ಭಕ್ತಿ-ಜ್ಯೋತಿಷ್ಯ

ಬಸವ ಗುರು

ನೂರಾರು ವರ್ಷಗಳಷ್ಟು ಹಿಂದೆಯೇ ನಮ್ಮ ಸಮಾಜದಲ್ಲಿ ಇಂದೂ ಅಗತ್ಯವಾಗಿರುವ ಸುಧಾರಣೆಯನ್ನು ...

ನೂರಾರು ವರ್ಷಗಳಷ್ಟು ಹಿಂದೆಯೇ ನಮ್ಮ ಸಮಾಜದಲ್ಲಿ ಇಂದೂ ಅಗತ್ಯವಾಗಿರುವ ಸುಧಾರಣೆಯನ್ನು ಕಂಡುಕೊಂಡು ಆಚರಣೆಗೆ ತರಲು ಪ್ರಯತ್ನಿಸಿದ, ಧರ್ಮವನ್ನು ಕರ್ಮಕಾಂಡದಿಂದ ಬಿಡುಗಡೆ ಮಾಡಿ ಭಕ್ತಿ ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡಿದ, ಕನ್ನಡದ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವಾದ ವಚನಗಳನ್ನು ಪ್ರಚಾರ ಮಾಡಿದ ಮಹಾಧೀಮಂತದ ಭಕ್ತಿ ಭಂಡಾರಿ ಬಸವಣ್ಣ.
ಜಾಗತಿಕ ಸಂಸ್ಕೃತಿಗೆ ಘನತೆ ತಂದು ಕೊಡುವವರೆಂದರೆ ತಮ್ಮ ವ್ಯಕ್ತಿತ್ವ ಉದಾತ್ತೀಕರಿಸಿಕೊಂಡ  ಮಹಾಪುರುಷರು ಮತ್ತು ತಮ್ಮ ಪರಿಸರವನ್ನು ಉದಾತ್ತೀಕರಿಸುವ ಯುಗಪುರುಷರು. ಈ ಎರಡನ್ನೂ ಸಾಧಿಸುವ ಮೂಲಕ ಬಸವಣ್ಣನವರು ಕೇವಲ ಮಹಾಪುರುಷರಾಗಿ ಉಳಿಯದೆ, ಯುಗಪುರುಷರಾಗಿಯೂ ಬೆಳೆದಿದ್ದಾರೆ.
ಸಾಮಾನ್ಯವಾಗಿ ಯುಗುಪುರುಷರು ಸಾಮಾಜಿಕ, ಧಾರ್ಮಿಕ ಸಾಹಿತ್ಯಿಕ ಹೀಗೆ ಜೀವನದ ಯಾವುದೋ ಒಂದು ಕ್ಷೇತ್ರಕ್ಕೆ ಒಂದು ಹೊಸ ತಿರುವು ತಂದುಕೊಡುತ್ತಾರೆ. ಬಸವಣ್ಣನವರು ಇಂಥ ಎಲ್ಲಾ ಕ್ಷೇತ್ರಗಳಿಗೂ ಹೊಸ  ತಿರುವು ಕೊಟ್ಟ ಕಾರಣ, ಅವರನ್ನು ಜಗತ್ತು ಕಂಡ ಒಬ್ಬ ಅಪರೂಪದ ಸಮಗ್ರ ಯುಗುಪುರುಷನೆಂದು ಗುರುತಿಸಲಾಗುತ್ತಿದೆ.
ಸಾಧನೆಯ ಸೋಪಾನ
ಬಸವಣ್ಣನವರ ಬಾಳು ಸತತ ಸಾಧನೆಯ ಸೋಪಾನ. ಅಂದಿನವರೆಗೆ ಸಮಾಜದಲ್ಲಿ ಹೆಪ್ಪುಗಟ್ಟಿದ್ದ ಅಮಾನವವೀಯತೆ ಮೌಢ್ಯದ ಕತ್ತಲೆಯನ್ನು ಬಸವಣ್ಣನವರು ಮತ್ತು ಇತರ ಶರಣರು ತಮ್ಮ ಪ್ರಖರ ವ್ಯಕ್ತಿತ್ವದ ಕಿರಣಗಳಿಂದ ಹೊರದೂಡುವ ಬೆಳಕಿನ ಆಶಾಕಿರಣವಾದರು.
