ಶಿಸ್ತಿಗೆ ಒಳಪಟ್ಟು ನಡೆಯುವುದರಿಂದ ಜೀವನದಲ್ಲಿ ನಮಗೆ ಉತ್ತಮವಾದುದನ್ನು ಸಾಧಿಸಲು ಸಾಧ್ಯವಾಗುತ್ತದೆ. ಶಿಸ್ತಿನಲ್ಲಿ ಸೇವೆ ಮತ್ತು ಕರ್ತವ್ಯಗಳಿರುತ್ತವೆ. ಸಮಯಪ್ರಜ್ಞೆ ಮತ್ತು ಉದ್ಯೋಗ ಶೀಲತೆಗಳಿರುತ್ತವೆ.
ತಾನು ಬದುಕಿ, ಇನ್ನೊಬ್ಬರನ್ನು ಬದುಕಿಸಬೇಕೆನ್ನುವ ಔದಾರ್ಯವಿರುತ್ತದೆ. ಮನುಷ್ಯ ಸಣ್ಣವನೋ ದೊಡ್ಡವನೋ ಎಂಬುದನ್ನು ಅವನು ತನ್ನ ಜೀವನದಲ್ಲಿ ಅಳವಡಿಸಿಕೊಂಡಿರುವ ಶಿಸ್ತಿನಿಂದ ತಿಳಿಯಬಹುದು. ಶಿಸ್ತು ಇರುವವನ ಬದುಕು ಕ್ರಮಬದ್ಧವಾಗಿದ್ದರೆ, ಅಶಿಸ್ತಿನ ಬದುಕು ಅಸ್ತವ್ಯಸ್ತ. ಶಿಸ್ತು ಇರುವವನು ವ್ಯವಸ್ಥಿತವಾಗಿ ಬದುಕುತ್ತಾನೆ. ಅವನ ಜೀವನ ಹಿತಮಿತವಾಗಿರುತ್ತದೆ.
ಶಿಸ್ತಿನ ಜೀವನ ಒಪ್ಪ ಓರಣಗಳಿಂದ, ಅಳತೆ, ಪ್ರಮಾಣಗಳಿಂದ ಕೂಡಿರುತ್ತದೆ. ತನ್ನ ಜೀವನವನ್ನು ಒಂದು ಶಿಸ್ತಿಗೆ ಒಳಪಡಿಸಿಕೊಂಡಿರುವ ಮನುಷ್ಯ ಇನ್ನೊಬ್ಬನನ್ನು ಕಡೆಗಣಿಸದೆ ಅವನನ್ನೂ ತನ್ನೊಂದಿಗೆ ಬೆಳೆಯಲು ಸಹಕರಿಸುತ್ತಾನೆ.
ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವನದ ಆರಂಭದಿಂದಲೇ ಶಿಸ್ತನ್ನು ಪಾಲಿಸಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಲಾರದು. 3 ವರ್ಷದ ಬುದ್ಧಿ ನೂರು ವರ್ಷದವರೆಗೆ ಎನ್ನುವುದು ಅನುಭವದ ಮಾತು. ವಿದ್ಯಾರ್ಥಿಯಾಗಲೀ, ಯುವಕನಾಗಲೀ, ಗೃಹಸ್ಥನಾಗಲಿ, ಜೀವನದ ಯಾವುದೇ ಅಂತಸ್ತಿನಲ್ಲಿರಲಿ ಅವನು ಶಿಸ್ತನ್ನು ಪಾಲಿಸಬೇಕು. ಹೀಗೆ ಶಿಸ್ತನ್ನು ಪ್ರತಿಯೊಬ್ಬರೂ ಪಾಲಿಸಿಕೊಂಡು ಬಂದರೆ ನಮ್ಮ ಮನೆ, ಸಮಾಜ ಮತ್ತು ರಾಷ್ಟ್ರಗಳಲ್ಲಿ ಅವ್ಯವಸ್ಥೆ ಬಹಳ ಕಡಿಮೆಯಾದೀತು. ಶಿಸ್ತಿನ ಜೀವನ ನಮ್ಮ ಬದುಕಿಗೆ ಹೊಸ ಬೆಳಕನ್ನು ಕೊಡುತ್ತದೆ.
ದೇಹ ನಿಯಂತ್ರಣವೂ ನಮ್ಮ ಮನಸ್ಸಿನ ಹತೋಟಿಗೆ ನೆರವಾಗುತ್ತದೆ. ಶರೀರಕ್ಕೂ, ಮನಸ್ಸಿಗೂ ನಿಕಟ ಸಂಬಂಧ ಇರುವುದರಿಂದ ನಮ್ಮ ಯೋಗಿಗಳು ಹಲವು ವಿಧದ ಆಸನ, ಪ್ರಾಣಾಯಾಮ ಪದ್ಧತಿಗಳನ್ನೂ ರಚಿಸಿಕೊಟ್ಟಿದ್ದಾರೆ.
ಶಿಸ್ತು ಅಥವಾ ನಿಯಂತ್ರಣ ನಮ್ಮ ನಾಡಿನ ಸಂಜೀವನ ಶಕ್ತಿ. ಇದನ್ನು ಬೆಳೆಸಿದರೆ ನಾಡು ಬೆಳೆಯುತ್ತದೆ. ಇದನ್ನು ಕಡೆಗಣಿಸಿದರೆ ನಮ್ಮ ಭವಿಷ್ಯ ಮಸುಕಾಗುತ್ತದೆ. ಶಿಸ್ತಿನ ವಾತಾವರಣದಲ್ಲಿ ಅನೇಕ ರಚನಾತ್ಮಕ ಕಾರ್ಯಗಳು ನಡೆಯುತ್ತಿರುತ್ತವೆ. ಶಿಸ್ತು ಭಯಕಾರಕವಲ್ಲ. ತಾಯಿಗೆ ಶಿಸ್ತು ತಿಳಿದಿರದಿದ್ದರೆ ಮುಂದೆ ಮಕ್ಕಳ ಬಾಳು ಬಹು ದುರ್ಭರವಾಗುತ್ತದೆ. 'ತನ್ನ ವ್ಯಕ್ತಿತ್ವವನ್ನೇ ಬದಿಗೊತ್ತಿ ಆಯಾಯಾ ಸನ್ನಿವೇಶಗಳಲ್ಲಿ ಸಾಮೂಹಿಕ ಪ್ರತಿಭಟನೆ ನಡೆಸುವುದೇ ಶಿಸ್ತು' ಎಂದಿದ್ದಾರೆ ಗಾಂಧೀಜಿ.