ಪ್ರತಿವರ್ಷ ಹೊಸ ವರ್ಷ ಬರುವುದು. ಜನರು ಅದನ್ನು ಸಂತೋಷದಿಂದ ಆಚರಿಸುವರು ಹಾಗೂ ಇಡೀ ಪ್ರಪಂಚವೇ ಅತಿ ಸಡಗರದಿಂದ ಆಚರಿಸುತ್ತದೆ. ನಾವು ಕಳೆದ ದಿನ ಮತ್ತೆ ಬರುವುದಿಲ್ಲ.
ಅಲ್ಲದೆ ಆ ದಿನದ ದಿನಾಂಕ, ವಾರ, ನಕ್ಷತ್ರ, ತಿಥಿ, ಯೋಗ, ಚರಣ ಹಾಗೂ ಆ ದಿನದಲ್ಲಿ ನಡೆದ ಕಾರ್ಯಕ್ರಮಗಳು ಮತ್ತು ನಾವು ಕಳೆದ ಮುಖ್ಯವಾದ ಸಮಯ ಇವುಗಳೆಲ್ಲ ಮತ್ತೆ ಮರಳುವುದಿಲ್ಲ. ಒಂದು ದಿನ ಕಳೆದು ಹೋದರೆ ಅದರ ಮಹತ್ವ ಎಷ್ಟು ಎಂಬುದನ್ನು ನಾವು ಶ್ರೀರಾಮಕೃಷ್ಣ ಪರಮಹಂಸರ ಜೀವನದಲ್ಲಿ ನೋಡಬಹುದು.
ಅವರು ಸಾಧನೆಯ ಸಮಯದಲ್ಲಿ ಕಾಳಿದೇವಿ ಪ್ರತ್ಯಕ್ಷವಾಗಲಿಲ್ಲವೆಂದು ದೇವಿಯ ಹತ್ತಿರ ಕಣ್ಣೀರು ಹಾಕುತ್ತಾ, ದೇವೀ, ದಿನಗಳು ಕಳೆದು ಹೋಗುತ್ತದೆ ಆದರೆ ನಿನ್ನ ದರ್ಶನ ಮಾತ್ರ ಆಗಲಿಲ್ಲ ಎಂದು ಬೇಡಿಕೊಳ್ಳುತ್ತಿದ್ದರು. ಅಂದರೆ, ಇಡೀ ಬದುಕನ್ನು ಸಾಧನೆಯೆಂದು ಸ್ವೀಕರಿಸಿದವರಿಗೆ, ಗುರಿ ಸ್ಪಷ್ಟವಿರುವವರಿಗೆ ಒಂದೊಂದು ದಿನವೂ ಎಷ್ಟು ಮಹತ್ವಾದ್ದಾಗಿದೆ ಎಂದು ತಿಳಿಯುವುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನುಷ್ಯನ ದೀರ್ಘ ಆಯುಸ್ಸು 120 ವರ್ಷಗಳು ಗ್ರಹಗಳ ಒಟ್ಟು ದೆಶೆ 120 ವರ್ಷಗಳು (ಶುಕ್ರ ಗ್ರಹ 20 ವರ್ಷ ರವಿ 6, ಚಂದ್ರ 10, ಕೇತು 7, ಶನಿ 19, ಬುಧ 17, ಗುರು 16, ಕುಜ 7, ರಾಹು 18 ವರ್ಷಗಳು). 60 ವರ್ಷ ತುಂಬಿದ ವ್ಯಕ್ತಿಗೆ ಷಷ್ಟ್ಯಬ್ದಿ ಶಾಂತಿಯನ್ನು ಮಾಡುವರು.
ಅಂದರೆ 60 ವರ್ಷ ಕಳೆಯಿತು, ಇದರೊಂದಿಗೆ ಮನುಷ್ಯನ ಅರ್ಧ ಜೀವನ ಕಳೆಯಿತು ಎಂದು. 60 ವರ್ಷ ಮುಗಿಸಿದ ವ್ಯಕ್ತಿಯನ್ನು ಸಮಯ ಹೇಗೆ ಕಳೆದಿರಿ ಎಂದು ಪ್ರಶ್ನೆ ಮಾಡಿದರೆ ಅವರಿಂದ ಬರುವ ಉತ್ತರ 751 ಭಾಗ ನಿದ್ದೆಯಲ್ಲಿ ಹೋಯಿತು ಎಂದು.
ಉಳಿದ ಶೇ. 25 ಭಾಗದಲ್ಲಿ 1 ಭಾಗವನ್ನೂ ಸತ್ಕಾರ್ಯಕ್ಕೆ ಉಪಯೋಗಿಸಿರುವುದು ಕಷ್ಟ (ಕೆಲವು ವ್ಯಕ್ತಿಗಳನ್ನು ಹೊರತುಪಡಿಸಿ) ನಾವು ಹೆಚ್ಚು ಸಮಯವನ್ನು ಬೇರೆಯವರ ದೋಷ ಕಾಣುವುದರಲ್ಲೇ ಕಳೆಯುತ್ತೇವೆ. ಈ ಕಾರಣಕ್ಕಾಗಿಯೇ ಶ್ರೀಮತಿ ಶಾರದಾ ದೇವಿಯವರು ಈ ಮಾತನ್ನು ಹೇಳಿರುವುರು.
