ಅಶ್ವಿನಿ ಮೊದಲಾದಿ ರೇವತೀ ಪರ್ಯಂತ ಯಾವುದಾದರೊಂದು ನಕ್ಷತ್ರದಲ್ಲಿ ಜನಿಸುವ ಜಾತಕ ಆಯಾ ನಕ್ಷತ್ರಗಳಲ್ಲಿ ಜನಿಸಿದ ಫಲವನ್ನು ಪ್ರತ್ಯೇಕವಾಗಿ ಅನುಭವಿಸಿಯೇ ತೀರುತ್ತಾನೆ. ವಿಶೇಷವೆಂದರೆ ನಾವು ಯಾವ ನಕ್ಷತ್ರಗಳಲ್ಲಿ ಜನಿಸಿರುತ್ತೇವೆಯೋ ಆಯಾ ನಕ್ಷತ್ರಗಳ ಗುಣ ಧರ್ಮ ನಮ್ಮಲ್ಲಿ ಕಾಣಬಹುದು. ಹೀಗಿರುವಾಗ ಕೆಲವು ನಕ್ಷತ್ರಗಳಿಗೆ ಉತ್ತಮ ಫಲ ಹೇಳಿದಂತೆ ಮತ್ತೆ ಕೆಲವು ನಕ್ಷತ್ರಗಳಿಗೆ ಕೆಟ್ಟ ಫಲಗಳನ್ನೂ ಹೇಳಿರುತ್ತಾರೆ. ಶಾಸ್ತ್ರಗಳಲ್ಲಿ ಹೇಳಿದಂತೆ ಹುಟ್ಟಿದ ಮೇಲೆ ಶಾಂತಿ ಹವನ ಮಾಡಿಸಲೇಬೇಕಾದ ಕೆಲವು ನಕ್ಷತ್ರಗಳಲ್ಲಿ ಅತ್ಯಂತ ಪ್ರಮುಖವಾದುದು ಈ ಆಶ್ಲೇಷಾ ನಕ್ಷತ್ರ.
ನಕ್ಷತ್ರ ಪ್ರಕರಣಗಳಲ್ಲಿ ರಾಕ್ಷಸ ಗಣಕ್ಕೆ ಸೇರುವ ಈ ನಕ್ಷತ್ರ ತೀಕ್ಷ್ಣ ಗುಣದೊಂದಿಗೆ ಅಧೋಮುಖವಾಗಿ ಮಂದ ದೃಷ್ಟಿ ಉಳ್ಳದ್ದು. ವೇದಗಳಲ್ಲಿ ಯಜುರ್ವೇದದ ಸಂಹಿತಾ ನಾಲ್ಕನೇಯ ಕಾಂಡದಲ್ಲಿ ಆಶ್ಲೇಷಾ ನಕ್ಷತ್ರಗ್‌ಂ ಸರ್ಪ ದೇವತಾ... ಎಂದು ತಿಳಿಸಿದಂತೆ ಆಶ್ಲೇಷಾ ನಕ್ಷತ್ರಕ್ಕೆ ಸರ್ಪ(ನಾಗ) ದೇವತೆಯಾಗಿರುತ್ತದೆ. ಆಶ್ಲೇಷಾ ನಕ್ಷತ್ರದ ನಾಲ್ಕೂ ಪಾದ ಕರ್ಕ ರಾಶಿಗೆ ಸೇರಿದ್ದು ಚಂದ್ರ ರಾಶ್ಯಾಧಿಪತಿ ಆಗಿರುತ್ತಾನೆ.
