ಸಾಂದರ್ಭಿಕ ಚಿತ್ರ 
ಕೃಷಿ-ಪರಿಸರ

ಕೊಳವೆ ಬಾವಿಗಳ ಮರುಪೂರಣದೊಂದಿಗೆ ನೀರಿನ ಕೊರತೆ ವಿರುದ್ಧ ಹೋರಾಟ

ನೀರಿಗೆ ತತ್ವಾರ ಬಂದೊದಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಶ್ರೀಸಾಮಾನ್ಯರಲ್ಲಿ ಅತ್ಯಾಧುನಿಕ ಜಲ ಸಂರಕ್ಷಣೆ ಪದ್ಧತಿಗಳ ಮೂಲಕ ನೀರು ಸಂರಕ್ಷಿಸುವ ಬಗ್ಗೆ ಅರಿವು ಮೂಡಿಸಲು ...

ಮುಂದುವರಿದ ಬರ ಪರಿಸ್ಥಿತಿ ಮತ್ತು ದಶಕಗಳಿಂದ ಅಂತರ್ಜಲ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಕುಡಿಯುವ ನೀರಿತ ಅಭಾವ ಎದುರಿಸುತ್ತಿದೆ. ಉತ್ತರ ಕರ್ನಾಟಕದ ಬಹುತೇಕ ನಗರ ಮತ್ತು ಪಟ್ಟಣಗಳಲ್ಲಿ ನೀರಿನ ನಲ್ಲಿಗಳ ಮುಂದೆ, ಕೊಳವೆ ಬಾವಿಗಳ ಮುಂದೆ, ನೀರಿನ ಟ್ಯಾಂಕರ್ ಗಳ ಮುಂದೆ ಉದ್ದನೆಯ ಸಾಲು ಸಾಮಾನ್ಯ ದೃಶ್ಯವಾಗಿದೆ.  ಗ್ರಾಮೀಣ ಕರ್ನಾಟಕದಲ್ಲಿ ಪ್ರತಿ ದಿನ ಮಹಿಳೆಯರು ತಲೆಯ ಮೇಲೆ ನೀರಿನ ಬಿಂದಿಗೆಗಳನ್ನು ಹೊತ್ತು ಕುಡಿಯುವ ನೀರಿಗಾಗಿ ಕಿಲೋಮೀಟರ್ ಗಟ್ಟಲೆ ಹೋಗುವುದನ್ನು ನೋಡುತ್ತಿದ್ದೇವೆ. ಕುಡಿಯುವ ನೀರಿಗಾಗಿ ಹಾಗೂ ನೀರಾವರಿಗಾಗಿ ನೀರು ಕೊಡಿ ಎಂದು ರೈತರು ಪ್ರತಿಭಟನೆ ನಡೆಸುವುದು ಸರ್ವೇ ಸಾಮಾನ್ಯವಾಗಿ ಹೋಗಿದೆ.

ಕರ್ನಾಟಕ ರಾಜ್ಯದಲ್ಲೇ ಚಿತ್ರದುರ್ಗ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮಳೆ ಆಗಿದೆ. ಬರ  ಉಸ್ತುವಾರಿ ಮಂಡಳಿಯ ಪ್ರಕಾರ ಬಹುತೇಕ ಕೊಳವೆ ಬಾವಿಗಳು ಬರಿದಾಗಿವೆ ಮತ್ತು ಎಲ್ಲಿ ನೀರಿದೆಯೋ ಅದರ ಗುಣಮಟ್ಟ ಅತ್ಯಂತ ಕಳಪೆಯಾಗಿದೆ (ಐಡಬ್ಲ್ಯುಪಿ). ನೀರಿನ ಕೊರತೆಯ ವಿರುದ್ಧ ಹೋರಾಟ ನಡೆಸಲು ನೀರಿನ ಸಂರಕ್ಷಣೆ  ಈಹೊತ್ತಿನ ಅಗತ್ಯವಾಗಿದೆ. ಜಲ ಸಂರಕ್ಷಣೆ ಮತ್ತು ನೀರಿನ ನಿರ್ವಹಣೆಯಲ್ಲಿ ಮಳೆ ನೀರು ಕೊಯ್ಲು ಅತ್ಯಂತ ಪರಿಣಾಮಕಾರಿ ಪದ್ಧತಿಯಾಗಿದೆ.

