ಭಕ್ತಿ-ಜ್ಯೋತಿಷ್ಯ

ಚಿಂತ್ಯಾಕೆ ಮಾಡುತಿ...?

ದೊಡ್ಡ ಸಮಸ್ಯೆ ಎದುರಾಗಿದೆ, ಹೇಗೆ ಹೊರಗೆ ಬರೋದು ಅಂತಾನೇ ಗೊತ್ತಾಗುತ್ತಿಲ್ಲ. ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಬಿಟ್ಟಿದ್ದೇನೆ, ಏನು ಮಾಡಬೇಕು ಅಂತ ಹೊಳಿತಾನೇ ಇಲ್ಲ ಇದು ನಾವು ಯಾವಾಗಲೂ ಕೇಳುವ ಮಾತು.  ಸಮಸ್ಯೆ ಎಂದರೆ ತೊಂದರೆ, ಅಪಾಯವೆಂದೇ ಬಹು ಜನರ ಯೋಚನೆ.
ಜೀವನ ಸಮಸ್ಯೆ ರಹಿತವಾಗಿರಬೇಕೆಂದು ಎಲ್ಲರ ನಿರೀಕ್ಷೆ. ಆದರೆ ಅದು ಅಸಾಧ್ಯ.  ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಿಸಲೇ ಬೇಕಾಗುತ್ತದೆ. ಹೀಗಾಗಿ  ಸಮಸ್ಯೆಯನ್ನು ನಕಾರಾತ್ಮಾಕವಾಗಿ ನೋಡದೇ ಸಕಾರಾತ್ಮಕವಾಗಿ ಸ್ವೀಕರಿಸುವುದು ಸೂಕ್ತ.
ಕತ್ತಲೆ ಎಂದರೆ, ಬೆಳಕಿನ ವಿರುದ್ಧವಲ್ಲ, ಬದಲಿಗೆ ಬೆಳಕಿರದ ಸ್ಥಿತಿ.  ಅಂತೆಯೇ ಸಮಸ್ಯೆ ಎಂದರೆ ಆಲೋಚನೆಗಳ ಕೊರತೆಯಿಂದ ಮೂಡುವ ಸ್ಥಿತಿ. ಹೀಗಾಗಿ ಸಮಸ್ಯೆ ಎಂದರೆ ಒಂದು ಸವಾಲು,  ಒಂದು ಅವಕಾಶ ಎಂದು ವಿಶ್ಲೇಷಿಸುವುದು ಧನಾತ್ಮಕವಾದ ಆಲೋಚನೆ.  ಆದ್ದರಿಂದ ಸಮಸ್ಯೆಯ ಪರಿಹಾರವೆಂದರೆ ಪ್ರಶ್ನೆಗೆ ಸೂಕ್ತ ಉತ್ತರ ಹುಡುಕುವ ಪ್ರಕ್ರಿಯೆ.  
ಸಮಸ್ಯೆಗಳನ್ನು ನಾನಾ ವಿಧಗಳಲ್ಲಿ ಗುರುತಿಸಬಹುದು.
1.  ವೈಯಕ್ತಿಕ ಸಮಸ್ಯೆಗಳು: ಪ್ರತಿಯೊಬ್ಬರ ಬದುಕಿಗೆ ಅನುಗುಣವಾಗಿ ಬಂದೊದಗುವ ಸಮಸ್ಯೆಗಳು. ಇವು ಸಾಂಸಾರಿಕ, ದೈಹಿಕ, ವೃತ್ತಿ ಸಂಬಂಧಿತವಾಗಿರಬಹುದು.
2.  ಸಾಮೂಹಿಕ ಸಮಸ್ಯೆಗಳು: ಒಂದು ಗುಂಪಿನ, ವರ್ಗದ ಸದಸ್ಯರನ್ನು ಸಮಾನವಾಗಿ ಬಾಧಿಸುವ ಸಮಸ್ಯೆಗಳನ್ನು ಸಾಮೂಹಿಕ ಸಮಸ್ಯೆಗಳೆಂದು ಪರಿಗಣಿಸಬಹುದು.
3. ಸಾಂಸ್ಥಿಕ ಸಮಸ್ಯೆಗಳು: ಒಂದು ಸಂಸ್ಥೆ ಅಥವಾ ಸಂಘಟನೆಯ ನಿರ್ವಹಣೆಗೆ ಸಂಬಂಧಿಸಿದಂತೆ ಕಾಡುವ ಸಮಸ್ಯೆಗಳು ಅದರ ಸದಸ್ಯರನ್ನೆಲ್ಲಾ ಬಾಧಿಸುತ್ತವೆ.
4.  ಸಾಮಾಜಿಕ ಸಮಸ್ಯೆಗಳು: ಇಡೀ ಸಮಾಜವನ್ನು ಒಟ್ಟಾರೆಯಾಗಿ ಕಾಡುವ ಸಮಸ್ಯೆಗಳು. ಭ್ರಷ್ಟಾಚಾರ, ವರದಕ್ಷಿಣೆ ಪಿಡುಗು ಇತ್ಯಾದಿಗಳು ಇಡೀ ಸಮಾಜದ ಸಮಸ್ಯೆ ಸಮಾಜವನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವ  ಸಮರ್ಥ ನಾಯಕತ್ವದ ಕೊರತೆ, ಪ್ರಾಮಾಣಿಕತೆ, ಸಾಮಾಜಿಕ ಕಳಕಳಿಯ ಕೊರತೆ ಮೊದಲಾದವು  ಸಾಮಾಜಿಕ ಸಮಸ್ಯೆಗಳಿಗೆ ಮೂಲ ಕಾರಣ.  
