ಶ್ರೀಕೃಷ್ಣ ಮಾನವನ ಸುಖ ಸಂತೋಷಗಳ ಆರಾಧ್ಯಮೂರ್ತಿ. ಎಲ್ಲಾ ಹಂತಗಳಲ್ಲೂ, ಸರ್ವವಿಧಗಳಲ್ಲೂ ಸರ್ವರಲ್ಲೂ ಆತ ಹಾಸುಹೊಕ್ಕಿರುವ ದಿವ್ಯ ಚೇತನ. ಮಕ್ಕಳಲ್ಲಿ ಮಗುವಾಗಿ, ಜ್ಞಾನಿಗಳಲ್ಲಿ ಜ್ಞಾನಿಯಾಗಿ, ಗೋಪಾಲಕನಾಗಿ, ಯುದ್ಧರಂಗದಲ್ಲಿ ಶ್ರೇಷ್ಠ ರಾಷ್ಟ್ರಕನಾಗಿ, ಸ್ತ್ರೀಯರ ಸಂರಕ್ಷಕನಾಗಿ ಎಲ್ಲರಿಗೂ ಪ್ರಿಯನಾಗಿ ಇರುವ ಅವನ ವ್ಯಕ್ತಿತ್ವ ಅಸದೃಶವಾದುದು.
ದುಷ್ಟ ಸಂಹಾರ ಮತ್ತು ಶಿಷ್ಟ ಪರಿಪಾಲನೆಯ ಮಹತ್ಕಾರ್ಯಕ್ಕಾಗಿ ವಸುದೇವ ದೇವಕಿಯರ ಸುಪುತ್ರನಾಗಿ ಶ್ರೀಮನ್ನಾರಾಯಣನು ಶ್ರೀಕೃಷ್ಣಾವತಾರದಲ್ಲಿ ಜನಿಸಿದನು. ಕೃಷ್ಣ ಎಂದರೆ ಸರ್ವ ದೇವತಾ ಕಾರ್ಯಗಳನ್ನು ಮಾಡುವವನು ಎಂದು ಅರ್ಥ. ಮಾತ್ರವಲ್ಲ, ದೈತ್ಯರನ್ನು ದಮನ ಮಾಡುವವನು ಎಂಬ ಅರ್ಥವೂ ಅವನ ಹೆಸರಿಗೆ ಅನ್ವಯಿಸುತ್ತಾರೆ. ಅವನ ಜೀವನ ಸನಾತನ ಧರ್ಮದ ನಿತ್ಯಾಂತ ಆದರ್ಶ.
ಕೃಷ್ಣನ ಬದುಕಿನ ಒಂದೊಂದು ಕ್ಷಣವೂ ನಮಗೆ ಹೊಸ ಅನುಭವ ಬಿತ್ತರಿಸುತ್ತದೆ. ಆತನ ಭಗವದ್ಗೀತೆಯು ಸಾರ್ವಕಾಲಿಕ ಸಂದೇಶವನ್ನು ಸಾರುವ ಒಂದು ಜ್ಞಾನನಿಧಿ. ಆದುದರಿಂದಲೇ ಆತನು ವಿಶ್ವವಂದ್ಯನಾದ ಜಗದ್ಗುರು.
ಮಗುವಾಗಿದ್ದಾಗ ತನ್ನ ಬಾಯೊಳಗೆ ಬ್ರಹ್ಮಾಂಡ ತೋರಿಸಿದ ಆತ, ಕುರುಕ್ಷೇತ್ರದಲ್ಲಿ ಅರ್ಜುನನಿಗೆ ತನ್ನ ವಿಶ್ವರೂಪ ತೋರಿಸಿದ. ಅರ್ಜುನನು ಶ್ರೀಕೃಷ್ಣನಲ್ಲಿ ಕೇಳಿದ ಪ್ರಶ್ನೆಯು ನಮ್ಮೆಲ್ಲರ ಪ್ರಶ್ನೆಗಳೇ ಆಗಿವೆ. ಅದನ್ನು ಮನಗಂಡ ಶ್ರೀಕೃಷ್ಣನು ಭಕ್ತಿ, ಜ್ಞಾನ, ಕರ್ಮಗಳ ತತ್ತ್ವಗಳನ್ನು ಸರಳವಾಗಿ ಉತ್ತರಿಸಿದ.
