ಭಕ್ತಿ-ಜ್ಯೋತಿಷ್ಯ

ಸಸ್ಯಗ್ರಹ

ಜ್ಯೋತಿಷ್ಯ ಶಾಸ್ತ್ರದಲ್ಲಿ ನವಗ್ರಹಗಳ ಬಗ್ಗೆ ವಿವರಣೆ ಇದೆ. ಅವು ನಮ್ಮ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ನಾವು ಇಂದಿಗೂ ನಂಬಿಕೊಂಡು ಬಂದಿದ್ದೇವೆ. ನಾವು ನಡೆಸುವ ಅನೇಕ ಸಂಸ್ಕಾರಗಳಲ್ಲಿ ಗ್ರಹಗಳನ್ನು ತೃಪ್ತಿ ಪಡಿಸಲು ನವಗ್ರಹ ಶಾಂತಿ ನಡೆಸಬೇಕೆಂದು ಬೋಧಾಯನಾದಿ ಆಚಾರ್ಯರು ತಿಳಿಸಿದ್ದಾರೆ.
 ಹೀಗೆ ಶಾಂತಿ ಹೋಮವನ್ನು ನಡೆಸುವಾಗ ಚರು ಮತ್ತು ಆಜ್ಯದೊಂದಿಗೆ ಗ್ರಹಗಳಿಗೆ ಸಂಬಂಧಿಸಿದ ಸಸ್ಯಗಳ ಸಮಿತ್ತುಗಳನ್ನು ಯಜ್ಞಕುಂಡಕ್ಕೆ ನಿರ್ದಿಷ್ಟ ಸಂಖ್ಯೆಯಲ್ಲಿ ಸಮರ್ಪಿಸಬೇಕಾಗುತ್ತದೆ. ಅಗ್ನಿಯಲ್ಲಿ ಹುತವಾಗುವ ಸಮಿತ್ತುಗಳಿಂದ ಹೊರಸೂಸುವ ಧೂಮ ಪರಿಸರವನ್ನು ಶುದ್ಧಗೊಳಿಸುತ್ತದೆ.
 ಹೀಗೆ ಕೆಲವು ಗ್ರಹಗಳಿಗೆ ಸಂಬಂಧಿಸಿದ ಸಸ್ಯವರ್ಗದ ವೈಶಿಷ್ಠ್ಯ ಹೀಗಿದೆ.
ಕುಜನಿಗೆ ಖದಿರ (ಕಗ್ಗಲಿ)
ಖದಿರಕ್ಕೆ ಕನ್ನಡದಲ್ಲಿ ಕಗ್ಗಲಿ ಅಥವಾ ಕಾಚಿನಮರ ಎಂಬ ಹೆಸರಿದೆ. ಸಂಸ್ಕೃತದಲ್ಲಿ ಖದಿರಃ, ದಂತಧಾವನಃ, ಅರಿಮೇದಃ, ಯೂಪದ್ರೂಃ ಎಂಬ ಹೆಸರುಗಳಿವೆ. ಸಸ್ಯ ಶಾಸ್ತ್ರೀಯ ಹೆಸರು Acacia Catech.ನವಗ್ರಹ ಶಾಂತಿ ಹೋಮದಲ್ಲಿ ಅಂಗಾರಕ ಪ್ರೀತ್ಯರ್ಥವಾಗಿ ಖದಿರ ಸಮಿತ್ತನ್ನು ಹೋಮಿಸಲಾಗುತ್ತದೆ.
 ಯಜ್ಞ ಪಶುವನ್ನು ಕಟ್ಟಲು ಖದಿರ ವೃಕ್ಷದ ಕಂಬವನ್ನು ಬಳಸುತ್ತಾರೆ. ಯಜ್ಞಕ್ಕೆ ಬೇಕಾದ ಸ್ರುಕ್, ಸ್ರುವಗಳನ್ನೂ ಖದಿರ ವೃಕ್ಷದಿಂದಲೇ  ತಯಾರಿಸಲಾಗುತ್ತದೆ. ಕೆಮ್ಮು, ಗಂಟಲು ನೋವು, ಅತಿಸಾರ, ವ್ರಣ ಚಿಕಿತ್ಸೆಗಳಲ್ಲಿ ಖದಿರದ ತೊಗಟೆಯ ಉಪಯೋಗವಿದೆ.
