ಹಿಂದೂ ಸಂಸ್ಕೃತಿ ಪ್ರಕಾರ ಕೆಲವು ಮರ ಗಿಡಗಳಿಗೆ ಪವಿತ್ರ ಸ್ಥಾನವಿದೆ. ಅಶ್ವತ್ಥ (ಅರಳಿ), ಬಿಲ್ವ ಮರ, ಬೇವು ಮರ, ಔದುಂಬರ (ಅತ್ತಿಮರ), ಗರಿಕೆ ಹಾಗೂ ಎಕ್ಕ. ಈ ಎಕ್ಕ ಗಿಡಕ್ಕೆ ದೇವ ವೃಕ್ಷ ಎಂಬ ಭಾವನೆ ಇರುವುದರಿಂದ ಭಾರತದಲ್ಲಿ ಇದನ್ನು ಪೂಜಿಸಲಾಗುತ್ತದೆ.
ಎಕ್ಕದಲ್ಲಿ ಎರಡು ವಿಧ ಬಿಳಿ ಹಾಗೂ ಕಪ್ಪು ಎಕ್ಕ. ಬಿಳಿ ಎಕ್ಕ ಬಹಳ ಶ್ರೇಷ್ಠವೆಂದು ಪ್ರತೀತಿ. ಎಕ್ಕವನ್ನು ಪೂಜಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ.
ಗಣಪತಿಗೆ ಎಕ್ಕ ಎಂದರೆ ಬಲು ಪ್ರೀತಿ. ಎಕ್ಕವನ್ನು ಮನೆಯ ಬಲ ಭಾಗದಲ್ಲಿ ಬೆಳೆಸಿದರೆ ವಾಸ್ತು ದೋಷ ನಿವಾರಣೆಯಾಗುತ್ತದಂತೆ. ಅಲ್ಲದೆ ಬೆಳಗ್ಗೆದ್ದ ಕೂಡಲೇ ಎಕ್ಕೆಯನ್ನು ದರ್ಶಿಸಿದರೆ ಆ ದಿನ ಪೂರ್ತಿ ಸಂತೋಷದಿಂದ ಇರಬಹುದು.
ಹಣಕಾಸಿನ ತೊಂದರೆ ಇರುವವರು ಎಕ್ಕ ಗಿಡದ ಹೂವಿನಿಂದ 21 ದಿನ ಗಣಪತಿಯನ್ನು ಪೂಜಿಸಿದರೆ ತೊಂದರೆ ನಿವಾರಣೆಯಾಗುವುದು. ಮನೆಯ ಈಶಾನ್ಯ ಮೂಲೆಯಲ್ಲಿ ಎಕ್ಕೆ ಗಿಡದ ಬೇರಿನಿಂದ ಮಾಡಿದ ಗಣಪತಿಯನ್ನು ಇಟ್ಟು ಪೂಜಿಸಿದರೆ ವಾಸ್ತು ದೋಷ ನಿವಾರಣೆ ಆಗುವುದು. ರವಿ ಗ್ರಹ ಎಕ್ಕ ಗಿಡದ ಅಧಿಪತಿ. ರವಿ ಗ್ರಹ ದೋಷ ಇರುವವರು ಎಕ್ಕದ ಎಲೆಯಿಂದ ರವಿಗ್ರಹವನ್ನು ಪೂಜಿಸಬೇಕು.
ಎಕ್ಕದ ಎಲೆಯನ್ನು ದೇಹದ ಸರ್ವಾಂಗಗಳಿಗೆ ಸ್ಪರ್ಶಿಸಿ, ಸ್ನಾನ ಮಾಡಿದರೆ ಮೂಳೆ ನೋವು ನಿವಾರಣೆ ಆಗುವುದು. ಈ ಕಾರಣಕ್ಕಾಗಿಯೇ ರಥಸಪ್ತಮಿ ದಿನ ಎಕ್ಕದ ಎಲೆಯ ಸ್ನಾನ ಮಾಡುವುದು. ಎಕ್ಕದ ಹೂವಿನಿಂದ ಹಾರ ಮಾಡಿ ಮನೆಯ ಮುಂಬಾಗಿಲಿಗೆ ಹಾಗೂ ದೇವರ ಮನೆಯ ಬಾಗಿಲಿಗೆ ತೋರಣ ಕಟ್ಟಿದರೆ ವಾಸ್ತು ದೋಷ ನಿವಾರಣೆ ಆಗುವುದು.
ಎಕ್ಕದ ಹಾಲನ್ನು ಮೂಲವ್ಯಾಧಿಯ ಮೊಳಕೆಗೆ ಹಚ್ಚುವುದರಿಂದ ಮೂಲವ್ಯಾಧಿ ಪರಿಹಾರವಾಗುವುದು. ಎಕ್ಕದ ಎಲೆಯ ಕಷಾಯ ಸೇವಿಸಿದರೆ ಹೊಟ್ಟೆ ನೋವು ಶಮನವಾಗುವುದು. ಚರ್ಮದ ಕಾಯಿಲೆ ಇದ್ದರೆ ಎಕ್ಕದ ಹಾಲು ಹಾಗೂ ಜೇನು ತುಪ್ಪವನ್ನು ಬೆರೆಸಿ ಹಚ್ಚಬೇಕು. ವಿಷ ಜಂತುಗಳು ಕಡಿದರೆ ಎಕ್ಕದ ಬೇರನ್ನು ಅರಿಶಿನದಿಂದ ತೇಯ್ದು ನೀರಿನಲ್ಲಿ ಸೇವಿಸಿದರೆ ವಿಷದ ಅಂಶ ಕರಗುವುದು. ಎಕ್ಕ ವಾಸ್ತು ದೋಷ ನಿವಾರಕವಲ್ಲದೆ ಎಕ್ಕದ ಗಿಡ, ತೊಗಟೆ, ಎಲೆ, ಬೇರು, ಹೂ ಔಷಧೀಯ ಗುಣವನ್ನು ಹೊಂದಿದೆ. ದಕ್ಷಿಣ ಭಾರತದಲ್ಲಿ ಎಕ್ಕ ಹೆಚ್ಚಾಗಿ ಬೆಳೆಯುತ್ತದೆ. ಹೊಲದ ಬಯಲುಗಳಲ್ಲಿ, ಹಳ್ಳ ದಿಣ್ಣೆಗಳಲ್ಲಿ, ರಸ್ತೆಯ ಪಕ್ಕದಲ್ಲಿ, ದೇಗುಲಗಳ ಸಮೀಪದಲ್ಲಿ ಮನೆಯಂಗಳದಲ್ಲಿ ಬೆಳೆಯುತ್ತದೆ.
- ಪ್ರಕಾಶ ಬಾಬು ಕೆ.ಆರ್.