ಮಾನವ ಮಹಾದೇವನಾಗುವುದು ಬೇಡ, ಲೋಕೋಪಕಾರಿ ಕಲ್ಯಾಣಿಯಾದರೆ ಸಾಕು. ಅಂತಾಗಿಸಲು ಮಾನವ ಮೊದಲು ಇಲ್ಲಿ ಸಲ್ಲುವ ಕಾರ್ಯ ನೆರವೇರಿಸಬೇಕು. ಭೂಮಿಯ ಮೇಲೆ ಸ್ವರ್ಗ-ನರಕಗಳಿವೆ ಎಂದರು.
ಬಸವಣ್ಣನವರು ಹುಟ್ಟುವ ಹೊತ್ತಿಗೆ ಕರ್ನಾಟಕದ ಧಾರ್ಮಿಕ ಕ್ಷೇತ್ರವನ್ನು ಅಗ್ರಹಾರ ಸಂಸ್ಕತಿ, ದೇವಾಲಯ ಸಂಸ್ಕೃತಿಗಳು ಆಳುತ್ತಿದ್ದವು. ಅಗ್ರಹಾರ ಸಂಸ್ಕತಿ ಮೂಲತಃ ಧಾರ್ಮಿಕವಾಗಿ ಕರ್ಮನಿಷ್ಠ, ಸಾಮಾಜಿಕವಾಗಿ ವರ್ಣಭೇದ ನಿಷ್ಠವಾದುದಾಗಿತ್ತು.
ಚಲನಶೀಲ ಮೌಲ್ಯದತ್ತ ಚಿತ್ತ
ಈ ದೇವಾಲಯ ಸಂಸ್ಕೃತಿ ಇದೇ ದಾರಿಗೆ ಹೊರಳಿದ್ದರೂ, ಮೂಲತಃ ಅದು, ಧಾರ್ಮಿಕವಾಗಿ ಭಕ್ತಿನಿಷ್ಠ,  ಸಾಮಾಜಿಕವಾಗಿ ವರ್ಣಭೇದ ನಿರಾಕರಣ ನಿಷ್ಠವಾದುದು. ಹೀಗಾಗಿ ಹುಟ್ಟು ಹೋರಾಟಗಾರನಾದ ಬಸವಣ್ಣನವರು ತನ್ನ ಎಳೆಯ ವಯಸ್ಸಿನಲ್ಲೇ ಅಗ್ರಹಾರ ಸಂಸ್ಕೃತಿ ತೊರೆದು, ಚಲನಶೀಲ ಮೌಲ್ಯದ ದೇವಾಲಯ ಸಂಸ್ಕೃತಿ ನೆಲೆಯಾಗಿದ್ದ ಕೂಡಲ ಸಂಗಮಕ್ಕೆ ಬಂದರು. ಇದು ಅವರ ಜೀವನದಲ್ಲಿ ಕರ್ಮದಿಂದ ಧರ್ಮಕ್ಕೆ  ದಾಟಿಬಂದ ಕಾಲಘಟ್ಟ.
ಬಸವಣ್ಣ ಸನ್ಯಾಸಿಯಾಗಿರಲಿಲ್ಲ, ಮಠಾಧಿಪತಿಯಾಗಿರಲಿಲ್ಲ, ಕಾವಿಧಾರಿಯಾಗಿರಲಿಲ್ಲ ಲೌಕಿಕದಲ್ಲಿದ್ದು, ಅಪ್ರತಿಮ ವಿಶ್ವಗುರುವಾಗಿ ಅಲೌಕಿಕ ಬೆಳಕು ಬೆಳಗಿದರು.
ಕಾಯಕವೇ ಕೈಲಾಸ
ಮನುಕುಲದ ಸರ್ವಾಂಗೀಣ ಅಭ್ಯುದಯವೇ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಅಥವಾ ಬಸವಧರ್ಮದ ಮಹೋನ್ನತ ಗುರಿಯಾಗಿತ್ತು. ತಾನು ಮಾಡುವ ಕಾಯಕದಲ್ಲೇ ಕೈಲಾಸ ಕಾಣುವ ಧನ್ಯತೆ. ಇದು ಅವರು ಕಾಯಕಕ್ಕೆ ನೀಡಿದ ಪರಮೋಚ್ಛ ಪ್ರಾಧಾನ್ಯತೆ.
ಇಂತಹ ಮಹಾನ್ ವ್ಯಕ್ತಿ ನೀಡಿದ ಸಂದೇಶ ಹಾಗು ನಡೆದುಕೊಂಡ ರೀತಿ ಸೂರ್ಯ-ಚಂದ್ರ ಇರುವರೆಗೂ ಅನುಕರಣೀಯವಾಗಿದೆ. ಸ್ವಾರ್ಥವೇ ಪ್ರಧಾನವಾಗಿರುವ ಇಂದಿನ ಆಧುನಿಕ ಯುಗದಲ್ಲಿ ಸತ್ಯ, ಶಾಂತಿ, ಅಹಿಂಸೆ, ಪ್ರೀತಿ, ಸ್ನೇಹ, ನಂಬಿಕೆ, ಸಹಕಾರ, ಸೌಹಾರ್ದತೆಗಳು ಕಣ್ಮರೆಯಾಗಿವೆ. ಪರಸ್ಪರ ದ್ವೇಷ, ಅಸೂಯೆಯ ಜ್ವಾಲಾಮುಖಿ ಹೊಗೆ ಕಾರುತ್ತಿದೆ. ಇಂತಹ ಸಂದರ್ಭದಲ್ಲಿ ಅನೇಕ ಸಮಸ್ಯೆಗಳಿಗೆ ಬಸವಣ್ಣನವರ ಸಂದೇಶಗಳು ಮಾರ್ಗದರ್ಶಿ ಸೂತ್ರಗಳಾಗಲಿವೆ.
ಅವರು ಸಾರಿರುವಂತೆ ದೇವರ ದೃಷ್ಟಿಯಲ್ಲಿ ಮೇಲು, ಕೀಳುಗಳಿಲ್ಲ. ಅವು ಮಾನವ ನಿರ್ಮಿತವಾದವು. ಮೇಲು-ಕೀಳುಗಳು ಹುಟ್ಟಿನಿಂದ ಉಂಟಾದವುಗಳಲ್ಲ. ಅದು ಅವರವರ ಯೋಗ್ಯತೆ ಮೇಲೆ ಉಂಟಾಗುತ್ತದೆ.
ಉಚ್ಚವರ್ಗದಲ್ಲಿ ಹುಟ್ಟಿದವನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಇತರರನ್ನು ಹಿಂಸಿಸುವ ಕಾರ್ಯದಲ್ಲಿ ತೊಡಗಿದರೆ, ಹೊಲಸು ತಿನ್ನುವ ಚಪಲ ಬಳಸಿಕೊಂಡರೆ ಅವನನ್ನು ಹೊಲೆಯೆಂದೇ ಪರಿಗಣಿಸಬೇಕು.
ಕೀಳು ಜಾತಿಯಲ್ಲಿ ಹುಟ್ಟಿದವನೊಬ್ಬ ಸಾತ್ವಿಕ ಜೀವನ ನಡೆಸಿ ದಿವ್ಯ ಜೀವನ ಸಿದ್ಧಿಯನ್ನು ಪಡೆದರೆ ಅವನನ್ನೂ ಉಚ್ಚ ಕುಲದವನೆಂದೇ ಕಾಣಬೇಕು. ಎಲ್ಲಾ ಧರ್ಮಗಳಿಗೂ ದಯವೇ ಮೂಲವಾಗಬೇಕು.
ಯಾವ ಧರ್ಮವೂ ನಿರ್ದಯತೆಯನ್ನು ಬೋಧಿಸದು. ಎಲ್ಲಾ ಪ್ರಾಣಿಗಳಲ್ಲಿ ದಯೆ ತೋರಿಸುವುದೇ ಧರ್ಮದ ಮೂಲ ಸೂತ್ರವಾಗಬೇಕು. ಇದು ಬಸವಣ್ಣನವರ ಅಮೃತವಾಣಿ.
ಬಸವಣ್ಣನವರ ವಚನ ತುಂಬಾ ಸರಳ ಶಿಲ್ಪ. ಸರಳವೆಂದರೂ ಅಲ್ಲಿ ಸಂಕೀರ್ಣತೆಯಿದೆ. ವಾಚ್ಯವೆಂದರೂ ಅಲ್ಲಿ ಧ್ವನಿಯಿದೆ. ಏನು ಹೇಳಬೇಕೆಂಬ ಆಶಯ ಉತ್ಕಟವಾದಾಗ ಹೇಗೆ ಹೇಳಬೇಕೆಂಬ ಆಕೃತಿ ತಾನಾಗಿಯೇ ಅಚ್ಚು ಕಟ್ಟುತನ ಪಡೆಯುತ್ತದೆ. ಈ ಆಕೃತಿ ಸೌಂದರ್ಯಕ್ಕೆ ಮಾದರಿಯಾಗಿದೆ ಬಸವಣ್ಣನವರ ಬರವಣಿಗೆ.

- ಗುರುರಾಜ ಪೋಶೆಟ್ಟಿಹಳ್ಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!