ಬುಧನಿಗೆ ಅಪಾಮಾರ್ಗ (ಉತ್ತರಣೆ)
ಕನ್ನಡದಲ್ಲಿ ಉತ್ತರಣೆ (ಉತ್ತರಾಣಿ) ಎಂಬ ಹೆಸರಿರುವ ಇದಕ್ಕೆ ಸಂಸ್ಕೃತದಲ್ಲಿ ಅಪಾಮಾರ್ಗಃ, ಶೈಖರಿಕಃ, ಮಯೂರಕಃ, ಖರಮಂಜರೀ ಇತ್ಯಾದಿ ಹೆಸರುಗಳಿವೆ. ಇದರ ವೈಜ್ಞಾನಿಕ ಹೆಸರು ACHYRANTHES ASPERA. ಬುಧನಿಗೆ ಅಪಾಮಾರ್ಗ ಸಮಿತ್ತಿನ ಅರ್ಪಣೆಯಾಗುತ್ತದೆ. ಚಿಕ್ಕ ಗಿಡವಾಗಿ ಬೆಳೆಯುವ ಅಪಾಮಾರ್ಗವು ಹೂ ಬಿಟ್ಟು ಬೀಜ ಬಲಿತಾಗ ಮುಳ್ಳಿನಂತೆ ಮೈಗೆ ಅಂಟಿಕೊಂಡು ಪ್ರಸಾರವಾಗುತ್ತದೆ.
 ಅಪಾಮಾರ್ಗದ ಭಾಗಗಳು ದೇಹದ ಊತ, ನೋವುಗಳಿಗೆ, ರಕ್ತದೋಷಕ್ಕೆ, ಚೇಳು ಕಡಿದುದಕ್ಕೆ ದಿವ್ಯ ಔ ಷಧವಾಗಿವೆ. ಅಪಾಮಾರ್ಗದ ಬೀಜದಿಂದ ತಯಾರಿಸಿದ ಪಾಯಸವು 'ಅತಿ ಹಸಿವು' ಎಂಬ ಸಮಸ್ಯೆಯನ್ನು ಪರಿಹರಿಸುತ್ತದಂತೆ.
ಗುರುವಿಗೆ ಅಶ್ವತ್ಥ (ಅರಳಿ)
ತ್ರಿಮೂರ್ತಿಗಳು ನೆಲೆಸಿರುವ, ಬುದ್ಧನಿಗೆ ಬೋಧೆ ನೀಡಿದ, ಭಗವದ್ಗೀತೆಯಲ್ಲಿ ವರ್ಣಿಸಲ್ಪಟ್ಟ ಅಶ್ವತ್ಥದ ಮಹಿಮೆ ಅಪಾರ. ಇದಕ್ಕೆ ಸಂಸ್ಕೃತದಲ್ಲಿ ಬೋಧಿದ್ರುಮಃ, ಪಿಪ್ಪಲಃ, ಚಲದಲಃ, ಕುಂಜರಾಶನಃ ಎಂಬ ಹೆಸರುಗಳಿವೆ. ಇದರ ವೈಜ್ಞಾನಿಕ ಹೆಸರು FICUS RELIGIOSA. ಅರಳಿ ಮರವು ವಾತಾವರಣಕ್ಕೆ ಅಗಾಧ ಪ್ರಮಾಣದಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.
 ನವಗ್ರಹಶಾಂತಿ ಹೋಮದಲ್ಲಿ ಗುರು (ಬೃಹಸ್ಪತಿ) ಪ್ರೀತ್ಯರ್ಥವಾಗಿ ಅರಳಿ ಸಮಿತ್ತನ್ನು ಹೋಮಿಸಲಾಗುತ್ತದೆ. ಅಶ್ವತ್ಥದ ಹಣ್ಣು ಪಕ್ಷಿಗಳಿಗೆ ಆಹಾರವಾದರೆ ಎಲೆ ಪ್ರಾಣಿಗಳಿಗೆ ಮೇವಾಗುತ್ತದೆ. ಅಶ್ವತ್ಥದ ತೊಗಟೆಯನ್ನು ಔಷಧಕ್ಕಾಗಿ ಬಳಸುತ್ತಾರೆ.
