ಪರಾಶರ ಮುನಿ ಹೀಗೆ ಹೇಳಿದ್ದಾರೆ, 'ನವಗ್ರಹಗಳಂತೆ ಉಪಗ್ರಹಗಳೂ ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರುತ್ತವೆ'. ಅಂತಹ ಉಪಗ್ರಹಗಳಲ್ಲಿ ಧೂಮ ಎಂಬ ಉಪಗ್ರಹವೂ ಒಂದು. ಮಂಗಳ ಗ್ರಹದ ಉಪಗ್ರಹವಿದು. ನೋಡಲು ಹೊಗೆಯ ರೂಪದಲ್ಲಿರುವುದರಿಂದ ಧೂಮ ಎನ್ನುವ ಹೆಸರು.
ಸೂರ್ಯನ ಚಲನೆಯ ಮೇಲೆ ಈ ಗ್ರಹವನ್ನು ಗುರುತಿಸಲಾಗುವುದು. ರವಿಸ್ಫುಟಕ್ಕೆ 133 ಡಿಗ್ರಿ 20 ನಿಮಿಷ ಸೇರಿಸಿದರೆ ಧೂಮಗ್ರಹದ ನಕ್ಷತ್ರ ಮತ್ತು ರಾಶಿ ಸಿಗುವುದು. ಇದು ಪಾಪಗ್ರಹಗಳ ಸಾಲಿಗೆ ಸೇರಿದರೂ, ಶುಭ ಗ್ರಹಗಳ ದೃಷ್ಟಿ ಮತ್ತು ಜತೆ ಇದ್ದರೆ ಉತ್ತಮ ಫಲಗಳನ್ನು ಕೊಡುತ್ತದೆ.
ಇದು ಚಂದ್ರನಿರುವ ರಾಶಿಯಿಂದ 3,9,6,10 ಮತ್ತು 11ರಲ್ಲಿದ್ದಾಗ ಉತ್ತಮ ಫಲ ಸಿಗಲಿದೆ. ಆಕಾಶದಲ್ಲಿ ಈ ಗ್ರಹ ಎಲ್ಲ ಸಮಯದಲ್ಲೂ ಕಂಡುಬರುವುದಿಲ್ಲ. ಆದರೆ ಕೆಲವೊಮ್ಮೆ ಸೂರ್ಯನಿಂದ 133 ಡಿಗ್ರಿ 20 ನಿಮಿಷ ದೂರದಲ್ಲಿ ಬಾಲದ ರೂಪದಲ್ಲಿ ಹೊಗೆಯಂತೆ ಆಕಾಶದಲ್ಲಿ ತೋರುತ್ತದೆ. ಇದನ್ನೇ ಧೂಮಕೇತು ಎನ್ನುವರು. ಈ ರೀತಿ ತೋರಿದರೆ ಆ ದಿಕ್ಕಿನ ರಾಷ್ಟ್ರಗಳಿಗೆ ಮತ್ತು ರಾಷ್ಟ್ರಗಳ ನಾಯಕರಿಗೆ ಆಪತ್ತು ಉಂಟಾಗಲಿದೆ. ಯುದ್ಧದ ಭೀತಿ ಉಂಟಾಗಲಿದೆ.
ಮಕರ ಕ್ಷೇತ್ರ ಧೂಮ ಎಂಬ ಉಪಗ್ರಹದ ಸ್ವಂತ ಕ್ಷೇತ್ರ ಮಕರ. ಉಚ್ಚ ಕ್ಷೇತ್ರ ಸಿಂಹ ಮತ್ತು ನೀಚ ರಾಶಿ ಕುಂಭ. ಕುಂಭ ರಾಶಿಯಲ್ಲಿ ಧೂಮವಿದ್ದರೆ ಅಪಘಾತ ಭಯ, ಅಗ್ನಿ ಭಯ, ಕಟ್ಟಡಗಳಲ್ಲಿ ಅಗ್ನಿ ಕಾಣಿಸಲಿದೆ. ಚಂದ್ರನಿರುವ ರಾಶಿಯಿಂದ ಧೂಮ ಲಗ್ನದಲ್ಲಿದ್ದರೆ ಹಠ ಸ್ವಭಾವದವನು. ದೃಷ್ಟಿದೋಷಯುಕ್ತ ಕಣ್ಣು ಉಳ್ಳವನೂ, ದಯೆ ಇಲ್ಲದವನು, ಕೆಟ್ಟ ಸ್ನೇಹಿತರಿಂದ ಹಾಳಾಗುವನು. ಶುಭ ಗ್ರಹದ ದೃಷ್ಟಿ ಅಥವಾ ಶುಭ ಗ್ರಹವಿದ್ದರೆ ಮಂತ್ರವಾದಿ ಆಗುವನು, ದಯೆ ಇಲ್ಲದವನು, ಕೆಟ್ಟ ಸ್ನೇಹಿತರಿಂದ ಹಾಳಾಗುವನು. ಶುಭ ಗ್ರಹದ ದೃಷ್ಟಿ ಅಥವಾ ಶುಭ ಗ್ರಹವಿದ್ದರೆ ಮಂತ್ರವಾದಿ ಆಗುವನು.