'ಮಗು, ನಿನಗೆ ಮನಶ್ಶಾಂತಿ ಬೇಕೆಂದಿದ್ದರೆ ನೀನು ಇತರರಲ್ಲಿ ದೋಷ ಹುಡುಕಲೇ ಬೇಡ, ಬದಲಾಗಿ ನಿನ್ನಲ್ಲಿರುವ ದೋಷಗಳನ್ನೇ ಕಂಡುಕೊಂಡು ಇಡೀ ಜಗತ್ತನ್ನು ನಿನ್ನದಾಗಿ ಮಾಡಿಕೊಳ್ಳಲು ಕಲಿ' ಎಂದು. ಪ್ರತಿಯೊಬ್ಬರೂ ಬೇರೆಯವರ ತಪ್ಪುಗಳನ್ನೇ ಹುಡುಕಲು ಪ್ರಯತ್ನಿಸುವರು. ತಮ್ಮ ತಪ್ಪುಗಳಿಗೆ ಗಮನವೇ ಕೊಡುವುದಿಲ್ಲ. ಶಾರದಾದೇವಿಯರ ಈ ಮಾತನ್ನು ಪ್ರತಿಯೊಬ್ಬರೂ ಅನುಷ್ಠಾನಕ್ಕೆ ತಂದರೆ ನಮ್ಮಲ್ಲಿ ದ್ವೇಷ, ಅಸೂಯೆಗಳಿ ಲ್ಲದೆ ನೆಮ್ಮದಿಯಿಂದ ಜೀವನ ನಡೆಸಬಹುದು.
ಪ್ರಯತ್ನ ಅಗತ್ಯ
ಒಳ್ಳೆಯ ಜ್ಞಾನ ಪಡೆಯುವುದಕ್ಕೆ ಪ್ರಯತ್ನಿಸಬೇಕು. ಏಕೆಂದರೆ ಮನುಷ್ಯ ಜನ್ಮ ಸಿಗುವುದೇ ಕಷ್ಟ. ಈಗ ಸಿಕ್ಕಿರುವ ಜನ್ಮವನ್ನು ಸಾರ್ಥಕಗೊಳಿಸಬೇಕು. ಈ ಕಾರಣದಿಂದಲೇ ನರಜನ್ಮ ಬಂದಾಗ, ನಾಲಗೆ ಇರುವಾಗ ಕೃಷ್ಣ ಎನ್ನಬಾರದೆ ಎಂದು ಪುರಂದರದಾಸರು ಕೇಳಿರುವುದು. ಶಂಕರಾಚಾರ್ಯರ ಪ್ರಕಾರ, ಮನುಷ್ಯ ಜನ್ಮ, ಮೋಕ್ಷ ಮತ್ತು ಸಾಧು- ಸಂತರ ಸಹವಾಸ ಈ ಮೂರೂ ದುರ್ಲಭ.
ಈ ಪ್ರಪಂಚದಲ್ಲಿ ಯಾವ ಸುಖವೂ ನಮಗೆ ತೃಪ್ತಿ ತರುವುದಿಲ್ಲ. ವೇದಾಂತದ ಪ್ರಕಾರ, ಈ ಜಗತ್ತು ಮಿಥ್ಯ. ಪರಮಾತ್ಮ ಒಬ್ಬನೇ ಸತ್ಯ. ಶಂಕರಾಚಾರ್ಯರು ಹೇಳುವಂತೆ ಜ್ಞಾನಿಯಾದವನು ಸಂಸಾರವಿಲ್ಲದಿದ್ದರೂ ವೇದಗಳು ಹೇಳುವ ಆತ್ಮನಿಗಿಂತ ಭಿನ್ನವಾದವನು. ಸಂಸಾರವಿಲ್ಲದಿದ್ದರೂ ವೇದಗಳು ಹೇಳುವ ಆತ್ಮನಿಗಿಂತ ಭಿನ್ನವಾದವರ ಬಗ್ಗೆ ಚಿಂತಿಸುವುದಿಲ್ಲ. ಜ್ಞಾನಿಗೆ ಈ ಜಗತ್ತು ಒಂದು ಮೋಹಲೋಕ.
ಬಾಲ್ಯದಲ್ಲಿ ಆಟ, ಪಾಠನಿರತ, ತಾರುಣ್ಯದಲ್ಲಿ ಲಲನೆಯ ಚಿಂತನೆ, ವೃದ್ಧಾಪ್ಯದಲ್ಲಿ ಚಿಂತೆಗಳ ಭಾರ. ಅಯ್ಯೋ ಪರಬ್ರಹ್ಮನಲ್ಲಿ ಯಾರಿಗೂ ಆಸಕ್ತಿ ಇಲ್ಲವೇ ಎಂದು ಶಂಕರರು ಸೂಚಿಸಿರುವಂತೆ ಮನುಷ್ಯನು ಈ ಜಗತ್ತಿನ ಮಾಯೆಗೆ ಮುಳಗಿ ಮೋಕ್ಷ ಚಿಂತನೆಯನ್ನು ಮುಂದಕ್ಕೆ ಹಾಕುತ್ತಾ ಹೋಗುತ್ತಾನೆ.
ಭಗವಂತನ ಚಿಂತನೆಗೆ ಮತ್ತು ಸತ್ಕಾರ್ಯಕ್ಕೆ ಸಮಯ ಯಾವಾಗ ಉಪಯೋಗಿಸುತ್ತಾನೆ? ಅದರಿಂದ ನಿತ್ಯ ನಮನವನ್ನು ಬಳಸಿ ಭಗವಂತನ ಚಿಂತನೆಗೆ ಬಳಸೋಣ. ಪ್ರತಿ ವರ್ಷದ ಮೊದಲ ದಿನವನ್ನೇ ಅಲ್ಲದೆ ನಿತ್ಯವೂ ಹೊಸತೆಂಬಂತೆ ಗೌರವದಿಂದ ಉಪಯುಕ್ತವಾಗಿ ನಮ್ಮ ಜೀವನಲ್ಲಿ ಬಳಸಿಕೊಳ್ಳೋಣ.
-ಮಂಡಗದ್ದೆ ಪ್ರಕಾಶ ಬಾಬು