ಶುಕ್ರನಿಗೆ ಉದುಂಬರ (ಅತ್ತಿ)
ಸಂಸ್ಕೃತದಲ್ಲಿ ಇದಕ್ಕೆ ಜಂತುಫಲಃ, ಯಜ್ಞಾಂಗಃ, ಹೇಮದುಗ್ಧಕಃ ಎಂಬ ಹೆಸರುಗಳಿವೆ. ಇದರ ಶಾಸ್ತ್ರೀಯ ಹೆಸರು FICUS GLOMERATA.ದತ್ತಾತ್ರೇಯ ಉದುಂಬರ ವೃಕ್ಷದಲ್ಲಿ ನೆಲೆಸಿದ್ದಾನೆ ಎಂಬುದು ಭಕ್ತರ ನಂಬಿಕೆ. ಅತ್ತಿ ಸಮಿತ್ತನ್ನು ಶುಕ್ರಗ್ರಹ ಪ್ರೀತ್ಯರ್ಥವಾಗಿ ಶಾಂತಿ ಹೋಮದಲ್ಲಿ ಸಮರ್ಪಿಸುತ್ತಾರೆ. ಅತ್ತಿಯ ತೊಗಟೆ, ಬೇರು, ಹಣ್ಣು, ಚಿಗುರು ಔಷಧಿಗಳ ತಯಾರಿಕೆಗೆ ಉಪಯೋಗವಾಗುತ್ತದೆ. ಅತ್ತಿಯ ಬೇರಿನಿಂದ ಪಡೆಯುವ ನೀರಿನ ಸೇವನೆ ಆರೋಗ್ಯದಾಯಕ. ಅತ್ತಿಯ ಹಣ್ಣು ದನಕರುಗಳಿಗೆ ಅತ್ಯಂತ ಪ್ರಿಯ. ಎಳೆಯ ಕಾಯಿ ತರಕಾರಿಯಾಗಿಯೂ ಬಳಕೆಯಲ್ಲಿದೆ. 'ಔದುಂಬರಾಣಿ ಪುಷ್ಪಾಣಿ...' ಕಣ್ಣಿಗೆ ಕಾಣಿಸುವುದಿಲ್ಲ.
ಶನಿಗೆ ಶಮೀ (ಬನ್ನಿ)
ಕನ್ನಡದಲ್ಲಿ 'ಬನ್ನಿ' ಎಂಬ ಹೆಸರಿದ್ದು ಸಂಸ್ಕೃತದಲ್ಲಿ ಶಮೀರಃ, ಸಕ್ತು ಫಲಾ, ಶಿವಾ ಎಂಬ ಹೆಸರುಗಳಿವೆ. ಇದರ ವೈಜ್ಞಾನಿಕ ಹೆಸರು-Acacia Suma. ನವಗ್ರಹ ಶಾಂತಿ ಹೋಮದಲ್ಲಿ ಶನಿಯ ಪ್ರೀತ್ಯರ್ಥವಾಗಿ ಶಮೀ ಸಮಿತ್ತನ್ನು ಅಗ್ನಿಗೆ ಸಮರ್ಪಿಸಲಾಗುತ್ತದೆ. ಪಾಂಡವರು ಅಜ್ಞಾತವಾಸಕ್ಕೆ ತೆರಳುವಾಗ ತಮ್ಮ ಆಯುಧಗಳನ್ನು ಶಮೀವೃಕ್ಷದಲ್ಲಿ ಬಚ್ಚಿಟ್ಟಿದ್ದರು.