ನೀರಿಗೆ ತತ್ವಾರ ಬಂದೊದಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಶ್ರೀಸಾಮಾನ್ಯರಲ್ಲಿ ಅತ್ಯಾಧುನಿಕ ಜಲ ಸಂರಕ್ಷಣೆ ಪದ್ಧತಿಗಳ ಮೂಲಕ ನೀರು ಸಂರಕ್ಷಿಸುವ ಬಗ್ಗೆ ಅರಿವು ಮೂಡಿಸಲು  ಚಿತ್ರದುರ್ಗ ಜಿಲ್ಲೆಯ ಜಲಭೂಶಾಸ್ತ್ರಜ್ಞ ಎನ್.ಜೆ. ದೇವರಾಜ ರೆಡ್ಡಿ ಅವರು ಸತತ ಪ್ರಯತ್ನ ಮಾಡುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆ ಮತ್ತು ಸುತ್ತಮುತ್ತ ಕೊಳವೆ ಬಾವಿಗಳ ಮರುಪೂರಣ ಜಲ ಸಂರಕ್ಷಣೆಯ ಒಂದು ವ್ಯಾಪಕ ಕಾರ್ಯಕ್ರಮವಾಗಿದೆ. ಡಾ. ದೇವರಾಜ ರೆಡ್ಡಿ ಅವರ ಭೂಮಿ ಮತ್ತು ಮಳೆ ನೀರು ಮಂಡಳಿ ಜಲ ಸಂರಕ್ಷಣೆ ಹಾಗೂ ಕೊಳವೆ ಬಾವಿಗಳ ಮರು ಪೂರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಫಲ ಇದಾಗಿದೆ.

ಕೊಳವೆ ಬಾವಿಗಳ ಮರು ಪೂರಣ: ಬೇಸಿಗೆಯ ಕಾಲದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತದೆ. ಈ ಸಮಸ್ಯೆಗೆ ಮಳೆ ನೀರಿನ ಸಂಗ್ರಹಕ್ಕಾಗಿ ಜಲಾಶ್ರಯಗಳ ನಿರ್ಮಾಣ ಮತ್ತು ಕೊಳವೆ ಬಾವಿಗಳ ಮರು ಪೂರಣ ಉತ್ತಮ ಪರಿಹಾರವಾಗಿದೆ. ಮರುಪೂರಣವಾದ ಕೊಳವೆ ಬಾವಿಗಳು ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲೂ ನೀರು ಪೂರೈಸುತ್ತವೆ.

