ಭಕ್ತಿ-ಜ್ಯೋತಿಷ್ಯ

ದಾಸರೆಂದರೆ ಪುರಂದರ ದಾಸರಯ್ಯಾ...

ವೇದಶಾಸ್ತ್ರಗಳಲ್ಲಿ ಅಡಕವಾದ ನಿತ್ಯಸತ್ಯದ ನೀತಿತತ್ವಗಳನ್ನು ವಚನ ರೂಪದಲ್ಲಿ ಶಿವಶರಣರು ಹೇಳಿರುವಂತೆ, ಹಾಡಿನ ರೂಪವಾಗಿ ಹರಿದಾಸರು ಕನ್ನಡ ಲೋಕಕ್ಕೆ ಸಾರಿದರು. ಹೀಗಾಗಿ ಇವರು ದಾಸಶ್ರೇಷ್ಠರು ಎನಿಸಿಕೊಂಡರು.
ದಾಸ ಸಾಹಿತ್ಯಕ್ಕೆ ನರಹರಿತೀರ್ಥರೇ ಮೊದಲಿಗರು. ನಂತರ ಪುರಂದರದಾಸ, ಕನಕದಾಸರು ದಾಸ ಸಾಹಿತ್ಯದ ಉನ್ನತಿಗೆ ಕಾರಣರಾದರು. ಅವರ ಅನಂತರ 18ನೆಯ ಶತಮಾನದಲ್ಲಿ ವಾದಿರಾಜ, ವಿಜಯದಾಸ, ಜಗನ್ನಾಥದಾಸ, ಪ್ರಸನ್ನ ವೆಂಕಟದಾಸ ಮೊದಲಾದವರು ದಾಸ ಸಾಹಿತ್ಯದ ಘನತೆ ಉಳಿಸಿ ಬೆಳೆಸಿದರು.
ಪುರಂದರದಾಸರ ಕಾಲ ಸುಮಾರು 1550. ದಾಸರಲ್ಲಿ ಅತಿಶ್ರೇಷ್ಠರೆಂದರೆ ಪುರಂದರದಾಸರು. ಇವರ ಮೊದಲ ಹೆಸರು. ವರದಪ್ಪನಾಯಕ. ಆಗರ್ಭ ಶ್ರೀಮಂತನಾಗಿದ್ದ ನಾಯಕ ಕೊನೆಗೆ ತ್ಯಾಗಮೂರ್ತಿಯಾಗಿ, ಸಮಸ್ತ ಐಶ್ವರ್ಯ ದಾನ ಮಾಡಿ, ಶ್ರೀಹರಿಯ ಭಕ್ತರಾದನು. 'ದಾಸರೆಂದರೆ ಪುರಂದರ ದಾಸರಯ್ಯ' ಎಂದು ಗುರುಗಳಿಂದ ಹೊಗಳಿಸಿಕೊಂಡ ಮಹಾನುಭಾವರಿವರು.
ಉತ್ತಮ ಕೀರ್ತನೆಗಳಿಂದ ಜನರ ಮನಸ್ಸನ್ನು ಆನಂದಗೊಳಿಸಿ ನೀತಿಬೋಧಕರಾದರು. ತಮ್ಮ ಸಾಹಿತ್ಯದಲ್ಲಿ ಅನುಭವಗಳ ರಸಪಾಕ ಮಾಡಿ ಹಾಡಿ ನಲಿದರು. ನಲಿದು ಲೋಕವನ್ನೇ ನಗಿಸಿದರು. ಇವರ ಕೀರ್ತನೆಗಳು ತತ್ವಬೋಧಕವೂ ಹೌದು,  ಭಕ್ತಿ-ಜ್ಞಾನ-ವೈರಾಗ್ಯಗಳ ಗಣಿಯೂ ಹೌದು. ಆತ್ಮಾನಂದದಾಯಕವೂ ಹೌದು.  ಇವರ ಕೀರ್ತನೆ ತತ್ವ ನೀತಿ ಮತ್ತು ಧರ್ಮಭಕ್ತಿಗಳ ತಂಪು ಬೀರುವ ಕುಸುಮಗಳಂತಾಗಿವೆ.
ಪುರಂದರದಾಸರು ಕೀರ್ತನೆಗಳಲ್ಲದೆ ಕೆಲವು ಉಗಾಭೋಗ, ಸುಳಾದಿಗಳನ್ನೂ ಬರೆದಿದ್ದಾರೆ. ಇವರು ಕನ್ನಡ ಸಾಹಿತ್ಯಕ್ಕೆ ತಮ್ಮ ಕೀರ್ತನೆಗಳಿಂದ ಜೀವಕಳೆಯನ್ನುಂಟು ಮಾಡಿದರು. ಕರ್ನಾಟಕ ಸಂಗೀತ ಶಾಸ್ತ್ರದ ಜೀವನಾಡಿಯಂತಿರುವ ಇವರ ಕೀರ್ತನೆಗಳು ಸಂಗೀತ ಶಾಸ್ತ್ರಕ್ಕೂ ಮಹೋಪಕಾರವಾಗಿವೆ.
