನೀರಾವರಿಯಾಶ್ರಿತ ಕೃಷಿಕರು ಕರೆಂಟ್ ಕಣ್ಣಾಮುಚ್ಚಾಲೆಯಿಂದ ಕಂಗಾಲಾಗಿದ್ದಾರೆ. 'ಯಾಕಪ್ಪಾ ಈ ಪರಿ ಕರೆಂಟ್ ತೆಗೀತಾರಾ?' ಎಂದು ಅಲವತ್ತುಕೊಳ್ಳುತ್ತಾರೆ.
ಆದರೆ, ಇಲ್ಲೊಬ್ಬ ರೈತರು ಕರೆಂಟ್ ಕಣ್ಣಾಮುಚ್ಚಾಲೆಗೆ ಕಂಗೆಟ್ಟಿಲ್ಲ. ಯಾಕೆಂದರೆ ಇವರು ಸೌರಶಕ್ತಿಯಾಧಾರಿತ ಪಂಪ್ ಅನ್ನು ಅಳವಡಿಸಿಕೊಂಡಿದ್ದಾರೆ. ಹಾಗಾಗಿ ಕರೆಂಟ್ ಬಂದರೂ, ಹೋದರೂ ನಷ್ಟವಿಲ್ಲ!
ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಎಸ್.ವಿ. ಪಂಚಮುಖಿ ಅವರು ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕೃಷಿಯಲ್ಲಿ ಅವರಿಗೆ ಅಪರಿಮಿತ ಆಸಕ್ತಿ. ಹಾಗಾಗಿ ನೌಕರಿಗೆ ಗುಡ್ ಬೈ ಹೇಳಿ ಬೇಸಾಯದಲ್ಲಿ ಸಕ್ರಿಯರಾದರು. ಅವರಿಗೆ 2 ಎಕರೆ ಜಮೀನಿದೆ. ಅದರಲ್ಲಿ ಗ್ರಂಡ್‌ಫೋ ಕಂಪನಿಯ ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಂಡು ನೆಮ್ಮದಿಯಿಂದ ಕೃಷಿ ಬದುಕು ಸಾಗಿಸುತ್ತಿದ್ದಾರೆ. ಜಮಿನಿನಲ್ಲಿ ಅವರು 150 ತಾಳೆಮರ ನೆಟ್ಟಿದ್ದಾರೆ. ಜತೆಗೆ ಅಂತರ ಬೆಳೆಯಾಗಿ ಹಲವು ಬೆಳೆಗಳನ್ನು ಬೆಳೆಯುತ್ತಾರೆ. ಸೋಲಾರ್ ಪಂಪ್‌ಸೆಟ್‌ನಿಂದಾಗಿ ಕರೆಂಟ್ ನೆಚ್ಚಿಕೊಳ್ಳದೆ ನಿಯಮಿತವಾಗಿ ನೀರು ಹಾಯಿಸುತ್ತಾರೆ. ಆ ಮೂಲಕ ಕರೆಂಟ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಿದ್ದಾರೆ.
ಹೇಗೆ ಕಾರ್ಯನಿರ್ವಹಿಸುತ್ತೆ?