ಹಿಂಗು ಗುಂಡಿಗಳ ತಂತ್ರದ ಮೂಲಕ ಕೊಳವೆ ಬಾವಿಗಳ ಮರು ಪೂರಣ ಪ್ರಕ್ರಿಯೆ
ಮರು ಪೂರಣ ಪ್ರಕ್ರಿಯೆಯಲ್ಲಿ ನೆಲ ಅಗೆಯುವುದು ಮೊದಲ ಹಂತವಾಗಿದೆ. 3x3x3 ಮೀಟರ್ ಅಳತೆಯಲ್ಲಿ ಮಣ್ಣು ತೆಗೆಯಲಾಗುತ್ತದೆ. ಮರು ಪೂರಣ ಗುಂಡಿ ನಿರ್ಮಾಣಕ್ಕಾಗಿ ಸ್ಥಳೀಯವಾಗಿ ಲಭ್ಯವಾಗುವ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ನಂತರ ಸಂಗ್ರಹಿಸಲಾಗುತ್ತದೆ. ಕೊಳವೆ ಬಾವಿಯ ಸಣ್ಣ ಗಾತ್ರದ ರಂಧ್ರಗಳನ್ನು ಕೊಳವೆಯ ಬಾವಿಯ ಪೈಪ್ಗೆ ಮಾಡಲಾಗುತ್ತದೆ. (ಪ್ರತಿಯೊಂದಕ್ಕೆ 100-120 ರಂದ್ರ ಮಾಡಲಾಗುತ್ತದೆ). ಇದಕ್ಕೆ ಆಕ್ವಾ ಜಾಲರಿ (ಹೆಚ್ಚಿನ ಸಾಂದ್ರತೆಯ ಪಾಲಿಥೀನ್ ನಿಂದ ಮಾಡಿದ್ದು), ನೈಲಾನ್ ಜಾಲರಿ ಮತ್ತು ಮರಳಿನ ಸೋಸುವಿಕೆ ಹಾಗೂ ನಂತರ ಕೊಳವೆ ಮುಚ್ಚಿದ ರೀತಿಯಲ್ಲಿರುವಂತೆ ಮೂರು ಪದರದ ನೀರು ಸೋಸುವ ವ್ಯವಸ್ಥೆ ಅಳವಡಿಸಲಾಗುತ್ತದೆ. ಗುಂಡಿಯ ಪದರಗಳನ್ನು ಈ ಕ್ರಮದಲ್ಲಿ ಸೇರಿಸಲಾಗುತ್ತದೆ. – ದೊಡ್ಡ ಗಾತ್ರದ ಕಲ್ಲುಗಳು, ಸಣ್ಣ ಗಾತ್ರದ ಕಲ್ಲುಗಳು, ದೊಡ್ಡ ಉಂಡೆಯಾಕಾರದ ಕಲ್ಲುಗಳು, ಸಣ್ಣಗೋಲಿಯಾಕಾರದ ಕಲ್ಲುಗಳು ಮತ್ತು ಕೊನೆಯದಾಗಿ ಮೇಲ್ಭಾಗದಲ್ಲಿ ಒರಟಾದ ಮರಳು. ಈ ಮರುಪೂರಣ ಗುಂಡಿಗಾಗಿ ಕ್ಷೇತ್ರದ ಕನಿಷ್ಠ ಎರಡು ಎಕರೆಯ ಜಲ ಸಂಗ್ರಹಣಾ ಪ್ರದೇಶ ಹೊಂದಿರಬೇಕು ಹಾಗೂ ಗುಂಡಿಯ ಸುತ್ತಲೂ ಕಾಲುವೆಗಳನ್ನು ನಿರ್ಮಿಸಿ ಸಂಗ್ರಹಿತ ನೀರು ಗುಂಡಿಗೆ ಬರುವಂತೆ ಮಾಡಬೇಕು. ಮರುಪೂರಣ ಗುಂಡಿ ಜಲ ಸಂಗ್ರಹಣೆ ಜಾಗದಿಂದ ತಗ್ಗಿನ ಪ್ರದೇಶದಲ್ಲಿ ಇರಬೇಕು ಮತ್ತು ಮಳೆನೀರು ನೇರವಾಗಿ ಅದಕ್ಕೆ ಹರಿಯುವಂತೆ ಇರಬೇಕು.

ಇಂಗು ಗುಂಡಿಯ ತಂತ್ರದಲ್ಲಿ ಕೊಳವೆ ಬಾವಿಯ ಮರು ಪೂರಣ
ದೇವರಾಜ ರೆಡ್ಡಿ ಅವರು ಅಂತರ್ಜಲ ಹುಡುಕಿ 1000 ಅಡಿ 1500 ಅಡಿ ಆಳ ಕೊರೆದರೂ ನೀರು ಕಾಣದಿದ್ದಾಗ ಸಾಂಪ್ರದಾಯಿಕ ಇಂಗು ಗುಂಡಿಯ ಮಾದರಿಗಳಿಗೆ ನಿರಂತರವಾಗಿ ಸುಧಾರಣೆ ಅಥವಾ ಮಾರ್ಪಾಟುಗಳನ್ನು ಮಾಡಿ  ಈ ವಿನೂತನ ಇಂಗು ಗುಂಡಿ ತಂತ್ರವನ್ನು ವಿನ್ಯಾಸ ಮಾಡಿದರು. 1996ರಲ್ಲಿ ಅವರು ಭವಿಷ್ಯದಲ್ಲಿ ಮಳೆ ನೀರಿನಿಂದ ಬಾವಿಗಳ ಮರುಪೂರಣ ಮಾಡುವುದು ಮಾತ್ರವೇ ಪರಿಹಾರ ಎಂಬುದನ್ನು ಅರ್ಥೈಸಿಕೊಂಡರು. ಅಲ್ಲಿಂದ ಅವರು ರೈತರಿಗೆ ತಮ್ಮ ನೂತನ ತಂತ್ರಗಾರಿಕೆಯೊಂದಿಗೆ ನೆರವಾಗತೊಡಗಿದರು. ಆರಂಭದಲ್ಲಿ ಈ ವಿನೂತನ ತಂತ್ರಗಾರಿಕೆಗೆ ಪ್ರೋತ್ಸಾಹ ಸಿಗಲಿಲ್ಲ. ಆದರೆ ಗ ಸಾವಿರಾರು ರೈತರು ಈ ತಂತ್ರವನ್ನು ಅನುಸರಿಸುತ್ತಿದ್ದಾರೆ.

