ಅಷ್ಟಾದಶ ಪುರಾಣಗಳಲ್ಲಿ ಲಕ್ಷ ಶ್ಲೋಕಗಳನ್ನೊಳಗೊಂಡ ಬೃಹತ್ ಗಾತ್ರವುಳ್ಳದ್ದು ಈ ಸ್ಕಂದಪುರಾಣ ಅಥವಾ ಸ್ಕಾಂದ ಪುರಾಣ.
ಪ್ರಥಮದಲ್ಲಿ ಈ ಪುರಾಣವನ್ನು ಶಂಕರ ಭಗವಾನನು ಕೈಲಾಸದಲ್ಲಿ ಬ್ರಹ್ಮಾದಿ ಸಕಲ ದೇವತೆಗಳು ಸೇರಿದ್ದ ಸಭೆಯಲ್ಲಿ ಹೇಳಿದನು. ಜಗನ್ಮಾತೆಯಾದ ಪಾರ್ವತಿ ಅದನ್ನು ಪುತ್ರ ಕುಮಾರಸ್ವಾಮಿಗೆ ಹೇಳಿದಳು. ಸ್ಕಂದ ಷಣ್ಮುಗ, ಕಾರ್ತಿಕೇಯ, ಮುರುಗ ಮತ್ತಿತರ ನಾಮಗಳುಳ್ಳ ದೇವಸೇನಾಧಿಪತಿಯಾದ ಸುಬ್ರಹ್ಮಣ್ಯ ಸ್ವಾಮಿ ಇದನ್ನು ನಂದಿ ಹಾಗೂ ಶಿವಗಣಗಳಿಗೆ ಹೇಳಿದನು.
ನಂದಿ ದತ್ತಾತ್ರೇಯನಿಗೆ, ದತ್ತಾತ್ರೇಯನು ವ್ಯಾಸ ಮಹಾಮುನಿಗೆ, ವ್ಯಾಸ ಸೂತಪುರಾಣಿಕನಿಗೆ, ಸೂತ ಮುನಿಯು ಶೌನಕಾದಿ ಮುನಿಗಳಿಗೆ ಹೇಳಿದನು. ಇದು ವಿಶೇಷವಾಗಿ ಸ್ಕಂದನಿಂದ ಹೇಳಲ್ಪಟ್ಟ ಪುರಾಣವಾದ್ದರಿಂದ, ಸ್ಕಾಂದ ಪುರಾಣವೆಂದು ಪ್ರಸಿದ್ಧಿಯಾಯಿತು.
ಇದರಲ್ಲಿ ಸುಬ್ರಹ್ಮಣ್ಯನ ಜನನ, ಅವತಾರದ ಉದ್ದೇಶ, ಸಾಧನೆಗಳು ವರ್ಣಿತವಾಗಿದೆ. ಇದರಲ್ಲಿ ನೂರಾರು ದೃಷ್ಟಾಂತ ಕಥೆಗಳು, ನೀತಿ ವಚನಗಳು, ಕಾಶಿ, ಉಜ್ಜಯಿನಿ, ಹರಿದ್ವಾರ, ಪ್ರಯಾಗ, ನಾಸಿಕ್ ಆದಿಯಾಗಿ ಪ್ರಸಿದ್ಧ ಪುಣ್ಯಕ್ಷೇತ್ರಗಳ ಕಥೆ ಮತ್ತು ಐತಿಹ್ಯಗಳ ಅಭೂತಪೂರ್ವ ವರ್ಣನೆ ಇದೆ. ಮಾನವನ ಅಧ್ಯಾತ್ಮ ಸಾಧನ, ಪುರುಷ ಪ್ರಯತ್ನ, ವಿಧಿವಿಲಾಸ, ಸನ್ಮಾರ್ಗದ ಸತ್ಫಲಗಳು, ದುರಾಚಾರದ ದುಷ್ಪರಿಣಾಮಗಳು, ದೈವ ನಿಷ್ಠೆ, ಸತ್ಯ ನಿಷ್ಠೆ, ಪರೋಪಕಾರದ ಪರಿಣ್ಮಗಳು, ಕಪಟ, ಕ್ರೌರ್ಯ, ನೀಚಕರ್ಮಗಳ ಪರಿಣಾಮಗಳು, ಇತ್ಯಾದಿ ನಿರೂಪಣೆಗಳು ಅಸಂಖ್ಯವಾಗಿವೆ.
