ಭಕ್ತಿ-ಜ್ಯೋತಿಷ್ಯ

ಆರೋಗ್ಯ ವೃದ್ಧಿಗೆ ನಾಲ್ಕು ಸೋಪಾನ

ಸದ್ವಿಚಾರ, ಸದಾಚಾರಗಳೆರಡೂ ಸದ್ಗತಿ ಪ್ರಾಪ್ತಿಗೆ ವಿಹಿತವಾದ ಸಾಧನಗಳು. ದೇಹ ನೈರ್ಮಲ್ಯಕ್ಕೆ ವ್ರತ,  ಉಪವಾಸ, ತೀರ್ಥಯಾತ್ರೆ, ದಾನ, ತಪಸ್ಸು, ಜಪ, ಯಾಗ, ಯಜ್ಞ ಮೊದಲಾದ ಅನೇಕ ಸಾಧನಗಳನ್ನು ಶಾಸ್ತ್ರಗಳು ವಿಧಿಸಿದೆ. ಇವು ನೇರವಾಗಿ ಮೋಕ್ಷಪ್ರಾಪ್ತಿಗೆ ಸಾಧನಗಳಲ್ಲವಾದರೂ ಮೋಕ್ಷಕ್ಕೆ ಅಗತ್ಯವಾದ ಜ್ಞಾನ, ಭಕ್ತಿಗಳ ಪ್ರಾಪ್ತಿಗೆ ಮುಖ್ಯ ಸೋಪಾನಗಳಾಗಿವೆ.
ಪ್ರತಿ ವರ್ಷದ ಆಷಾಢ ಮಾಸದಿಂದ ಕಾರ್ತಿಕ ಮಾಸದವರೆಗಿನ ನಾಲ್ಕು ಮಾಸಗಳು ದೇಹಶುದ್ಧಿಗಾಗಿ ಮಾಡುವ ಮಹಾವ್ರತವೆಂದು ಪರಿಗಣಿತವಾಗಿದೆ.
ಯೋಗನಿದ್ರಾ ಕಾಲ
ಚಾತುರ್ಮಾಸ್ಯ ಎಂಬ ಶಬ್ದವೇ ಸೂಚಿಸುವಂತೆ ಇದು ನಾಲ್ಕು ತಿಂಗಳ ವ್ರತ. ಆಷಾಢ ಶುದ್ಧ ಏಕಾದಶಿಯಿಂದ ಕಾರ್ತಿಕ ಶುದ್ಧ ದಶಮಿವರೆಗೆ ಇದರ ಆಚರಣೆ. ಸೂರ್ಯ ಕರ್ಕಾಟಕ ರಾಶಿಯಲ್ಲಿರುವಾಗ ಆಷಾಢ ಶುಕ್ಲ ಏಕಾದಶಿ ದಿನದಂದು ದೇವತೆಗಳಿಗೆ ರಾತ್ರಿ ಆರಂಭವಾಗುತ್ತದೆ. ಇದು ಭಗವಂತನ ಯೋಗನಿದ್ರಾಕಾಲ. ಮಾಡಲ್ಪಟ್ಟ ಸಣ್ಣ ವ್ರತ, ನಿಯಮಗಳು ಅನಂತ ಫಲ ನೀಡುವ ಪುಣ್ಯ ವರ್ಷಕಾಲ.
ಪೌಷ್ಕರ ಸಂಹಿತೆ ತಿಳಿಸುವಂತೆ ಮಾಘ, ವೈಶಾಖ ಮಾಸಗಳಲ್ಲಿ ಆಚರಿಸುವ ಧರ್ಮಕಾರ್ಯಗಳಿಗಿಂತ ಕೋಟಿಪಟ್ಟು ಪುಣ್ಯ ಚಾತುರ್ಮಾಸ್ಯದಲ್ಲಿ ಆಚರಿಸುವ ವ್ರತಾದಿಗಳಿಗೆ ಉಂಟು.
