ಬಸಂತ ಪಂಚಮಿಯಿಂದ ಶುರು ಮಾಡೋಣ
ವೇದಗಳು ಜಗತ್ತಿನ ಎಲ್ಲ ಸಂಸ್ಕೃತಿಗಳಿಗಿಂತಲೂ ಪ್ರಾಚೀನ ಎಂದು ಪರಿಗಣಿಸಲಾಗಿದೆ. ಅವು ಜ್ಞಾನದ ಅತಿ ಪುರಾತನ ಮೂಲಗಳೂ ಹೌದು. ಇಡೀ ಜಗತ್ತು ಭರತವರ್ಷವನ್ನು ಜ್ಞಾನದ ಕೇಂದ್ರವಾಗಿಯೇ ನೋಡುತ್ತಿದೆ. ಪೈಥಾಗೋರಸ್ನಿಂದ ಹಿಡಿದು ಅಮೆರಿಕದ ವಿದ್ವಾಂಸ ಹ್ಯೂಸ್ಟನ್ ಸ್ಮಿತ್ವರೆಗೆ ಬಹಳಷ್ಟು ಮಂದಿ ಜ್ಞಾನಿಗಳು ಭಾರತ ವಿಶ್ವದ ಎಲ್ಲ ಜ್ಞಾನಗಳ ಮೂಲ ಎಂದು ಒಪ್ಪಿಕೊಂಡಿದ್ದಾರೆ. 'ಪಶ್ಚಿಮದ ದೇಶಗಳು 6000 ವರ್ಷದ ಹಿಂದೆ ಬ್ಪಹ್ಮಾಂಡ ಹೇಗಿತ್ತು ಎನ್ನುವ ಬಗ್ಗೆ ಈಗ ತಲೆ ಕೆಡಿಸಿಕೊಳ್ಳುತ್ತಿದೆ. ಆದರೆ ಬ್ರಹ್ಮಾಂಡದ ಮೂಲ, ತಾರಾ ಪುಂಜಗಳ ಬಗ್ಗೆ ಸಾವಿರಾರು ವರ್ಷ ಹಿಂದೆಯೇ ಹೇಳಿದೆ' ಎಂದಿದ್ದಾರೆ ಹ್ಯೂಸ್ಟನ್. ಇನ್ನು ಚೀನಾದ ಲಿನ್ ಯುತಾಂಗ್ ಅವರು, 'ಶಿಕ್ಷಣ, ವ್ಯಾಕರಣ ಸೇರಿದಂತೆ ಹತ್ತಾರು ವಿಚಾರಗಳಲ್ಲಿ ಭಾರತವೇ ಚೀನಾಕ್ಕೆ ಗುರು' ಎಂದು ಪ್ರಾಂಜಲವಾಗಿ ಒಪ್ಪಿಕೊಂಡಿದ್ದಾರೆ. ಆಧುನಿಕ ವಿಜ್ಞಾನಿ ಅಲ್ಬರ್ಟ್ ಐನ್ಸ್ಟೀನ್ ಕೂಡ, 'ಎಣಿಕೆಯ ವೈಜ್ಞಾನಿಕ ಕ್ರಮದ ಬಗ್ಗೆ ಸಂಶೋಧನೆಗಳು ಆಗದೇ ಇದ್ದ ಕಾಲದಲ್ಲಿಯೇ ಎಣಿಕೆಯ ಕ್ರಮವನ್ನು ಹೇಳಿಕೊಟ್ಟ ಭಾರತೀಯರಿಗೆ ನಾವು ಧನ್ಯವಾದ ಸಲ್ಲಿಸಬೇಕು' ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿ ಜ್ಞಾನವು ತಿಳಿವಳಿಕೆಯಿಂದ ಹೇಗೆ ಭಿನ್ನ ಎಂದು ಹೇಳುವುದು ನನ್ನ ಉದ್ದೇಶ. ತಿಳಿವಳಿಕೆ ಮೆದುಳು ಮತ್ತು ಪಂಚೇಂದ್ರಿಯಗಳಿಗಷ್ಟೇ ಸಂಬಂಧಿಸಿದ್ದು. ಜ್ಞಾನ ನೀವು ಏನು ಎನ್ನುವುದರ ತಿರುಳು. ಅದು ಅನುಭವಜನ್ಯವಾದದ್ದು. ನಿಮ್ಮ ಬದುಕಿನ ಅನುಭವಗಳನ್ನೇ ಜ್ಞಾನ ಎಂದರೂ ತಪ್ಪಲ್ಲ. ವೇದಗಳು ಗ್ರಂಥಗಳಲ್ಲ ನಿಜ, ಅವು ನಮ್ಮ ಋಷಿಮುನಿಗಳು ಆಳ ಧ್ಯಾನದ ಉತ್ತುಂಗಾವಸ್ಥೆಯಲ್ಲಿ ಕಂಡುಕೊಂಡ ಅನುಭವ ದೀಪಿಕೆಗಳು. ಪುರಾಣಗಳ ಪ್ರಕಾರ, ಜ್ಞಾನದ ಅಧಿದೇವತೆ ಸರಸ್ವತಿಯೊಂದಿಗೆ ಸೃಷ್ಟಿಕರ್ತನಾದ ಬ್ರಹ್ಮನಿಂದ ವೇದಗಳು ಜನಿಸಿದವು ಎಂದು ಹೇಳುತ್ತವೆ.
