ಮೂಢನಂಬಿಕೆಯೆನ್ನಿ, ಮಹಾಮಹಿಮೆಯೆನ್ನಿ, ಜನಪ್ರಿಯವೆನ್ನಿ, ಜನಭಯವೆನ್ನಿ, ಕಲ್ಲುನಾಗರವೆನ್ನಿ, ಕುಂಡಲಿನಿಯೆನ್ನಿ, ಕ್ಷೀರ ಪ್ರಿಯವೆನ್ನಿ, ಕಿವಿ ಕೇಳದವನೆನ್ನಿ ನಾಗಸ್ವರ ಶ್ರಾವ್ಯವೆನ್ನಿ... ನೀವೆಷ್ಟೇ ತೀವ್ರ ತದ್ವಿರುದ್ದ ಭಾವಗಳನ್ನು ಹೊರಡಿಸಿದರೂ ಉರಗನನ್ನು ಉಪೇಕ್ಷಿಸಲು ಸಾಧ್ಯವಿಲ್ಲ. ಬಹುಶಃ ಸರ್ಪ ಸಂಬಂಧಿ ಸಂಗತಿಗಳಿರುವಷ್ಟು ಎಂದರೆ ನಾಗ ದೇವಾಲಯ, ನಾಗ ಕಥೆಗಳು, ನಾಗ ಬನಗಳು, ನಾಗ ನರ್ತನಗಳು ಬೇರಾವ ಪ್ರಾಣಿ ದೇವನಿಗೂ ಇಲ್ಲವೆನ್ನಬಹುದು.
ಸರ್ಪಕ್ಕೂ- ಚರ್ಮರೋಗಕ್ಕೂ ವಿಚಿತ್ರ ನಂಟು! ಚರ್ಮರೋಗಿಗಳನೇಕರು ನಾಗಭಕ್ತರು. ನವಗ್ರಹಗಳಲ್ಲಿ ರಾಹು ಕೇತುಗಳನ್ನು ಸರ್ಪಾಕಾರದಲ್ಲಿ ಪೂಜಿಸುವುದು ಗೊತ್ತೇ ಇದೆ. ಬಂಜೆತನಕ್ಕೂ ನಾಗನನ್ನೇ ಹೊಣೆ ಮಾಡುತ್ತಾರೆ. ಸಂಕಲ್ಪ ಈಡೇರಿದಾಗ ಹರಕೆ ಹೊತ್ತವರು ನಾಗತೃಪ್ತಿಗಾಗಿ ಭಕ್ತ ಭೋಜನಾನಂತರ ಉಂಡುಳಿದ ಎಲೆಗಳ ಮೇಲೆ ಹೊರಳುವುದೊಂದು ನಾಗನದೇ ವಿಭಿನ್ನ ಸೇವೆ!
ಕುಂಡಲಿಕ ಕೌಶಲ
ಸಾಧನಾ ಕ್ಷೇತ್ರದಲ್ಲಿ ಕುಂಡಲಿನಿ ಎನ್ನುವ ಪದ ಅತ್ಯಂತ ರೋಚಕ. ಕುಂಡಲಿನಿಯ ಶಕ್ತಿ ಅತ್ಯಂತ ತೇಜಸ್ವಿಯಾದ ಮೂಲಶಕ್ತಿಯಾಗಿ ಮೂಲಾಧಾರದಲ್ಲಿ ಸುರುಳಿ ಸುತ್ತಿ ಮಲಗಿರುತ್ತದೆ. ಈ ಶಕ್ತಿಯು ಜಾಗೃತಿಗೊಂಡಾಗ ಸರ್ಪಾಕೃತಿಯಲ್ಲಿ ತೇಜಸ್ಸಿನ ಜ್ವಾಲೆಯನ್ನು ಚೆಲ್ಲುತ್ತಾ ಚಿದಗ್ನಿ ರೂಪದಲ್ಲಿ ಇರುವುದರಿಂದ ಇದಕ್ಕೆ ನಾಗಾಗ್ನಿ. ಸರ್ಪಶಿಖೆ ಎಂದು ಕರೆಯಲಾಗುತ್ತದೆ.
