Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ಭಾರತದ ಸೇನಾ ಕಾರ್ಯತಂತ್ರವು ಸಂಪೂರ್ಣವಾಗಿ ರಕ್ಷಣಾತ್ಮಕವಾಗಿದ್ದು, ಯಾವುದೇ ನಿರ್ದಿಷ್ಟ ರಾಷ್ಟ್ರವನ್ನು ಗುರಿಯಾಗಿಸಿಕೊಂಡಿಲ್ಲ. ಬದಲಾಗಿ, ಭಾರತದ ಭದ್ರತಾ ಅಗತ್ಯಗಳನ್ನು ಆಧರಿಸಿದೆ.
Anmol Sher Singh Bedi
ಅನ್ಮೋಲ್ ಶೇರ್ ಸಿಂಗ್ ಬೇಡಿ
Updated on: 

ವಿಶ್ವಸಂಸ್ಥೆ: ಭಯೋತ್ಪಾದನೆ ಹಾಗೂ ಪರಮಾಣು ಅಸ್ತ್ರಗಳ ಹೆಸರಿನಲ್ಲಿ ಬೆದರಿಕೆ ಹಾಕುತ್ತಿರುವ ಪಾಕಿಸ್ತಾನಕ್ಕೆ ಭಾರತವು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಮೂರು ಕಟ್ಟುನಿಟ್ಟಿನ 'ಲಕ್ಷ್ಮಣ ರೇಖೆ'ಗಳನ್ನು (ರೆಡ್ ಲೈನ್ಸ್) ಎಳೆಯುವ ಮೂಲಕ ಖಡಕ್ ಎಚ್ಚರಿಕೆ ನೀಡಿದೆ.

ವಿಶ್ವಸಂಸ್ಥೆಯ ಮಹಾಸಭೆಯ ಮೊದಲ ಸಮಿತಿಯಲ್ಲಿ ಪಾಕಿಸ್ತಾನದ ಪ್ರಚೋದನಾಕಾರಿ ಹೇಳಿಕೆಗಳಿಗೆ 'ಉತ್ತರಿಸುವ ಹಕ್ಕನ್ನು' (Right of Reply) ಚಲಾಯಿಸಿದ ಭಾರತೀಯ ನಿಯೋಗದ ಮೊದಲ ಕಾರ್ಯದರ್ಶಿ ಅನ್ಮೋಲ್ ಶೇರ್ ಸಿಂಗ್ ಬೇಡಿ, "ಭಾರತವು ಎಂದಿಗೂ ಪರಮಾಣು ಬ್ಲ್ಯಾಕ್‌ಮೇಲ್‌ಗೆ ಮಣಿಯುವುದಿಲ್ಲ" ಎಂದು ಕಠಿಣ ಸಂದೇಶ ರವಾನಿಸಿದ್ದಾರೆ.

ಭಾರತದ ಸೇನಾ ಕಾರ್ಯತಂತ್ರವು ಸಂಪೂರ್ಣವಾಗಿ ರಕ್ಷಣಾತ್ಮಕವಾಗಿದ್ದು, ಯಾವುದೇ ನಿರ್ದಿಷ್ಟ ರಾಷ್ಟ್ರವನ್ನು ಗುರಿಯಾಗಿಸಿಕೊಂಡಿಲ್ಲ. ಬದಲಾಗಿ, ಭಾರತದ ಭದ್ರತಾ ಅಗತ್ಯಗಳನ್ನು ಆಧರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟ ಘಟನೆಯನ್ನು ಉಲ್ಲೇಖಿಸಿದ ಅವರು, ಭಾರತದ ಪ್ರತಿಕ್ರಿಯೆಯನ್ನು ಆತ್ಮರಕ್ಷಣೆಯ ಕ್ರಮವೆಂದು ಸಮರ್ಥಿಸಿಕೊಂಡರು.

ಭಾರತದ ಕ್ರಮವು “ಮಿತವಾದ, ನಿರ್ದಿಷ್ಟ ಗುರಿಯನ್ನು ಹೊಂದಿದ ಮತ್ತು ಸಂಘರ್ಷವನ್ನು ಉಲ್ಬಣಗೊಳಿಸದ ಪ್ರತಿಕ್ರಿಯೆ”ಯಾಗಿತ್ತು ಎಂದು ಹೇಳಿದರು.

