ಫೀನಿಕ್ಸ್
ಫೀನಿಕ್ಸ್ ಜನಪ್ರಿಯ ಪೌರಾಣಿಕ ಪಕ್ಷಿ. ಅದು ಸತ್ತ ನಂತರ ತನ್ನ ಬೂದಿಯಿಂದಲೇ ಮರಳಿ ಹುಟ್ಟಿ ಬರುತ್ತಿದ್ದ ಪಕ್ಷಿ. ಬಹುಶಃ ಪ್ರಾಚೀನ ಮಾನವ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಪಕ್ಷಿಗಳನ್ನು ಕಂಡು ರೋಚಕತೆ ಅನುಭವಿಸುತ್ತ ಇಂಥದ್ದೊಂದು ಪಕ್ಷಿಯ ಕಲ್ಪನೆಯನ್ನು ಮಾಡಿಕೊಂಡಿರಲಿಕ್ಕೂ ಸಾಕು.
ಈ ಸಾಲಿನಲ್ಲಿ ಥಂಡರ್ ಬರ್ಡ್, ರಾಕ್ ಪಕ್ಷಿಗಳೂ ನಿಲ್ಲುತ್ತವೆ. ಪಕ್ಷಿಗಳು ನಮ್ಮ ಪೂರ್ವಜರಿಗೆ ಹವಾಮಾನ ಬದಲವಾಣೆಯನ್ನು ತಿಳಿಸುತ್ತಿದ್ದವು. ಅಲ್ಲದೇ ಅವುಗಳು ಭವಿಷ್ಯವನ್ನೂ ಹೇಳುತ್ತಿದ್ದ ಪ್ರಸಂಗಗಳಿರಬಹುದು. ನಮ್ಮಲ್ಲೂ ಹಕ್ಕಿಪಿಕ್ಕಿ ಜನಾಂಗಗಳಲ್ಲಿ ಭವಿಷ್ಯ ಹೇಳುವವರು ಪಕ್ಷಿಗಳನ್ನು ಬಹುವಾಗಿ ನೆಚ್ಚಿಕೊಂಡಿದ್ದಾರೆ.
ಫೀನಿಕ್ಸ್ ಹಕ್ಕಿ ಸೂರ್ಯನ ಪ್ರತೀಕವಾಗಿಯೂ ಪ್ರಚಲಿತದಲ್ಲಿದೆ. ಏಷ್ಯಾ, ಆಫ್ರಿಕ, ಯುರೋಪ್‌ಗಳಲ್ಲಿ ಫೀನಿಕ್ಸ್ ಬಗ್ಗೆ ಜನಪ್ರಿಯ ಕಥೆಗಳೂ ಹುಟ್ಟಿಕೊಂಡಿವೆ. ಪ್ರಾಚೀನ ಈಜಿಪ್ತಿನಲ್ಲಿ ಫೀನಿಕ್ಸ್ ಸೂರ್ಯದೇವತೆಯ ಪ್ರತೀಕವಾಗಿಯೂ ಕಲಾಕೃತಿಗಳ ಮೆಚ್ಚಿನ ವಸ್ತುವಾಗಿಯೂ ಮೆರೆದಿದೆ. ಅಮರ ನಗರ ಎಂದು ಆ ಕಾಲದಲ್ಲಿ ಪ್ರಸಿದ್ಧವಾದ ರೋಮ್ ನಗರದ ಸಂಕೇತವಾಗಿಯೂ ಫೀನಿಕ್ಸ್ ವರ್ಣಿತ.
-ಎಚ್.ಜಿ.ಮಳಗಿ