ಫಾಲ್ಗುಣ ಮಾಸ ವಿಶೇಷತೆಯಿಂದ ಕೂಡಿದ ತಿಂಗಳು. ಉತ್ತರಾಯಣದ ಮಾರ್ಗ ಕ್ರಮಿಸುತ್ತಿರುವ ನೇಸರ. ವಸಂತ ರಾಜನ ಆಳ್ವಿಕೆಯ ಪ್ರಾರಂಭ ಕಾಲವನ್ನು ಮಾಮರದಲ್ಲಿ ಕುಳಿತು ಪಂಚಮದಿಂಚರದಲ್ಲಿ ಸ್ವಾಗತಿಸುವ ಕೋಗಿಲೆಗಳು. ಸುಗ್ಗಿಯೆಲ್ಲ ಮುಗಿದು ಮನೆಗಳಲ್ಲಿ ತುಂಬಿಕೊಂಡ ದವಸ- ಧಾನ್ಯ. ಉಣ್ಣುವ ಅನ್ನಕ್ಕೊಂದು, ಕುಡಿಯುವ ನೀರಿಗೊಂದು ಹೊಸ ರುಚಿ. ಕೃಷಿಕರ ಬಿಡುವಿನ ಉತ್ಸಾಹ, ಉಲ್ಲಾಸ ಭಾವಗಳು ಪರಿಪೂರ್ಣಗೊಳ್ಳದೆ ಸುಮ್ಮನಿರುವುದೇ..?
ಈ ಮಾಸದಲ್ಲಿ ಹೆಚ್ಚಿನ ಹಬ್ಬಗಳು ಇಲ್ಲವಾದರೂ ಫಾಲ್ಗುಣದಲ್ಲಿ ಬರುವ ಕಾಮನ ಹಬ್ಬ ತನ್ನ ನಿತ್ಯೋತ್ಸಾಹ, ಉಲ್ಲಾಸಗಳಿಂದ ಕೂಡಿದ ಸಾರ್ವಜನಿಕ ಪರ್ವ. ಮಧುಮಾಸದ ವಸಂತದ ಸೊಬಗಿಗೆ ಸ್ವಾಗತದ ಸೊಂಪು ಅಳವಡಿಸಿಕೊಂಡ ಜನಪ್ರಿಯ ಹಬ್ಬ ಹೋಳಿ. ಮನೆಯ ವಲಯದಿಂದ ಹೊರಬಂದು ಸಮೂಹದಲ್ಲಿ ಭಾಗವಹಿಸುವ ಆಚರಣೆಯುಳ್ಳ ಕೆಲವೇ ಹಬ್ಬಗಳಲ್ಲಿ ಹೋಳಿಗೆ ಅಗ್ರಸ್ಥಾನ.
ಹೋಳಿ ಆಚರಣೆಯಲ್ಲಿ ಸ್ವಚ್ಛಂದವಾದ ಹರ್ಷಾಭಿವ್ಯಕ್ತಿ ಅಂದರೆ ಹಾಡು, ನಾಟ್ಯ, ಆಟಗಳಿಗೆ ಅವಕಾಶವಿದೆ. ಬಣ್ಣ, ಬೆಂಕಿ, ಪಾರವಶ್ಯದ ಸಾಂಸ್ಕೃತಿಕ ಪ್ರದರ್ಶನಗಳಿವೆ. ಶಿವ, ಕಾಮದೇವ ರಾಧಾಕೃಷ್ಣರ ಸ್ಮರಣೆಯಾಗುತ್ತದೆ.
