ನಿಮ್ಮ ಕಣ್ಣುಗಳನ್ನು ಮುಚ್ಚಿ ಸುಮ್ಮನೆ ಕುಳಿತುಕೊಳ್ಳಿ. ಮನಸ್ಸಿನ ತುಂಬಾ ಹಲವಾರು ಯೋಚನೆಯ ಮೋಡಗಳು ಆವರಿಸಿಕೊಳ್ಳುವುದು ನಿಮ್ಮ ಗಮನಕ್ಕೆ ಬರುತ್ತದೆ. ನಿಮ್ಮ ದೇಹ, ಆರೋಗ್ಯ, ಉದ್ಯೋಗ, ವ್ಯವಹಾರ, ಆರ್ಥಿಕ ಪರಿಸ್ಥಿತಿ, ತಂದೆ-ತಾಯಿ, ಹೆಂಡತಿ-ಮಕ್ಕಳು, ಭೂತ, ಭವಿಷ್ಯ ಹೀಗೆ ವಿಷಯಭೇದ ಇಲ್ಲದಂತೆ ಯೋಚನೆಗಳು ಗುಂಪುಗಟ್ಟುತ್ತವೆ. ಈ ಯೋಚನೆಗಳೇ ಮಾನಸಿಕ ಆಯಾಸವಾಗಿ ಪರಿವರ್ತಿತವಾಗೋದು. ಈ ಮಾನಸಿಕ ದಣಿವು ಪ್ರತಿದಿನ, ಪ್ರತಿಕ್ಷಣ ನಿಮಗೆ ಅರಿವಿಲ್ಲದಂತೆ ನಿಮ್ಮನ್ನು ಹಣಿದುಹಾಕುತ್ತಿರುತ್ತದೆ. ನಿಮ್ಮ ಅರಿವಿಗೆ ಬರುವಷ್ಟರಲ್ಲಿ ನಿಮ್ಮ ತಲೆಗೂದಲು ಬೆಳ್ಳಗಾಗಿರುತ್ತದೆ. ಬೆನ್ನೆಲುಬು ಬಾಗಿರುತ್ತದೆ. ಚರ್ಮ ಸುಕ್ಕುಗಟ್ಟಿರುತ್ತದೆ. ದೃಷ್ಟಿ ಮಂಕಾಗಿರುತ್ತದೆ. ದೇಹವು ರೋಗದ ಗೂಡಾಗಿರುತ್ತದೆ. ಇವೆಲ್ಲವುಗಳ ಮೂಲಕ ನಿಮ್ಮ ಮನೋದಣಿವು ಇನ್ನಷ್ಟು ಹೆಚ್ಚಾಗುತ್ತದೆಯೇ ವಿನಹ ಕಮ್ಮಿಯಾಗುವುದಿಲ್ಲ. ನಿಮ್ಮನ್ನು ಅತಿಬೇಗ ವೃದ್ಧರಾಗಿಸುವಲ್ಲಿ ಮಾನಸಿಕ ದಣಿವಿನ ಪಾತ್ರ ಅತಿ ಹಿರಿದು.
ಸ್ಟ್ರೆಸ್ನಿಂದ ಉಂಟಾಗುವ ಕಾಯಿಲೆಗಳಿಗೆ ಮತ್ತು ವೃದ್ಧಾಪ್ಯಕ್ಕೆ ಮೂಲಕಾರಣ ಅವಿದ್ಯೆ ಹಾಗೂ ಅಜ್ಞಾನ. ಒಬ್ಬ ಮಾಮೂಲಿ ಮನುಷ್ಯನಿಗೆ ತನ್ನ ದೈನಂದಿನ ಜಂಜಾಟದ ನಡುವೆ ಜೀವನದ ಸತ್ಯಗಳ ಬಗೆಗಿನ ಜ್ಞಾನ ಪಡೆಯಲು ಸಮಯವೂ ಆಗುವುದಿಲ್ಲ. ಸಮಯವಿದ್ದರೂ ಅದನ್ನು ಕಲಿಯುವ ಮನಸ್ಥಿತಿ ಇರುವುದಿಲ್ಲ. ಸನಾತನ ಕ್ರಿಯೆ ಮತ್ತು ಷಣ್ಮುಖಿ ಮುದ್ರೆ ಇವುಗಳನ್ನು ಅಭ್ಯಸಿಸುವುದರಿಂದ ನಿಮ್ಮೊಳಗಿರುವ ಸತ್ಯದ ಒಂದು ಕಿರುಚಿತ್ರಣ ದೊರಕುತ್ತದೆ. ಇದಕ್ಕಾಗಿ ನೀವು ಬಹಳ ಸಮಯ ವಿನಿಯೋಗಿಸುವ ಅಗತ್ಯವೇನಿಲ್ಲ. ನಿಮ್ಮ ದೈನಂದಿನ ಬದುಕಿನ ಭಾಗವಾಗಿ ಈ ಕ್ರಿಯೆಗಳನ್ನು ಪಾಲಿಸಬಹುದು. ಬದುಕಿನ ಪ್ರತಿ ಕ್ಷಣದಲ್ಲೂ ನಮ್ಮ ಪಂಚೇಂದ್ರಿಯಗಳಲ್ಲಿ ಒಂದು ಇಂದ್ರಿಯ ಜಾಗೃತವಾಗಿಯೇ ಇರುತ್ತದೆ. ಅದು ನಾವು ಆಶಿಸುವ ವಸ್ತುವಿನ ಹಿಂದೆ ಓಡುತ್ತಲೇ ಇರುತ್ತದೆ. ಮನುಷ್ಯನ ದೇಹಕ್ಕೆ ಆತನ ಪಂಚೇಂದ್ರಿಯಗಳೇ ಆಸೆಗಳನ್ನು ಸ್ವಾಗತಿಸುವ ದ್ವಾರಗಳು. ಷಣ್ಮುಖಿಮುದ್ರೆ ಈ ಬಾಗಿಲುಗಳನ್ನು ಮುಚ್ಚಿ ಮನುಷ್ಯನ ಒಳಗಿರುವ ನಿಜಜಗತ್ತು ಅನುಭವಕ್ಕೆ ಬರುವಂತೆ ಮಾಡುತ್ತದೆ.