ಡಾ. ದೇವರಾಜು ರೆಡ್ಡಿ ಅವರು ಈ ತಂತ್ರಗಾರಿಕೆಯ ಮೂಲಕ ಸಾವಿರಾರು ಕುಡಿಯುವ ನೀರಿನ ಹಾಗೂ ನೀರಾವರಿ ಕೊಳವೆಬಾವಿಗಳಿಗೆ ಪುನರ್ಜೀವ ನೀಡಿ, ಉಪಯುಕ್ತಗೊಳಿಸಿದ್ದಾರೆ. ಈಗ ಅವರು ಪ್ರಾತ್ಯಕ್ಷಿಕೆ, ಉಪನ್ಯಾಸ, ರೈತರ ಸಬೆ ಮತ್ತು ಜಾಗೃತಿ ಶಿಬಿರಗಳ ಮೂಲಕ ಜನರ ಜಾಗೃತಿ ಉಂಟು ಮಾಡುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ.
 
ರೈತರ ಕೈಗೆಟಕುವಂಥದ್ದು:  
ಈ ಕೊಳವೆ ಬಾವಿ ಮರುಪೂರಣ ತಂತ್ರಗಾರಿಕೆ ರೈತರ ಕೈಗೆಟಕುವಂತಿದೆ. ಈ ಮರು ಪೂರಣಕ್ಕೆ 30 ರಿಂದ 35 ಸಾವಿರ ರೂಪಾಯಿಗಳ ವೆಚ್ಚವಾಗುತ್ತದೆ. ಆದರೆ ಹೊಸ ಕೊಳವೆ ಬಾವಿ ಕೊರೆಸಲು ಒಂದರಿಂದ ಒಂದೂವರೆ ಲಕ್ಷ ರೂಪಾಯಿಗಳಾಗುತ್ತದೆ. ಡಾ. ರೆಡ್ಡಿ ಅವರು ಹಲವು ಸರ್ಕಾರಿ ಕಟ್ಟಡ, ಸಂಸ್ಥೆಗಳು, ರೈತರು ಹಾಗೂ ವ್ಯಕ್ತಿಗತವಾಗಿ ಮಳೆ ನೀರು ಕೊಯ್ಲು ವ್ಯವಸ್ಥೆ ಹಾಗೂ ಕೊಳವೆ ಬಾವಿ ಮರು ಪೂರಣ ವ್ಯವಸ್ಥೆ ಸ್ಥಾಪಿಸಿದ್ದಾರೆ. ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಡಾ. ರೆಡ್ಡಿ ಅವರನ್ನು ಸಂಪರ್ಕಿಸಿ, ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಸ್ಥಾಪಿಸುವಂತೆ ಕೋರಿತು. 2004ರಲ್ಲಿ 60 ಸಾವಿರ ರೂಪಾಯಿಗಳ ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಲಾಯಿತು. ಈ ಪ್ರದೇಶದಲ್ಲಿ ವಾರ್ಷಿಕ 590 ಮಿಲಿ ಮೀಟರ್ ಮಳೆ ಆಗುತ್ತದೆ. ಮಳೆ ನೀರು ಕೊಯ್ಲು ವ್ಯವಸ್ಥೆಯಿಂದ 7 ಲಕ್ಷ ಲೀಟರ್ ನೀರು ಪ್ರತಿವರ್ಷ ಲಭ್ಯವಾಗುತ್ತಿದೆ. ಈ ಮಳೆ ನೀರು ಕೊಯ್ಲಿಗೆ ಈ ಕಟ್ಟಡದ ಮಾಳಿಗೆಯೇ ನೀರಿನ ಸಂಗ್ರಹ ಪ್ರದೇಶವಾಗಿದೆ.