ಸರ್ಪ ಕುಂಡಿಲಿನಿ ಶಕ್ತಿಯ ಪ್ರತೀಕ. ಸರ್ಪದ ಮಂಡಲಾಕಾರ ಪೂರ್ಣವೃತ್ತ ಅಥವಾ ಶೂನ್ಯ. ಈ ಪೂರ್ಣದಲ್ಲಿ ಪೂರ್ಣವನ್ನು ಕಳೆದರೆ ಶೇಷವೂ ಪೂರ್ಣ. ಈ ಶೇಷನೇ ಆದಿಶೇಷನೆಂದು ಹೇಳುವರು. ಆದ್ದರಿಂದಲೇ ಅನಂತವೆಂಬ ಪೂರ್ಣವೃತ್ತದಲ್ಲಿ ಶೇಷಶಾಯಿ ವಿಷ್ಣುವಿರುವನು. ಅನಂತನೇ ಶೇಷ. ಶೇಷನೇ ಅನಂತ. ಶೂನ್ಯವು ಕೇವಲ ಶೂನ್ಯವಲ್ಲ. ಅದರ ಮಧ್ಯೆ ಸಚ್ಚಿದಾನಂದ ಸ್ವರೂಪದ ಕುಂಡಲಿನಿ ಶಕ್ತಿಯಿಂದ ಆವೃತ್ತವಾದ ವಿಭುವಿರುವನು. ಅವನನ್ನು ಆರಾಧಿಸಿ ತಿಳಿಯಿರಿ ಎಂಬ ಸಾಂಕೇತಿಕ ದಿವ್ಯ ಸಂದೇಶ ನಾಗಾರಾಧನೆಯಿಂದ ನಮಗೆ ಸಿಗುತ್ತದೆ.
ನವತಂತು ದೇವತೆ
ಮಂಗಳ ಕಾರ್ಯದಲ್ಲಿ ಕೈಗೆ ಕಟ್ಟಿಕೊಳ್ಳುವ ಕಂಕಣಕ್ಕೂ ವಾಸುಕಿ ದೇವತಾದಿ ಕುಂಡಲಿನಿರೂಪಗಳು ಅಧಿಷ್ಠಾತಗಳಾಗಿದ್ದಾರೆ. ಯಜ್ಞೋಪವೀತದ ನವತಂತು ದೇವತೆಗಳಲ್ಲೂ ನಾಗರು ಸೇರಿದ್ದಾರೆ. ಹೀಗೆ ಅತೀಂದ್ರಿಯ ಕ್ಷೇತ್ರದಲ್ಲಿ ಮಾತ್ರವೇ ಅನುಭವಕ್ಕೆ ಬರುವ ನಾಗದೇವತೆಗಳು ಅಂತಭಾರ್ವಕ್ಕೆ ಆರೋಹಣ ಮಾಡಲು ಸಾಮಾನ್ಯ ಜನರಿಗೂ ಸಹಾಯ ಮಾಡುವುದಕ್ಕಾಗಿ ಹೊರಗಡೆಯಲ್ಲೂ ನಾಗದೇವತಾ ವಿಗ್ರಹಗಳನ್ನು ಆರಾಧಿಸುವ ಪದ್ಧತಿಯನ್ನು ಮಹರ್ಷಿಗಳು ತಂದರು.
ಕಲ್ಪನೆ- ಆಚರಣೆ
ದೇವರನ್ನು ಸರ್ವಭೂತಾಂತರಾತ್ಮ ಎಂದು ತಿಳಿದವರು ಭಾರತೀಯರು. ಆದ್ದರಿಂದಲೇ ಅನೇಕ ಪ್ರಾಣಿ ವಿಶೇಷಗಳನ್ನೂ, ವೃಕ್ಷವಿಶೇಷಗಳನ್ನೂ ಕೆಲವು ದಿವ್ಯಶಕ್ತಿಗಳ ಸಂಕೇತವಾಗಿ ಭಾರತೀಯ ಸಂಸ್ಕೃತಿ ಮಾನ್ಯ ಮಾಡಿದೆ.