ಸ್ಕಾಂದ ಪುರಾಣದಲ್ಲಿ ಮನುಕುಲ ನಡೆದು ಬಂದ ದಾರಿ, ಭಾರತದ ರಾಜರ್ಷಿ, ಬ್ರಹ್ಮರ್ಷಿಗಳೆನಿಸಿದ ರಾಜ ಮಹಾರಾಜರ ನೂರಾರು ಕಥೆಗಳಿವೆ. ಅದರಂತೆ ಸಾಮಾನ್ಯ ಮಾನವರು ಜನನ- ಮರಣಗಳ ಸಂಕೋಲೆಯಲ್ಲಿ ಬೀಳಲು ಕಾರಣ, ಜೀವನದ ಹೋರಾಟ, ದುರ್ಮಾರ್ಗದಲ್ಲಿ ಸಾಗಿದರೆ ಆಗುವ ಅಪಾಯ, ಹಾಗೆಯೇ ಮನುಷ್ಯ ತನ್ನ ಉದ್ಧಾರಕ್ಕೆ ಮತ್ತು ಜನ್ಮ- ಮೃತ್ಯುವಿನಿಂದ ಬಿಡುಗಡೆಯನ್ನು ಹೊಂದಿ ಮುಕ್ತ ಮಂದಿರಕ್ಕೆ ತೆರಳಲು ಅನುಸರಿಸಬೇಕಾದ ಉಪಾಯಗಳ ಭಂಡಾರವೇ ಇದೆ.
ಮಾನವ ಸತ್ಯಮಾರ್ಗ, ಸತ್ಪಥದಲ್ಲಿ ಸಾಗಿ ಕೈವಲ್ಯವನ್ನು ತಲುಪುವ ವಿವರಣೆ ಇದೆ. ಇವೆಲ್ಲ ವಿಚಾರಗಳು ಕಥೆ, ಉಪಕಥೆ, ಉಪಾಖ್ಯಾನಗಳ ರೂಪದಲ್ಲಿರುವುದು ವಿಶೇಷವೆನಿಸುತ್ತದೆ. ಈ ಪುರಾಣವು ಆರು ಮುಖ್ಯ ಕಾಂಡಗಳನ್ನು ಹೊಂದಿದ್ದು, ಇವನ್ನು 'ಸಂಹಿತೆ'ಗಳೆನ್ನುವರು. ಇದರಲ್ಲಿ ಸುಧಾಸಮುದ್ರ ಮಥನದ ಕಥೆ, ತಾರಕಾಸುರನ ಕಥೆ, ಶಿವ-ಪಾರ್ವತಿಯರ ವಿವಾಹ- ಸಂಯೋಗ, ಸುಬ್ರಹ್ಮಣ್ಯ ಜನನ, ತಾರಕಾಸುರನ ಸಂಹಾರ, ದೇವಯಾನಿ ಹಾಗೂ ವಲ್ಲಿಯರೊಂದಿಗೆ ಸ್ಕಂದಸ್ವಾಮಿಯ ವಿವಾಹ, ಶಿವನ ವಾಸಸ್ಥಾನವಾದ ಕೈಲಾಸದ ವಿವರಣೆ, ದ್ವಾದಶ ಜ್ಯೋತಿರ್ಲಿಂಗಗಳ ವಿವರಣೆ, ಸ್ವರ್ಗ- ನರಕಗಳ ವಿವರಣೆ ಮತ್ತು ಒಂದು ಸಂಹಿತೆಯಲ್ಲಿ ಶಿವ-ಪಾರ್ವತಿಯರ ಸಂವಾದ ರೂಪದ ಗುರುಗೀತೆ ಇದೆ. ಇದರಲ್ಲಿ ಸ್ವಯಂ ಶಿವನೇ ಗುರುವಿನ ಮಹತ್ವವನ್ನು ಸವಿಸ್ತಾರವಾಗಿ ಪಾರ್ವತಿಗೆ ತಿಳಿಸಿರುವ ಅಂಶವಿದೆ.
ಮಾನವನ ಸ್ಥೂಲ ಶರೀರಕ್ಕೆ ವ್ಯಾಧಿಗಳು ತೊಂದರೆಯನ್ನುಂಟು ಮಾಡುವಂತೆ, ಕಾದು ಕ್ರೋಧಾದಿ ಅರಿಷಡ್ವರ್ಗಗಳು ಸೂಕ್ಷ್ಮ ಶರೀರಕ್ಕೆ ಹೇಗೆ ತೊಂದರೆಯನ್ನುಂಟು ಮಾಡುತ್ತದೆ ಎಂಬ ಅದ್ಭುತ ನಿರೂಪಣೆವುಳ್ಳ ಶ್ಲೋಕವಿದೆ.
- ವಿ. ಕೇಶವಮೂರ್ತಿ