ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೆಯ್ಯೂರಿನ ನಿವಾಸಿ ಹರಿಕೃಷ್ಣ ಭಟ್ ಅಂಚೆ ಇಲಾಖೆಯ ನಿವೃತ್ತ ನೌಕರರು. ತಮ್ಮ ಎರಡು ಎಕರೆಗೂ ಅಧಿಕ ಜಾಗದಲ್ಲಿ ರಬ್ಬರ್, ತೆಂಗು, ಬಾಳೆ, ಗೇರು, ಹೂವು, ಗಿಡಮೂಲಿಕೆಗಳನ್ನು ಬೆಳೆಸಿರುವ ಇವರು ದಿನವಿಡೀ ಕೃಷಿ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಇವರ ವಿಶೇಷತೆ ಇರುವುದು ಪರಿಸರ ಕಾಳಜಿಯಲ್ಲಿ.
ತಮ್ಮ ಮನೆಯ ಹೊರಗೆ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುತ್ತಾರೆ. ಇತರರನ್ನೂ ಗಿಡ ನೆಡುವಂತೆ, ಪರಿಸರವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವಂತೆ ಪ್ರೇರೇಪಿಸುತ್ತಾರೆ.
ಇವರ ಇಡೀ ಜಾಗದಲ್ಲಿ ಸುತ್ತಿ ಬಂದರೂ ಪ್ಲಾಸ್ಟಿಕ್, ಬಾಟಲಿ, ಗ್ಲಾಸು ಚೂರು ಸಿಗುವುದಿಲ್ಲ. ಬೇಡದ ಕಸ- ಕಡ್ಡಿಗಳಿಲ್ಲ. ಅಷ್ಟು ಸ್ವಚ್ಛವಾಗಿ ತಮ್ಮ ಇಡೀ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅನವಶ್ಯಕ ಗಿಡ ಕಂಡುಬಂದರೆ ತಕ್ಷಣವೇ ಅದನ್ನು ಕಿತ್ತು ಹಾಕುತ್ತಾರೆ. ಮನೆಯ ಹಾಗೂ ಸುತ್ತಮುತ್ತಲ ಕಸವನ್ನು ರಾಶಿ ಹಾಕಿ ಅದನ್ನು ವಾರಕ್ಕೊಮ್ಮೆ ಹತ್ತಿರದ ಪಂಚಾಯತ್ ಕಸದ ತೊಟ್ಟಿಗೆ ಕೊಂಡು ಹೋಗಿ ಸುರಿಯುತ್ತಾರೆ. ಮನೆಯ ಸುತ್ತಲೂ ಹೂವು, ಗಿಡಮೂಲಿಕೆ ಸಸ್ಯಗಳು. ಮನೆಗೆ ಮೇಲಿರುವ ಟಾಂಕಿಯಿಂದ ನೀರು ತುಂಬಿ ಹರಿದು ಕೆಳಗೆ ಬಿದ್ದರೆ ಅದು ಪೋಲಾಗಿ ಹೋಗುವುದನ್ನು ತಡೆಯಲು ಟಾಂಕಿಯ ಸುತ್ತಲೂ ತರೆಗೆಲೆ, ಕಾಗದದ ಚೂರು ಹಾಕಿ ಎರೆಹುಳವನ್ನು ಸಾಕುತ್ತಾರೆ.
ಭಟ್ಟರ ಮನೆಯ ಗೇಟಿಗೆ ಚಪ್ಪರದಂತೆ ಮರ, ಗಿಡ-ಬಳ್ಳಿಗಳು ಆವರಿಸಿ ತಂಪನ್ನೀಯುತ್ತವೆ. ಒಂದು ಗಿಡವನ್ನು ನಾವು ಹೇಗೆ ಬೆಳೆಸುತ್ತೇವೆಯೋ ಆ ರೀತಿ ಬೆಳೆಯುತ್ತದೆ, ಅದನ್ನು ಅದರ ಪಾಡಿಗೆ ಬಿಟ್ಟರೆ ಬೇಕಾಬಿಟ್ಟಿಯಾಗಿ ಬೆಳೆಯುತ್ತದೆ ಎಂಬ ತತ್ವವನ್ನು ಚೆನ್ನಾಗಿ ಅರಿತಿರುವ ಇವರು ಗಿಡ ಮರಗಳನ್ನು ಬೇಕಾಬಿಟ್ಟಿ ಬೆಳೆಯಲು ಬಿಡುವುದಿಲ್ಲ. ಅವಕ್ಕೆ ಬಳ್ಳಿ ಕಟ್ಟಿ ಸರಿಯಾಗಿ ಬೆಳೆಯುವಂತೆ ನೋಡಿಕೊಳ್ಳುತ್ತಾರೆ. ತಮ್ಮ ಮನೆಯ ಹೊರಗೆ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುತ್ತಾರೆ. ಇತರರನ್ನೂ ಗಿಡ ನೆಡುವಂತೆ, ಪರಿಸರವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವಂತೆ ಪ್ರೇರೇಪಿಸುತ್ತಾರೆ.
`ನಾವು ಪರಿಸರವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ’ ಎಂಬ ನಿಯಮಕ್ಕೆ ಬದ್ದರಾಗಿರುವ ಹರಿಕೃಷ್ಣ ಭಟ್ಟರು ಪರಿಸರದ ಗಿಡ, ಮರ, ಬಳ್ಳಿಗಳನ್ನು ತಮ್ಮ ಮನೆಯ ಸದಸ್ಯರಂತೆ ಸಾಕಿ ಸಲುಹುತ್ತಿದ್ದಾರೆ.
ಸುಮನಾ ಉಪಾಧ್ಯಾಯ
ಬೆಂಗಳೂರು