ಭೋಗಕ್ಕೆ ವಿರಾಮ
ದೇವನು ಮಲಗಿರುವಾಗ ನಾವು ಭೋಗಕ್ಕೆ ವಿರಾಮ ಹಾಕಿ ಯೋಗಕ್ಕೆ ನಾಂದಿ ಹಾಡಬೇಕು. ಮಂಗಳಕರನಾದ ದೇವಾಧಿದೇವ ಮಲಗಿದಾಗ ಅಂತರಾತ್ಮಂಗಳ ದೃಷ್ಟಿ ಇಲ್ಲದಿರುವಾಗ ಮಾಡುವ ಕಾರ್ಯಗಳಿಗೆ ಮಂಗಳಕರವಾದ ಫಲ ಹೇಗೆ  ಉಂಟಾಗಲು ಸಾಧ್ಯ. ಇದೇ ಕಾರಣಕ್ಕೆ ಚಾತುಮಾಸ್ಯದಲ್ಲಿ ಮದುವೆ, ಮುಂಜಿ ಮುಂತಾದ ಶುಭ ಕಾರ್ಯಗಳಿಗೆ ಇದು ಪ್ರಶಸ್ತವಲ್ಲ ಎನ್ನುತ್ತದೆ ಸ್ಕಂದಪುರಾಣ.  
ಆಷಾಢ ಮಾಸ ಬಂತೆಂದರೆ ಯತಿಗಳು, ಮಠಾಧೀಶರು ತಮ್ಮ ಚಾತುರ್ಮಾಸ್ಯ ವ್ರತಕ್ಕೆ ಸಿದ್ಧತೆ ಮಾಡುತ್ತಾರೆ. ಈ ವ್ರತ ದೀಕ್ಷೆ ಸ್ವೀಕರಿಸಿದ ಅನಂತರ ಅದು ಮುಗಿಯುವವರೆಗೂ ಅವರ ಪರಿವ್ರಾಜಕತ್ವಕ್ಕೆ ವಿಶ್ರಾಂತಿ.
ಆ ಸಮಯದಲ್ಲಿ ಯತಿಗಳಾದವರು ಅಂತರ್ಮುಖಿಗಳಾಗಿ ತಮ್ಮ ಸಾಧನೆಯಲ್ಲಿ ಹೆಚ್ಚು ತೊಡಗಬೇಕು. ತೊಡಗಬೇಕು. ಹಾಗೆ ಮಾಡಿದಾಗ ಸಮಾಜ ಹಸನಾಗಲು ಸಾಧ್ಯ. ಸಾತ್ವಿಕ ಶಕ್ತಿಯ ಸಂಚಾರ ಎಲ್ಲೆಡೆ ಆಗಲು ಸಾಧ್ಯ.
ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶೈವ, ಬೌದ್ಧ, ಜೈನ ಮೊದಲಾದ ಎಲ್ಲಾ ಸಂಪ್ರದಾಯದವರು ಚಾತುರ್ಮಾಸ್ಯವನ್ನು  ಶ್ರದ್ಧೆ, ಭಕ್ತಿಗಳಿಂದ  ಆಚರಿಸುತ್ತಾರೆ. ಈ ನಾಲ್ಕು ತಿಂಗಳು ಮಳೆಗಾಲವಾದ್ದರಿಂದ ನಿರಂತರ ಮಳೆಯಿಂದಾಗಿ ಭೂಮಿಯೂ ಮೆದುವಾಗಿರುತ್ತದೆ. ಅಲ್ಲದೆ ಕ್ರಿಮಿ ಕೀಟಗಳು ಹುಟ್ಟಿಕೊಂಡಿರುವುದರಿಂದ ಆಗ ಸಂಚರಿಸಿದರೆ ತಿಳಿದೋ ತಿಳಿಯದೋ ಹಿಂಸೆ ಮಾಡಿದಂತಾಗುತ್ತದೆ.
ಅಹಿಂಸಾ ಪರಿಪಾಲನೆಗಾಗಿ ಸನ್ಯಾಸಾಶ್ರಮಿಯು ಒಂದೆಡೆ ನೆಲೆಸಿ ಸ್ವಾತ್ಮಧ್ಯಾನ ಪರಾಯಣರಾಗುವರು. ಪರಿಸರ ಪ್ರಜ್ಞೆಯ ಅಂಶವೊಂದನ್ನು ಉಳಿಸಿ ಬೆಳೆಸಲು ಈ ಆಚರಣೆ ಇಂದಿಗೂ ಜೀವಂತವಾಗಿರುವುದು ಶ್ಲಾಘನೀಯ ವಿಚಾರ.
ಚಾತುರ್ಮಾಸ್ಯ ಪರಿಕಲ್ಪನೆ, ಸ್ವಸ್ಥಜೀವನದ ಸಂಶೋಧನೆ
ಈ ನಾಲ್ಕು ತಿಂಗಳ ಕಾಲದಲ್ಲಿ ಶರೀರದ ಉಷ್ಣ ಒಂದೊಂದು ತಿಂಗಳಿನಲ್ಲೂ ಬದಲಾಗಿ, ರವಿಯ ಸಂಚಾರ ಮಾಡುವ ನಕ್ಷತ್ರಗಳ ಪ್ರಭಾವದಿಂದ ಆರೋಗ್ಯಕ್ಕೆ ಧಕ್ಕೆ ಬರುತ್ತದೆ. ಇದನ್ನು ತಪ್ಪಿಸಲು ಋತುವಿಗನುಸಾರವಾಗಿ ಮತ್ತು ಮಾಸಕ್ಕನುಸಾರವಾಗಿ ಆಹಾರ ನಿಯಮ ಮಾಡಿದ್ದಾರೆ.
ವ್ರತ ಮುಗಿದ ದಿನ ಅಂದರೆ  ಕಾರ್ತಿಕ ಶುದ್ಧ ದ್ವಾದಶಿಯಂದು ನೆಲ್ಲಿಕಾಯಿಯನ್ನು ಉಪಯೋಗಿಸುವುದನ್ನು ಕಡ್ಡಾಯ ಮಾಡಿದರು. ಕಾರಣ ಶೀತ ಗುಣವುಳ್ಳ ನೆಲ್ಲಿಕಾಯಿ ಶರೀರದ ಉಷ್ಣತೆಯನ್ನು ಶಮನ ಮಾಡುತ್ತದೆ ಎಂದು.
ಪೂರ್ವಿಕರ ಸುದೀರ್ಘ ಮತ್ತು ಸ್ವಸ್ಥ ಜೀವನದ ಹಿಂದೆ ಆಯುರ್ವೇದ ಶಾಸ್ತ್ರದ ಭದ್ರ ತಳಹದಿಯಿದೆ. ಇಂದಿನ ದಿನ ಚಾತುರ್ಮಾಸ್ಯದ ಹಿಂದಿರುವ ಅಪೂರ್ವ ದಿನಚರಿ ಮತ್ತು ಆಚರಣೆ ಮರೆತಿದ್ದೇವೆ. ಅದನ್ನು ಕೇವಲ ಕಠಿಣ ಆಹಾರಶಿಸ್ತು ಎಂದು ಬಗೆದರೆ ಅದು ನಮ್ಮ ತಪ್ಪು. ನಮ್ಮ ಸಂಸ್ಕೃತಿಯ ಇಂಥ ಆಚರಣೆಗಳಲ್ಲಿ ಸಾವಿರಾರು ವರ್ಷಗಳ ಅಪಾರ ಅನುಭವ ಅಡಗಿದೆ.
ಮೊದಲ ಮಾಸ
ನೀರಿನಿಂದ ಬರುವ ಹಲವು ರೋಗಗಳಿಗೆ  ಉತ್ಪತ್ತಿ ಸ್ಥಾನ ಚಾತುರ್ಮಾಸದ ಮೊದಲ ತಿಂಗಳು. ನೆಲದಲ್ಲಿರುವ ಹಲವು ಜಂತುಗಳು ಮೇಲಕ್ಕೆ ಬಂದು ಹೊಸದಾಗಿ ಬೆಳೆದ ಕಾಯಿ ಪಲ್ಲೆಗಳನ್ನು ಸೇರುತ್ತದೆ.  ಮಳೆಗಾಲದ ದಿನ ಅಂದರೆ  ಅದು ವಾತದೋಷದ  ಕಾಲ. ಹಸಿವು ಹೆಚ್ಚು. ತರಕಾರಿ, ಗೆಡ್ಡೆ ಗೆಣಸಿನ ಬಳಕೆಯಿಂದ ವಾತ ಇನ್ನಷ್ಟು ವೃದ್ಧಿ. ಹಾಗಾಗಿ ಅದನ್ನು ದೂರ ಉಳಿಸಿ ಆರೋಗ್ಯ ಸಾಧಿಸುವ ಉಪಾಯವೇ ಮಳೆಗಾಲದ ಮೊದಲ ವ್ರತ ಶಾಖಾವ್ರತ.
