ಭಾರತೀಯ ಸಂಸ್ಕೃತಿಯ ಪ್ರತೀಕದಂತಿರುವ ಭಜನೆ- ದೇವರನಾಮ ಇಂದು ಬಹುತೇಕ ಅಸ್ತಿತ್ವ ಕಳೆದುಕೊಳ್ಳುವ ಹಂತಕ್ಕೆ ತಲುಪಿಯಾಗಿದೆ. ಪ್ರತಿ ಮನೆಯ ಭಜನೆ- ದೇವರನಾಮದ ಅವಧಿಯನ್ನು ಧಾರಾವಾಹಿ, ಹೋಮ್‌ವರ್ಕ್‌ಗಳು ಅಪ್ಪಿಕೊಂಡಿವೆ. ಮನೆಯ ಸದಸ್ಯರೆಲ್ಲರನ್ನೂ ಸಂಜೆ ವೇಳೆ ಒಟ್ಟಾಗಿಸಿ ಏಕ ಕಂಠದಲ್ಲಿ ಒಂದು ಮಾಡುತ್ತಿದ್ದುದು ಭಜನೆಯ ತಾಕತ್ತು. ಹಾಗೆಯೇ ದೈವಿಕ ಭಾವನೆಯ ಉದ್ದೀಪನಕ್ಕೆ ಕೂಡ ಇದೇ ವೇದಿಕೆ. ಇದು ಮನಸ್ಸಿನ ಒತ್ತಡ ನಿವಾರಣೆಗೊಂದು ಮದ್ದೂ ಹೌದು. ಇಂತಹ ಒಂದು ಪ್ರಭಾವಶಾಲಿ ಮಾಧ್ಯಮ ಅಥವಾ ಅಸ್ತ್ರ ಇಂದು ತನ್ನ ಸತ್ವ ಕಳೆದುಕೊಂಡಿದೆ.
ಇಂತಹ ಸಂದರ್ಭದಲ್ಲಿ ಶಿವಮೊಗ್ಗದ ಗುರುಗುಹ ಸಂಗೀತ ಮಹಾವಿದ್ಯಾಲಯ ಭಜನೆ-ದೇವರ ನಾಮವನ್ನು ಮನೆಯಲ್ಲಿಯೇ ಉಳಿಸುವ ನಿಟ್ಟಿನಲ್ಲಿ ಬರೋಬ್ಬರಿ 30 ವರ್ಷಗಳಿಂದ ನಿಶ್ಯುಲ್ಕವಾಗಿ, ಯಾವುದೇ ವೈಯಕ್ತಿಕ ಪ್ರತಿಫಲಾಪೇಕ್ಷೆ ಇಲ್ಲದೇ ಭಜನೆಯನ್ನು ಅಭಿಯಾನ ರೂಪದಲ್ಲಿ ನಡೆಸಿಕೊಂಡು ಬಂದಿದೆ.
ಈ ಅಭಿಯಾನದ ಉದ್ದೇಶ, ನಡೆದು ಬಂದ ಹಾದಿ, ಪರಿಣಾಮ ಎಲ್ಲವನ್ನೂ ಅಭಿಯಾನ ನಡೆಸಿಕೊಂಡು ಬಂದಿರುವ ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ ಅವರ ದನಿಯಲ್ಲೇ ಕೇಳಿ...
ಸಮಾಜ, ಮನೆ, ಮನಸ್ಸಿನ ಅಂಕುಡೊಂಕುಗಳನ್ನು ತಿದ್ದುವ ಕೀರ್ತನೆಗಳನ್ನು ಕೊಟ್ಟ ಪುರಂದರ ದಾಸರ ಕೃತಿಗಳನ್ನು ತಾಯಂದಿರಿಗೆ ಹೇಳಿಕೊಡಲು ಆರಂಭಿಸಿದ್ದು 1984ರಲ್ಲಿ. ಅಂದು ಆರಂಭವಾದ ಅಭಿಯಾನ ರೂಪಿ ಕಾರ್ಯಕ್ರಮ ಈವರೆಗೆ ನಿಂತಿಲ್ಲ.