ಆನೆಯ ಸೊಂಡಿಲ ಗಣಪತಿ, ಕುದುರೆಯ ಮುಖದ ಹಯಗ್ರೀವ, ಹಂದಿಯ ಮುಖದ ವರಾಹಾವತಾರಿ ವಿಷ್ಣು - ಇವರೆಲ್ಲ ದೇವತಾಮೂರ್ತಿಗಳಾದರೆ ಶೇಷ, ಆನೆ, ಆಮೆ, ಮೀನು, ಸಿಂಹ, ಇಲಿ, ನಂದಿ, ನವಿಲು ಮುಂತಾದ ಪ್ರಾಣಿಗಳು, ಹಂಸ ಗರುಡ ಮೊದಲಾದ ಹಕ್ಕಿಗಳು ದೈವ ಸಾನಿಧ್ಯದಲ್ಲಿ ಸೇವೆ ಸಲ್ಲಿಸುತ್ತದೆ. ಜಗತ್ತಿನ ಇತರ ದೇಶಗಳ ಸಂಸ್ಕೃತಿಯಲ್ಲೂ ಈ ನಂಬಿಕೆ ರೂಢಿಯಲ್ಲಿದೆ.
ಆಮೆಗಳು ಈಜಿಪ್ಟಿನಲ್ಲಿ ಪವಿತ್ರತೆಯ ಸಂಕೇತ; ಜಪಾನ್ ದೇಶದಲ್ಲಿ ಮೀನು ವೃದ್ಧಿಯ ಸಂಕೇತ, ರೆಕ್ಕೆಗಳುಳ್ಳ ಸರ್ಪ ಚೀನಾದಲ್ಲಿ ಸಮೃದ್ಧಿಯ ಸೂಚಕ. ಈಜಿಪ್ಟಿನಲ್ಲಿ ಹಾವು ಅಮೃತ್ ತತ್ವ ಸಾಧಕ. ಬೆಟ್ಟ ಗುಡ್ಡಗಳ ಪೂಜೆಗೂ ನಾಗಾರಾಧನೆಗೂ ನಂಟಿರುವುದು ಎಲ್ಲ ಸಂಸ್ಕೃತಿಗಳಲ್ಲೂ ಕಂಡು ಬರುತ್ತದೆ.
ಹಾವಿನ ಹುತ್ತ ಬೆಟ್ಟಗುಡ್ಡಗಳ ಆಕಾರವನ್ನೇ ತಳೆಯುವುದು. ಹೊರಪದರ, ಸ್ಥೂಲವಿವರ, ಹುತ್ತದ ಬಾಯಿಂದ ಹಾವು ಹೊರಬರುವ ಬಗೆಯೂ ಈ ರೂಪಕದಲ್ಲೇ ಅಡಕವಾಗುತ್ತದೆ.
