ದೇವರು ವೇದಪ್ರಿಯ, ನಾದಪ್ರಿಯ, ಭಕ್ತಿಪ್ರಿಯ, ಭಕ್ತಪ್ರಿಯ... ಹೀಗಾಗಿಯೇ ಪೂಜಾ ಸಮಯದಲ್ಲಿ ಅರ್ಚಕರ ವೇದಘೋಷದೊಂದಿಗೆ ಘಂಟಾ ನಾದಕ್ಕೂ ವಿಶೇಷ ಮಹತ್ವ.
ಕೆಲವೆಡೆ ಕಂಚು, ಹಿತ್ತಾಳೆಯ ಘಂಟೆ, ಜಾಗಟೆ, ಕೆಲವು ಕಡೆ ಭೇರಿ, ನಗಾರಿ ಹೀಗೆ ಒಂದೊಂದು ದೇಗುಲದಲ್ಲಿ ಒಂದೊಂದು ರೀತಿಯ ವಾದ್ಯ ವೈವಿಧ್ಯಗಳು ಮೊಳಗಿಸುವ ದನಿ ಭಕ್ತರ ಭಕ್ತಿಯನ್ನು ಪ್ರೇರೇಪಿಸದಿರದು. ಹೀಗೆ ಹತ್ತು ಹಲವು ದೇಗುಲಗಳಲ್ಲಿ ಬಾರಿಸಲಾಗುವ ವಿವಿಧ ವಾದ್ಯಗಳನ್ನು ಒಂದೇ ಕಡೆ, ಒಂದೇ ಬಾರಿಗೆ ಬಾರಿಸಿದರೆ ಹೇಗೆ?
ಇಂಥ ಅದ್ಭುತ ಆಲೋಚನೆ ಬಂದಿದ್ದು, ಗದಗ ಜಿಲ್ಲೆಯ ರೋಣಾ ತಾಲೂಕಿನ ಮೆಣಸಗಿಯ ಬಸವರಾಜ ಈ. ಬಡಿಗೇರ ಅವರಿಗೆ. ಆದ್ದರಿಂದಲೇ ಅವರು ತಯಾರಿಸಿದ್ದು, ಬರೋಬ್ಬರಿ 12 ವಾದ್ಯಗಳು ಏಕಕಾಲದಲ್ಲಿ ನಾದ ಹೊರಡಿಸಬಹುದಾದ ಒಂದು ವಾದ್ಯ ಯಂತ್ರವನ್ನು.
ಮೂಲತಃ ಕೃಷಿ ಯಂತ್ರಗಳನ್ನು ತಯಾರಿಸುವ ಮನೆತನದ ಬಸವರಾಜ್ ಶ್ರೀಕೃಷ್ಣನ ಭಕ್ತರೂ ಹೌದು, ಒಮ್ಮೆ ಉಡುಪಿ ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅಲ್ಲಿ ಪೂಜಾ ಸಮಯದಲ್ಲಿ ಬಾರಿಸುತ್ತಿದ್ದ ವಾದ್ಯಯಂತ್ರ ಇವರ ವಾದ್ಯಯಂತ್ರ ಸೃಷ್ಟಿಗೆ ಪ್ರೇರಣೆಯಾಯಿತು.
ಹೀಗಾಗಿ 2001ರಲ್ಲಿ ಕೃಷಿ ಯಂತ್ರಗಳಿಗೆ ಬಳಸುವ ಕೆಲ ಉಪಕರಣಗಳಿಂದಲೇ 3 ವಾದ್ಯಗಳಿರುವ ಒಂದು ವಿದ್ಯುತ್ ಯಂತ್ರವನ್ನು ತಯಾರಿಸಿದರು. ಅದೇಕೋ ಸಮಾಧಾನವಾಗದೇ ಅದಕ್ಕೆ 5, 9... ಹೀಗೆ ಇನ್ನಷ್ಟು ವಾದ್ಯಗಳನ್ನು ಸೇರಿಸಿಕೊಂಡರು. ಅಂತಿಮವಾಗಿ 12 ವಾದ್ಯಗಳು ಬಾರಿಸಬಹುದಾದ ಒಂದು ಯಂತ್ರವನ್ನು ತಯಾರಿಸಿದರು.