ಆರಂಭದಲ್ಲಿ ವರ್ಷದಲ್ಲೊಂದು ಬಾರಿ ತರಬೇತಿ ನಡೆಸಲಾಗುತ್ತಿತ್ತು. ನಂತರ ಅದು ವಿಸ್ತಾರಗೊಂಡು ಶಿವಮೊಗ್ಗ ನಗರದ ವಿವಿಧ ಬಡಾವಣೆ ತಲುಪಿತು. ಪ್ರತಿ ವರ್ಷ ಸರಿ ಸುಮಾರು ಒಂದು ಸಾವಿರಕ್ಕೂ ಅಧಿಕ ಮಾತೆಯರು ಈ ಭಜನೆ- ದೇವರನಾಮ ತರಬೇತಿ ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರತಿ ವರ್ಷವೂ ಸರಿಸುಮಾರು 8ರಿಂದ 10 ದೇವರನಾಮ ಹೇಳಿಕೊಡಲಾಗುತ್ತಿದೆ.
ಅಭಿಯಾನದ ವ್ಯಾಪ್ತಿ ಇಷ್ಟಕ್ಕೇ ನಿಲ್ಲುವುದಿಲ್ಲ. ಗುರುಗುಹ ಸಂಗೀತ ಮಹಾವಿದ್ಯಾಲಯದಲ್ಲಿ ಸಂಗೀತ ಕಲಿತು ಬೇರೆ ಬೇರೆ ಊರುಗಳಲ್ಲಿರುವ ಹಿರಿಯ ವಿದ್ಯಾರ್ಥಿಗಳು ಈ ಭಜನಾ ತರಬೇತಿ ಶಿಬಿರಗಳನ್ನು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಶಿವಮೊಗ್ಗದಲ್ಲಿ ಹುಟ್ಟಿದ ಈ ಭಜನಾ ಅಭಿಯಾನ ಬೆಂಗಳೂರನ್ನು ತಲುಪಿದೆ. ಮಹಾನಗರದ 6ಕ್ಕೂ ಹೆಚ್ಚುಕಡೆ ಶಿಬಿರ ನಡೆಯುವುದುಂಟು. ಹಾಗೆಯೇ ಬೇರೆ ಬೇರೆ ಊರುಗಳಲ್ಲೂ ಸಹ ಶಿಬಿರ ನಡೆಸಲಾಗುತ್ತಿದೆ.
ಪ್ರತಿ ವರ್ಷ ಶಿಬಿರ ಆರಂಭಕ್ಕೆ ಗುರುಗುಹದಲ್ಲಿ ಪೂರ್ವತಯಾರಿ ಆರಂಭವಾಗುತ್ತದೆ. ಪುರಂದರ ದಾಸರು ರಚಿಸಿದ 10 ರಚನೆಗಳನ್ನು ಆಯ್ಕೆ ಮಾಡಿ, ಅದಕ್ಕೆ ಸರಳ ಸಂಗೀತ ಸಂಯೋಜನೆ ಮಾಡಿಕೊಳ್ಳಲಾಗುತ್ತದೆ. ನಂತರ ಅದನ್ನು ಗುರುಗುಹದ ಶಿಕ್ಷಕರಿಗೆ ಹೇಳಿಕೊಡಲಾಗುತ್ತದೆ. ಹೀಗೆ ಕಲಿತ ಶಿಕ್ಷಕರೆಲ್ಲಾ ವಿವಿಧ ಬಡಾವಣೆಯ ಆಯ್ದ ಸ್ಥಳಗಳಲ್ಲಿ ಭಜನೆ ಹೇಳಿಕೊಡಲಾರಂಭಿಸುತ್ತಾರೆ.
ಮನೆಯಲ್ಲಿ ದೀಪ ಹಚ್ಚುವಾಗ ಅಥವಾ ಅರಿಶಿಷಿಣ ಕುಂಕುಮಕ್ಕೆ ಹೋದ ಸಂದರ್ಭಗಳಲ್ಲಿ ಇಂದು ಭಜನೆ ಕೇಳುವುದೇ ಇಲ್ಲ. ಕನಿಷ್ಠ ಈ ಪರಂಪರೆ ಉಳಿಯಬೇಕೆಂಬ ಉದ್ದೇಶದಿಂದ ದೇವರನಾಮಗಳನ್ನು ಹೇಳಿಕೊಡಲಾಗುತ್ತಿದೆ. ಯಾವುದೇ ಸಂಗೀತದಲ್ಲಿ ತಯಾರಿ ಇಲ್ಲದಂತಹ ಮಾತೆಯರಿಗೆ ದೇವರ ನಾಮಗಳನ್ನು ಕಲಿಸಲಾಗುತ್ತಿದೆ.