ಆಶ್ಲೇಷಾ ನಕ್ಷತ್ರದವರು ಸ್ವಭಾವತಃ ಅತ್ಯಂತ ಕೋಪಿಷ್ಟರಂತೆ ವರ್ತಿಸುತ್ತಾರೆ. ತಾವು ಇತರರೊಂದಿಗೆ ಮಾಡುವ ಎಲ್ಲಾ ವ್ಯವಹಾರಗಳು ಹಾಗೂ ತಮ್ಮೊಂದಿಗೆ ಬೇರೆಯವರು ಮಾಡುವ ಎಲ್ಲಾ ವ್ಯವಹಾರಗಳು ಶಿಸ್ತು ಬದ್ಧವಾಗಿರಬೇಕೆಂದು ಬಯಸಿ ಆ ವಿಚಾರದಲ್ಲಿ ಸ್ವಲ್ಪ ಹೆಚ್ಚು ಹಠ ಸಾಧಿಸುತ್ತಾರೆ.
ಆಶ್ಲೇಷಾ ನಕ್ಷತ್ರದವರು ಕರ್ಕ ರಾಶಿಗೆ ಸೇರುವುದರಿಂದ ಸಪ್ತಮಾಧಿಪತಿ ಶನೈಶ್ಚರ. ಇವರ ಜಾತಕದಲ್ಲಿ ಶನೈಶ್ಚರ ಗ್ರಹಮಿತ್ರ ರಾಶಿಯಲ್ಲಿ ಅಥವಾ ಉಚ್ಚ ಸ್ಥಿತಿಯಲ್ಲಿ ಇಲ್ಲದಿದ್ದರೆ ಬಾಳಸಂಗಾತಿಯೊಂದಿಗೆ ಸುಖಕರವಾಗಿ ಜೀವನ ಸಾಗಿಸುವುದು ಇವರಿಗೆ ಕೆಲವು ಬಾರಿ ಕಷ್ಟಕರ. ಹಣ ಹಾಗೂ ಕೀರ್ತಿಯ ವಿಚಾರದಲ್ಲಿ ಆಸೆ ಇದ್ದರೂ ಹೊರ ಪ್ರಪಂಚಕ್ಕೆ ಅದನ್ನು ತೋರ್ಪಡಿಸುವುದಿಲ್ಲ. ಹಣದ ಖರ್ಚಿನ ವಿಚಾರದಲ್ಲೂ ಸಹ ಕೆಲವೊಮ್ಮೆ ಧಾರಾಳತೆ ಇದ್ದರೂ ಕೆಲವೊಮ್ಮೆ ಅತಿ ಜಿಪುಣರಂತೆ ವರ್ತಿಸುತ್ತಾರೆ.
ಆಶ್ಲೇಷಾ ನಕ್ಷತ್ರದವರಿಗೆ ಬುಧ ರಾಶ್ಯಾನುಸಾರ ವ್ಯಯಾಧಿಪತಿಯೂ ಆಗಿರುತ್ತಾನೆ, ಆದ್ದರಿಂದ ಇವರಿಗೆ ಮಾತಿನ ಮೇಲೆ ಹಿಡಿತ ಇರಬೇಕು. ಇಲ್ಲದಿದ್ದರೆ ಇವರ ಮಾತಿನಿಂದ ಬೇರೆಯವರ ಮನಸ್ಸಿಗೆ ಬಹಳ ನೋವುಂಟಾಗಿ ಅವರ ದೃಷ್ಟಿಯಲ್ಲಿ ಕೆಟ್ಟವರಾಗುತ್ತಾರೆ.