ಬಳಿಕ ಗಡಿಯಾಚೆಗಿನ ಭಯೋತ್ಪಾದಕ ಬೆದರಿಕೆಗಳ ಕುರಿತು ಭಾರತದ ಕಾರ್ಯತಂತ್ರವನ್ನು ಮೂರು ಅಂಶಗಳಲ್ಲಿ ಸ್ಪಷ್ಟಪಡಿಸಿದ ಭಾರತ, “ಮೊದಲನೆಯದಾಗಿ, ಭಾರತದ ವಿರುದ್ಧ ಯಾವುದೇ ಭಯೋತ್ಪಾದಕ ದಾಳಿ ನಡೆದರೂ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುತ್ತದೆ. ಎರಡನೆಯದಾಗಿ, ಭಾರತ ಪರಮಾಣು ಬೆದರಿಕೆಗೆ ಮಣಿಯುವುದಿಲ್ಲ. ಮೂರನೆಯದಾಗಿ, ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುವವರು ಮತ್ತು ಅದರ ಸಂಚು ರೂಪಿಸುವವರ ನಡುವೆ ಭಾರತ ಯಾವುದೇ ವ್ಯತ್ಯಾಸ ಮಾಡುವುದಿಲ್ಲ” ಎಂದು ಎಚ್ಚರಿಸಿದೆ.

ಸ್ಥಳೀಯ ಸಂಘಟನೆಗಳ ಮೂಲಕ ದಾಳಿ ನಡೆಸುವುದರಿಂದ ಸಂಬಂಧಿತ ರಾಷ್ಟ್ರದ ಹೊಣೆಗಾರಿಕೆ ಅಳಿಸಿಹೋಗುವುದಿಲ್ಲ. ಹಾಗೆಯೇ, ಭಾರತದ ಆತ್ಮರಕ್ಷಣೆಯ ಹಕ್ಕು ಕೂಡ ದುರ್ಬಲವಾಗುವುದಿಲ್ಲ. ಮಾತುಗಳಿಗಿಂತ ಕೃತ್ಯಗಳ ಆಧಾರದ ಮೇಲೆ ಸಂಘರ್ಷದ ಉಲ್ಬಣವನ್ನು ಅಳೆಯಬೇಕು, ಪರಮಾಣು ಶಸ್ತ್ರಾಸ್ತ್ರಗಳನ್ನು ರಾಷ್ಟ್ರಗಳು ಸಾಮಾನ್ಯ ಸಾಧನಗಳಾಗಿ ಪರಿಗಣಿಸುವುದು ಅಪಾಯಕಾರಿ.

Anmol Sher Singh Bedi
ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಸೀಮಿತ ಮಟ್ಟದ ಚಟುವಟಿಕೆಗಳ ಪರಿಣಾಮಗಳನ್ನು ತಡೆಯಲು ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆಯನ್ನು ಅವಲಂಬಿಸುವುದು ಸಂಯಮಕ್ಕೆ ಕಾರಣವಾಗುವುದಿಲ್ಲ. ಬದಲಾಗಿ, ಸಂಘರ್ಷ ಉಲ್ಬಣಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಬಳಿಕ ಪ್ರಾದೇಶಿಕ ಅಸ್ಥಿರತೆಯ ಕುರಿತು ಮಾತನಾಡಿದ ಅವರು, ಈ ಪ್ರದೇಶದಲ್ಲಿ ಬಿಕ್ಕಟ್ಟುಗಳು ಸಾಮಾನ್ಯವಾಗಿ ಪ್ರಚೋದನೆ, ಹೊಣೆಗಾರಿಕೆಯನ್ನು ನಿರಾಕರಿಸುವುದು ಮತ್ತು ಪ್ರತಿಕ್ರಿಯೆ ಎದುರಾದ ಬಳಿಕ ಸಂಯಮಕ್ಕೆ ಮನವಿ ಮಾಡುವ ಪುನರಾವರ್ತಿತ ಚಕ್ರವನ್ನು ಅನುಸರಿಸುತ್ತವೆ.

