ಬೆಳಗಾವಿ ಜಿಲ್ಲೆಯ ಕೆಲವು ರೈತರು ತೋಟಗಾರಿಕೆ ಬೆಳೆಗಳಲ್ಲಿ ಪ್ರಯೋಗ ಮಾಡುವಲ್ಲಿ ಬಲು ನಿಸ್ಸೀಮರು. ಅದೇ ರೀತಿ ಇಲ್ಲೊಬ್ಬ ರೈತ ಬಣ್ಣ ಬಣ್ಣದ ಕ್ಯಾಪ್ಸಿಕಂ ಬೆಳೆದು ಬದುಕನ್ನು ಮತ್ತಷ್ಟು 'ಕಲರ್‌ಫುಲ್' ಆಗಿಸಿಕೊಂಡಿದ್ದಾನೆ. ಅಲ್ಲದೆ ಸುತ್ತಮುತ್ತಲಿನ ಹತ್ತಾರು ರೈತರು ಈತನ ಮಾರ್ಗ ಅನುಸರಿಸತೊಡಗಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ತಾಲೂಕಿನ ಹಂಚಿನಾಳ ಗ್ರಾಮ 1100 ಎಕರೆ ಭೂಮಿ ಹೊಂದಿದೆ. ಗ್ರಾಮದಲ್ಲಿ ಶೇ.25ರಷ್ಟು ತೋಟಗಾರಿಗೆ ಬೆಳೆ ಬೆಳೆಯುತ್ತಾರೆ. ಇನ್ನುಳಿದ ಭೂಮಿಯಲ್ಲಿ ಜೋಳ, ತಂಬಾಕು, ಕಬ್ಬು, ಸೋಯಾಗೆ ಮೀಸಲು. ಈ ಭಾಗದ ರೈತರು ಬಾವಿ ಹಾಗೂ ಕೊಳವೆ ಬಾವಿ, ಕಾಲುವೆ ನೀರನ್ನು ಬಳಸಿಕೊಳ್ಳುತ್ತಾರೆ. ಇಲ್ಲಿನ ಚೆಂಡು ಹೂವು ಮುಂಬೈ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತದೆ.
ಗ್ರಾಮದ ರೈತ ಅನಿಲ ಕುರಣೆ ಒಮ್ಮೆ ಮಹಾರಾಷ್ಟ್ರದ ಶಿರೋಳಕ್ಕೆ ತೆರಳಿದ್ದರು. ಅಲ್ಲಿಯ ಬಣ್ಣದ ಕ್ಯಾಪ್ಸಿಕಂ ಬೆಳೆಯಲ್ಲಿ ಯಶ ಕಂಡ ರೈತರನ್ನು ಸಂಪರ್ಕಿಸಿದರು. ನಂತರ ನಾನೂ ಯಾಕೆ ಈ ರೀತಿಯ ಬೇಸಾಯ ಮಾಡಬಾರದು ಎಂದು ನಿರ್ಧರಿಸಿದರು. ಆಗ ಅವರು ಚಿಕ್ಕೊಡಿಯ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸಬ್ಸಿಡಿಯ ಸಹಾಯ ಹಸ್ತ ದೊರೆಯಿತು.
ಆರಂಭವಾದದ್ದು ಹೀಗೆ?
20 ಗುಂಟೆ ಜಾಗದಲ್ಲಿ ಪಾಲಿ ಹೌಸ್ ನಿರ್ಮಾಣಕ್ಕೆ ಅರ್ಧದಷ್ಟು ಹಣವನ್ನು ಪಡೆದಿದ್ದಾರೆ. ಉಳಿದ 8 ಲಕ್ಷ ತಮ್ಮ ಕೈಯಿಂದ ಹಾಕಿದರು. ಮಹಾರಾಷ್ಟ್ರದ ಪಾಲಿ ಹೌಸ್ ಸಂಸ್ಥೆ ಇದನ್ನು ನಿರ್ಮಿಸಿತು. ಪಾಲಿಹೌಸ್‌ನಿಂದ ಉಷ್ಣತೆಯ ಸ್ಥಿರತೆ ಕಾಯ್ದುಕೊಳ್ಳುವುದರ ಜತೆಗೆ ಹೊರಗಿನ ಕೀಟಗಳನ್ನು ನಿಯಂತ್ರಣ ಮಾಡಬಹುದು.