 ವಿಜಯದಶಮಿಯಂದು ಶಮೀ ಪತ್ರವನ್ನು ಹಂಚಿಕೊಂಡು ಶುಭಾಶಯ ಹೇಳುತ್ತಾರೆ. ಗೋಗ್ರಹಣದಲ್ಲಿ ಅರ್ಜುನನಿಗೆ ಜಯ ದೊರೆತುದದರಿಂದ ಶಮೀ ವೃಕ್ಷವನ್ನು 'ವಿಜಯದ ಶಮೀ' ಎಂದು ವ್ಯಾಖ್ಯಾನಿಸಿದ್ದಾರೆ. ಶಮೀ ಮರದ ತೊಗಟೆ ಮತ್ತು ಎಲೆಗಳು ಆಯುರ್ವೇದದಲ್ಲಿ ಬಳಕೆಯಾಗುತ್ತದೆ. ಶಮಿಯ ಸ್ತುತಿ ಹೀಗಿದೆ-
ಕೇತುವಿಗೆ ದರ್ಭಃ (ದರ್ಭೆ)
ವೇದೋಕ್ತ ಕ್ರಿಯೆಗಳಿಗೆ ಅಗತ್ಯವಾಗಿರುವ ದರ್ಭೆಗೆ ಕುಶಃ, ಕುಥಃ, ಪವಿತ್ರಂ ಎಂಬ ಹೆಸರುಗಳಿವೆ. ಇದರ ಶಾಸ್ತ್ರೀಯ ಹೆಸರು-Poa Cynosuroides.ಕೇತುಗ್ರಹದ ಅನುಗ್ರಹಕ್ಕಾಗಿ ದರ್ಭೆಯನ್ನು ಹೋಮಿಸಲಾಗುತ್ತದೆ. ವೈದಿಕ ಕ್ರಿಯೆಗಳಲ್ಲಿ ಬಳಸುವ ಪವಿತ್ರ, ಕೂರ್ಚ, ಪರಿಸ್ತರಣ, ಆಸನ ಮೊದಲಾದವುಗಳಿಗೆ ದರ್ಭೆ ಬೇಕು. ದರ್ಭೆಯಲ್ಲಿ ತ್ರಿಮೂರ್ತಿಗಳು ನೆಲೆಸಿದ್ದಾರೆ.
 ದ್ರೋಣಾಚಾರ್ಯರು ದರ್ಭೆಯನ್ನು ಮಂತ್ರಿಸಿ ಬಾವಿಯಿಂದ ಚೆಂಡನ್ನು ತೆಗೆದು ಕೊಟ್ಟ ಕಥೆ ಮಹಾಭಾರತದಲ್ಲಿದೆ. ದರ್ಭೆಯ ರಸ ಅನೇಕ ರೋಗಗಳ ಪರಿಹಾರಕ್ಕೆ ಬಳಕೆಯಾಗುತ್ತದೆ.  
 ನಮ್ಮ ಪ್ರಾಚೀನರು ಪ್ರಕೃತಿಮಾತೆಯ ಮಡಿಲಲ್ಲಿ ಬೆಳೆದು ಬಂದವರು. ಅಣು, ರೇಣು, ತೃಣ, ಕಾಷ್ಠಗಳಲ್ಲಿ ಪರಮಾತ್ಮನನ್ನು ಕಂಡವರು. ಪರಮಾತ್ಮನು ನೀಡಿದ ಸಮಸ್ತವನ್ನೂ ಸದ್ಬಳಕೆ ಮಾಡಿದವರು. ಅವರು ಸಸ್ಯಗಳ ಮಹತ್ವವನ್ನು ತಿಳಿದಿದ್ದರು. ಎಲೆ, ಹೂ, ಹಣ್ಣು, ನೆರಳು, ಬೇರು, ತೊಗಟೆ, ದಿಮ್ಮಿಗಳನ್ನು ನೀಡಿ ಪರರಿಗೆ ಉಪಕಾರ ಮಾಡುವ ಸಸ್ಯಗಳು ದೇವತಾಸ್ವರೂಪಿಗಳೇ ಸರಿ.

- ವಿದ್ವಾನ್ ಎಂ. ಸುಬ್ರಹ್ಮಣ್ಯ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!