ಅಧಿಕಾರದಲ್ಲಿರುವವರು ಜನರಿಂದ ಆಯ್ಕೆಯಾಗದಿದ್ದಾಗ ಅಥವಾ ಜನರಿಗೆ ಉತ್ತರದಾಯಿಗಳಾಗಿರದಿದ್ದಾಗ, ಬಿಕ್ಕಟ್ಟು ಅಧಿಕಾರದ ಸಾಧನವಾಗುತ್ತದೆ ಮತ್ತು ಅಸ್ಥಿರತೆಯೇ ಅವರಿಗೆ ಅನುಕೂಲಕರವಾಗುತ್ತದೆ ಎಂದು ತಿಳಿಸಿದರು.

ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಿಂಧೂ ಜಲ ಒಪ್ಪಂದದ ಕುರಿತು ಪ್ರಸ್ತಾಪಿಸಿದ ಅವರು, ಈ ಒಪ್ಪಂದವು ಪರಸ್ಪರ ವಿಶ್ವಾಸ ಮತ್ತು ಸದ್ಭಾವನೆಯ ಆಧಾರದ ಮೇಲೆ ರೂಪುಗೊಂಡಿದೆ.

ಒಂದು ರಾಷ್ಟ್ರವು ಆ ವಿಶ್ವಾಸದ ಅಡಿಪಾಯವನ್ನೇ ದುರ್ಬಲಗೊಳಿಸಿ, ಅದೇ ಸಂಬಂಧದಿಂದ ದೊರೆಯುವ ಸೌಲಭ್ಯಗಳು ಯಾವುದೇ ಬದಲಾವಣೆಯಿಲ್ಲದೆ ಮುಂದುವರಿಯಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಎ.ಕ್ಯೂ. ಖಾನ್ ಜಾಲದ ಇತಿಹಾಸವನ್ನೂ ಉಲ್ಲೇಖಿಸಿದ ಬೇಡಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 1540 ರೂಪುಗೊಳ್ಳಲು ಆ ಜಾಲವೂ ಒಂದು ಕಾರಣವಾಗಿತ್ತು ಎಂದು ನೆನಪಿಸಿದರು.

ತಮ್ಮದೇ ಭದ್ರತೆಯ ದೃಷ್ಟಿಯಿಂದ ಪರಮಾಣು ಸಹಕಾರ ಮತ್ತು ಸೇನಾ ಉಪಕರಣಗಳ ವರ್ಗಾವಣೆಯ ವಿಚಾರದಲ್ಲಿ ಎಲ್ಲ ರಾಷ್ಟ್ರಗಳು ಹಾಗೂ ಜವಾಬ್ದಾರಿಯುತ ಪೂರೈಕೆದಾರರು ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.

ಭಾರತವು ಸಂಘರ್ಷವನ್ನು ಬಯಸುವುದಿಲ್ಲ ಮತ್ತು ಎಲ್ಲ ರಾಷ್ಟ್ರಗಳೊಂದಿಗೆ ಶಾಂತಿಯನ್ನು ಮುಂದುವರಿಸಲು ಬದ್ಧವಾಗಿದೆ ಎಂದು ಪುನರುಚ್ಚರಿಸಿದ ಅವರು, “ಬೇಜವಾಬ್ದಾರಿಯುತ ಕೃತ್ಯಗಳಿಗೆ ಹೊಣೆಗಾರಿಕೆ ನಿಗದಿಪಡಿಸದಿದ್ದರೆ, ಶಾಂತಿ ಎಂದರೆ ಮುಂದಿನ ಬಿಕ್ಕಟ್ಟಿನ ನಡುವಿನ ವಿರಾಮವಷ್ಟೇ ಆಗುತ್ತದೆ” ಎಂದು ಹೇಳಿದರು.

ಇದಕ್ಕೂ ಮೊದಲು, ಬುಧವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಆರನೇ ಸಮಿತಿಯಲ್ಲಿ ಪಾಕಿಸ್ತಾನದ ಉಪ ಕಾಯಂ ಪ್ರತಿನಿಧಿ ಉಸ್ಮಾನ್ ಜದೂನ್ ಅವರು ಭಾರತದ ವಿರುದ್ಧ ಮಾಡಿದ್ದ ಆರೋಪಗಳಿಗೆ ಭಾರತ ತಿರುಗೇಟು ನೀಡಿತ್ತು. ಈ ಸಮಿತಿಯು ಕಾನೂನು ವ್ಯವಹಾರಗಳಿಗೆ ಸಂಬಂಧಿಸಿದೆ.

