ಇಂದು ಅಕ್ವೇರಿಯಂ ಅನ್ನು ಹಲವು ಮನೆಗಳಲ್ಲಿ ಕಾಣಬಹುದು. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಅಲೆದಾಡುವ ಬಣ್ಣ ಬಣ್ಣದ ಮೀನುಗಳನ್ನು ನೋಡುವುದೇ ಒಂದು ಮನಸ್ಸಿಗೆ ಸಂತೋಷ. ಅದರಲ್ಲೂ ಸಣ್ಣ ಸಣ್ಣ ಮಕ್ಕಳಿಗಂತೂ ಬಲು ಆಸೆ. ಒಣ ಬಣ್ಣದ ಮೀನು ಇರುವ ಪಾರದರ್ಶಕ ಗಾಜಿನ ಪೆಟ್ಟಿಗೆ ನೋಡಿದಾಗ ಯಾರಿಗಾದರೂ ಸಂತೋಷ ಕೊಡದೆ ಇರದು. ಈ ಅಕ್ವೇರಿಯಂನ್ನು ರೋಮನ್ನರು ಮೊದಲು ಪ್ರಾರಂಭಿಸಿದರು ಎಂದು ಇತಿಹಾಸ ಹೇಳುತ್ತದೆ.
ಅಕ್ವೇರಿಯಂನಿಂದ ಏನು ಅನುಕೂಲ?
ಅಕ್ವೇರಿಯಂನ್ನು ಮನೆಯಲ್ಲಿ ಇಡುವುದರಿಂದ ಮತ್ತು ಮಕ್ಕಳು ನೋಡುವುದರಿಂದ ಅವರ ಕ್ರಿಯಾಶೀಲತೆ ಹೆಚ್ಚುತ್ತದೆ. ಮಕ್ಕಳ ಮನಸ್ಸಿನಲ್ಲಿ ಪ್ರಶಾಂತ ಭಾವನೆ ಹಾಗೂ ಚುರುಕುತನ ಹೆಚ್ಚಾಗುತ್ತದೆ. ಹೀಗಾಗಿ ಅಕ್ವೇರಿಯಂ ಮನಸ್ಸಿನ ಬೇಸರ ಹಾಗೂ ಒಂಟಿತನವನ್ನು ದೂರ ಮಾಡುತ್ತದೆ.
ಮನೆಯಲ್ಲಿ ವಾಸ್ತು ದೋಷ ಇದ್ದರೆ ಪರಿಹಾರವಾಗುತ್ತದೆ. ಕಚೇರಿಗಳಲ್ಲಿ ಅಕ್ವೇರಿಯಂ ಇಡುವುದರಿಂದ ಅಂದ ಚಂದ ಹೆಚ್ಚುವುದು. ಮಾನವನ ಮನಸ್ಸನ್ನು ಮೀನಿಗೆ ಹೋಲಿಸುತ್ತಾರೆ. ಏಕೆಂದರೆ ಮನಸ್ಸು ಚಂಚಲ ಎಂದು. ಯಾರ ಮನಸ್ಸು ಚಂಚಲವಾಗಿರುವುದೋ ಅವರು ಈ ಅಕ್ವೇರಿಯಂ ಅನ್ನು ಪ್ರತಿದಿನ 10-15 ನಿಮಿಷಗಳ ಕಾಲ ನೋಡಿದರೆ ಮನಸ್ಸು ಸ್ಥಿರವಾಗುವುದು.
ಚಂದ್ರಗ್ರಹ ಮನಃಕಾರಕ ಹಾಗೂ ಜಲತತ್ವ. ಯಾರ ಜಾತಕದಲ್ಲಿ ಚಂದ್ರ ಗ್ರಹ ಪಾಪಗ್ರಹದ ದೃಷ್ಟಿಗೆ ಒಳಪಟ್ಟಿದ್ದರೆ ಅಥವಾ ಪಾಪಗ್ರಹಗಳ ಜೊತೆಯಲ್ಲಿದ್ದರೆ ಅಂಥವರು ಈ ಅಕ್ವೇರಿಯಂ ಅನ್ನು ಪ್ರತಿದಿನ 10-15 ನಿಮಿಷ ಏಕಾಗ್ರತೆಯಿಂದ ನೋಡಿದಾಗ ಮನಸ್ಸಿನಲ್ಲಿ ಆಗುವ ಗೊಂದಲ ನಿವಾರಣೆ ಆಗುವುದು.
ಅಕ್ವೇರಿಯಂ ಅನ್ನು ಮನೆಯ ಅಗ್ನಿಮೂಲೆಯಲ್ಲಿ ಇಡಬಾರದು. ಮನೆಯ ಕೋಣೆ, ಮಕ್ಕಳು ಓದುವ ಕೋಣೆಯಲ್ಲಿ ಇಡಬಹುದು.
ಯಾವ ಬಣ್ಣದ ಮೀನು ಒಳ್ಳೆಯದು?
ಮೇಷ ರಾಶಿಯವರು:- ಕೆಂಪು, ಹಳದಿ ಹಾಗೂ ಕೇಸರಿ ಬಣ್ಣದ ಮೀನನ್ನು ಸಾಕಬಹುದು. ವೃಷಭ:- ಬಿಳಿ, ಹಸಿರು ಹಾಗೂ ಕಪ್ಪು ಬಣ್ಣದ ಮೀನು, ಮಿಥುನ ರಾಶಿಯವರು:- ಕೆಂಪು, ಹಚ್ಚಹಸಿರು ಬಣ್ಣದ ಮೀನು, ಕಟಕ ರಾಶಿಯವರು:- ಬಿಳಿ, ಕೆಂಪು ಹಳದಿ ಬಣ್ಣದ ಮೀನು, ಸಿಂಹ ರಾಶಿಯವರು:- ಕೆಂಪು, ಹಳದಿ, ಬಿಳಿ, ಕೇಸರಿ ಬಣ್ಣದ ಮೀನು, ಕನ್ಯಾ ರಾಶಿಯವರು:- ಕೆಂಪು, ಹಸಿರು ಬಣ್ಣದ ಮೀನು, ತುಲಾ ರಾಶಿಯವರು:- ಬಿಳಿ, ಹಸಿರು, ಕಪ್ಪು ಬಣ್ಣದ ಮೀನನ್ನು ಸಾಕಬಹುದು.
ವೃಶ್ಚಿಕ ರಾಶಿಯವರು:- ಕೆಂಪು, ಹಳದಿ, ಕೇಸರಿ ಬಣ್ಣದ ಮೀನು, ಧನು ರಾಶಿಯವರು:- ಹಳದಿ, ಕೆಂಪು, ಕೇಸರಿ ಬಣ್ಣದ ಮೀನು, ಮಕರ ರಾಶಿಯವರು:- ನೀಲಿ, ಹಸಿರು, ಹಳದಿ ಬಣ್ಣದ ಮೀನು, ಕುಂಭ ರಾಶಿಯವರು:- ನೀಲಿ, ಹಸಿರು, ಹಳದಿ ಬಣ್ಣದ ಮೀನು ಹಾಗೂ ಮೀನ ರಾಶಿಯವರು: ಹಳದಿ, ಕೆಂಪು, ಕೇಸರಿ ಬಣ್ಣದ ಮೀನುಗಳನ್ನು ಸಾಕಬಹುದು.
- ಮಂಡಗದ್ದೆ ಪ್ರಕಾಶಬಾಬು