ಈ ನಕ್ಷತ್ರದಲ್ಲಿ ಮೆಚ್ಚಲೇ ಬೇಕಾದ ಕೆಲವು ಅಂಶಗಳಿವೆ. ಅದರಲ್ಲಿ ಪ್ರಮುಖವಾದುದು ಇವರಿಗಿರುವ ಧೈರ್ಯ. ಅತ್ಯಂತ ಧೈರ್ಯಶಾಲಿಗಳಾದ ಇವರು ಯಾವುದೇ ಕಷ್ಟಕರ ಸನ್ನಿವೇಶ ಇದ್ದರೂ, ಅದನ್ನು ಎದುರಿಸಲು ಸದಾ ಸನ್ನದ್ಧ. ಶುಕ್ರ ಇವರಿಗೆ ಲಾಭಾಧಿಪತಿಯಾಗಿರುದರಿಂದ ಲಲಿತ ಕಲೆಗಳಲ್ಲಿ ಹೆಚ್ಚಿನ ಸಾಧನೆ ಮಾಡಿರುತ್ತಾರೆ. ಆದರೆ ಇವರಿಗೆ ಸಿಗಬೇಕಾದ ತಕ್ಕ ಪ್ರಶಂಸೆಗಳಾಗಲೀ, ಪ್ರಶಸ್ತಿಗಳಾಗಲಿ ಸರಿಯಾದ ಪ್ರಮಾಣದಲ್ಲಿ ಸಿಗುವುದಿಲ್ಲ. ಹೆಚ್ಚಿನ ಪಕ್ಷ ಕಾರಣಾಂತರಗಳಿಂದ ಇವರು ಎಲೆಮರೆ ಕಾಯಿಗಳಾಗಿಯೇ ಉಳಿದು ಬಿಡುತ್ತಾರೆ.
ಆದ್ಯೇ ಪಾದೇ ಶುಭಃ- ದ್ವಿತೀಯೇ ಧನ ನಾಶಃ- ತೃತೀಯೇ ಮಾತುಃ ನಾಶಃ- ಚತುರ್ಥಿ ಪಿತುಃ- ಎಂಬ ಶಾಸ್ತ್ರ ವಾಕ್ಯದಂತೆ ಆಶ್ಲೇಷಾ ನಕ್ಷತ್ರದ ಮೊದಲ ಪಾದದಲ್ಲಿ ಹುಟ್ಟಿದ ಪಕ್ಷದಲ್ಲಿ ಶುಭವಾಗುತ್ತದೆ ಹಾಗೂ ಎರಡನೇ ಪಾದದಿಂದ ಧನ ನಾಶ ಎಂದಿದ್ದಾರೆ. ಮೂರು ಹಾಗೂ ನಾಲ್ಕನೇಯ ಪಾದಗಳಿಂದ ಕ್ರಮವಾಗಿ ತಂದೆ ಹಾಗೂ ತಾಯಿಗೆ ಅನಿಷ್ಟ ಎಂದು ಹೇಳುತ್ತಾರೆ.
ದೋಷ ನಿವಾರಣೆ
ಇನ್ನು ಈ ಎಲ್ಲಾ ದೋಷಗಳ ಪರಿಹಾರವಾಗಿ ವೇದ ಶಾಸ್ತ್ರಗಳಲ್ಲಿ ಹೇಳಿದಂತೆ ದೋಷ ನಿವಾರಣೆ ಮಾಡಬಲ್ಲ ಶಾಂತಿ ಹವನ ಎಂದರೆ ಗೋಮುಖ ಪ್ರಸವ ಶಾಂತಿ ಪೂರ್ವಕವಾಗಿ ಆಶ್ಲೇಷಾ ನಕ್ಷತ್ರ ಜನನ ಶಾಂತಿ ಹವನ ಮಾಡಿಸಬೇಕು.
ಶಾಸ್ತ್ರದಲ್ಲಿ ತಿಳಿಸಿದಂತೆ ಕ್ರಮಬದ್ಧವಾಗಿ ಭಕ್ತಿ ಪೂರ್ವಕ ಶಾಂತಿ ಪರಿಹಾರಗಳನ್ನು ಮಾಡಿಸಿದ ಪಕ್ಷದಲ್ಲಿ ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದ ಎಲ್ಲ ಕೆಟ್ಟ ಪರಿಣಾಮಗಳಿಂದ ದೂರವಾಗಿ ಸುಖವಾಗಿ ಜೀವನ ನಡೆಸಬಹುದು. ಮಾಹಿತಿಗೆ ಮೊ. 9743331250 <
- ವಿಠ್ಠಲ್ ಭಟ್