ಹೊಸದಾಗಿ ಮದುವೆಯಾದ ದಂಪತಿ ಅಪಾರ್ಟ್‌ಮೆಂಟ್‌ವೊಂದಕ್ಕೆ ಬಾಡಿಗೆಗೆ ಬಂದರು. ಮನೆಯ ಕಿಟಕಿ ಗಾಜಿನಿಂದ ಎದುರು ಮನೆಯ ಹಿಂಬದಿ ಕಾಣಿಸುತ್ತಿತ್ತು. ಎದುರು ಮನೆಯಾಕೆ ಬಟ್ಟೆ ತೊಳೆದು, ಅದನ್ನು ಒಣಹಾಕಿದ್ದಳು. ಅದನ್ನು ನೋಡಿದ ಪತ್ನಿ, 'ಎಷ್ಟು ಕೆಟ್ಟದಾಗಿ ಬಟ್ಟೆ ಒಗೆದಿದ್ದಾಳೆ. ಒಂದೋ ಅವಳ ಸೋಪ್ ಸರಿಯಿಲ್ಲ, ಇಲ್ಲವಾದರೆ ಅವಳಿಗೆ ಬಟ್ಟೆ ಒಗೆಯಲು ಸರಿಯಾಗಿ ಬರೋಲ್ಲ' ಎಂದಳು.
ಪತಿ ಮೌನವಾಗಿದ್ದ. ಮರುದಿನ ಎದ್ದಾಗಲೂ ಅದೇ ದೃಶ್ಯ, ಹೆಂಡತಿಯಿಂದ ಅದೇ ಕಾಮೆಂಟ್. ಒಂದು ತಿಂಗಳು ಪ್ರತಿದಿನವೂ ಅದೇ ದೃಶ್ಯಾವಳಿ, ಹೆಂಡತಿಯ ಅದೇ ಹೇಳಿಕೆ, ಗಂಡನ ಅದೇ ಮೌನ.
31ನೇ ದಿನ ಹೆಂಡತಿ ನೋಡುತ್ತಾಳೆ ಎದುರು ಮನೆಯಾಕೆ ಒಣಹಾಕಿದ್ದ ಬಟ್ಟೆ ಬಹಳ ಶುಭ್ರವಾಗಿ ಗೋಚರಿಸುತ್ತಿದೆ.
'ಹಾಂ, ಈ ದಿನ ಬಟ್ಟೆ ಶುಭ್ರವಾಗಿ ಕಾಣಿಸುತ್ತಿದೆ. ಒಂದೋ ಆಕೆ ಬಟ್ಟೆ ತೊಳೆಯುವುದನ್ನು ಕಲಿತಳು ಅಥವಾ ಆಕೆ ತನ್ನ ಸೋಪನ್ನೇ ಬದಲಿಸಿದ್ದಾಳೆ'. ಆಗ ಮೌನ ಮುರಿದು ಪತಿ ಹೇಳಿದ, 'ಎರಡೂ ಅಲ್ಲ, ನಾನು ನಮ್ಮ ಮನೆಯ ಕಿಟಕಿಯ ಗಾಜಿನ ಮೇಲೆ ಅಂಟಿಕೊಂಡಿದ್ದ ಧೂಳನ್ನು ಒರೆಸಿದ್ದೇನೆ'.
ನಮ್ಮ ಕಣ್ಣಿನ ಪೊರೆಯಿಂದಾಗಿ ಹೊರಗಿನ ದೃಶ್ಯ ಸರಿಯಾಗಿ ಕಾಣದಿದ್ದಾಗ, ನಾವು ನಮ್ಮ ದೃಷ್ಟಿದೋಷವನ್ನು ಮೊದಲು ಸರಿಪಡಿಸಿಕೊಳ್ಳಬೇಕೇ ಹೊರತು ದೃಶ್ಯವೇ ಸರಿಯಿಲ್ಲ ಎಂದು ದೂಷಿಸುವುದಲ್ಲ. ನಾವು ಸರಿಯಿದ್ದರೆ ಎಲ್ಲವೂ ಸರಿಯಾಗಿ ಕಾಣಿಸುತ್ತದೆ. ನಾವು ಇನ್ನೊಬ್ಬರತ್ತ ತಪ್ಪು ಎಂದು ಬೊಟ್ಟು ಮಾಡುವಾಗ, ಉಳಿದ ಬೆರಳುಗಳು ನಮ್ಮ ಕಡೆ ಮುಖ ಮಾಡಿರುತ್ತದೆ ಎಂಬುದನ್ನು ನಾವು ಮರೆಯಬಾರದು.
ಪರರ ತಪ್ಪನೊಂದನು ಜನರು ಟೀಕಿಪರಲ್ತೆ
ತಮ್ಮ ಸಾವಿರ ತಪ್ಪನು ಮರೆತು
ನಿನ್ನ ಬಾಲದೊಳೊಂದು ತೂತಿದೆ ಎಂದಂತೆ
ಸಾರಣೆಯು ಸೂಜಿಯನು ಕುರಿತು..
ಎನ್ನುತ್ತಾರೆ, ಹಿರಿಯ ಕವಿ ಎಸ್.ವಿ. ಪರಮೇಶ್ವರ ಭಟ್ಟರು ತಮ್ಮ 'ಇಂದ್ರಚಾಪ'ದಲ್ಲಿ.
ಇನ್ನೊಬ್ಬರ ತಪ್ಪನ್ನು ಎತ್ತಿ ಆಡಲು ಸಿಗುವ ಯಾವ ಅವಕಾಶವನ್ನೂ ಬಿಡದ ನಾವು ನಮ್ಮ ಹಲವು ತಪ್ಪುಗಳನ್ನು ಗುರುತಿಸುವ, ತಿದ್ದಿಕೊಳ್ಳುವ ಪ್ರಯತ್ನವನ್ನೇ ಮಾಡುವುದಿಲ್ಲ.
ತನ್ನ ಬಣ್ಣಿಸಬೇಡ.., ಇದಿರ ಹಳಿಯಲು ಬೇಡ ಎಂದು ಬಸವಣ್ಣನವರು ಪರರನ್ನು ದೂಷಿಸುವುದನ್ನು ಹಾಗೂ ತನ್ನನ್ನೇ ಸರಿ ಎಂದು ಬಣ್ಣಿಸಿಕೊಳ್ಳುವುದನ್ನು ಮಹಾಪಾತಕಗಳೆಂದು ಗುರುತಿಸುತ್ತಾರೆ. ಇನ್ನೊಬ್ಬರ ತಪ್ಪನ್ನು ನಿಂದಿಸುವುದರಲ್ಲೇ ಸಮಯ ವ್ಯಯಿಸುವುದರ ಬದಲು, ತಮ್ಮ ತಪ್ಪುಗಳನ್ನು ಗುರುತಿಸಿಕೊಂಡು, ತಿದ್ದಿಕೊಳ್ಳುವುದೇ ಆತ್ಮೋನ್ನತಿಯ ಸರಿಯಾದ ಪಥ.
ನಡೆಯುವವನು ಎಡವುತ್ತಾನೆ ಎಂಬಂತೆ ಎಲ್ಲರೂ ತಪ್ಪು ಮಾಡುವುದು ಸಹಜ. ಆದರೆ ಮಾಡಿದ ತಪ್ಪಿನಿಂದ ಕಲಿತು, ಮುಂದೆ ಅದು ಮರುಕಳಿಸದಂತೆ ಜಾಗೃತರಾಗಿರುವವರು ಸಾಧಕರಾಗುತ್ತಾರೆ. ತಾನು ತಪ್ಪೇ ಮಾಡುವುದಿಲ್ಲ ಎಂದು ಭ್ರಮಿಸಿಕೊಂಡು, ಬೇರೆಯವರದೇ ತಪ್ಪು ಎಂದು ಹಳಿಯುವುದು, ನಕಾರಾತ್ಮಕ ಧೋರಣೆ.
ನಮ್ಮನ್ನು ನಾವು ಸರಿ ಎಂದು ಭಾವಿಸಿಕೊಳ್ಳುವುದರ ಬದಲು, ನಾವು ಎಲ್ಲೆಲ್ಲಿ ಎಡವುತ್ತಿದ್ದೇವೆ ಎಂಬ ಸ್ವಯಂ ವಿಮರ್ಶೆ ಮಾಡಿಕೊಂಡಾಗ ನಮ್ಮ ಕಿಟಕಿಗಂಟಿದ ಧೂಳು ನಮ್ಮ ಕಣ್ಣಿಗೆ ಕಾಣಿಸುತ್ತದೆ. ಅದನ್ನು ಸ್ವಚ್ಛಗೊಳಿಸಿಕೊಂಡಾಗ ಜಗತ್ತು ಸ್ಪಷ್ಟವಾಗಿ ಗೋಚರಿಸುತ್ತದೆ.
- ಎಚ್.ಎಸ್. ನವೀನ ಕುಮಾರ್