ಪಂಚಮುಖಿ ಅವರು 2.5 ಅಶ್ವಶಕ್ತಿಯ ಗ್ರಂಡ್‌ಫೋ ಕಂಪನಿಯ ಸೋಲಾರ್ ಪಂಪ್ ಅಳವಡಿಸಿಕೊಂಡಿದ್ದಾರೆ. ಇದಕ್ಕೆ ರು. 2.5 ಲಕ್ಷ ಖರ್ಚು ತಗುಲಿದೆ. ಸೋಲಾರ್ ವ್ಯವಸ್ಥೆಯಲ್ಲಿ ಒಟ್ಟು 6 ಪ್ಯಾನಲ್‌ಗಳಿವೆ. ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಸೋಲಾರ್ ಪಂಪ್ ಕಾರ್ಯನಿರ್ವಹಿಸುತ್ತದೆ. ಇದರಿಂದ ಜಮೀನಿಗೆ ಸಾಕಾಗುವಷ್ಟು ನೀರು ಲಭ್ಯ. ಜಮೀನಿಗೆ ಯಾವಾಗ ನೀರು ಅವಶ್ಯಕವೋ ಆಗ ನೀರು ಹಾಯಿಸುತ್ತಾರೆ. ಸೂರ್ಯನ ಪ್ರಖರತೆ ಕಡಿಮೆ ಇದ್ದಾಗ ನೀರು ಹೊರತೆಗೆಯುವ ಪ್ರಮಾಣ ತುಸು ಇಳಿಮುಖವಾಗುತ್ತದೆ. ಉಳಿದ ಸಮಯದಲ್ಲಿ ಅಂದರೆ ಸೂರ್ಯನ ಬಿಸಿಲು ಚೆನ್ನಾಗಿ ಇದ್ದಾಗ ಉತ್ತಮವಾಗಿ ನೀರು ಕೊಡುತ್ತದೆ ಎನ್ನುತ್ತಾರೆ ಪಂಚಮುಖಿ.
ಹೆಚ್ಚಿನ ಮಾಹಿತಿಗಾಗಿ ಎಸ್.ವಿ. ಪಂಚಮುಖಿ (ಮೊ. 94486 46474) ಅವರನ್ನು ಸಂಪರ್ಕಿಸಬಹುದು.
ಗ್ರಂಡ್‌ಫೋದಿಂದ ಗುಣಮಟ್ಟದ ಪಂಪ್
ಸೋಲಾರ್ ಪಂಪ್ ತಯಾರಿಕೆಯಲ್ಲಿ ಗ್ರಂಡ್‌ಫೋ ಕಂಪನಿ ಮುಂಚೂಣಿಯಲ್ಲಿದೆ. ಇದು ಈಗಾಗಲೇ 65 ದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ. 1998ರಲ್ಲಿ ಭಾರತಕ್ಕೆ ಕಾಲಿಟ್ಟಿತು. ಗ್ರಂಡ್‌ಫೋ 2 ಅಶ್ವಶಕ್ತಿಯಿಂದ ಹಿಡಿದು 15 ಎಚ್‌ಪಿ ಸಾಮರ್ಥ್ಯದವರೆಗೆ ಸೋಲಾರ್ ಪಂಪ್‌ಗಳನ್ನು ತಯಾಸುತ್ತಿದೆ. ಅದೇ ರೀತಿ 2002ರಲ್ಲಿ ಬೆಂಗಳೂರಲ್ಲಿ ತನ್ನ ಶಾಖೆ ತೆರೆದಿದೆ. ರಾಜ್ಯದಲ್ಲಿ ವಿದ್ಯುತ್ತಿನ ಅಭಾವವಿದ್ದರೂ ಸೋಲಾರ್ ಶಕ್ತಿ ಸದ್ಬಳಕೆಯಾಗುತ್ತಿಲ್ಲ. ಇದಕ್ಕೆ ಪ್ರಚಾರದ ಕೊರತೆ, ಜನರಲ್ಲಿ ಮಾಹಿತಿಯ ಕೊರತೆ ಕಾರಣ. ರಾಜ್ಯದಲ್ಲಿ ಬೆಳಗಾವಿ, ಮಂಗಳೂರಿನಲ್ಲಿ ಗ್ರಂಡ್‌ಫೋ ಕಂಪನಿಯ ಏಜೆನ್ಸಿಗಳಿವೆ. ಹೆಚ್ಚಿನ ಮಾಹಿತಿಗಾಗಿ ಗ್ರಂಡ್‌ಫೋ ಪಂಪ್ಸ್ ಕಂಪನಿಯ ಮುಖ್ಯಸ್ಥರಾದ ಸಂಜೀವ್ ಶಿರಸಿ (ಮೊ. 9980700118) ಅವರನ್ನು ಸಂಪರ್ಕಿಸಬಹುದು.
- ಮಹೇಶ್