ಯಶಸ್ಸಿನ ಮಾದರಿ
ರವಿ ಅವರು ಕರ್ನಾಟಕದ ದಾವಣಗೆರೆ ಜಿಲ್ಲೆಯ ಅಲ್ಲಿಗೆರೆ ಗ್ರಾಮದ ಪ್ರಗತಿಪರ ರೈತರು. ಅವರು ತಮ್ಮ ಜಮೀನಿನಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆದು, ಇಲ್ಲವೇ ಇರುವ ಕೊಳವೆ ಬಾವಿಗಳನ್ನು ಮತ್ತಷ್ಟು ಆಳ ಮಾಡಿಸಿ ಬೇಸತ್ತು ಹೋಗಿದ್ದರು. 2002ರಲ್ಲಿ ಒಮ್ಮೆ ಅವರು ಅತ್ಯಂತ ನಿರಾಶಾದಾಯಕರಾಗಿದ್ದ ಸನ್ನಿವೇಶದಲ್ಲಿ ಅವರಿಗೆ ಡಾ. ದೇವರಾಜು ರೆಡ್ಡಿ ಅವರು, ಮಳೆಗಾಲದಲ್ಲಿ ಕೊಳವೆಬಾವಿಗಳ ಮರುಪೂರಣ ಮಾಡುವಂತೆ ಸಲಹೆ ನೀಡಿದರು. ರವಿ ಅವರು ತಮ್ಮ ಕೊಳವೆಬಾವಿಗಳಿಗೆ ಯಶಸ್ವಿಯಾಗಿ ಈ ಮರುಪೂರಣ ತಂತ್ರಗಾರಿಕೆ ಅಳವಡಿಸಿದರು. ಈಗ ರವಿ ಅವರು ಸಂತುಷ್ಟರಾಗಿದ್ದಾರೆ. ಅವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಎರಡು ನೀರಾವರಿ ಒಣ ಬೆಳೆಗಳನ್ನು ತೆಗೆಯುತ್ತಿದ್ದಾರೆ. ಅವರ ಕೊಳವೆ ಬಾವಿಗಳಲ್ಲಿ ನಿರಂತರ ಬರದ ನಡುವೆಯೂ ನೀರು ಸ್ಥಿರವಾಗಿದೆ. ಅವರು ಕೊಳವೆ ಬಾವಿಯ ಮೇಲ್ಭಾಗದ ಪ್ರದೇಶದಲ್ಲಿರುವ 6.5 ಎಕರೆ ಜಾಗದಿಂದ ಹರಿವ ಮಳೆ ನೀರಿನಿಂದ ಮಳೆ ನೀರು ಕೊಯ್ಲು ಮಾಡಿದ್ದಾರೆ.

ಡಾ. ರೆಡ್ಡಿ ಅವರು ಚಿತ್ರದುರ್ಗದ ಸಾವಯವ ಕೃಷಿಕ ಬಸವರಾಜು ಅವರನ್ನೂ ಒಲೈಸಿ ಅವರ ಕ್ಷೇತ್ರದಲ್ಲಿರುವ ಕೊಳವೆ ಬಾವಿಗಳನ್ನು ಮರು ಪೂರಣ ಮಾಡುವಂತೆ ಮಾಡಿದರು. ಬಸವರಾಜು ಅವರ ಜಮೀನಿನ ಮೊದಲ ಕೊಳವೆ ಬಾವಿಗೆ ಯಾವುದೇ ಬಾಹ್ಯ ಹಣದ ನೆರವಿಲ್ಲದೆ ತಮ್ಮದೇ ಸ್ವಂತ ಹಣದಲ್ಲಿ ನಿರ್ಮಾಣ ಮಾಡಿದರು. ಅದಕ್ಕೆ ತಗುಲಿದ ಒಟ್ಟಾರೆ ವೆಚ್ಚ 35 ಸಾವಿರ ರೂಪಾಯಿಗಳು. ಆದಾಗ್ಯೂ ಐಎಫ್ಎಫ್ ಸಿಓ (ಭಾರತೀಯ ಕೃಷಿಕರ ರಸಗೊಬ್ಬರ ಸಹಕಾರ ಸಂಸ್ಥೆ)ಯೊಂದಿಗೆ ಕೈಜೋಡಿಸಿರುವ ಡಾ. ರೆಡ್ಡಿ ಅವರು, ಬಸವರಾಜು ಅವರಿಗೆ ಕೊಳವೆ ಬಾವಿ ಮರು ಪೂರಣಕ್ಕೆ ಅವಕಾಶ ಕಲ್ಪಿಸಿದರು. ಈ ಯೋಜನೆಯು ಇಂಥ ವ್ಯವಸ್ಥೆಯ ನಿರ್ಮಾಣದ ಒಟ್ಟು ವೆಚ್ಚದ ಶೇಕಡ 25ರಷ್ಟು ನೀಡುವುದರೊಂದಿಗೆ ರೈತರಿಗೆ ನೆರವಾಗಿದೆ.

