ವಿವಿಧ ಹಂತಗಳನ್ನು ಹೊಂದಿರುವ ಹೈಡ್ರೋಪೋನಿಕ ಘಟಕದ ಮುಂದೆ ರೈತ ಧರೆಪ್ಪ ಕಿತ್ತೂರ
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೇರದಾಳದ ಸಾವಯವ ಕೃಷಿಕ ಹಾಗೂ ರಾಷ್ಟ್ರಮಟ್ಟದ ಐಎಆರ್‍ಐ ಫೇಲೋ ಪ್ರಶಸ್ತಿ ವಿಜೇತ ಧರೆಪ್ಪ ಕಿತ್ತೂರ ತಮ್ಮ ತೋಟದಲ್ಲಿ ಪಶು ಆಹಾರ ತಯಾರಿಸುವ ಹೈಡ್ರೋಪೋನಿಕ(ಜಲಕೃಷಿ) ಘಟಕ ಸ್ಥಾಪಿಸಿ ಕಡಿಮೆ ಸ್ಥಳ, ಖರ್ಚು ಹಾಗೂ ಸಮಯದಲ್ಲಿ ಪೌಷ್ಟಿಕ ಪಶು ಆಹಾರ ತಯಾರಿಸಿ ಪಶುಗಳಿಗೂ ಸಾವಯುವ ಆಹಾರ ನೀಡುವುದರ ಮೂಲಕ ಹೈನುಗಾರಿಕೆಯನ್ನು ಇನ್ನೂ ಚೆನ್ನಾಗಿ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಭೂಮಿಯಲ್ಲಿ ಕನಿಷ್ಠ 1 ಕೆಜಿ ಮೇವು ಬೆಳೆಯಲು 80 ರಿಂದ 100 ಲೀಟರ ನೀರು ಬೇಕು ಕನಿಷ್ಠ 90 ದಿನಗಳ ಅವಧಿ ಬೇಕು. ಆದರೆ ಹೈಡ್ರೋಪೋನಿಕ ನಲ್ಲಿ 1 ಕೆಜಿ ಮೇವು ಬೆಳೆಯಲು 2 ರಿಂದ 3 ಲೀಟರ್ ನೀರಿನ ಜೊತೆ ಕೇವಲ ಹತ್ತು ದಿನಗಳಲ್ಲಿ ಇದನ್ನು ಬೆಳೆಯಬಹುದು. ಹೈನುಗಾರಿಕೆಯಲ್ಲಿ ಪಶುಗಳಿಗೆ ಬಳಸುವ ಹಿಂಡಿಗೆ ಪರ್ಯಾಯವಾಗಿ ಇದನ್ನು ಬಳಸಬಹುದು. ಹೈಡ್ರೋಪೋನಿಕ ಘಟಕದ ಮೂಲಕ ಬೆಳೆಯುವ ಮೊಳಕೆ ಕಾಳಿನಲ್ಲಿ ವಿಟಮಿನ ಎ, ವಿಟಮಿನ್ ಸಿ, ವಿಟಮಿನ ಡಿ, ವಿಟಮಿನ ಡಿ3, ವಿಟಮಿನ ಕೆ ಗಳು ಹೇರಳವಾಗಿ ಸಿಗುತ್ತವೆ. ಇದರಿಂದ ಪಶುಗಳಿಗೆ ಕೊಡುವ ಕ್ಯಾಲ್ಸಿಯಂ ಕಡಿಮೆ ಮಾಡಬಹುದು. ಅಲ್ಲದೇ ಹೈಡ್ರೋಪೋನಿಕ್‍ನಲ್ಲಿ(ಜಲಕೃಷಿ) ಬೆಳೆದ ಮೇವಿನಲ್ಲಿ ಎಲ್ಲ ತರಹದ ವಿಟಮಿನಗಳು ಸಿಗುವುದರಿಂದ ಬರಡು ದನಗಳಿಗೆ ಗರ್ಭದಾರಣೆಗೆ ಉಪಯುಕ್ತ.
10*10 ರ ನೆರಳು ಪರದೆಯ ಮನೆ ನಿರ್ಮಿಸಿ ಅದರಲ್ಲಿ 6 ಫೂಟ ಎತ್ತರ, 8 ಪೂಟ್ ಅಗಲದ 8 ಭಾಗಗಳನ್ನು ಮಾಡಿಕೊಂಡು ಒಂದು ಭಾಗದಲ್ಲಿ 1ಫೂಟ ಅಗಲ ಹಾಗೂ ಒಂದುವರೆ ಪೂಟ ಉದ್ದದ 9 ಟ್ರೇಗಳು ಹಿಡಿಯುವಂತೆ ಘಟಕವನ್ನು ಸ್ಥಾಪಿಸಲಾಗಿದೆ.
ಇಲ್ಲಿ ದಿನ ನಿತ್ಯ 1 ಟ್ರೇನಲ್ಲಿ 250 ಗ್ರಾಂ ಕಾಳುಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಪ್ರಾರಂಭದ ದಿನ 24 ಗಂಟೆಗಳ ಕಾಲ ಗೋವಿನ ಜೋಳವನ್ನು ನೀರಿನಲ್ಲಿ ನೆನೆಹಾಕಿ ನಂತರ 24 ಗಂಟೆಗಳ ಕಾಲ ಮೊಳಕೆ ಬರುವವರೆಗೆ ಅರಿವೆಯಲ್ಲಿ ಕಟ್ಟಿಡಬೇಕು ತದ ನಂತರ ಮೊಳಕೆವೊಡೆದ ಕಾಳುಗಳನ್ನು ಒಂದು ಟ್ರೇಗೆ 250 ಗ್ರಾಂನಂತೆ ಮೊದಲನೇ ವಿಭಾಗಕ್ಕೆ ಇಡಬೇಕು ನಂತರ 8ದಿನಗಳವರೆಗೆ ಒಂದು ವಿಭಾಗದಿಂದ ಒಂದು ವಿಭಾಗಕ್ಕೆ ವರ್ಗಾಯಿಸುತ್ತಾ ಹೋಗಿ 10ನೇದಿನಕ್ಕೆ ಪೌಷ್ಟಿಕವಾದ ಪಶು ಆಹಾರ ದೊರೆಯುತ್ತದೆ. ಇದರಿಂದ ಹಾಲಿನ ಇಳುವರಿ ಹೆಚ್ಚುವುದರ ಜೊತೆಗೆ ಹಾಗೂ ಹಿಂಡಿಯ ಖರ್ಚು ಉಳಿಯುತ್ತದೆ. ಸರಾಸರಿ 1 ಕೆ.ಜಿ. ಗೋವಿನ ಜೋಳ ದಿಂದ ನಾವು 10 ದಿನದಲ್ಲಿ ಪಶುಗಳಿಗೆ 8 ರಿಂದ 10 ಕೆಜಿ ಮೇವಾಗಿ ದೊರೆಯುವುದರಿಂದ ಹೈನುಗಾರಿಕೆಗೆ ಇದು ಅನುಕೂಲವಿದೆ. 9 ಟ್ರೇನಲ್ಲಿ ಪ್ರತಿ ನಿತ್ಯ 5 ಕೇಜಿ ಗೋವಿನ ಜೋಳ ಹಾಕಿ 10ನೇ ದಿನಕ್ಕೆ 40 ರಿಂದ 50 ಕೇಜಿ ಪೌಷ್ಟಿಕ ಆಹಾರ ದೊರೆಯುತ್ತದೆ. 1 ಕೆಜಿ ಗೋವಿನಜೋಳದ ಬೆಲೆ 15 ರೂ ಆಗಿದ್ದು ಇದು 8 ರಿಂದ 10 ಪಟ್ಟು ಆಗುವುದರಿಂದ ನಮಗೆ ಮೇವು ಸುಮಾರು 1.5ರೂ ಗೆ ಕೆಜಿಯಂತೆ ದೊರೆಯುತ್ತದೆ ಎನ್ನುತ್ತಾರೆ ಧರೆಪ್ಪ
ಇದಕ್ಕೆ ದಿನದ 24 ಗಂಟೆಗಳಲ್ಲಿ ಕನಿಷ್ಠ 4ರಿಂದ 5 ಗಂಟೆ ಸಿಗುವ ವಿದ್ಯತ್‍ನಲ್ಲಿ ಪ್ರತಿ ಒಂದು ಗಂಟೆಗೆ 20 ಸೆಕೆಂಡಿನಂತೆ ಟೈಮರ್ ಅಳವಡಿಸಿ ಪಾಗರ ಮೂಲಕ ನೀರು ಪೂರೈಸುತ್ತಿದ್ದು, ಪ್ರತಿ ದಿನ 30 ರಿಂದ 40 ಲೀಟರ ನೀರು ವ್ಯಯವಾಗುತ್ತದೆ. ಅಲ್ಲದೇ ಹೈಡ್ರೋಪೋನಿಕದಲ್ಲಿ ಕನಿಷ್ಠ 25 ರಿಂದ 28 ಡಿಗ್ರಿ ಸೆಲಿಸಿಯಸ್ ತಾಪಮಾನವನ್ನು ಕಾಯ್ದುಕೊಳ್ಳಬೇಕು. ಹವಾಮಾನಕ್ಕೆ ತಕ್ಕಂತೆ ನೀರಿನ ಪ್ರಮಾಣದಲ್ಲಿ ವ್ಯತ್ಯಾಸ ಮಡಿಕೊಳ್ಳಬೇಕು. ಇದರಲ್ಲಿ ಯಾವುದೇ ರೀತಿಯ ರಾಸಾಯನಿಕವನ್ನು ಬಳಸದೇ ಇರುವುದರಿಂದ ಇದು ಸಂಪೂರ್ಣ ಸಾವಯವವಾಗಿದೆ ಎನ್ನುತ್ತಾರೆ ರೈತರಾದ ಧರೆಪ್ಪ ಕಿತ್ತೂರ.
