ಯೋಗ ಎಂಬ ಪದ ಸಂಸ್ಕೃತದ 'ಯುಜಿರ್ ಯೋಗೆ' ಎಂಬ ಧಾತುವಿನಿಂದ ಬಂದಿದೆ. ಇದಕ್ಕೆ ಸೇರಿಸುವುದು, ತೊಡಗಿಸುವುದು ಮುಂತಾದ ಅರ್ಥಗಳುಂಟು. ಮನುಷ್ಯನ ಇತಿ-ಮಿತಿ, ಲೋಪ-ದೋಷಗಳನ್ನು ನಿವಾರಿಸಿ ಪರಿಪೂರ್ಣ ವ್ಯಕ್ತಿತ್ವವಾಗಿ ರೂಪಿಸುವುದೇ ಯೋಗದ ಉದ್ದೇಶ ಎಂದು ಹೇಳಬಹುದು.
ತನ್ನನ್ನು ತಾನು ತಿಳಿಯುವುದು, ಇನ್ನೊಬ್ಬರೊಂದಿಗೆ ಒಗ್ಗಟ್ಟಿನಲ್ಲಿ ಬೆರೆಯುವುದು ಯೋಗದ ಗುರಿ. ಯೋಗ ಎನ್ನುವುದು ದೇಹ, ಮನಸ್ಸು, ಬುದ್ಧಿಗಳನ್ನು ಸಮತೂಕದಲ್ಲಿ ಸುಸಂಬದ್ಧವಾಗಿರಿಸಲು ಸಹಾಯಕವಾಗುತ್ತದೆ. ದೇಹ ಹಾಗೂ ಮನಸ್ಸಿನ ಶಕ್ತಿಯನ್ನು ಕೇಂದ್ರೀಕರಿಸುವುದು ಯೋಗಾಭ್ಯಾಸದ ತತ್ವ.
ಯೋಗ ಮತ್ತು ಪ್ರಾಣಾಯಾಮದಿಂದ ಆಲ್ಫಾ ಕಿರಣಗಳು ಅಧಿಕವಾಗುತ್ತವೆ ಎಂಬುದಕ್ಕೆ ಸಾಕಷ್ಟು ಪುರಾವೆ ದೊರೆತಿವೆ. ಮೆದುಳಿನ ಎಡಭಾಗ ತರ್ಕ, ಬುದ್ಧಿಯನ್ನು ಒಳಗೊಂಡಿದ್ದರೆ, ಬಲಭಾಗ ಸೃಜನಶೀಲತೆ, ಕಲ್ಪನಾಶಕ್ತಿಯನ್ನು ಒಳಗೊಂಡಿರುವುವು. ಈ ನಿಟ್ಟಿನಲ್ಲಿ ಯೋಗ ಮೆದುಳಿನ ಎರಡೂ ಭಾಗಗಳ ಸಾಮರ್ಥ್ಯ ಬೆಳೆಸಲು ಸಹಾಯಕ.
ಯೋಗ ಕಾರ್ಯದಕ್ಷತೆಯನ್ನು ಹೆಚ್ಚಿಸುತ್ತದೆ. 'ಯೋಗಃ ಕರ್ಮಸು ಕೌಶಲಮ್', 'ಯೋಗಃ ಚಿತ್ತವೃತ್ತಿ ನಿರೋಧಃ' ಎಂಬ ಮಾತುಗಳಿವೆ. ಅಂದರೆ, ಮನಸ್ಸನ್ನು ಸ್ಥಿಮಿತದಲ್ಲಿಡುವುದೇ ಯೋಗ. ಎಂಟು ಆಸನಗಳಲ್ಲಿ ಯೋಗಾಸನವೂ ಒಂದು. ದೇಹ ಮನಸ್ಸು ಹಾಗೂ ಭಾವನೆಗಳ ಮೇಲೆ ಪ್ರಜ್ಞಾಪೂರ್ವಕವಾಗಿ ನಿಯಂತ್ರಣ ಸಾಧಿಸಲು ಯೋಗವು ತರಬೇತು ನೀಡುತ್ತದೆ. ಯೋಗ ಎನ್ನುವುದು ಸ್ಥಿತಿಯೂ ಹೌದು, ಶಕ್ತಿಯೂ ಹೌದು.
ಯೋಗಶಾಸ್ತ್ರ ಭಾರತದಲ್ಲಿ ಜನ್ಮ ಪಡೆಯಿತು. ಯೋಗ ಎಂದರೆ ಶಾರೀರಿಕ ಮತ್ತು ಮಾನಸಿಕ ಅನಾರೋಗ್ಯ ತಡೆಯುವುದರ ಜೊತೆಗೆ, ಶರೀರ ರಕ್ಷಣೆಗೂ ಒಂದು ಸಾಧನ. ಉಸಿರಾಟ, ಮಾನಸಿಕ ಶಾಂತಿ ಮತ್ತು ದೃಢತೆ ಇವು ಯೋಗ ಸಾಧನೆಯ ಪರಿಣಾಮಗಳು, ಜೀವಾತ್ಮ, ಪರಮಾತ್ಮ ಅಥವಾ ಭಗವಂತನ ಜೊತೆ ಒಂದಾಗುವುದೇ ಯೋಗ.
ಯೋಗವಾಸಿಷ್ಠದಲ್ಲಿ ಮನಸ್ಸಿನ ತರಂಗಗಳನ್ನು ಪ್ರಶಮನಗೊಳಿಸುವ ಉಪಾಯವೇ ಯೋಗ ಎಂದು ಹೇಳಿರುವರು. 'ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸುವುದೇ ಯೋಗ' ಎಂದು ಪತಂಜಲಿ ಮಹರ್ಷಿಗಳು ಹೇಳಿದ್ದಾರೆ.