ಕೊಳವೆ ಬಾವಿ ಮರು ಪೂರಣದ ಬಳಿಕ ಬಸವರಾಜು ಅವರು ತಮ್ಮ 23 ಎಕರೆ ಜಮೀನಿನಲ್ಲಿ ಬಾಳೆ, ಮೆಕ್ಕೆ ಜೋಳ, ಮಲ್ಲಿಗೆ, ತೆಂಗು, ರಾಗಿ, ಹತ್ತಿ ಮತ್ತು ಸೇವಂತಿಗೆ ಮೊದಲಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮಳೆಯ ನೀರಿನ ಜೊತೆಗೆ ಮರುಪೂರಣಗೊಂಡಿರುವ ಒಂದು ಕೊಳವೆ ಬಾವಿ ಹಾಗೂ ಮರು ಪೂರಣದ ಪ್ರಕ್ರಿಯೆಗೆ ಒಳಪಟ್ಟಿರುವ ಇತರ ಕೊಳವೆ ಬಾವಿಗಳು ಈ ಕ್ಷೇತ್ರಕ್ಕೆ ನೀರೊದಗಿಸುತ್ತವೆ. ಅವರು ತಮ್ಮ ಜಮೀನಿನಲ್ಲಿ ಅಂತರ ಬೆಳೆ ಪದ್ಧತಿಯಡಿ ಬಾಳೆ ಹಣ್ಣಿನ ಜೊತೆಗೆ ಅಡಿಕೆಯನ್ನೂ ಬೆಳೆಯುತ್ತಾರೆ. ಅಡಿಕೆ ಹೆಚ್ಚು ನೀರು ಬಳಸುವ ಬೆಳೆಯಾಗಿದ್ದು, ಪ್ರತಿ ಗಿಡಕ್ಕೆ ಎರಡು ದಿನಕ್ಕೊಮ್ಮೆ ಕನಿಷ್ಠ 5 ಲೀಟರ್ ನೀರು ಬೇಕಾಗುತ್ತದೆ. ಬಸವರಾಜು ಅವರು 2400 ಅಡಿಕೆ ಮರಗಳನ್ನು ತಮ್ಮ ಜಮೀನಿನಲ್ಲಿ ಹೊಂದಿದ್ದಾರೆ. ಅಲ್ಲದೆ ಅವರು 2400 ಬಾಳೆಗಿಡಗಳನ್ನೂ ಬೆಳೆಸಿದ್ದಾರೆ, ಅದಕ್ಕೆ ಇನ್ನೂ ದುಪ್ಪಟ್ಟು ನೀರು ಬೇಕಾಗುತ್ತದೆ. ಆದರೂ ಇದೆಲ್ಲ ಸಾಧ್ಯವಾಗಿದ್ದು ತಮ್ಮ ಜಮೀನಿನಲ್ಲಿ ಮಾಡಿದ ಕೊಳವೆ ಬಾವಿ ಮರುಪೂರಣದಿಂದ ಎಂದು ಅವರು ಹೇಳುತ್ತಾರೆ. ಬಸವರಾಜು ಅವರು ಸಾಧಿಸಿದ ಯಶಸ್ಸು ಆ ಪ್ರದೇಶದ ಬೇರೆಯವರಿಗೂ ತಮ್ಮ ಕೊಳವೆ ಬಾವಿ ಮರು ಪೂರಣ ಮಾಡಲು ಪ್ರೋತ್ಸಾಹಿಸಿದೆ.

ಮಾರ್ಚ್ 22, 2016ನ್ನು ವಿಶ್ವ ಜಲ ದಿನ ಎಂದು ಆಚರಿಸಲಾಗುತ್ತಿದೆ. ಡಾ. ಎನ್.ಜೆ. ದೇವರಾಜ ರೆಡ್ಡಿ ಅವರು ಈ ಭೂಮಿಯಲ್ಲಿ ಜಲ ಸಂರಕ್ಷಿಸಲು ಮತ್ತು ಜೀವಗಳನ್ನು ಉಳಿಸಲು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.

ಲೇಖನ – ಭಾರತ ಸರ್ಕಾರದ ವಾರ್ತಾ ಶಾಖೆ, ಬೆಂಗಳೂರು.
ಇಂಡಿಯಾ ವಾಟರ್ ಪೋರ್ಟಲ್, ಜಿಯೋ ರೈನ್ ವಾಟರ್ ಬೋರ್ಡ್ ಆಕರದೊಂದಿಗೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT