ತುಳಸೀ ದೇವಿ ವಿಷ್ಣು ಪ್ರಿಯೆ. ತುಳಸೀ ಗಿಡದ ಮಹತ್ವ ಅಪಾರವಾದುದು. ಯಾರ ಮನೆಯಲ್ಲಿ ತುಳಸೀ ಗಿಡವಿದ್ದು, ಅದನ್ನು ಭಕ್ತಿಯಿಂದ ಪ್ರತಿದಿನ ಪೂಜಿಸಲ್ಪಡುತ್ತದೊ, ಆ ಮನೆಯಲ್ಲಿ ವಾಸ್ತು ದೋಷ ಪರಿಹಾರವಾಗಿ ಸುಖ ಸಂತೋಷ ನೆಲೆಯಾಗುತ್ತದೆ ಎಂಬುದು ಅನುಭವಸ್ಥರ ಮಾತು.
'ನಮಸ್ತುಲಸಿ ಕಲ್ಯಾಣಿ, ನಮೋ ವಿಷ್ಣುಪ್ರಿಯೇ ಶುಭೇ||
ನಮೋ ಮೋಕ್ಷಪ್ರದೇ ದೇವಿ, ನಮಃ ಸಂಪತ್ ಪ್ರದಾಯಿನಿ॥' ಎಂಬುದು ತುಳಸಿಯ ಬಗೆಗಿನ ಪ್ರಸಿದ್ಧ ಶ್ಲೋಕ.
ಅಂದರೆ ಮಂಗಳಕಾರಕಳೂ, ವಿಷ್ಣುವಿಗೆ ಪ್ರಿಯಳಾದವಳೂ, ಶುಭಪ್ರದಳೂ, ಮೋಕ್ಷಪ್ರದಳೂ, ಸಂಪತ್ತನ್ನು ಅನುಗ್ರಹಿಸುವಳೂ ಆದ ತುಳಸೀ ಮಾತೆಗೆ ನನ್ನ ನಮಸ್ಕಾರಗಳು ಎಂದು ಅರ್ಥ.
ಸಮುದ್ರ ಮಥನ ಕಾಲದಲ್ಲಿ ದೇವತೆಗಳಿಗೆ ವಿಷ್ಣು ಮೋಹಿನಿ ರೂಪದಿಂದ ಪ್ರತ್ಯಕ್ಷನಾಗಿ ಅಮೃತ ಹಂಚಿ, ಅವರನ್ನು ಅಮರರನ್ನಾಗಿಸಿದ ನಂತರ ಅವನ ಉದ್ದೇಶ ಸಾಫಲ್ಯವಾಗಿ, ಆನಂದ ಬಾಷ್ಪವು ನೇತ್ರಗಳಿಂದ ಉದುರಿದಾಗ ಆ ಸಂದರ್ಭದಲ್ಲಿ ಹುಟ್ಟಿದವಳೇ ತುಳಸೀ ದೇವಿ ಎಂಬುದು ಪ್ರತೀತಿ. ಆದ್ದರಿಂದ ತುಳಸೀ ವಿಷ್ಣು ಪ್ರಿಯೆಯಾಗಿ, ಆನಂದ ಭರಿತಳಾಗಿ, ಎಲ್ಲರಿಗೂ ಮೋಕ್ಷ ಪ್ರದಳಾಗಿರುವುದರಿಂದ ಎಲ್ಲರ ಮನೆಯಲ್ಲಿ ತುಳಸೀ ಮಾತೆಯನ್ನು ಸ್ಥಾಪಿಸಿ ಪೂಜೆ ಮಾಡುವುದರಿಂದ ವಾಸ್ತು ದೋಷ ನಿವಾರಿಸಿಕೊಳ್ಳಬಹುದು.
ಈ ಮೇಲಿನ ಸನ್ನಿಧಾನಗಳಿರುವ ತುಳಸೀ ಗಿಡವನ್ನು ಯಾವ ಮನೆಯಲ್ಲಿ ಪ್ರತಿಷ್ಠಾಪಿಸಿ, ಭಕ್ತಿಯಿಂದ ಪೂಜಿಸಲ್ಪಡುತ್ತದೋ ಆ ಮನೆಯಲ್ಲಿ ವಾಸ್ತು ದೋಷ ಎಂದರೆ, ಗ್ರಹಗಳ ದೋಷ, ಭೂತ ಪ್ರೇತ ಪಿಶಾಚಿ, ಬ್ರಹ್ಮ ರಾಕ್ಷಸ, ಭೂತಗಣಗಳ ಕಾಟ ಹಾಗೂ ವಾಸ್ತು ಬದ್ಧವಾಗಿ ನಿರ್ಮಿಸದೇ ಇರುವ ಗೃಹಗಳ ದೋಷ ನಿವಾರಣೆಯಾಗಿ ಶಾಂತಿ ನೆಲೆಸುತ್ತದೆ.
ಎಲ್ಲಿ ನೆಡಬೇಕು?
ತುಳಸೀ ಗಿಡವನ್ನು ಈಶಾನ್ಯ ದಿಕ್ಕು, ಉತ್ತರ ದಿಕ್ಕಿನಲ್ಲಿಡದೇ, ದಕ್ಷಿಣ ನೈರುತ್ಯದಲ್ಲಿ ಅಥವಾ ಪೂರ್ವದ ಕಡೆ ತುಳಸೀ ಕಟ್ಟೆ ನಿರ್ಮಿಸಿ ಪೂಜಿಸುವುದು ಶುಭ. ಚಾತುರ್ಮಾಸ್ಯದ ಕೊನೆ ದ್ವಾದಶೀ ಅಂದರೆ ಉತ್ಥಾನ ದ್ವಾದಶಿಯಂದು ತುಳಸೀ ಗಿಡದಲ್ಲಿ ಕೃಷ್ಣನ ವಿಗ್ರಹವಿಟ್ಟು, ತಳಿರು ತೋರಣಗಳಿಂದ ಅಲಂಕರಿಸಿ ಪೂಜಿಸಲಾಗುತ್ತದೆ. ಇದರಿಂದ ಸರ್ವದೋಷ ನಿವಾರಣೆಯಾಗುತ್ತದೆ. ಮಾಹಿತಿಗೆ: 9731906176.
- ಎಂ.ವಿ.ಸತ್ಯನಾರಾಯಣ