2ನೇ ರಾಶಿಯಲ್ಲಿ ಧೂಮವಿದ್ದರೆ ಅನಾರೋಗ್ಯವಂತನೂ, ದೇಹದ ಯಾವುದೇ ಭಾಗದಲ್ಲಿ ಮಚ್ಚೆ ಉಳ್ಳವನು, ಉದ್ಯೋಗದಲ್ಲಿ ತೊಂದರೆ ಎದುರಿಸುವನು. 3ನೇ ರಾಶಿಯಲ್ಲಿ ಧೂಮವಿದ್ದರೆ ಧೈರ್ಯ ಶಾಲಿ, ಬುದ್ಧಿವಂತ, ಉದ್ಯೋಗದಲ್ಲಿ ಅಧಿಕಾರಿ ಆಗುತ್ತಾನೆ. 4ನೇ ರಾಶಿಯಲ್ಲಿ ಧೂಮವಿದ್ದರೆ ವೇದ ಶಾಸ್ತ್ರಗಳನ್ನು ಬಲ್ಲವನು, ನಾಸ್ತಿಕ ಆಗಿರುವನು. ಸ್ತ್ರೀವರ್ಗದವರಿಂದ ಕೆಟ್ಟ ಹೆಸರು ಪಡೆಯುವನು. ಸ್ತ್ರೀ ಆಗಿದ್ದರೆ ಪುರುಷರಿಂದ ಕೆಟ್ಟ ಹೆಸರು ಬರುವುದು.
5ನೇ ರಾಶಿಯಲ್ಲಿ ಉತ್ತಮ ಆಹಾರ ಸೇವನೆಯಲ್ಲಿ ಆಸಕ್ತನೂ, ವಿದ್ಯೆಯಲ್ಲಿ ತಡೆ ಬರುವುದು, ಕೆಟ್ಟ ಗ್ರಹಗಳ ಜತೆ ಇದ್ದರೆ ಮಾಟ ಮಂತ್ರಗಳಿಗೆ ಬಲಿ ಆಗುವನು. 6ನೇ ರಾಶಿಯಲ್ಲಿದ್ದರೆ ಪ್ರಬಲ ವ್ಯಕ್ತಿ. ವೈರಿಗಳು ಇರುವುದಿಲ್ಲ. ಧನವಂತ, ಕಣ್ಣಿಗೆ ತೋರದ ವಿದ್ಯೆಯಲ್ಲಿ ಅಪ್ರತಿಮ ಬುದ್ಧಿವಂತರಾಗುವರು.
7ನೇ ರಾಶಿಯಲ್ಲಿ ಧೂಮವಿದ್ದರೆ ಹಲವು ಸ್ತ್ರೀ ಪುರುಷರ ಸಹವಾಸವಿರತಕ್ಕವರು, ವಿವಾಹ ಆದರೆ ಬಾಳ ಸಂಗಾತಿಯನ್ನು ಸಂಶಯ ದೃಷ್ಟಿಯಿಂದ ನೋಡುವನು. 8ನೇ ರಾಶಿಯಲ್ಲಿ ಧೂಮವಿದ್ದರೆ ಸುಳ್ಳುಗಾರ, ಕಪಟಿ, ದುಷ್ಟ, ಶುಭಗ್ರಹವಿದ್ದರೆ ಅದರಿಂದ ಪಾರಾಗುವನು.
9ನೇ ರಾಶಿಯಲ್ಲಿ ಧೂಮವಿದ್ದರೆ ಧೈರ್ಯವಂತನೂ, ದಯಾಳು, ವಿಮಾನ ಮೂಲಕ ಅನೇಕ ತೀರ್ಥ ಕ್ಷೇತ್ರಗಳ ದರ್ಶನ ಮಾಡುವನು. 10ರಲ್ಲಿ ಧೂಮವಿದ್ದರೆ ಸಂತೋಷ ಉಳ್ಳವನು, ಉದ್ಯೋಗದಲ್ಲಿ ಅಧಿಕಾರ ಆಗುವ ಯೋಗ, ಅದೃಷ್ಟವಂತ. ವಾಹನಾದಿ ಸೌಕರ್ಯ ಉಳ್ಳವನು, 11ನೇ ರಾಶಿಯಲ್ಲಿ ಧೂಮನಿದ್ದರೆ ಧನಕನಕ ಸಂಪತ್ತು ಉಳ್ಳವನೂ, ಅನೇಕ ವಾಹನಗಳ ಒಡೆಯನೂ, ಯಜ್ಞ ಯಾಗಗಳಲ್ಲಿ ಆಸಕ್ತಿ ಉಳ್ಳವನು ಆಗುವನು. 12ರಲ್ಲಿ ಧೂಮನಿದ್ದರೆ ಹಲವು ಸಾಹಸ ಕಾರ್ಯಗಳನ್ನು ಮಾಡುವನು. ಕುಳ್ಳನು, ಬೇರೆಯವರ ಸಂಪತ್ತಿನ ಮೇಲೆ ಆಸೆ ಪಡುವವನು ಆಗಿರುತ್ತಾನೆ.
ಧೂಮಗ್ರಹ ದೋಷ ನಿವಾರಣೆಗೆ ಗಣಪತಿ ಪೂಜೆ, ಸ್ಮರಣೆಯಿಂದ ಪರಿಹಾರ. ಗಣ ಹೋಮ ಮಾಡಿದರೂ ಉತ್ತಮವೇ. ಜೈನರಾದರೆ ಪದ್ಮಾವತಿ ಅಮ್ಮನವರ ಮಂತ್ರ ಹೇಳುವುದು. ಕ್ರಿಶ್ಚಿಯನ್‌ರಾದರೆ ಜೀಸಸ್ ಕ್ರಿಸ್ಟ್ ರನ್ನು ಸ್ಮರಿಸಬೇಕು. ಮುಸ್ಲಿಮ್ ವರ್ಗದವರಾದರೆ ಶುಕ್ರವಾರ ದಿನ ಮಸೀದಿ ಅಥವಾ ದರ್ಗಕ್ಕೆ 7 ಮೊಂಬತ್ತಿಗಳನ್ನು ಒಪ್ಪಿಸತಕ್ಕದ್ದು.
-ಎಂ. ರತ್ನರಾಜ ಜೈನ್