ಪಾಟ್ನಾ: ಅಳಿವಿನಂಚಿನ ಜೀವಿ ಎಂದು ಪರಿಗಣಿಸಲಾಗಿರುವ ಗ್ಯಾಂಜೆಟಿಕ್ ಡಾಲ್ಫಿನ್ ಬಿಹಾರದ ಎನ್ ಐ ಟಿ ಘಾಟ್ ಬಳಿ ಮೃತಪಟ್ಟಿರುವುದು ವರದಿಯಾಗಿದೆ.
"ಮೀನು ಹಿಡಿಯುವ ಬಲೆಗೆ ಸಿಲುಕಿ ಈ ಗ್ಯಾಂಜೆಟಿಕ್ ಡಾಲ್ಫಿನ್ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಇದು ಗಂಗಾದ ಎನ್ ಐ ಟಿ ಘಾಟ್ ಬಳಿ ತೇಲುತ್ತಿದ್ದುದು ಕಂಡುಬಂದಿದೆ" ಎಂದು ಜಿಲ್ಲ ಅರಣ್ಯ ಅಧಿಕಾರಿ ತಿಳಿಸಿದ್ದಾರೆ.
೪ ಅಡಿ ಉದ್ದವಿದ್ದ ಡಾಲ್ಫಿನ್ ೪೦ ಕೆಜಿ ತೂಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
"ಇದರ ಸಾವಿಗೆ ಕಾರಣವನ್ನು ತನಿಖೆ ಮಾಡುತ್ತಿದ್ದೇವೆ ಮತ್ತು ಮರಣೋತ್ತರ ಪರೀಕ್ಷೆಯ ವರದಿಯನ್ನು ನಿರೀಕ್ಷಿಸುತ್ತಿದ್ದೇವೆ" ಎಂದು ಕೂಡ ಅವರು ತಿಳಿಸಿದ್ದಾರೆ.
ತಜ್ಞರ ಪ್ರಕಾರ ಇದೇನು ಹೊಸದಲ್ಲ, ಸಾಮಾನ್ಯವಾಗಿ ಅದರ ಚರ್ಮ ಮತ್ತು ಎಣ್ಣೆಗಾಗಿ ಹಾಗೂ ಅದರ ಮಾಂಸ ಮತ್ತು ಕೊಬ್ಬಿಗಾಗಿಯೂ ಅತಿ ಹೆಚ್ಚು ಬೇಡಿಕೆ ಇರುವುದರಿಂದ ಡಾಲ್ಫಿನ್ ಗಳನ್ನು ಕೊಲ್ಲುವುದು ಸಾಮಾನ್ಯವಾಗಿದೆ ಎಂದಿದ್ದಾರೆ.
ಡಾಲ್ಫಿನ್ ಗಳ ಬೇಟೆಯನ್ನು ತಡೆಯುವುದಕ್ಕೆ ಕ್ರಮ ಕೈಗೊಳ್ಳಲು ೨೦೧೧ರಲ್ಲಿ ಪಾಟ್ನಾ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದರೂ ಡಾಲ್ಫಿನ್ ಗಳನ್ನು ಕೊಲ್ಲಲಾಗುತ್ತಿದೆ.
'ನದಿಗಳ ಮಕ್ಕಳು' ಎಂದು ಕರೆಯಲಾಗುವ ಈ ಸಿಹಿ ನೀರಿನ ಡಾಲ್ಫಿನ್ ಗಳನ್ನು ೧೯೯೬ರಲ್ಲಿ ಅಳಿವಿನಿಂಚಿನ ಪ್ರಾಣಿಗಳ ಪಟ್ಟಿಗೆ ಸೇರಿಸಲಾಗಿತ್ತು. ತಜ್ಞರ ಪ್ರಕಾರ ಈಗ ಇವುಗಳ ಸಂಖ್ಯೆ ೨೦೦೦ ದಿಂದ ೨೫೦೦. 'ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್' ಸಂಸ್ಥೆಯ ಪ್ರಕಾರ ೧೯೮೦ ರಲ್ಲಿ ಇವುಗಳ ಸಂಖ್ಯೆ ಸುಮಾರು ೩೫೦೦ ಎಂದು ಅಂದಾಜಿಸಲಾಗಿತ್ತು.