ಗೋವಿನಜೋಳ, ಗೋದಿ, ರಾಗಿ, ಹುರಳೆ, ಸಜ್ಜಿ ಸೇರಿದಂತೆ ದ್ವಿದಳ ದಾಣ್ಯಗಳು ನಾವೇ ತೋಟದಲ್ಲಿ ಬೆಳೆದಿರುವ ಬೆಳೆಗಳಾಗಿರುವುದರಿಂದ ಅವುಗಳನ್ನು ಕೊಂಡು ತರುವ ಪ್ರಮೇಯವೇ ಬರುವುದಿಲ್ಲ. ಕಾರಣ ಕಡಿಮೆ ಖರ್ಚಿನಲ್ಲಿ ಇದು ಸಾಧ್ಯವಾಗಿರುವುದರಿಂದ ಇದು ನಮಗೆ ತುಂಭಾ ಅನುಕೂಲವಾಗಿರುವುದರ ಜೊತೆಗೆ ಹಿಂಡಿಯ ಖಚು ಉಳಿಯುತ್ತಿರುವುದರಿಂದ ಹಾಲು ಮಾರಾಟದಿಂದ ಉತ್ತಮ ಲಾಭವಾಗುತ್ತಿದೆ ಎನ್ನುತ್ತಾರೆ ಧರೆಪ್ಪ ಕಿತ್ತೂರ.
ಔಷಧಿಯಾಗಿ ಬಳಕೆ: 200 ಗ್ರಾಂ ಗೋದಿಯನ್ನು 8 ತಾಸು ನೀರಿನಲ್ಲಿ ನೆನೆ ಹಾಕಿ ನಂತರ 24 ಗಂಟೆಗಳ ಕಾಲ ಮೊಳಕೆ ಕಟ್ಟಿ ಮೂರನೇದಿನ 1 ಟ್ರೇಗೆ ವರ್ಗಾಯಿಸಿ 10ನೇದಿನಕ್ಕೆ 4 ರಿಂದ 5 ಕಿಲೋ ಸಿಗುವ ಅದರ ಹುಲ್ಲನ್ನು ಜೂಸ್ ಮಾಡಿ ಕುಡಿಯುವುದರಿಂದ ಮನುಷ್ಯರಿಗೆ ಲೀವರಗೆ ಟಾನಿಕ್ ಆಗಿ ಕೆಲಸ ಮಾಡುತ್ತದೆ ಜೊತೆಗ ಶುಗರ್ ಪೇಸೆಂಟ್‍ಗಳಿಗೆ ರಾಮಬಾಣವಾಗಿದೆ
ಈಗಾಗಲೇ ತಮ್ಮ 5 ಆಕಳುಗಳಿಗೆ ಇದನ್ನು ಅಳವಡಿಸಿಕೊಂಡಿರುವ ಧರೆಪ್ಪ ಕಿತ್ತೂರ ಒಟ್ಟು 15 ಕ್ಕೂ ಹೆಚ್ಚೂ ಆಕಳು, ಎಮ್ಮೆ ಹಾಗೂ ಆಡುಗಳನ್ನು ಸಾಕಿದ್ದು, ಕಾರಣ ಘಟಕವನ್ನು ಸಧ್ಯದಲ್ಲೇ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸಲಾಗುವುದು ಎನ್ನುತ್ತಾರೆ.
ಕೃಷಿಯ ಜೊತೆ ಹೈನುಗಾರಿಕೆಯಲ್ಲಿ ವಿನೂತನ ಪ್ರಯೋಗ ಮಾಡುತ್ತಿರುವ ರಾಷ್ಟ್ರಪ್ರಶಸ್ತಿ ವಿಜೇತ ಧರೆಪ್ಪ ಕಿತ್ತೂರರ ಪ್ರಯತ್ನ ನಿಜಕ್ಕೂ ಇತರರಿಗೆ ಮಾದರಿ
ಹೆಚ್ಚಿನ ಮಾಹಿತಿಗಾಗಿ ಧರೆಪ್ಪ ಕಿತ್ತೂರ ಮೊ: 9008214658
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos