ವಾಸ್ತು ನಿಯಮವನ್ನು ಹಿಂದಿನ ಕಾಲದಿಂದಲೂ ನಮ್ಮ ಪೂರ್ವಿಕರು ಪಾಲಿಸುತ್ತಿದ್ದರು. ವಾಸ್ತುವಿಗೆ ಸರಿಯಾಗಿ ಕಟ್ಟಡವನ್ನು ಕಟ್ಟುತ್ತಿದ್ದರು. ಆದರೆ ಈಗ ಸಾಮಾನ್ಯ ಜನರಿಗೂ ವಾಸ್ತುವಿನ ತಿಳಿವಳಿಕೆ ಇದ್ದು, ವಾಸ್ತು ತಜ್ಞರ ಮಾರ್ಗದರ್ಶನದಿಂದ ಮನೆ, ಕಟ್ಟಡ ಕಟ್ಟುತ್ತಿದ್ದಾರೆ.
ಮನೆ ನಿರ್ಮಿಸುವಾಗ ಮನೆಗೆ ಎಷ್ಟು ಸಂಖ್ಯೆಯಲ್ಲಿ ದ್ವಾರ, ಕಿಟಕಿಗಳು ಇರಬೇಕೆಂಬ ನಿಯಮ ಇರುತ್ತದೆ. ವಾಸ್ತು ಶಾಸ್ತ್ರಜ್ಞರ ಮಾರ್ಗದರ್ಶನದಂತೆ ಕಿಟಕಿ ಬಾಗಿಲುಗಳನ್ನು ಇಡದಿದ್ದರೆ ತೊಂದರೆ ಖಚಿತ. ಮನೆಯಲ್ಲಿ ದ್ವಾರಗಳು ಸಮ ಸಂಖ್ಯೆಯಲ್ಲಿರಬೇಕು. ಒಂದಕ್ಕೊಂದು ಎದುರಾಗಿರಬೇಕು. ಎರಡು, ಆರು, ಎಂಟು ಇರಬೇಕು. ಸೊನ್ನೆಯಿಂದ ಇರುವ ಸಮಸಂಖ್ಯೆ ಅಂದರೆ 10, 20, 30 ಹೀಗೆ ಇರಬಾರದು. ನಾಲ್ಕು ದ್ವಾರಗಳು ಒಂದಕ್ಕೊಂದು ಎದುರು ಇರಬಹುದು.
ದ್ವಾರವನ್ನು ಗೋಡೆಗೆ ತಾಗಿಸಿ ಇಡದೆ ನಾಲ್ಕು ಅಥವಾ ಐದು ಅಂಗುಲದಷ್ಟು ಸ್ಥಳಾವಕಾಶ ಬಿಟ್ಟು ಇಡಬೇಕು. ಮನೆ ಬಿಟ್ಟು ಮನೆಯ ಪಕ್ಕದಲ್ಲಿ ನಿರ್ಮಿಸಿದ ಶೌಚಾಲಯ, ಸ್ನಾನ ಗೃಹದ ಬಾಗಿಲುಗಳು ಲೆಕ್ಕಕ್ಕೆ ಬರುವುದಿಲ್ಲ. ಮನೆಯಲ್ಲಿ ಅಳವಡಿಸಿದ ಗ್ರಿಲ್‌ಗಳು ದ್ವಾರ ಎನಿಸುವುದಿಲ್ಲ. ಶೌಚಾಲಯ ಮತ್ತು ಸ್ನಾನ ಗೃಹಗಳು ಮನೆಯಲ್ಲಿರುವುದು ಸಾಮಾನ್ಯ. ಇದಕ್ಕೆ ಅಳವಡಿಸಿದ ಬಾಗಿಲುಗಳು ಚಾವಣಿಯನ್ನು ಮುಟ್ಟದೆ ಇದ್ದರೆ ಇವು ಬಾಗಿಲುಗಳ ಸಂಖ್ಯೆಗೆ ಸೇರುವುದಿಲ್ಲ.
ಮಹಡಿಯ ಕಟ್ಟಡ ಸಮಸಂಖ್ಯೆಯ ನಿಯಮದಲ್ಲಿ ಕಿಟಕಿ ಬಾಗಿಲುಗಳನ್ನಿಡಬೇಕು. ಮನೆಯ ಸುತ್ತ ಕಾಂಪೌಂಡು ಇದ್ದು, ಉತ್ತರದ ಕಡೆಯಾಗಲೀ, ಪೂರ್ವದ ಕಡೆಯಾಗಲೀ ಯಾವುದಾದರೂ ಒಂದೆಡೆ ಖಾಲಿ ಸ್ಥಳ ಬಿಟ್ಟು ಮುಖ್ಯ ಗೇಟು ಇದ್ದರೆ ಅದನ್ನು ದ್ವಾರದ ಸಂಖ್ಯೆಗೆ ಸೇರಿಸಬಾರದು.
ದ್ವಾರಗಳು ಸಮ ಸಂಖ್ಯೆಯಲ್ಲಿದ್ದು, ಆ ಮನೆಯ ಸುತ್ತ ಖಾಲಿ ಸ್ಥಳ ಇರಬೇಕು. ಉತ್ತರ ಮತ್ತು ಪೂರ್ವದ ಭಾಗದಲ್ಲಿ ಹೆಚ್ಚು ಖಾಲಿ ಸ್ಥಳ ಇರಬೇಕು. ಮನೆಗೆ ಸುತ್ತ ಕಾಂಪೌಂಡು ಇದ್ದರೆ ಮನೆಗೆ ಧನಾತ್ಮಕ ಶಕ್ತಿ ಜಾಸ್ತಿ ಇರುತ್ತದೆ.
- ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್