ಸಹಜವಾಗಿ ಮನುಷ್ಯನ ದೇಹದಲ್ಲಿ ಉಸಿರಿದ್ದಂತೆ ದೇಶದಲ್ಲಿ ಭಜನೆ ಇತ್ತು. ಆದರಿಂದು ಅಲ್ಲೆಲ್ಲೋ ಅರ್ಧಂಬರ್ಧ ಕೇಳುತ್ತೇವೆ. ಒಂದು ಕಾಲದಲ್ಲಿ ಕುಟುಂಬದಲ್ಲಿ ಭದ್ರತೆಯನ್ನು ತರುತ್ತಿದ್ದ ಭಜನೆ ಇಲ್ಲವಾಗಿದೆ. ಇದು ಮಹಾ ದೊಡ್ಡ ಕಂದಕವೇ ಸರಿ. ಇವೆಲ್ಲದರ ಆಲೋಚನೆಯಲ್ಲಿ ಈ ಅಭಿಯಾನ ಹುಟ್ಟಿಕೊಂಡಿತು. ಪ್ರತಿ ವರ್ಷ ಭಜನೆ ಶಿಬಿರ ನಡೆಸುವುದರಿಂದ ನಮ್ಮ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳು ಹೆಚ್ಚಬೇಕೆಂಬ ಉದ್ದೇಶವಿಲ್ಲ. ಶಿಬಿರ ನಡೆಸುತ್ತೇವೆಂಬ ಕೀರ್ತಿ ಬಾವುಟ ಬೇಕೆಂಬ ಹಂಬಲವೂ ಇಲ್ಲ. ದಾಸ ಸಾಹಿತ್ಯವನ್ನು ಉಳಿಸುತ್ತಿರುವವರು ಸಂಗೀತಗಾರರಾದರೂ ಸಂಗೀತಗಾರರರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ದಾಸ ಸಾಹಿತ್ಯ ರಚನೆ ಮಾಡಿದ್ದಲ್ಲ. ಹೀಗಾಗಿ ಹಿಂದೆ ಪ್ರತಿ ಮನೆಯ ಗಂಡಸು, ಹೆಂಗಸು ಭಜನೆಯ ಮೂಲಕ ತಮ್ಮ ದೈವಿ ಭಾವನೆ ಅರ್ಪಿಸುವ ಕ್ರಿಯೆ ಇತ್ತು. ಅದನ್ನು ಉಳಿಸಬೇಕೆಂಬ ಉದ್ದೇಶ ಅಭಿಯಾನದ್ದು.
ಪುರಂದರ ಆರಾಧನೆಯಂದು ಅರ್ಪಣೆ
ಒಂದು ತಿಂಗಳ ಕಾಲ ಮಧ್ಯಾಹ್ನ 2.30ರಿಂದ 5.30ರವರೆಗೆ ವಿವಿಧ ಬಡಾವಣೆಗಳಲ್ಲಿ ಒಂದು ತಾಸಿನ ವಿವಿಧ ಅವಧಿಯಲ್ಲಿ ತರಬೇತಿ ನೀಡಲಾಗುತ್ತಿದೆ. ವೃತ್ತಿ ನಿರತ ಮಹಿಳೆಯರಿಗೆ ಪ್ರತ್ಯೇಕ ಬ್ಯಾಚ್ ನಡೆಯುತ್ತದೆ.
ಅಂತಿಮವಾಗಿ ಒಂದು ತಿಂಗಳ ತರುವಾಯ ದೇವರನಾಮ ಕಲಿತ ಎಲ್ಲಾ ಮಹಿಳೆಯರು ಪುರಂದರ ದಾಸರ ಆರಾಧನೋತ್ಸವದಂದು ಸೇರಿಕೊಂಡು ನಗರ ಸಂಕೀರ್ತನೆಯಲ್ಲಿ ಪಾಲ್ಗೊಳ್ಳುತ್ತಾರೆ. ಒಟ್ಟಿಗೆ ಹಾಡಿ ಸಮರ್ಪಿಸುತ್ತಾರೆ. ಜೊತೆಗೆ ಮನೆಗಳಲ್ಲಿ ಈ ಪಂರಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
- ಶ್ರೀಕಾಂತ ಭಟ್