ಕೃಷಿ-ಪರಿಸರ

ತರಕಾರಿ ಪುರ

ಅದೊಂದು ಪುಟ್ಟ ಊರು. ಈ ಊರಿನವರಿಗೆ ಗೊತ್ತಿರುವುದು ಕೃಷಿ ಒಂದೇ. ಅದರಿಂದಲೇ ಅವರ ಬದುಕು. ಅವರಿಂದಲೇ ಸುತ್ತಮುತ್ತಲಿನ ಪಟ್ಟಣಗಳಿಗೆ ವಿಷರಹಿತ ತಾಜಾ ಸೊಪ್ಪು ತರಕಾರಿಗಳ ಸರಬರಾಜು.
ಇದರಿಂದಾಗಿ ಈ ಗ್ರಾಮದ ಬಹುತೇಕರಿಗೆ ಕಾಯಿಪಲ್ಯಗಳಾದ ಕೊತ್ತಂಬರಿ, ಸಬ್ಬಸಗಿ, ಬದನೆಕಾಯಿ, ಹಾಗಲಕಾಯಿ, ಹರವಿ ಸೊಪ್ಪು, ಪಾಲಕ್, ಸೌತೆ, ಮೂಲಂಗಿ, ಮೆಂತ್ಯೆ, ರಾಜಗಿರಿ, ಕಿರಿಕ್ಸಾಲಿ, ಬೀಟ್‌ರೂಟ್, ಬೆಂಡೆ, ನವಿಲುಕೋಸು ಹೀಗೆ ವಿವಿಧ ರೀತಿಯ ತರಕಾರಿ ಬೆಳೆಸುವುದು ಫುಲ್ ಟೈಂ ಕೆಲಸವಾಗಿದೆ.  ಗಂಡಸರು ಹೊಲದಲ್ಲಿ ಬೆವರು ಸುರಿಸಿದರೆ ಶ್ರಮಕ್ಕೆ ಸಾಥ್ ನೀಡುವ ಕೆಲಸ ಹೆಂಗಸರದ್ದು. ಒಟ್ಟಾರೆ ಗ್ರಾಮದಲ್ಲಿ ಗಂಡು- ಹೆಣ್ಣು ಕೂಡಿ ದುಡಿದು ಬದುಕು ಕಟ್ಟಿಕೊಳ್ಳುವ ಕಸರತ್ತು ಸಾಗಿದೆ. ಇದರಿಂದ ಈ ಕೃಷಿ ಈ ಊರಿಗೆ ಒಲಿದಿದೆ. ಕೃಷಿಯಲ್ಲಿ ತೋರಿಸುವ ಬುದ್ಧಿವಂತಿಕೆ, ಶ್ರಮ ಜತೆಗೆ ಮಾರುಕಟ್ಟೆಯ ಹಿಡಿತ ಇವರ ಬದುಕನ್ನೇ ಹಸನಾಗಿಸಿದೆ. ಆ ಗ್ರಾಮ ಯಾವುದು ಅಂತೀರಾ? ಅದೇ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬ್ಯಾತನಾಳ. ತಾಲೂಕು ಕೇಂದ್ರದಿಂದ ದೂರವಿದ್ದರೂ ಇಲ್ಲಿ ಮೂನ್ನೂರಕ್ಕೂ ಹೆಚ್ಚು ಮನೆಗಳಿವೆ. ಬಹುತೇಕರು ಕೃಷಿಯನ್ನೇ ಅವಲಂಬಿಸಿದ್ದರೂ ಸೊಪ್ಪು ತರಕಾರಿ ಬೆಳೆ ಇವರ ಕೃಷಿಯೊಂದಿಗೆ ಅಂಟಿಕೊಂಡಿದೆ.
ಪ್ರಾಧಾನ್ಯತೆ
ಕೃಷಿಯ ಜತೆ ಸೊಪ್ಪು ತರಕಾರಿ ಬೆಳೆಯುಲು ಪ್ರಾಧಾನ್ಯ ನೀಡುತ್ತಾ ಬಂದಿದ್ದಾರೆ. ಇವರ ಪ್ರಯೋಗ ಇಂದು ನಿನ್ನೆಯದಲ್ಲ, ಹಲವು ವರ್ಷದಿಂದ ಇದೇ ಕಾಯಕ ಚಾಚು ತಪ್ಪದೆ ಚಾಲ್ತಿಯಲಿಟ್ಟುಕೊಂಡಿದ್ದಾರೆ. ಬಹುತೇಕ ರೈತರು ತಮ್ಮ ಬೆಳೆಗಳ ನಡುವೆ ಸೊಪ್ಪು ತರಕಾರಿ ಬೀಜ ಬಿತ್ತಿ ಫಲ ಉಣ್ಣುತ್ತಿದ್ದಾರೆ. ಎಕರೆಗೆ ಕನಿಷ್ಠ ಪಕ್ಷ ಕಾಲು ಭಾಗ ತರಕಾರಿ ಸೊಪ್ಪು ಬೆಳೆಯುವುದಕ್ಕೆ ಮೀಸಲಿಡುತ್ತಾರೆ. ಅಂತರ್ಜಲ ಪಾತಾಳದವರೆಗೂ ಕುಸಿದಿರುವುದರಿಂದ ಬೇರೆ ಬೆಳೆ ಬೆಳೆದರೂ ನಷ್ಟವೇ ಜಾಸ್ತಿ. ಹಾಗಾಗಿ ಸೊಪ್ಪು ತರಕಾರಿ ಬೆಳೆಯಲು ನೀರಿನ ಪ್ರಮಾಣ ಕಡಿಮೆಯಾದರೆ ಸಾಕು ಸೊಪ್ಪು, ತರಕಾರಿ ಬೆಳೆದು ಜೀವನ ನಡೆಸಬಹುದು ಎನ್ನುತ್ತಾರೆ ಇಲ್ಲಿನ ಕೃಷಿಕರು.
ಅರೆಕಾಲಿಕ ಉದ್ಯೋಗ
ಸೊಪ್ಪು ತರಕಾರಿ ಬೆಳೆಯಲು ಕೂಲಿಕಾರರ ಅವಶ್ಯ ಹೆಚ್ಚಾಗಿ ಬೀಳುವುದಿಲ್ಲ. ಮನೆಯ ಸದಸ್ಯರೆ ಅಚ್ಚುಕಟ್ಟಾಗಿ ಬೆಳೆದು ಸುಖಮಯ ಜೀವನ ಸಾಗಿಸಬಹುದು. ಗ್ರಾಮದಲ್ಲಿ 50 ಎಕರೆಗೂ ಹೆಚ್ಚು ಸೊಪ್ಪು ತರಕಾರಿ ಬೆಳೆಯುತ್ತಾರೆ. ಇದರಿಂದ ಮನೆಯಲ್ಲಿದ್ದ ಮಹಿಳೆಯರಿಗೂ ಅರೆಕಾಲಿಕ ಉದ್ಯೋಗ ನೀಡುತ್ತದೆ. ಹೊಲದಲ್ಲಿ ಬೆಳೆಗಳು ಕೈಕೊಟ್ಟರೂ ಇವರ ಉಪವೃತ್ತಿ ಇಲ್ಲಿಯವರೆಗೂ ಕೈಕೊಟ್ಟಿಲ್ಲ.
ನಸುಕಿನಲ್ಲೇ ಏಳುವ ಹೆಣ್ಣುಮಕ್ಕಳು ಹೊಲಕ್ಕೆ ಹೋಗಿ ಮಾರಾಟಕ್ಕೆ ಬೇಕಾಗುವಷ್ಟು ಸೊಪ್ಪು ತರಕಾರಿಗಳನ್ನು ಶೇಖರಿಸುತ್ತಾರೆ. ಅವುಗಳನ್ನು ಹೊತ್ತ ಗಂಡಸರು ನೀರಿರುವ ಜಾಗಕ್ಕೆ ತಂದು ಹಾಕುತ್ತಾರೆ. ಆಗ ಹೆಣ್ಣುಮಕ್ಕಳು ಆ ಸೊಪ್ಪು, ತರಕಾರಿಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆಯುತ್ತಾರೆ. ತೊಳೆದ ಸೊಪ್ಪು, ತರಕಾರಿಗಳನ್ನು ಗಂಡಸರು ಚೀಲದಲ್ಲಿ ಕಟ್ಟಿ ಮಾರಾಟಕ್ಕೆ ಒಯ್ಯುತ್ತಾರೆ. ಕಾರವಾರ, ಶಿರಸಿ, ಅನವಟ್ಟಿ ಮತ್ತು ಸುತ್ತಮುತ್ತಲಿನ ಸಂತೆಗಳಿಗೆ ಈ ಸೊಪ್ಪು ತರಕಾರಿ ಹೋಗುತ್ತದೆ. ಕೃಷಿಯಿಂದ ಕೈಸುಟ್ಟುಕೊಂಡು ಸಾಕಪ್ಪಾ ಕೃಷಿಯ ಸಹವಾಸ ಎನ್ನುವವರಿಗೆ ಈ ಕಾಯಿಪಲ್ಲೆ ಗ್ರಾಮ ಬ್ಯಾತನಾಳ ಮಾದರಿಯಲ್ಲವೇ?


=  ಟಿ. ಶಿವಕುಮಾರ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!