ಗದ್ದಲದ ಸಡಗರ
ಹೋಳಿಕಾ ಅಥವಾ ಕಾಮದಹನದ ಬೆಂಕಿಗಾಗಿ ಒಂದು ವಾರ ಮೊದಲಿನಿಂದಲೇ ಸೌದೆ ಸಂಗ್ರಹ ಕಾರ್ಯ. ಕನ್ನಡದ ಮಕ್ಕಳು ಕಾಮಣ್ಣಕಟ್ಟಿಗೆ ಭೀಮಣ್ಣ ಬೆರಣಿ ಎಂದು ಹಾಡಿಕೊಂಡು ಕುಣಿಯುತ್ತ, ಮನೆಮನೆಗೂ ಪರಾಂಬರಿಸುತ್ತಾರೆ. ಮರದ ಹಳೆಯ ಸಾಮಾನು, ಮುರಿದ ಕಡ್ಡಿ, ಕಾಗದ, ಪೊರಕೆ, ಮೊದಲಾದವುಗಳನ್ನು ಒಯ್ದು ಹೊರವಲಯದ ನಿರ್ದಿಷ್ಟ ಸ್ಥಳದಲ್ಲಿ ರಾಶಿ ಹಾಕಿ ಅಗ್ನಿಸ್ಪರ್ಶ ಮಾಡುತ್ತಾರೆ.
ಹಿರಣ್ಯಕಶಿಪುವಿಗೆ ಹೋಳಿಕಾ ಎಂಬ ತಂಗಿಯಿದ್ದಳು. ಬೆಂಕಿಗೆ ತಳ್ಳಿದರೂ ಏನೂ ಅಪಾಯವಾಗದಂತೆ ಅವಳಿಗೆ ವರದಾನವಿತ್ತು. ಹಿರಣ್ಯಕಶಿಪು ವಿಷ್ಣುಶತ್ರುವಾದುದರಿಂದ ವಿಷ್ಣುಭಕ್ತನಾದ ಪ್ರಹ್ಲಾದನಿಗೂ ಶತ್ರುವಾದನು. ತನ್ನ ಮಗನೇ ಆದರೂ ಅವನನ್ನು ಕೊಲ್ಲಲು ಹವಣಿಸಿದನು. ಎಲ್ಲಾ ದುಷ್ಕೃತ್ಯಗಳೂ ವಿಫಲನಾದ ಮೇಲೆ, ತಂಗಿ ಹೋಳಿಕೆಯ ತೊಡೆಯ ಮೇಲೆ ಪ್ರಹ್ಲಾದನನ್ನು ಕುಳ್ಳಿರಿಸಿ, ಅವಳನ್ನು ಬೆಂಕಿಯಲ್ಲಿ ಕುಳ್ಳಿರಿಸಿದನು. ವರದಾನದ ನಿಯಮವೇನೆಂದರೆ ಅವಳೊಬ್ಬಳೇ ಕುಳಿತುಕೊಳ್ಳಬೇಕಾಗಿತ್ತು. ಇಲ್ಲಿ ಅದು ಭಂಗವಾದ್ದರಿಂದ ತಿರಗೇಟು ಬಿತ್ತು. ಹೋಳಿಕಾ ಸುಟ್ಟು ಬೂದಿಯಾದಳು.
