ನೈಮಿಶಾರಣ್ಯ ವಾಸಿಗಳಾದ ಶೌನಕಾದಿ ಮುನಿಗಳಿಗೆ ಸಕಲ ಪುರಾಣೇತಿಹಾಸ ಜ್ಞಾನಿಗಳಾದ ಸೂತಪುರಾಣಿಕರು 47 ಅಧ್ಯಾಯಗಳ 55,000 ಶ್ಲೋಕಗಳನ್ನೊಳಗೊಂಡ ಪದ್ಮ ಪುರಾಣವನ್ನು 12 ವರ್ಷ ನಡೆಯುವ ಸತ್ರಯಾಗದಲ್ಲಿ ಹೇಳಿದರು. ಇದರಲ್ಲಿ ಸೃಷ್ಟಿಕಾಂಡ, ಭೂಮಿಕಾಂಡ, ಸ್ವರ್ಗಕಾಂಡ, ಪಾತಾಳ ಕಾಂಡ ಮತ್ತು ಉತ್ತರಕಾಂಡಗಳೆಂಬ 5 ಕಾಂಡಗಳಿವೆ.
ಮೊದಲನೆಯದಾದ ಸೃಷ್ಟಿಕಾಂಡದಲ್ಲಿ ಪುಲಸ್ತ್ಯ ಮುನಿ ಬ್ರಹ್ಮನಿಗೆ ಹೇಳಿದ ಧರ್ಮ ಹಾಗೂ ಧರ್ಮಸೂಕ್ಷ್ಮಗಳ ಸವಿಸ್ತಾರವಾದ ವರ್ಣನೆ ಇದೆ. ಸೃಷ್ಟಿಯ ರಹಸ್ಯ ಅದರ ಹಿಂದಿನ ಪರಬ್ರಹ್ಮ ತತ್ವಗಳ ಸಾರಭೂತವಾದ ವಿವರಣೆ ಇದೆ. ಈ ಬ್ರಂಹಾಂಡದಲ್ಲಿ ಅಯೋಧ್ಯ, ಮಥುರಾ, ಮಾಯಾ, ಕಾಶಿ, ಕಾಂಚಿ, ಅವಂತಿಕಾ, ಪುರಿ, ದ್ವಾರಕಾಪುರಿಗಳು ಸಪ್ತಮೋಕ್ಷ ಸ್ಥಳಗಳೆಂಬ ಉಲ್ಲೇಖವಿದೆ.
ಇದರಲ್ಲಿ ಪ್ರಮುಖವಾಗಿ ಮಾಘಮಾಸ ಮಹಾತ್ಮ್ಯೆ, ವಿಭೂತಿ ಮಹಾತ್ಮ್ಯೆಗಳ ವಿವರಣೆ ಇದೆ. ಶ್ರೀಕೃಷ್ಣನು ದ್ವಾದಶ ಮಾಸಗಳಲ್ಲಿ ಮಾಘಮಾಸವು ಅತ್ಯಂತ ಶ್ರೇಷ್ಠವಾದ ಮಾಸವೆಂದು ಉದ್ಘೋಷ ಮಾಡಿರುತ್ತಾನೆ. ಈ ಮಾಸದಲ್ಲಿ ಸೂರ್ಯೋದಯಕ್ಕಿಂತ ಮೊದಲು ನದಿ, ತಕಾಟ, ಸಂಗಮ, ಸರೋವರ, ಸಮುದ್ರಗಳಲ್ಲಿ ಸಂಕಲ್ಪ ಪೂರ್ವಕ ಸ್ನಾನ ಮಾಡುವುದರಿಂದ ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷಗಳು ಪ್ರಾಪ್ತವಾಗುವುದೆಂದು ಹೇಳಲಾಗಿದೆ.
ಸ್ನಾನ ಮಾಡುವಾಗ ಸೂರ್ಯನಾರಾಯಣನಿಗೆ ಅರ್ಘ್ಯ ಸಮರ್ಪಿಸಿ, 'ಹೇ ಭಾಸ್ಕರನೇ ಹೊರಗಿನ, ಒಳಗಿನ ಕಶ್ಮಲಗಳನ್ನು ದೂರಮಾಡಿ, ಜನರಿಗೆ ಜ್ಞಾನ ಪ್ರದಾನ ಮಾಡುವ ನಿನಗೆ ಅರ್ಘ್ಯವನ್ನು ಪ್ರಧಾನ ಮಾಡುತ್ತಿದ್ದೇನೆ. ನನಗೆ ಮಾಘಸ್ನಾನದ ಕಲ್ಪೋಕ್ತ ಫಲವನ್ನು ಅನುಗ್ರಹಿಸು' ಎಂದು ಕೇಳಿಕೊಳ್ಳಬೇಕಾಗುತ್ತದೆ.
'ಶ್ರೀಕೃಷ್ಣಾ ಈ ಪುಣ್ಯತೀರ್ಥದಲ್ಲಿ ಸ್ನಾನ ಮಾಡುತ್ತಿದ್ದೇನೆ, ಈ ಮಾಘಸ್ನಾನದಿಂದ ಪ್ರಸನ್ನನಾಗಿ ನನ್ನನ್ನು ಉದ್ಧರಿಸು' ಎಂಬುದಾಗಿ ಮೂರು ಬಾರಿ ಹೇಳಿ, ಮೂರು ಸಲ ನೀರಿನಲ್ಲಿ ಮುಳುಗಬೇಕು. ನಂತರ ಇಷ್ಟದೇವತಾ ಜಪ, ಸ್ತೋತ್ರ ಪಠಣ, ಗಾಯತ್ರಿಗಳನ್ನು ಮಾಡಿ, ಯಥಾಶಕ್ತಿ ದಾನ ಮಾಡುವುದರಿಂದ ಐಹಿಕ ಉನ್ನತಿಗಳೂ, ಅಂತ್ಯದಲ್ಲಿ ಮೋಕ್ಷವೂ ದೊರಕುತ್ತದೆ ಎಂಬುದಾಗಿ ಪದ್ಮ ಪುರಾಣದಲ್ಲಿ ಹೇಳಿದೆ.
