ಬೂದಿಕೋಟೆ ಬೃಂದಾವನ
ಮಂತ್ರಾಲಯದಲ್ಲಿ ರಾಯರು ಸಶರೀರವಾಗಿ ಪ್ರವೇಶಿಸಿದ, ಪ್ರಹ್ಲಾದರಾಜ ಯಾಗ ಮಾಡಿದ ಸ್ಥಳದ ಹಾಗೂ ಶ್ರೀರಾಮನ ಪಾವನ ಪಾದಸ್ಪರ್ಶ ಮಾಡಿದ ಶಿಲೆಯಿಂದ ನಿರ್ಮಿಸಿದ, 700 ಸಾಲಿಗ್ರಾಮಗಳನ್ನು ಹೊಂದಿರುವ ದಿವ್ಯ ಅಧಿಷ್ಠಾನದ ಮೃತ್ತಿಕೆ ಹೊತ್ತ ಇತಿಹಾಸ ಪ್ರಸಿದ್ಧ ಬೃಂದಾವನ ಚಿನ್ನದ ನಾಡಿನಲ್ಲಿದೆ. ಕೋಲಾರದ ಬಂಗಾರಪೇಟೆ ತಾಲೂಕಿನ ಮಾರ್ಕಂಡೇಯ ನದಿ ತಟದಲ್ಲಿನ ಬೂದಿಕೋಟೆಯಲ್ಲಿದೆ.
ರಾಘವೇಂದ್ರ ಸ್ವಾಮಿಗಳು ಸಶರೀರ ಬೃಂದಾವನ ಪ್ರವೇಶಿಸಿದ ಕೇವಲ ಹತ್ತೇ ವರ್ಷಗಳಲ್ಲಿ ಅಂದರೆ ಕ್ರಿ.ಶ.1681ರಲ್ಲಿ ಈ ಪವಿತ್ರ ಬೃಂದಾವನ ಪ್ರತಿಷ್ಠೆಯಾಗಿ ಇದು ಮಂತ್ರಾಲಯದ ನಂತರ 5ನೇ ಮೃತ್ತಿಕಾ ಬೃಂದಾವನವಾಗಿರುವುದು ನರಸಿಂಹಾಚಾರ್ಯರು ಈ ಬೃಂದಾವನವನ್ನು ಪ್ರತಿಷ್ಠಾಪಿಸಿದರು. ತದನಂತರ ಇವರು ಮುಳಬಾಗಿಲಿನ ಪಾದರಾಜರ ಮಠದ ಪರಂಪರೆಯಲ್ಲಿ ಬಂದ ಗುಣಸಾಗರನಿಧಿ ತೀರ್ಥರಿಂದ ಆಶ್ರಮ ಪಡೆದು ಪ್ರಜ್ಞಾನನಿಧಿ ತೀರ್ಥರೆಂದು ನಾಮಕರಣಗೊಂಡರು. ಆ ವಂಶಸ್ಥರೇ ಆದ ಕಲ್ಯಾವಿ ಬಿಂದುಮಾಧವಾರ್ಚಾಯರು ಮತ್ತು ಅವರ ಮಕ್ಕಳಿಂದ ಈಗ ಮಠದ ಪೂಜಾವಿಧಿಗಳು ನಡೆಯುತ್ತಾ ಬರುತ್ತಿದೆ.