ಸರ್ಪ ಸೂಕ್ತ
ಭಾರತದಲ್ಲಿ ನಾಗಾರಾಧನೆ ಆರ್ಷೇಯವಾಗಿ ಬೆಳೆದು ಬಂದಿದೆ. ಋಗ್ವೇದ ಸರ್ಪಸೂಕ್ತದಲ್ಲಿ ನಾಗನ ವರ್ಣನೆ ಇದೆ. ಹರಪ್ಪ ಸಂಸ್ಕೃತಿಯಲ್ಲೂ ನಾಗಾರಾಧನೆಗೆ ಮಹತ್ವ ನೀಡಲಾಗಿದೆ. ಪಾರ್ಶ್ವನಾಥ ತೀರ್ಥಂಕರನ ತಲೆಯ ಮೇಲ್ಭಾಗದಲ್ಲಿ ನಾಗನ ಹೆಡೆಯ ಲಾಂಛನವಿದೆ. ನಾಗ ವಿಷ್ಣುವಿಗೆ ಹಾಸಿಗೆ, ಶಿವನಿಗೆ ಕಂಠಾಭರಣ, ಗಣಪತಿಗೆ ಹೊಟ್ಟೆಯ ಪಟ್ಟಿ, ಸ್ವತಃ ಭೂಭಾರವನ್ನು ಹೊತ್ತವ, ಅಸಾಧಾರಣ ಶಕ್ತಿಶಾಲಿಯಾದ ಆದಿಶೇಷ. ಕುಶಾನರ ಕಾಲದಲ್ಲಿ ಮನುಷ್ಯರೂಪದ ನಾಗಗಳ ಶಿಲ್ಪಗಳು ಬಳಕೆಗೆ ಬಂದಂತೆ ತೋರುತ್ತದೆ.
ನಾಗಪಂಚಮಿ
ಜನಮೇಜಯ ತಾನು ಮಾಡುತ್ತಿದ್ದ ಸರ್ಪಯಜ್ಞವನ್ನು ನಿಲ್ಲಿಸಿ, ಮಹಾಭಾರತ ಕೇಳಲು ಶುರುಮಾಡಿದುದು ಶ್ರಾವಣ ಶುದ್ಧ ಪಂಚಮಿ ದಿನ. ನಾಗಪಂಚಮಿ ಎಂದು ಪ್ರಸಿದ್ಧವಾದ ಈ ದಿನ ಗೋಮಯದಿಂದ ಬಾಗಿಲು ಸಾರಿಸಿ, ಚಿತ್ರಗಳನ್ನು ಬರೆದು ನೇಮದಿಂದ ನಾಗನನ್ನು ಪೂಜಿಸಬೇಕು. ಈ ನಾಗಪಂಚಮಿಯ ಆಚರಣೆಗಾಗಿ ಹೆಣ್ಣು ಮಕ್ಕಳು ಗಂಡನ ಮನೆಯಿಂದ ತವರು ಮನೆಗೆ ಹೋಗುತ್ತಾರೆ. ಹಬ್ಬಕ್ಕೆ ನಾಲ್ಕು ದಿನವಿರುವಾಗಲೇ ಅಣ್ಣ ಬಂದು ತಂಗಿಯನ್ನು ತವರಿಗೆ ಕರೆದುಕೊಂಡು ಹೋಗುವ ಸಂಪ್ರದಾಯ ಕರ್ನಾಟಕದ ಹಲವು ಭಾಗಗಳಲ್ಲಿ ಇಂದಿಗೂ ಇದೆ.
ಗಂಧ ಉತ್ಪತ್ತಿ
ಲೈಂಗಿಕ ಕ್ರಿಯೆಗೆ ಮುನ್ನ ಹೆಣ್ಣು ಹಾವುಗಳಿಗೆ ಋತುಸ್ರಾವವುಂಟಾಗುತ್ತದೆ. ಈ ಕಾಲದಲ್ಲಿ ಇವು ಚಲಿಸುವಾಗ ವಿಸರ್ಜಿಸಲ್ಪಟ್ಟ ರಜಸ್ಸು ಭೂಮಿಗೆ ಸೇರುತ್ತೆ. ಅದರಲ್ಲೂ ಹುತ್ತಗಳಿಗೆ ಇವು ಪ್ರವೇಶಿಸುವಾಗ ಹಸನಾದ ಹುತ್ತದ ಮಣ್ಣು ಈ ರಜಸ್ಸನ್ನು ಹೀರಿಕೊಳ್ಳುತ್ತದೆ. ಇದೇ ರೀತಿಯಲ್ಲಿ ಪರಿಷ್ಕರಿಸಲ್ಪಟ್ಟ ಹುತ್ತದ ಮಣ್ಣಿಗೆ ನೀರಾಗಲಿ ಹಾಲಾಗಲಿ ಬಿದ್ದರೆ ಹನಿ ಎರೆಯುವಾಗ ಒಂದು ಸುಮಧರವಾದ ವಾಯು ಗಂಧ ಉತ್ಪತ್ತಿಯಾಗುತ್ತದೆ. ಈ ವಾಯು ಸೇವನೆ ಚಂದ್ರನ ಪ್ರಭಾವವಿರುವ ಶ್ರಾವಣಮಾಸದಲ್ಲಿ ಮನಸ್ಸಿನ ಮೇಲೆ ಒಳ್ಳೆ ಪರಿಣಾಮಕಾರಿ.