ಕಾಮನ ಹಬ್ಬಕ್ಕೆ ಶೃಂಗಾರ ಭಾವಕ್ಕೆ ಉದ್ದೀಪ ವಿಭಾವವಾದುದರಿಂದ ನಮ್ಮ ಪೂರ್ವ ಪರಂಪರೆ ಇದನ್ನು ಪುರಸ್ಕರಿಸಿದೆ (ಭಕ್ತ ಪ್ರಹ್ಲಾದ ಬದುಕಿ ಉಳಿದನು. ಈ ನೆನಪಿನಲ್ಲಿ ಇಂದಿನವರೆಗೂ ಉಳಿದು ಬಂದಿತು ಹೋಳಿಕಾ ದಹನ). ಕಾಮವು ದಿವ್ಯ ಜೀವನದ ಲೌಕಿಕಶಕ್ತಿ. ಆದರೆ ಮಿತಿಯಿದ್ದಾಗ ಅದು ಬ್ರಹ್ಮಚರ್ಯವೇ ಆಗುತ್ತದೆ. ಹೋಳಿಕಾ ದಹನವು ದುಷ್ಟಶಕ್ತಿಯ ನಿರ್ಮೂಲನದ ಪ್ರತೀಕ. ಅಸುರ ಶಕ್ತಿಯ ಮೇಲೆ ದೈವ ಶಕ್ತಿಯ ವಿಜಯ. ಕಥೆಗಳೇನೇ ಇರಲಿ. ಕಾಮ ದಹನ ಅಥವಾ ಹೋಳಿಕಾ ದಹನದ ಅಂಗವಾಗಿ ಅಗ್ನಿಯ ಬಳಕೆ, ಗುಲಾಲ್ ಎರಚುವುದು, ಹಾಡು, ಕುಣಿತ-ವಿಹಾರಗಳು ಇಂದಿಗೂ ಉಳಿದುಬಂದಿದೆ. ಇದು ಲೋಕೋತ್ಸವ, ಮದನ ಮಹೋತ್ಸವ, ಶಿವನ ಡೋಲಾಕ್ರೀಡೆಯ ಉತ್ಸವ, ಆಂದೋಳಿಕಾ ಉತ್ಸವ ಎಂಬ ವಿವರಗಳು ಭವಿಷ್ಯ ಪುರಾಣದಲ್ಲಿದೆ.
ಕಾಮನಿಂದಲೇ ದಹನ!
ಕಾಮದಹನವೆಂದರೆ ಎಷ್ಟೋ ಜನ ರುದ್ರ ಕಾಮನನ್ನು ಸುಟ್ಟ ಎಂದಷ್ಟೇ ತಿಳಿದುಕೊಂಡಿದ್ದಾರೆ. ಆದರೆ ಕಾಮನೇ ಇನ್ನೊಬ್ಬನನ್ನು ಸುಟ್ಟದ್ದು. ಅದೇ ನಿಜವಾದ ಕಾಮದಹನ. ಮಹಾಭಾರತದ ಕತೆ. ಶ್ರೀಕೃಷ್ಣ ಕೈಲಾಸದಲ್ಲಿ ತಪಸ್ಸಿಗೆ ಕೂತಿದ್ದಾನೆ. ಆಗ ರಾಕ್ಷಸ ಎರಗುತ್ತಾನೆ. ತಕ್ಷಣ ಕೃಷ್ಣ ತನ್ನ ಹೊಟ್ಟೆಯಿಂದ ಮನ್ಮಥನನ್ನು ಹೊರತೆಗೆದ. ಆತ ಸುಟ್ಟೇ ಬಿಟ್ಟ ಆ ದೈತ್ಯನನ್ನು. ಬೂದಿಯಾದ ಆತನೇ ವಕ್ರಾಸುರ. ಕಾಮ ವಕ್ರನನ್ನು ಕೊಂದ. ಇದುವೇ ಕಾಮದಹನ, ಕಾಮನಿಂದ ದಹನ.
