ಏಕಾಗ್ರತೆಯ ಮನಸ್ಸಿನಿಂದ ನಿಯಮಬದ್ಧ ಅಭ್ಯಾಸ ರೂಢಿಸಿಕೊಂಡ ವ್ಯಕ್ತಿ ಬಹಳ ಎತ್ತರದಲ್ಲಿ ನಿಲ್ಲುತ್ತಾನೆ. ನೀಗ್ರೋ ಜನಾಂಗದ ಮಹಾನಾಯಕ ಬೂಕರ್ ಟಿ. ವಾಷಿಂಗ್ಟನ್ ಅಂಥ ಎತ್ತರದ ವ್ಯಕ್ತಿ. ಆತನ ಸಾಧನೆ, ಗಳಿಸಿದ ಯಶಸ್ಸು ಮತ್ತು ಪ್ರಗತಿಯನ್ನು ಅಭಿವೃದ್ಧಿ ಬಯಸುವ ಎಲ್ಲಾ ದೇಶಗಳೂ ಅರಿತುಕೊಳ್ಳಬೇಕು.
ಗುಲಾಮಗಿರಿಯ ಉಸಿರುಗಟ್ಟಿಸುವ ಕೊಳಚೆ ವಾತಾವರಣದಲ್ಲಿ ಹುಟ್ಟಿದ, ಬಿಳಿಯ ಜನಾಂಗದ ಕುಹಕ, ನಿಂದನೆಗಳಿಗೆ ಗುರಿಯಾಗುತ್ತ ಬೆಳೆದ ವಾಷಿಂಗ್ಟನ್ನನ್ನಿಗೆ ಕಲಿಯಬೇಕೆನ್ನುವ ಆಸೆ ತೀವ್ರವಾಗಿತ್ತು. ಅದಕ್ಕಾಗಿ ಕಡು ಬಡತದನ ಬೇಗೆ, ದುಮ್ಮಾನಗಳ ನಡುವೆಯೂ ಆಸಕ್ತಿ ಕಳೆದುಕೊಳ್ಳಲಿಲ್ಲ ಆತ. ಅವನ ಶ್ರಮಕ್ಕೆ ತಕ್ಕ ಫಲ ದೊರೆಯಿತು. ವಿಶ್ವದಲ್ಲೇ ಅತ್ಯಂತ ಗೌರವಾನ್ವಿತ ವ್ಯಕ್ತಿ ಎನಿಸಿಕೊಂಡ. ಕೆಳವರ್ಗದವರ ಉದ್ಧಾರ ಮಾಡಿದ.
ಹಲವರಿಗೆ ಸ್ಫೂರ್ತಿ
ಸ್ವ ಪ್ರಯತ್ನ, ಸ್ವಾವಲಂಬನೆ, ಸಾಹಸ, ಉದ್ಯಮಶೀಲತೆಗಳಳನ್ನು ಅಳವಡಿಸಿಕೊಳ್ಳಲು ಜನರಿಗೆ ಕರೆ ಕೊಟ್ಟ. ವ್ಯಕ್ತಿ ತನ್ನ ಜೀವನದ ಪ್ರತಿ ದಿನವನ್ನೂ ಅತ್ಯುತ್ತಮ ರೀತಿಯಲ್ಲಿ ಕಳೆಯಬೇಕು. ಪವಿತ್ರತೆ, ನಿಸ್ವಾರ್ಥತೆ ಮತ್ತು ಉಪಯುಕ್ತತೆಯ ಪರಮಾವಧಿಯನ್ನು ಮುಟ್ಟುವ ರೀತಿಯಲ್ಲಿ ದುಡಿಯಬೇಕು. ಜೀವನ ಅನಿರೀಕ್ಷಿತ ಪ್ರೋತ್ಸಾಹದಿಂದ ತುಂಬಿರುತ್ತದೆ ಎಂದು ಆತ ನಂಬಿದ್ದ. ಅವನು ಕೀರ್ತಿಗಾಗಿ ಎಂದೂ ಹಾತೊರೆಯಲಿಲ್ಲ.
ವಾಷಿಂಗ್ಟನ್ ಗುಲಾಮರ ಏಳಿಗೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ. ಆದ್ದರಿಂದ ಕೀರ್ತಿ, ಪ್ರತಿಷ್ಠೆಗಳು ತಾವಾಗಿಯೇ ಆತನನ್ನು ಹುಡುಕಿಕೊಂಡು ಬಂದವು. ಸಾಮಾನ್ಯ ಜನರನ್ನು ಮೇಲೆತ್ತಲೂ ಸಹಾಯ ಮಾಡುವುದೇ ನಿಜವಾದ ವಿದ್ಯಾಭ್ಯಾಸ ಎಂದು ಆತ ಪ್ರತಿಪಾದಿಸಿದ. ಟಸ್ಕಗಿ ಎಂಬಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಲೋಕಕ್ಕೆ ಮೆಚ್ಚುಗೆಯಾದ. ತನ್ನ ಜನಾಂಗವನ್ನು ಗುಲಾಮಗಿರಿಗೆ ತಳ್ಳಿದ ಬಿಳಿಯರ ಕುರಿತು ಅವನೆಂದೂ ಕಹಿಭಾವನೆ ತಾಳಲಿಲ್ಲ. ಕೇವಲ ಉಪದೇಶ ಮತ್ತು ಸಿದ್ಧಾಂತದ ಮಾತುಗಳು ಆತನಿಗೆ ಹಿಡಿಸುತ್ತಿರಲಿಲ್ಲ. ಅವನ ಜೀವನ ಮತ್ತು ಸಾಧನೆಗಳು ಎಲ್ಲಾ ಕಾಲಕ್ಕೂ, ಎಲ್ಲ ದೇಶಗಳಿಗೂ ಮಾದರಿ. ಒಬ್ಬ ವ್ಯಕ್ತಿ ಸಮಾಜದ ಇತರರ ಅವಶ್ಯಕತೆಗಳನ್ನು ಪೂರೈಸಲು ಹೇಗೆ ನೆರವಾಗಬಲ್ಲನೆಂಬುದಕ್ಕೆ ಬೂಕರ್ ಟಿ. ವಾಷಿಂಗ್ಟನ್ ಅತ್ಯುತ್ತಮ ನಿದರ್ಶನ. ಇಂಥ ಮಹಾವ್ಯಕ್ತಿಗಳು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅನುಸರಿಸುವುದರಿಂದ, ಅವರನ್ನು ಅರ್ಥಮಾಡಿಕೊಳ್ಳುವುದರಿಂದ, ವ್ಯಕ್ತಿ ಮತ್ತು ಸಮಾಜದ ಬಾಧ್ಯತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
- ಶಿವರಾಮ ಭಟ್ ಹತ್ತೊಕ್ಕಲು