ಪಾಲಿಹೌಸ್ ಒಳಗೆ
ಕ್ಯಾಪ್ಸಿಕಂಗೆ ಕಪ್ಪು, ಕೆಂಪು ಎರಡೂ ಮಣ್ಣುಗಳಲ್ಲೂ ಬೆಳೆಯುತ್ತದೆ. ಕೊಲ್ಲಾಪುರದ ಹಾತಕಣಗಲಾದಿಂದ ಸಸಿ ತಂದು ನೆಟ್ಟಿದ್ದಾರೆ. ಡ್ರಿಪ್ ಮೂಲಕ ವಾರಕ್ಕೊಮ್ಮೆ ನೀರುಣಿಸುತ್ತಾರೆ. ಜೂನ್‌ನಿಂದ ಜನವರಿಯಲ್ಲಿ ನಾಟಿ ಮಾಡಬಹುದಾದ ಇವು ನಾಟಿ ಮಾಡಿದ 70 ದಿನಕ್ಕೆ ಕೊಯ್ಲಿಗೆ ಸಿದ್ಧವಾಗುತ್ತವೆ. ಸಸಿಗಳು ಹಳದಿ, ಕೆಂಪು ಆರಜಲಿ ವೆರೈಟಿಯಲ್ಲಿ ಸಿಗುತ್ತವೆ. ಅನಿಲ ಕುರಣೆ ಎರಡು ಥರದ ಕ್ಯಾಪ್ಸಿಕಂ ನಾಟಿ ಮಾಡಿದ್ದಾರೆ. ಮಾರಾಟದ ದೃಷ್ಟಿಯಿಂದ ಈ ಎರಡು ಪ್ರಕಾರ ಬೇಕೆ ಬೇಕು ಎನ್ನುತ್ತಾರೆ. ಶೇ.50ರಷ್ಟು ಬಣ್ಣ ಬಂದಾಗ ಕೊಯ್ಲು ಮಾಡಿ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡುತ್ತಾರೆ.
ರೋಗ ನಿಯಂತ್ರಣ
ಉಷ್ಣ ಹಾಗೂ ಕೀಟ ನಿಯಂತ್ರಣವನ್ನು ಪಾಲಿ ಹೌಸ್ ತಡೆದರೆ ಕೀಟ ಬಾಧೆ ತಡೆಗೆ ಗಮ್ ಟ್ರ್ಯಾಪ್ ಬಳಸುತ್ತಾರೆ. ಇದು ಚಿಕ್ಕ ಕೀಟಗಳನ್ನು ಸೆರೆ ಹಿಡಿಯುತ್ತದೆ.
ಇಳುವರಿ
70ದಿನದಲ್ಲಿ ಕೊಯ್ಲಿಗೆ ಬರುವ ಇದು ಮೊದ ಮೊದಲು 200 ಕೆಜಿಯಿಂದ 2 ಟನ್‌ವರೆಗೆ ಇಳುವರಿ ಪಡೆಯಬಹುದು. 10ರಿಂದ 15 ದಿನಕ್ಕೊಮ್ಮೆ ಕೊಯ್ಲು ಮಾಡಿ ವ್ಯವಸ್ಥಿತವಾಗಿ ಎರಡು ರೀತಿಯ ಕ್ಯಾಪ್ಸಿಕಂ ಅನ್ನು ಪ್ಯಾಕ್ ಮಾಡಿ ಮುಂಬೈ, ಗೋವಾ, ಹೈದರಾಬಾದ್ ನಗರದ ಸೂಪರ್ ಬಜಾರ್, ಹೊಟೇಲ್‌ಗಳಿಗೆ ಸಾಗಿಸುತ್ತಾರೆ. ಈಗ ಇದರ ದರ ಪ್ರತಿ ಕೆಜಿಗೆ 45ರಿಂದ 50 ರುಪಾಯಿ ಇದೆ. ಇನ್ನು ಹೆಚ್ಚಿನ ಬೆಲೆಗೂ ಮಾರಾಟವಾದ ನಿದರ್ಶನಗಳಿವೆ. 10 ತಿಂಗಳ ಒಟ್ಟು 20ರಿಂದ 21ಟನ್ ಮಾರಾಟ ಮಾಡುತ್ತಾರೆ. ಇದರಿಂದ 9ಲಕ್ಷ ಆದಾಯ ಬಂದಿದೆ. ಖರ್ಚು 2ರಿಂದ 2.5 ಲಕ್ಷ. ನಿವ್ವಳ ಲಾಭ 7 ಲಕ್ಷ ಬಂದಿದೆ. ಮಾಹಿತಿಗೆ ಅನಿಲ ಕುರಣೆ, ಮೊ 9880417099
-ವಿನೋದ ರಾ.ಪಾಟೀಲ