ನಮ್ಮ ಸಂಸ್ಕೃತಿ ಜ್ಞಾನಕ್ಕೆ ಬಹಳವೇ ಮಹತ್ವ ನೀಡುತ್ತಿದೆ. ಜೀವನದ ಸಂಸ್ಕಾರ ಶುರುವಾಗುವುದೇ ಉಪನಯನ ಅಥವಾ ಬ್ರಹ್ಮೋಪದೇಶದಿಂದ. ಉಪನಯನ ಎಂದರೆ ಮಗುವನ್ನು ಗುರುವಿನ ಬಳಿ ಕಳುಹಿಸುವ ಸಂಸ್ಕಾರ. ಅಂದರೆ ಬ್ರಹ್ಮಚರ್ಯಾಶ್ರಮಕ್ಕೆ, ಆ ಮೂಲಕ ಜ್ಞಾನ ಗಳಿಕೆಗೆ ಅಂದರೆ ವಿದ್ಯಾರ್ಥಿ ಜೀವನಕ್ಕೆ ಇದುವೇ ಪ್ರವೇಶ. ಕಲಿಕೆ, ಮಾತು, ಕಲೆ ಎಲ್ಲವೂ ಶುರುವಾಗುವುದು ಗುರುವಿನ ಸಮ್ಮುಖದಲ್ಲಿ. ಬ್ರಹ್ಮಚಾರಿಗಳ ಜೀವನದಲ್ಲಿ ದೇವಿ ಸರಸ್ವತಿ ಅನುಗ್ರಹವೂ ಸಾಕಷ್ಟಿರುತ್ತದೆ. ನಮ್ಮ ಸಂಪ್ರದಾಯದ ಪ್ರಕಾರ ಯಾವುದೇ ಶಿಕ್ಷಣ, ಉಪನಯನ ಆರಂಭವಾಗುವುದು ಉತ್ತರಾಯಣದಲ್ಲಿ. ಮಾಘದಿಂದ ಫಾಲ್ಗುಣದ ಅವಧಿಯಲ್ಲಿಯೇ ಉಪನಯನಗಳನ್ನು ನಡೆಸಲಾಗುತ್ತದೆ. ಅದರಲ್ಲೂ ಮಾಘ ಮಾಸದ ಬಸಂತ ಪಂಚಮಿಯು ಕಲಿಕೆ ಆರಂಭಿಸಲು ಅತ್ಯಂತ ಪ್ರಶಸ್ತ ದಿನ. ಗುರುಮುಖೇನ ಕಲಿತ ಮಂತ್ರ-ತಂತ್ರಗಳ ಮೂಲಕ ಸಾಧನೆಗೆ ತೊಡಗಿದರೆ ಸರಸ್ವತಿ ಬೇಗ ಒಲಿಯುತ್ತಾಳೆ ಎನ್ನುವ ನಂಬಿಕೆ ಇಂದಿಗೂ ಇದೆ.
-ಯೋಗಿ ಅಶ್ವಿನಿ