ಇಲ್ಲಿ ಕುತ್ಸಮುನಿಯು ತನ್ನ ಕುಮಾರ ಮೃಗಶೃಂಗನಿಗೆ ಮಾಘಸ್ನಾನದಿಂದ ದೊರಕುವ ಅಪೂರ್ವ ಶಕ್ತಿಗಳ ರಹಸ್ಯವನ್ನು ವರ್ಣಿಸಿದ್ದಾನೆ. ಈ ಕಾಂಡದ ಅತ್ಯಂತ ಮಹತ್ವದ ವಿಷಯವೇನೆಂದರೆ ಮೃಗಶೃಂಗ ಮುನಿಯಿಂದ ವಿರಚಿತವಾದ 'ಶ್ರೀಯಮಸ್ತೋತ್ರ'. ಇದು ಅತ್ಯಂತ ದುರ್ಲಭವಾದದು, ಈ ಸ್ತೋತ್ರವನ್ನು ಮಾಘಮಾಸದಲ್ಲಿ ನಿತ್ಯ ಪಠಿಸುವವರಿಗೆ ಪುನರ್ಜನ್ಮವಿಲ್ಲವೆಂದು ಪ್ರತಿಪಾದಿತವಾಗಿದೆ.
ಎರಡನೇ ಭೂಮಿಕಾಂಡದಲ್ಲಿ ಸಪ್ತದ್ವೀಪಗಳಾದ ಜಂಬೂದ್ವೀಪ (ಇದೇ ಭಾರತ), ಪ್ಲಕ್ಷ, ಶುಕ, ಕ್ರೌಂಚ, ಶಾ, ಶಾಲ್ಮಲಿ ಮತ್ತು ಪುಷ್ಕರ ದೇಶಗಳ ವರ್ಣನೆ ಇದೆ. ಪೃಥು, ಯಯಾತಿಗಳಂಥ ಮಹಾರಾಜರ ಕಥೆಯೂ, ಅವರ ವಂಶಸ್ಥರ ಕಥೆಗಳೂ, ಅನೇಕ ಋಷಿ-ಮುನಿಗಳ ಕಥೆಯೂ ಇದರಲ್ಲಿದೆ.
ಮೂರನೇ ಸ್ವರ್ಗ ಕಾಂಡದಲ್ಲಿ ಸ್ವರ್ಗದ ವಿವರಣೆ ಇದೆ. ಮನುಷ್ಯ ಮಾತ್ರನಾದವನು ಸನ್ಮಾರ್ಗದಲ್ಲಿ ಸಾಗಿ ಜೀವನಯಾಪನೆ ಮಾಡಿ, ಮಾತಾ- ಪಿತೃ ಋಣ, ಆಚಾರ್ಯ ಋಣಗಳನ್ನು ಯಾವ ರೀತಿಯಲ್ಲಿ ತೀರಿಸಬೇಕೆಂಬ ವಿಚಾರಗಳ ವಿವರಣೆ ಇದೆ.
ನಾಲ್ಕನೇ ಪಾತಾಳ ಕಾಂಡದಲ್ಲಿ ಅತಳ, ವಿತಳ, ಸುತಳ, ರಸಾತಳ, ತಲಾತಳ, ಪಾತಾಳಗಳೆಂಬ ಊರ್ಧ್ವ ಲೋಕಗಳ ವರ್ಣನೆ ಇದೆ.
ಐದನೇ ಉತ್ತರ ಕಾಂಡದಲ್ಲಿ ಋಷಿ ಉಗ್ರಸ್ರವ ತನ್ನಿ ಶಿಷ್ಯಕೋಟಿಗೆ, ತನ್ನ ದಿವ್ಯಜ್ಞಾನದಿಂದ ಶ್ರೀರಾಮಾವತಾರ ಮತ್ತು ಶ್ರೀಕೃಷ್ಣಾವತಾರದ ಕಥೆ ಮತ್ತು ಉದ್ದೇಶಗಳನ್ನು ಹೇಳುತ್ತಾನೆ. ಇದರಲ್ಲಿ ಶ್ರೀವಿಷ್ಣು ಸಹಸ್ರನಾಮ, ಶ್ರೀರಾಮ ಸಹಸ್ರನಾಮಗಳ ಅರ್ಥಸಹಿತ ವಿವರಣೆ ಇದೆ. ಉಪಸಂಹಾರದಲ್ಲಿ ಸಾಧನ ಚತುಷ್ಟಯಗಳಾದ ವಿವೇಕ. ವೈರಾಗ್ಯ, ಶಮಾದಿಷಟ್ ಸಂಪತ್ತಿ, ಮುಮುಕ್ಷತ್ವಗಳು ಅನೇಕ ರೀತಿಯಲ್ಲಿ ವರ್ಣಿಸಲ್ಪಟ್ಟಿದೆ.
= ವಿ. ಕೇಶವಮೂರ್ತಿ