ಪುರಂದರದಾಸರು ತಮ್ಮ ಕೀರ್ತನೆಗಳಿಂದ ಪರಲೋಕದ ದೃಷ್ಟಿಯನ್ನೂ ಇಹಲೋಕದ ತುಷ್ಟಿಯನ್ನೂ ಉಪದೇಶಿದ್ದಾರೆ. ಮಧುರ, ವಾತ್ಸಲ್ಯ, ಕರುಣ, ನೀತಿ ಮೊದಲಾದ ಭಕ್ತಿಭಾವಗಳನ್ನು ತಮ್ಮ ಕೀರ್ತನೆಯಿಂದ ಹೊರಹೊಮ್ಮಿಸಿ  ಕಾವ್ಯಕ್ಕೆ  ಮೆರುಗು ತಂದಿದ್ದಾರೆ.  
ಪುರಂದರದಾಸರ ಕೀರ್ತನೆಗಳು ಕನ್ನಡ ಭಾಷೆಗೆ ತುಷ್ಟಿಪುಷ್ಟಿ ನೀಡಿವೆ ಮತ್ತು ಇವರ ಕೀರ್ತನೆಗಳು ನಟ ವಿಟ ಗಾಯಕರ ಸ್ವತ್ತೆನಿಸಿದ್ದ ಸಂಗೀತಕ್ಕೆ ಭಕ್ತಿಯುತವಾದ ಸಾಹಿತ್ಯವನ್ನೊದಗಿಸಿಕೊಟ್ಟಿವೆ. ವಚನ ಸಾಹಿತ್ಯದಲ್ಲಿ ಬಸವಣ್ಣನವರು ಹೇಗೋ ಹಾಗೆ ಹರಿದಾಸಸಾಹಿತ್ಯದಲ್ಲಿ ಪುರಂದರದಾಸರು ಪ್ರಮುಖರು.
'ಬೇವಿನಲ್ಲಿ ಬೆಲ್ಲವನ್ನು ಬೆರೆಸಿದರೆ ಪ್ರಯೋಜನವಿಲ್ಲ, ಹಾವಿಗೆ ಹಾಲೆರೆದರೆ ಪ್ರಯೋಜನವಿಲ್ಲ, ಘಾತುಕತನದಲ್ಲಿದ್ದು ಗೀತೆಯನ್ನೋದಿದರೂ ಪ್ರಯೋಜನವಿಲ್ಲ, ಪತಿಯನ್ನು ನಿಂದಿಸುವ ಸತಿಯರು ವ್ರತಗಳನ್ನು ಮಾಡಿದರೂ ಪ್ರಯೋಜನವಿಲ್ಲ' ಎಂದು ದಾಸರು ಆಡಂಬರದ ಭಕ್ತಿಯನ್ನು ಟೀಕಿಸಿ ಆತ್ಮ ಶುದ್ಧಿಯಿಲ್ಲದ ಭಕ್ತಿ ಪ್ರಯೋಜನವಿಲ್ಲವೆಂದು ಹೇಳಿದ್ದಾರೆ.
ಇವರ ಹಾಡುಗಳಿಗೆ ಪುರಂದರವಿಠಲ ಎಂಬ ಅಂಕಿತವು ಗುರುತಾಗಿದೆ. 'ತನುವ ನೀರೊಳಗದ್ದಿ ಫಲವೇನು, ಮನದಲ್ಲಿ ದೃಢಭಕ್ತಿ ಇಲ್ಲದ ಮನುಜಗೆ ಎಂದು ಇವರು ನಿಜವಾದ ಸ್ನಾನವಾವುದೆಂದು ಈ ರೀತಿ ಹೇಳಿದ್ದಾರೆ.   ಗುರುಗಳ ಶ್ರೀಪಾದ ತೀರ್ಥವೇ ಸ್ನಾನ, ಹಿರಿಯರ ದರ್ಶನ ಮಾಡುವುದೇ ಸ್ನಾನ, ಕರೆದು ಅನ್ನವ ನಿಕ್ಕುವುದೊಂದು ಸ್ನಾನ, ಸಿರಿಹರಿಯ ಚರಣವ ನಂಬುವುದೆ ಸ್ನಾನ, ದುಷ್ಟರ ಸಂಗವ ಬಿಡುವುದೊಂದು ಸ್ನಾನ' ಎಂದು ಜನರಿಗೆ ನೀತಿಯನ್ನು ಸಾರಿದ್ದಾರೆ.
- ಜಿ.ವಿ. ಪ್ರಭಾಕರ್ ರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?