ಮನಸ್ಸು, ಬುದ್ಧಿ, ಕ್ರಿಯೆಗಳ ಸ್ವರೂಪ, ಸ್ವಭಾವ, ನಿಗ್ರಹ ಮತ್ತು ಕ್ರಿಯಾಶಕ್ತಿಗಳ ಮಹತ್ತನ್ನು ತಿಳಿಸಿ, ಅಧ್ಯಾತ್ಮಿಕತೆ ಮತ್ತು ಅನಾಸಕ್ತಿ ಯೋಗಗಳ ಅವಶ್ಯಕತೆಯನ್ನು ಒತ್ತಿ ಹೇಳಿದನು. ಪೂರ್ಣ ಪಾವಿತ್ರ್ಯ ಮತ್ತು ಪೂರ್ಣ ಜ್ಞಾನ ಸ್ವರೂಪಿಯಾದ ಶ್ರೀಕೃಷ್ಣನು ಹಳ್ಳಿ, ನಗರ, ರಾಜಧಾನಿಗಳಲ್ಲೆಲ್ಲಾ ಗುರುಶಕ್ತಿಯಾಗಿ, ಪಾಲಕಶಕ್ತಿಯಾಗಿ, ರಾಜ್ಯ ನಿರ್ಮಾಪಕ ಶಕ್ತಿಯಾಗಿ ದುಡಿದಿದ್ದಾನೆ.
ಶ್ರೀಕೃಷ್ಣನು ಭಾರತದ ಜಾನಪದ ಕ್ಷೇತ್ರದಿಂದ ಉದಿಸಿ ಬಂದ ಶಕ್ತಿ, ಪ್ರಾಣಿ ಮತ್ತು ಪ್ರಕೃತಿಗಳ ನಿಕಟವರ್ತಿ. ಆತನ ವ್ಯಕ್ತಿತ್ವದಲ್ಲಿ ಗಾಢ ಮಾನವೀಯತೆ ಮತ್ತು ವಿಶ್ವಾದರಣೀಯವಾದ ವಿಶಿಷ್ಟ ಗುಣಗಳಿದ್ದುದರಿಂದ ಮಾನವ ಜನಾಂಗದಲ್ಲಿ ಅಚ್ಚಳಿಯದ ಪ್ರಭಾವ ನೆಲೆಯೂರಿದೆ.
ಆತನ ಆಳವಾದ ಅಧ್ಯಾತ್ಮಜ್ಞಾನ, ಪ್ರಖರವಾದ ಬುದ್ಧಿಶಕ್ತಿ, ರಾಜಕೀಯ ಮತ್ತು ಸಮಾಜಿಕ ಪರಿಜ್ಞಾನಗಳು ಭಾರತದ ಜನಜೀವನದಲ್ಲಿ ಮಾರ್ಗದರ್ಶಕ ಶಕ್ತಿಗಳಾಗಿವೆ. ತನ್ನ ಜೀವಿತ ಕಾಲದಲ್ಲಿಯೇ ಜನರನ್ನು ಸಚೇತನರನ್ನಾಗಿ ಮಾಡಿದ ಆತನು ಇಂದಿಗೂ ನಮ್ಮ ಜೀವನದಲ್ಲಿಯೂ ಚಿಂತನದಲ್ಲಿಯೂ ಅದ್ಭುತ ರೀತಿಯ ಪ್ರಭಾವವನ್ನು ವಿಶ್ವಗುರುವಾಗಿ ಬೀರುತ್ತಲೇ ಇದ್ದಾನೆ.
- ಶಿವರಾಮ ಭಟ್ ಹತ್ತೊಕ್ಕಲು