ಏನೇನು ಸದ್ದು?
ಬಸವರಾಜ್ ತಯಾರಿಸಿರುವ ಯಂತ್ರದಲ್ಲಿ ನಗಾರಿ, ತಾಳ, ಶಹನಾಯ್, ಗಂಟೆ, ಜಾಗಟೆ, ಸಂಬಾಳವಾದ್ಯ, ಡಮರು, ಶಂಖ, ಕಹಳೆ, ಚಿಟಿಗೆವಾದ್ಯ, ಡೊಳ್ಳುವಾದ್ಯ ಹಾಗೂ ಗುಮರಿನಾದ ಸೇರಿಕೊಂಡಿದೆ. ಅನೇಕ ದೇಗುಲಗಳಲ್ಲಿ ಕಾಣಸಿಗುವ ಕೆಲವೇ ಕೆಲವು ವಾದ್ಯಗಳಿರುವ ಯಂತ್ರ ವಿದ್ಯುತ್ ಚಾಲಿತವಾಗಿದ್ದು, ಪೂಜಾ ಸಮಯದಲ್ಲಿ ವಿದ್ಯುತ್ ಕೈ ಕೊಟ್ಟರೆ ಯಂತ್ರವೂ ನಿಶ್ಯಬ್ದವಾಗುತ್ತದೆ. ಆದರೆ, ಬಸವರಾಜರ ಈ ಯಂತ್ರ ವಿದ್ಯುತ್ ಚಾಲಿತವೂ ಹೌದು. ಅಕಸ್ಮಾತ್ ವಿದ್ಯುತ್ ಕೈಕೊಟ್ಟರೆ ಕೈಯಲ್ಲಿಯೇ ಗಾಲಿ ತಿರುಗಿಸುವ ಅವಕಾಶವಿರುವುದರಿಂದ ಯಾವುದೇ ಅಡೆತಡೆ ಇಲ್ಲದೆ ಶಬ್ದ ಹೊರಡಿಸುವುದು ಇದರ ವಿಶೇಷತೆ.
ಬಸವರಾಜರ ಈ ವಾದ್ಯಯಂತ್ರ ಹೊರಡಿಸುವ ದನಿ ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ಕೇಳುತ್ತದೆ. ಮಾತ್ರವಲ್ಲದೆ ಇದಕ್ಕೆ ಚಕ್ರವನ್ನೂ ಅಳವಡಿಸಿರುವುದರಿಂದ ಎಲ್ಲಿಂದೆಲ್ಲಿಗೆ ಬೇಕಾದರೂ ಎಳೆದುಕೊಂಡು ಹೋಗಬಹುದು. ರಾಜ್ಯದಲ್ಲಿಯೇ ಇಂಥ 12 ವಾದ್ಯಗಳು ಒಂದೇ ಯಂತ್ರದಲ್ಲಿ ಅಳವಡಿಸಿರುವುದು ಇದೇ ಮೊದಲು ಎನ್ನುವ ಬಸವರಾಜ್, ಈ ಯಂತ್ರ ದೀರ್ಘಕಾಲ ಬಾಳಿಕೆ ಬರುತ್ತದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
12 ಮಂಗಳ ವಾದ್ಯಗಳನ್ನು ಹೊಂದಿರುವ ಈ ಯಂತ್ರದ ಮಂತ್ರದ ಬಗ್ಗೆ ನೀವೂ ತಿಳಿಯಬೇಕಿದ್ದರೆ ಬಸವರಾಜ ಈ. ಬಡಿಗೇರ ಮೊ. 9901172876ಗೆ ಸಂಪರ್ಕಿಸಬಹುದು.
- ಸುಧೀಂದ್ರ ಜಮ್ಮಟಿಗೆ
sudheeja@gmail.com