ಬೆನ್ನನ್ನು ನೇರವಾಗಿಟ್ಟುಕೊಂಡು ಸಿದ್ಧಾಸನದಲ್ಲಿ ಕುಳಿತುಕೊಳ್ಳಿ. ನಿಮ್ಮ ಕೈಮಂಡಿಯನ್ನು ಭುಜದ ಎತ್ತರಕ್ಕೆ ಸಮಾನಾಂತರದಲ್ಲಿತ್ತುಕೊಂಡು ಕೈಗಳನ್ನು ಮುಖದ ಬಳಿ ತನ್ನಿ. ಹೊರಪ್ರಪಂಚದ ಯಾವುದೇ ಶಬ್ದವೂ ನಿಮ್ಮ ಕಿವಿಯನ್ನು ಪ್ರವೇಶಿಸದಂತೆ ನಿಮ್ಮ ಹೆಬ್ಬೆರಳಿನಿಂದ ಕಿವಿಯ ರಂಧ್ರವನ್ನು ಪೂರ್ತಿಯಾಗಿ ಮುಚ್ಚಿ. ಆನಂತರ ಕಣ್ಣು ಮುಚ್ಚಿಕೊಳ್ಳಿ. ನಿಮ್ಮ ಎರಡೂ ಕೈಗಳ ತೋರು ಬೆರಳನ್ನು ಮುಚ್ಚಿದ ಕಣ್ಣಿನ ಮೇಲೆ ಒತ್ತಿಕೊಳ್ಳಿ. ಕಣ್ಣಿನೊಳಗೆ ಯಾವುದೇ ರೀತಿಯಲ್ಲೂ ಬೆಳಕು ಪ್ರವೇಶಿಸುತ್ತಿಲ್ಲವೆಂದು ಖಾತ್ರಿ ಪಡಿಸಿಕೊಳ್ಳಿ. ಈಗ ನಿಮ್ಮ ನಡುಬೆರಳಿನ ತುದಿಯಿಂದ ಮೂಗಿನ ಎರಡೂ ಹೊಳ್ಳೆಗಳನ್ನು ಮುಚ್ಚಿಕೊಳ್ಳಿ. ತುಂಬ ಒತ್ತಡ ಬೇಡ. ಆಗಾಗ ಗಾಳಿ ಎಳೆದುಕೊಂಡು ಬಿಡುತ್ತಿರಿ. ನಿಮ್ಮ ಉಂಗುರದ ಬೆರಳು ಹಾಗೂ ಕಿರುಬೆರಳುಗಲಿಂದ ನಿಮ್ಮ ಮೇಲ್ದುಟಿ ಮತ್ತು ಕೆಲದುಟಿಗಳನ್ನು ಮುಚ್ಚಿ. ಅಲ್ಲಿಗೆ, ಎರಡು ಕಣ್ಣುಗಳು, ಎರಡು ಕಿವಿಗಳು, ಮೂಗಿನ ಎರಡು ಹೊಳ್ಳೆಗಳು ಹಾಗೂ ಬಾಯಿ ಹೀಗೆ ಒಟ್ಟು ಮಾಯೆಯ ಏಳು ದ್ವಾರಗಳನ್ನು ಮುಚ್ಚಿದಂತಾಯಿತು. ಈ ಸ್ಥಿತಿಯಲ್ಲಿ ನಿಮ್ಮೊಳಗಿನ ಶಬ್ದ ಹಾಗೂ ಮಾತನ್ನು ಕೇಳಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಉಸಿರಾಟದೊಂದಿಗೆ ಅದು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಎಂಬುದನ್ನು ಗಮನಿಸುತ್ತಿರಿ. ಉಸಿರನ್ನು ನಿಮಗೆ ಕಷ್ಟವೆನಿಸುವಷ್ಟು ಹತೋಟಿಯಲ್ಲಿ ಇಡಲು ಹೋಗಬೇಡಿ. ನಿದ್ರಾಹೀನತೆಯಿಂದ, ಖಿನ್ನತೆಯಿಂದ ಹಾಗೂ ಮಾನಸಿಕ ದಣಿವಿನಿಂದ ಬಳಲುತ್ತಿರುವವರಿಗೆ ಸಿದ್ಧಾಸನ ಅತ್ಯಂತ ಪ್ರಭಾವಿ ತಂತ್ರ.
ವಿಶೇಷ ಗಮನಕ್ಕೆ: ಈ ಆಸನ ಪ್ರಯೋಗದ ಆರಂಭದ ದಿನಗಳಲ್ಲಿ ತುಂಬಾ ಹೊತ್ತು ಮೂಗು ಮುಚ್ಚಿ ಉಸಿರು ಬಿಗಿ ಹಿಡಿಯಲು ಹೋಗಬೇಡಿ. ಆಗಾಗ್ಗೆ ಮೂಗಿನಿಂದ ಗಾಳಿಯ ಸೇವನೆ ಆಗುತ್ತಿರಲಿ.
Yogi Ashwini. dhyan@dhyanfoundation.com ಮೊಬೈಲ್: 7406175228.
- ಯೋಗಿ ಅಶ್ವಿನಿ