 ಸಮಸ್ಯೆ ಪರಿಹಾರಕ್ಕೆ ಆಲೋಚನೆಗಳೇ ಮದ್ದು.  ಒಂದು ನಿರ್ದಿಷ್ಟ ಸಮಸ್ಯೆ ಎದುರಾದಾಗ ಅದಕ್ಕೆ ಪರಿಹಾರವಾಗಬಲ್ಲ ಹತ್ತಾರು ಯೋಚನೆಗಳತ್ತ ಮನಸ್ಸು ಹಾಯಿಸಬೇಕು. ಬೇರೆಯವರಿಂದ ಸಲಹೆ ಪಡೆಯಬೇಕು. ನಮ್ಮದೇ ರೀತಿಯ ಸಮಸ್ಯೆಗೆ ತುತ್ತಾಗಿ ಪರಿಹಾರ ಕಂಡುಕೊಂಡವರ ಉದಾಹರಣೆಗಳನ್ನು ಗಮನಿಸಬೇಕು.  
ಸಮಸ್ಯೆ ಪರಿಹಾರದ ಸಪ್ತಪದಿ
ಮೊದಲ ಹೆಜ್ಜೆ: ನಿಖರವಾದ ಸಮಸ್ಯೆ ಏನೆಂದು ಗುರುತಿಸಿ.  ಸಮಸ್ಯೆಯ ವಿಧ, ಹಾಗೂ ಅವಧಿಯನ್ನು ಅವಲೋಕಿಸಿ.
ಎರಡನೇ ಹೆಜ್ಜೆ: ಸಮಸ್ಯೆಯನ್ನು ನಿಮಗೆ ಅರ್ಥ ಆಗುವ ರೀತಿಯಲ್ಲಿ ವ್ಯಾಖ್ಯಾನಿಸಿ.
ಮೂರನೇ ಹೆಜ್ಜೆ: ಸೂಕ್ತ ಪರಿಹಾರ ತಂತ್ರದ ಆಲೋಚನೆಯನ್ನು ಮಾಡಿ.
ನಾಲ್ಕನೇ ಹೆಜ್ಜೆ: ಪರಿಹಾರಕ್ಕೆ ಅಗತ್ಯವಾದ ಮಾಹಿತಿ ಸಂಗ್ರಹಣೆ.  ಸಮಸ್ಯೆಯ ಬಗ್ಗೆ ನಿಮಗೇನು
ಗೊತ್ತು ಹಾಗೂ ಗೊತ್ತಿಲ್ಲ ಎರಡೂ ರೀತಿಯ ಮಾಹಿತಿಗಳು ನಿಮ್ಮ ಬಳಿ ಇರಲಿ. ಹೆಚ್ಚು ಮಾಹಿತಿ ಉತ್ತಮ ಪರಿಹಾರೋಪಾಯ.
ಐದನೇ ಹೆಜ್ಜೆ: ಪರಿಹಾರಕ್ಕೆ ಬೇಕಾದ ಸಂಪನ್ಮೂಲಗಳನ್ನು ಸೂಕ್ತ ರೀತಿಯಲ್ಲಿ ಬಳಸಿ.
ಆರನೇ ಹೆಜ್ಜೆ: ಸಮಸ್ಯೆ ಪರಿಹಾರದತ್ತ ನಿಮ್ಮ ಪ್ರಗತಿಯ ಅವಲೋಕನೆ. ಮಾರ್ಗ ಸೂಕ್ತವೆನಿಸದಿದ್ದರೆ, ಬೇರೆ ಮಾರ್ಗೋಪಾಯಗಳ ಚಿಂತನೆ.
ಏಳನೇ ಹೆಜ್ಜೆ: ಸಮಸ್ಯೆಯ ನಿವಾರಣೆಗೆ ಕೈಗೊಂಡ ಪರಿಹಾರ ಮಾರ್ಗಗಳು ನೀಡಿದ ಫಲಿತಾಂಶದ ಕುರಿತು ಪ್ರಾಮಾಣಿಕ ವಿಶ್ಲೇಷಣೆ.
ಸಾಧಕರೆಲ್ಲರ ಸಾಧನೆಗಳೂ ಸಮಸ್ಯೆಯನ್ನು ಸವಾಲೆಂದು ಸ್ವೀಕರಿಸಿದ್ದರಿಂದ ಪರಿಹಾರ ಸಾಧ್ಯವಾದವು.  ಸಾಧ್ಯವೆಂದರೆ ಸಾಧ್ಯ ವೆಂದು ಆಲೋಚಿಸಿ, ಆಗ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳು ತಂತಾನೆ ಹೊಳೆಯುತ್ತವೆ.

- ಎಚ್.ಎಸ್. ನವೀನ ಕುಮಾರ್ ಹೊಸದುರ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?