ಭಯೋತ್ಪಾದನೆಯನ್ನು ಎದುರಿಸುವ ಮುಂಚೂಣಿ ರಾಷ್ಟ್ರವೆಂದು ಹಾಗೂ ಅದರ ಬಲಿಪಶುವೆಂದು ಪಾಕಿಸ್ತಾನ ತನ್ನನ್ನು ಬಿಂಬಿಸಿಕೊಳ್ಳುತ್ತಿದೆ. ಆದರೆ, ಪಾಕಿಸ್ತಾನವೇ ಸೃಷ್ಟಿಸಿದ ಭಯೋತ್ಪಾದಕ ಶಕ್ತಿಗಳು ಈಗ ನೆರೆಯ ರಾಷ್ಟ್ರಗಳ ಜೊತೆಗೆ ಪಾಕಿಸ್ತಾನದಲ್ಲೂ ಹಿಂಸಾಚಾರ ನಡೆಸುತ್ತಿವೆ ಎಂದು ಭಾರತದ ವಿಶ್ವಸಂಸ್ಥೆಯ ನಿಯೋಗದ ಪ್ರಥಮ ಕಾರ್ಯದರ್ಶಿ ರಘು ಪುರಿ ಆರೋಪಿಸಿದ್ದರು.

ಪಾಕಿಸ್ತಾನ ಸೃಷ್ಟಿಸಿದ ಭಯೋತ್ಪಾದಕ ಶಕ್ತಿಗಳು ತನ್ನ ನಿಯಂತ್ರಣದಿಂದ ಹೊರಹೋಗಿದ್ದು, ನೆರೆಯ ರಾಷ್ಟ್ರಗಳಲ್ಲಿ ಹಾನಿ ಉಂಟುಮಾಡಿದ ಬಳಿಕ ಈಗ ಪಾಕಿಸ್ತಾನದಲ್ಲೇ ಅದೇ ರೀತಿಯ ಹಿಂಸಾಚಾರ ನಡೆಸುತ್ತಿವೆ” ಎಂದು ಅವರು ಹೇಳಿದ್ದರು.

ಪಾಕಿಸ್ತಾನದ ಪ್ರಾಂತೀಯ ಮುಖ್ಯಮಂತ್ರಿಯೊಬ್ಬರು ಇತ್ತೀಚೆಗೆ ಈ ವಾಸ್ತವವನ್ನು ಬಹಿರಂಗಪಡಿಸಿದ್ದಾರೆ ಎಂದು ಉಲ್ಲೇಖಿಸಿದ ಪುರಿ, 2018ರಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿಯೊಬ್ಬರು ನೀಡಿದ್ದ ಸಂದರ್ಶನವನ್ನೂ ನೆನಪಿಸಿದರು.

ಒಂದೇ ಸಮಯದಲ್ಲಿ ಮೊಲಗಳೊಂದಿಗೆ ಓಡಿ, ಬೇಟೆ ನಾಯಿಗಳೊಂದಿಗೆ ಬೇಟೆಯಾಡಲು ಸಾಧ್ಯವಿಲ್ಲ. ವಾಸ್ತವ ಹಾಗೆ ನಡೆಯುವುದಿಲ್ಲ ಎಂದು ಪುರಿ ಎಚ್ಚರಿಸಿದ್ದರು.

ಪಾಕಿಸ್ತಾನದ ನಾಯಕತ್ವವು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ತನ್ನ ಪಾತ್ರದ ಕುರಿತು ದ್ವಂದ್ವ ನಿಲುವು ತಾಳಿದೆ ಎಂದು ಆರೋಪಿಸಿದ ಭಾರತ, ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುವವರ ವಿರುದ್ಧ ಜಾಗತಿಕ ಮಟ್ಟದಲ್ಲಿ ದೃಢ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com