ವಾಷಿಂಗ್ಟನ್: ವಾತಾವರಣದಲ್ಲಿ ಉಷ್ಣತೆ ಹೆಚ್ಚಿಸಿ, ಹಸಿರು ಮನೆ ಪರಿಣಾಮ ಉಂಟು ಮಾಡಬಲ್ಲ ವಿಷಾನಿಲ ಇಂಗಾಲಾಮ್ಲ (ಕಾರ್ಬನ್ ಡೈಆಕ್ಸೈಡ್)ದ ದುಷ್ಪರಿಣಾಮ ಸಮಸ್ಯೆಗೆ ವಿಜ್ಞಾನಿಗಳ ಯಶಸ್ವೀ ಪರಿಹಾರ ಕಂಡುಕೊಂಡಿದ್ದು, ಇಂಗಾಲಾಮ್ಲವನ್ನು ಅಗ್ನಿಶಿಲೆಯಾಗಿ ಮಾರ್ಪಡಿಸುವ ಸಂಶೋಧನೆ ಮಾಡಿದ್ದಾರೆ.
ಅಮೆರಿಕ ವಿಜ್ಞಾನಿಗಳು ಈ ನೂತನ ಸಂಶೋಧನೆ ಮಾಡಿದ್ದು, ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡನ್ನು ಕಲ್ಲಿನ ಬಂಡೆಯಾಗಿ ಪರಿವರ್ತಿಸುವ ಹೊಸ ತಂತ್ರಜ್ಞಾನವನ್ನು ಅವರು ಸಂಶೋಧಿಸಿದ್ದಾರೆ. ಕಾರ್ಬನ್ ಡೈಆಕ್ಸೈಡನ್ನು ನೀರಿನೊಂದಿಗೆ ಸೇರಿಸಿ ನೂರಾರು ಅಡಿಗಳಷ್ಟು ಆಳದ ಕಂದಕದಲ್ಲಿ ಇರಿಸಲಾಗುತ್ತದೆ. ಇದಕ್ಕೆ ಕೆಲ ರಾಸಾಯನಿಕಗಳ ಮಿಶ್ರಣ ಮಾಡುವುದರಿಂದ ಇದು ಕಾಲಕ್ರಮೇಣ ಅಗ್ನಿಶಿಲೆಯಾಗಿ ಮಾರ್ಪಾಡಾಗುತ್ತದೆ ಎಂಬುದು ವಿಜ್ಞಾನಿಗಳ ವಾದವಾಗಿದೆ.
ಇದಕ್ಕೆ ವಿಜ್ಞಾನಿಗಳು ತಮ್ಮ ನಿದರ್ಶನವನ್ನು ಕೂಡ ನೀಡಿದ್ದು, ಅಮೆರಿಕದ ಹೆಲಿಶೈಡಿಯಲ್ಲಿರುವ ಜಿಯೋಥರ್ಮಲ್ ಘಟಕದಲ್ಲಿ ಈ ಪ್ರಯೋಗ ನಡೆಸಿದ್ದಾರೆ. ಈ ಜಿಯೋಥರ್ಮಲ್ ಘಟಕದಿಂದ ಪ್ರತಿವರ್ಷ 40 ಸಾವಿರ ಟನ್ ಕಾರ್ಬನ್ ಡೈಆಕ್ಸೈಡ್ ಹೊರಸೂಸುತ್ತದೆ. 2012ರಲ್ಲಿ 250 ಟನ್ ಕಾರ್ಬನ್ ಡೈಆಕ್ಸೈಡ್‌ನ್ನು ನೀರಿನೊಂದಿಗೆ ಆಳವಾದ ಸುರಂಗದಲ್ಲಿ ಸಂಗ್ರಹಿಸಿಡಲಾಗಿದ್ದು, ಇದು ಘನವಸ್ತುವಾಗಿ ಮಾರ್ಪಡಲು ನೂರಾರು ವರ್ಷ ಬೇಕಾಗಬಹುದೆಂದು ವಿಜ್ಞಾನಿಗಳು ಅಂದಾಜಿಸಿದ್ದರು. ಆದರೆ ಇತ್ತೀಚೆಗೆ ಇದನ್ನು ಪರೀಕ್ಷಿಸಿದಾಗ ಬಿಳಿ ಕಲ್ಲಾಗಿ ಪರಿವರ್ತನೆಯಾಗಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.