ದೂರುದೂರುಗಳಿಂದ ಅರಸಿ ಬರುವ ಭಕ್ತರನ್ನು ಪಾರಮಾರ್ಥದೆಡೆಗೆ, ಭಕ್ತಿಭಾವದ ಅನುಭಾವದೆಡೆಗೆ ದಿವ್ಯಾನುಭವದ ಅನಂತದೆಡೆಗೆ ಕರೆದೊಯ್ಯುವ ಅಲೌಕಿಕ ಶಕ್ತಿಯ ಅನುಭವವನ್ನು ನೀಡುವ ಬೃಂದಾವನ ಶೇಷ ತೇಜಸ್ಸಿನಿಂದ ಕೂಡಿದ್ದು, ಈ ಸನ್ನಿಧಿಯಲ್ಲಿನ ಪ್ರಶಾಂತತೆಯು ಭಕ್ತರ ಮನಸ್ಸನ್ನು ಧ್ಯಾನಕ್ಕೆ ಪ್ರಚೋದಿಸುತ್ತದೆ. ಈ ಸ್ಥಳದಲ್ಲಿ ಮಾರ್ಕಂಡೇಯ ನದಿಯು ಪೂರ್ವದಿಂದ ಪಶ್ಚಿಮದೆಡೆಗೆ ಹರಿಯುತ್ತಿದ್ದು, ಬೂದಿಕೋಟೆಯ ಮುಂದೆ ಮಾರ್ಕಂಡೇಯ ಜಲಾಶಯವಿದೆ. ಇದಕ್ಕೆ ಮಿನಿ ಕೆಆರ್‌ಎಸ್ ಎಂಬ ಹೆಸರಿದೆ. ಹೈದರ್ ಅಲಿ ಜನ್ಮಸ್ಥಳ, ಬಂಗಾರಪೇಟೆ ಸಮೀಪದ ಬಂಗಾರು ತಿರುಪತಿ, ಕೋಟಿಲಿಂಗೇಶ್ವರ ದೇಗುಲಗಳು ಸನಿಹದ ಪ್ರೇಕ್ಷಣೀಯ ಸ್ಥಳಗಳು.
ಹೆಚ್ಚು ಪ್ರಚಾರವಿಲ್ಲದೇ ಸರಳ ನಿರಾಡಂಬರ ರಾಯರ ಮಠವೆಂದು ಕರೆಯಲ್ಪಡುವ ಗುರುರಾಜರು ಇಲ್ಲಿ ಭಕ್ತರ ಮನೋಭೀಷ್ಠಗಳನ್ನು ಕ್ಷಿಪ್ರವಾಗಿ ನಡೆಸಿ ಕೊಡುವ ಕರುಣಾಳು ಎಂಬುದು ಭಕ್ತರ ಅಂಬೋಣ. ರಾಯರ ಜೀವನ ಚರಿತ್ರೆಯನ್ನು ತಿಳಿಸುವ ಗುರುಗಳ ಅಂತರಂಗ ಭಕ್ತ ಶಿಷ್ಯ ರಚಿಸಿರುವ ರಾಘವೇಂದ್ರ ಸ್ತೋತ್ರವನ್ನು ಶಿಲಾಫಲಕದಲ್ಲಿ ಕೆತ್ತಿಸಿ ಪ್ರದಕ್ಷಿಣಾ ಪಥದಲ್ಲಿ ಸ್ಥಾಪಿಸಲಾಗಿದೆ. ಫಾಲ್ಗುಣ ಮಾಸದ ರಾಯರ ವರ್ಧಂತಿ, ಪಟ್ಟಾಭೀಷೇಕ ಉತ್ಸವದಲ್ಲಿ ದಂಪತಿ ಪೂಜೆ, ವೈಶಾಖದ ಅಕ್ಷಯ ತದಿಗೆ ಗಂಧ ಲೇಪನ, ಕಾರ್ತಿಕ ಮಾಸದ ಧಾತ್ರಿ ಹವನ, ಸತ್ಯನಾರಾಯಣ ಪೂಜೆ ಮತ್ತು ಶ್ರೀನಾವಾಸ ಕಲ್ಯಾಣ ಮುಂದಾದ ಧಾರ್ಮಿಕ ಕೈಂಕರ್ಯಗಳು ಇಲ್ಲಿ ಬಹುಭಕ್ತಿ ಶ್ರದ್ಧೆಯಿಂದ ನಡೆಯುತ್ತದೆ. ಅಲ್ಲದೆ ಶ್ರೀಗುರುರಾಜ ಸೇವಾಟ್ರಸ್ಟ್‌ನ ಎಲ್ಲ ಪದಾಧಿಕಾರಿಗಳು ಶ್ರೀರಾಯರ ಸೇವಾಕಾರ್ಯದಲ್ಲಿ ಪಾಲ್ಗೊಂಡು ಅನೇಕ ಜನೋಪಕಾರಿ ಕೆಲಸ ನಡೆಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಮಠದ ಪ್ರಾಂಗಣದ ವಿಸ್ತರಣೆ ಪ್ರಾರಂಭವಾಗಿದ್ದು, ಮಾಹಿತಿಗೆ ಮೊ. 9738624108 ಸಂಪರ್ಕಿಸಬಹುದು.
-ಪ್ರಣವ