ಎರಡನೇ ಮಾಸ
ಆಯುರ್ವೇದ ಪ್ರಕಾರ ಕಫರೋಗ ದೂರವಿಡಲು ಮೊಸರು ಸೇವನೆಗೆ ಕಡಿವಾಣ ಹಾಕಬೇಕು. ಅದು ದಧಿ ಬಿಡುವ ಎರಡನೇ ಪಾಳಿಯ ವ್ರತ. ಈ ಮಾಸದಲ್ಲಿ (ಭಾದ್ರಪದ) ಹಸು ಹಾಗೂ ಇತರ ಹಾಲುಕೊಡುವ ಪ್ರಾಣಿಗಳು ಮೈಥುನದಲ್ಲಿ ತೊಡಗುವುವುವು. ಆದ್ದರಿಂದ ಈ ಕಾಲದಲ್ಲಿ ಮೊಸರು ಸೇವನೆಗೆ ನಿಷೇಧ ವಿಧಿಸಲಾಗಿದೆ.
ಮೂರನೇ ಮಾಸ
ನಂತರ ಗರ್ಭ ಧರಿಸಿರುವ ಹಸುಗಳ ಕ್ಷೀರ ಉಪಯೋಗ ಬಿಡುವ ಉಪಾಯ. ಹಾಲು ಸಹ ಕೊಂಚ ಕಾಲ ಬಿಡುವ ದೂರ ಇಡಿ ಎನ್ನುವ ಸಲಹೆ. ಅದು ಆಶ್ವಯುಜದಲ್ಲಿನ ಚಾತುರ್ಮಾಸ್ಯದ ಮೂರನೇ ಭಾಗದ್ದು.
ನಾಲ್ಕನೇ ಮಾಸ
ಕೊನೆಗೆ ಬೇಳೆಕಾಳು ಅಥವಾ ದ್ವಿದಳ ವ್ರತದಲ್ಲಿ ವಾತಕರ ಆಹಾರದ ನಿಷೇಧವಿದೆ. ಕಾರ್ತಿಕ ಮಾಸದಲ್ಲಿ ಹೊಸ ಧಾನ್ಯ ಉತ್ಪತ್ತಿಯಾಗುತ್ತದೆ. ಅವುಗಳ ಬಳಕೆ ಆರೋಗ್ಯಕರವಲ್ಲ. ಒಟ್ಟಿನಲ್ಲಿ ಮಳೆಗಾಲ ಮತ್ತು ಅನಂತರದ ಋತುಗಳಲ್ಲಿ ಆರೋಗ್ಯ ಪಾಲನೆಯ ಶಿಸ್ತು ನಮ್ಮ ಸಂಸ್ಕೃತಿಯ ನೆಲೆಗಟ್ಟು.   
ಮತ್ತೊಂದು ರೀತಿಯಲ್ಲಿ ಚಾತುರ್ಮಾಸ್ಯದ ಆಹಾರ ನಿಯಮ ಅರ್ಥವತ್ತಾದದು. ವರ್ಷಪೂರ್ತಿ ಉಪಯೋಗಿಸಿದ ತರಕಾರಿಗಳನ್ನು ಆ ಮೊದಲ ಒಂದು ತಿಂಗಳಲ್ಲಿ ಬಿಡುವುದು. ಆ ನಂತರದ ದಿನಗಳಲ್ಲಿ ಮೊಸರು ಮೊದಲಾದವುಗಳನ್ನು ಬಿಡುವುದು ದೇಹಕ್ಕೆ ಹಿತಕರವೆನ್ನಿಸಲು ಕಾರಣವಿದೆ.
ದೇಹಕ್ಕೂ ಸಹ ಒಂದೇ ಬಗೆಯ ಆಹಾರ ಸೇವನೆಯಿಂದ ಕೆಲವು ಪೋಷಕಾಂಶ ಹೆಚ್ಚುವ ಹಾಗೂ ಇತರ  ಪೋಷಕಾಂಶಗಳ ಕೊರತೆ ತಪ್ಪಿದಲ್ಲ.  ಮಾಹಿತಿಗೆ ಮೊ. 9739369621

= ಚಿತ್ರ, ಲೇಖನ: ಗುರುರಾಜ ಪೋಶೆಟ್ಟಿಹಳ್ಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ'.. 'ನಿಮ್ಮನ್ನು ಈರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ'; Kichcha Sudeepಗೆ ಪತ್ರ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್: ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'; Video ವೈರಲ್!