ಕೃಷ್ಣನ ಹೊಟ್ಟೆಯೊಳಗಿದ್ದ ಕಾಮನೇ ನಮ್ಮ ಹೊಟ್ಟೆಯಲ್ಲೂ ಕಾಮ. ಅದು ತೇಜಸ್ಸು. ಅದು ಶಕ್ತಿ. ಅದು ಸುಡುತ್ತೆ. ಅದನ್ನು ನಾವು ಸುಡಲಾರೆವು. ಬೆಂಕಿ ಬೆಂಕಿಯನ್ನು ಸುಡುತ್ತದೆಯೋ? ಕಾಮ ಇಲ್ಲದ ಮನುಷ್ಯನಿಲ್ಲ. ಕಾಮ ಇಲ್ಲದವ ಮನುಷ್ಯನಲ್ಲ. ಕಾಮನೆಂದರೆ ಕಾಮ ಅಲ್ಲ. ಅದು ಇಚ್ಚೆ. ಇಚ್ಚೆಯನ್ನು ದಹನ ಮಾಡಿತೆಂದರೆ ಆತ್ಮನ ದಹಿಸಿದಂತೆ. ವಾಂಛೆಯು ವಕ್ರತೆಯನ್ನು ಬಿಟ್ಟು ಋಜುತ್ವದೆಡೆಗೆ ಸಾಗುವುದೇ ಕಾಮನ ಸಂದೇಶ. <
ತ್ಯಾಗ-ಭೋಗ ಸಮನ್ವಯ
ನಮ್ಮ ಪ್ರಾಚೀನರು ನಶ್ವರವಾದಿಗಳಲ್ಲ. ನೈಸರ್ಗಿಕವಾದ ಲೈಂಗಿಕ ಬಯಕೆ, ಸ್ತ್ರೀ-ಪುರುಷರ ಸಂಬಂಧದ ಬಗೆಗೆ ಅವಾಸ್ತವವಾದಿಗಳಾಗಿರುವುದಕ್ಕಿಂತ ಯಥಾರ್ಥವಾದಿಗಳಾಗಿರುವುದರಲ್ಲಿ ಹೆಚ್ಚಿನ ಕ್ಷೇಮ ಕಂಡುಕೊಂಡರು. ಅದರಿಂದಾಗಿ ಸಂಸಾರ, ಕಾಮ, ಗೃಹಸ್ಥಾಶ್ರಮ, ಲೈಂಗಿಕತೆ ಯಾವುದೂ ಅವರ ದೃಷ್ಟಿಯಲ್ಲಿ ಆತ್ಮೋದ್ಧಾರಕ್ಕೆ ಮುಳುವಲ್ಲ. ಒಟ್ಟಿನಲ್ಲಿ ವೀರ ವಿರಕ್ತಿಯನ್ನು, ಇಂದ್ರಿಯ ನಿಗ್ರಹವನ್ನು, ಬದುಕಿನ ಕ್ಷಣ ಭಂಗುರತೆಯನ್ನು ಬೋಧಿಸುವ ಗೊಡವೆಗೆ ಹೋಗದೆ ಸಂಸಾರ ಭೋಗದಲ್ಲಿ ಉಳಿದೆಲ್ಲ ನೈಸರ್ಗಿಕ ಪ್ರವೃತ್ತಿಗಳ ಬಯಕೆಯಲ್ಲಿ ತ್ಯಾಗ- ಭೋಗ ಸಮನ್ವಯವನ್ನು ಅವರು ಒಪ್ಪಿಕೊಂಡರು. ಇದರ ಸಂಕೇತವಾಗಿ ಕಾಮನಹಬ್ಬವನ್ನು ಆಚರಿಸಲಾಗುತ್ತದೆ. ಪುರುಷನು ಒಬ್ಬಂಟಿಯಾಗಿದ್ದನು, ಆದ್ದರಿಂದ ಭೋಗಕ್ಕೆ ಅವಕಾಶವಿರಲಿಲ್ಲ. ಹೆಣ್ಣು- ಗಂಡು ಎರಡೂ ಅವನಲ್ಲಿ ಒಂದಾಗಿದ್ದವು. ಆ ಬಿಂದು ಎರಡಾಗಿ ಒಡೆದು ಪತಿ- ಪತ್ನಿಯರಾದರು. ಅವರ ಭೋಗದಿಂದ ಸೃಷ್ಟಿಯಾಯಿತು ಎಂಬ ಮಾತನ್ನು ಬೃಹದಾರಣ್ಯಕ ಉಪನಿಷತ್ತಿನ ಮಂತ್ರದಲ್ಲಿ ಕಾಣುತ್ತೇವೆ. ಇದು ಬರಿ ಪುರಾಣದಲ್ಲಷ್ಟೆ ಅಲ್ಲ ಗಿರಿಜಾ ಕಲ್ಯಾಣದಲ್ಲಿ, ಕುಮಾರ ಸಂಭವಗಳಲ್ಲಿಯೂ ಬರುತ್ತದೆ.
- ಗುರುರಾಜ ಪೋಶೆಟ್ಟಿಹಳ್ಳಿ