ಕಣ್ಣೇ ಕಿವಿಯಾದ, ಹೊಟ್ಟೆಯೇ ಕಾಲಾಗಿರುವ ಈ ನಾಗದೇವತೆ ನವ ನಾಗರಿಕರ ಕಣ್ಣು ಕಿವಿ ತೆರೆಸಲಿ. ಹಾಲಿನ ಕಡಲಿನ ನಡುವೆ ಒಡಲಲ್ಲಿ ಒಡೆಯನನ್ನು ಹೊತ್ತು ಹೆಡೆಬಡಿಸಿ ಕೊಡೆಯಾಗಿ ನಿಂತು ಈ ಹಾವು ನಮ್ಮ ಜೀವನವನ್ನು ಹಾಲಾಗಿಸಲಿ, ಹಾಯಾಗಿಸಲಿ... ಎಂಬ ಹಾರೈಕೆಯೇ ನಾಗರ ಪಂಚಮಿಯಂದು ನಾವು ಅರ್ಪಿಸುವ ಹಾಲಿನ ಹೂವು. ಭಕ್ತಿಯ ಪುನ್ನಾಗ ಪುಷ್ಪ.
ನಾಗಸಂದೇಶ
ಶ್ರಾವಣ ಮಾಸ ಅಂದರೆ ಚಂದ್ರನು ಶ್ರವಣ ನಕ್ಷತ್ರದಲ್ಲಿರುವುದರಿಂದ ಈ ಹೆಸರು ಬಂದಿದೆ. ಚಂದ್ರನು ಮನಃಕಾರಕ. ಚಂದ್ರನು ಭೂಮಿಯ ಸುತ್ತ ತಿರುಗುವಾಗ, ಒಂದು ದಿನದಲ್ಲಿ 12 ಡಿಗ್ರಿಗಳಷ್ಟು ಸಂಚರಿಸುತ್ತಾನೆ. ಈ ಅವಧಿಗೆ ಒಂದು ತಿಥಿ ಎನ್ನುತ್ತಾರೆ. ಪಾಡ್ಯದಿಂದ ಚತುರ್ಥಿಯವರೆಗೆ ದಿನಕ್ಕೆ 12 ಡಿಗ್ರಿಗಳಂತೆ 45 ಡಿಗ್ರಿಗಳಿರುತ್ತೆ. 48ನೇ ಡಿಗ್ರಿಯಿಂದ (ಕೋನದಿಂದ) 60 ಡಿಗ್ರಿವರೆಗಿನ ಸಂಚಾರ ಮಾಡು ಕಾಲಕ್ಕೆ ಪಂಚಮಿ ಎಂದಿದ್ದಾರೆ. ಚಂದ್ರನು ತ್ರಿಕೋನಕ್ಕೆ ಬಂದಾಗ ಪಂಚಮಿಯಂದು ಮನಸ್ಸನ್ನು ಒಂದು ಸ್ಥಿಮಿತದಲ್ಲಿಡುವ ಸಲುವಾಗಿ ಒಳ್ಳೆ ಸಾತ್ವಿಕ ಆಹಾರ ಸೇವವೆ ಮಾಡಬೇಕು.
- ಗುರುರಾಜ ಪೋಶೆಟ್ಟಿಹಳ್ಳಿ