ರಾಂಗ್ ಟೈಮ್
ಅಯ್ಯೋ ನಾನು ತಪ್ಪು ಮಾಡಿಬಿಟ್ಟೆ, ಹೀಗೆ ಮಾಡಬಾರದಾಗಿತ್ತು, ನಾನು ಎಷ್ಟು ಮೂರ್ಖ. ಆಗ ಅದು ನನ್ನ ತಲೆಗೆ ಹೊಳೀಲೇ ಇಲ್ಲ.., ಎಂದು ನಾವೆಲ್ಲರೂ ಒಂದಿಲ್ಲೊಂದು ಸಂದರ್ಭದಲ್ಲಿ ನಮಗೆ ನಾವೇ ಹಳಿದುಕೊಳ್ಳುತ್ತೇವೆ.
ತಪ್ಪು ಮಾಡೋದು ಮಾನವನ ಸಹಜ ಗುಣ. ನಾವೆಲ್ಲ ಸ್ಮರಿಸುವ ಗಾಂಧಿ, ಅಬ್ರಾಹಂ ಲಿಂಕನ್ರಂಥ ಹಲವು ಮಹಾನ್ ಸಾಧಕರೂ ತಪ್ಪುಗಳನ್ನು ಮಾಡಿದವರೇ. ಹಾಗಾದರೆ ಅವರಿಗೂ ನಮಗೂ ವ್ಯತ್ಯಾಸವೇನು? ಅವರು ತಪ್ಪಿನಿಂದ ಪಾಠ ಕಲಿತು, ಮಾಡಿದ ತಪ್ಪುಗಳನ್ನು ಮಾಡದೇ ಆದರ್ಶ ಮಾರ್ಗದಲ್ಲಿ ನಡೆದು ಇತರರಿಗೆ ಮಾದರಿಯಾದರು. ನಾವು ನಮಗೆ ಗೊತ್ತಿರುವ ತಪ್ಪುಗಳನ್ನು ಪುನಃಪುನಃ ಮಾಡುತ್ತೇವೆ. ತಪ್ಪುಗಳನ್ನು ಒಪ್ಪಿಕೊಳ್ಳುವ ಜಾಯಮಾನವೂ ನಮ್ಮಲ್ಲಿಲ್ಲ. ನಾವು ಮಾಡಿದ್ದೇ ಸರಿ ಎಲ್ಲವೂ ನಮ್ಮ ಮೂಗಿನ ನೇರಕ್ಕೆ ನಡೆಯಬೇಕೆಂದು ಬಯಸುತ್ತೇವೆ. ತಪ್ಪು ಮಾಡುವುದು ತಪ್ಪು ಎನ್ನುವುದಕ್ಕಿಂತ, ತಿಳಿದೂ ತಿಳಿದೂ ಅದೇ ತಪ್ಪನ್ನು ಮುಂದುವರಿಸುವುದು ದೊಡ್ಡ ತಪ್ಪು.
ತಪ್ಪು ಎಂದರೇನು?
ನಮ್ಮ ಅಜ್ಞಾನದಿಂದ ಉಂಟಾಗುವ ಕ್ರಿಯೆಯೇ ತಪ್ಪು. ಅರಿವಿನ ಕೊರತೆಯಿಂದ ಸಂಭವಿಸುವಂಥದ್ದು. ನಮಗೆ ಆ ಕ್ಷಣಕ್ಕೆ ಸರಿ ಎನಿಸಿದ್ದು, ಅರಿವಿನ ಮೂಸೆಯಲ್ಲಿ ಸರಿಯೆನಿಸಲಾರದ್ದು, ಘಟಿಸಿದ ಮೇಲೆ ತಿಳಿವಳಿಕೆಗೆ ಬರುವಂಥದ್ದು ಎಂದು ನಾವು ಸಾಮಾನ್ಯವಾಗಿ ತಪ್ಪನ್ನು ಅರ್ಥೈಸುತ್ತೇವೆ. ತಪ್ಪಿನ ಮೇಲೆ ಮೊದಮೊದಲು ನಮಗೆ ಅಧಿಕಾರವೇನೂ ಇರುವುದಿಲ್ಲ. ಅವು ತಾವಾಗಿಯೇ ಘಟಿಸುತ್ತವೆ. ನಾವು ಮಾಡುವುದು ತಪ್ಪು ಎಂದು ತಿಳಿದ ಮೇಲೂ ಮುಂದುವರಿಸುತ್ತೇವಲ್ಲ. ಆಗ ತಪ್ಪುಗಳ ಮೇಲೆ ನಮ್ಮ ಅಧಿಕಾರ ಸ್ಥಾಪನೆಯಾಗುತ್ತದೆ. ಆ ಬಳಿಕ ತಪ್ಪು ಮಾಡುವುದು, ಬಿಡುವುದು ನಮ್ಮ ಇಚ್ಚೆಯನ್ನು ಅವಲಂಬಿಸಿದೆ. ತಪ್ಪಿನ ಮೇಲೆ ಅಧಿಕಾರ ಸ್ಥಾಪಿಸಬೇಕೆಂದರೆ ಮಾಡಿದ ತಪ್ಪುಗಳನ್ನು ಮತ್ತೆಂದೂ ಮರುಕಳಿಸದಂತೆ ಎಚ್ಚರವಹಿಸಬೇಕು. ಸಣ್ಣ ಮಕ್ಕಳಿದ್ದಾಗ ನಿತ್ಯ ಹಲವು ತಪ್ಪು ಮಾಡುವುದನ್ನು ಕಾಣುತ್ತೇವೆ. ಕ್ರಮೇಣ ತಪ್ಪುಗಳ ಸಂಖ್ಯೆ ಕಡಿಮೆಯಾಗುತ್ತದೆ. ಅದಕ್ಕೆ ಕಾರಣ ಕಲಿಕೆ ಮತ್ತು ಅನುಭವ.
ಅಭ್ಯಾಸ ಬಲದಿಂದ ಉಂಟಾಗುವುವೇ?
ಚಿಕ್ಕ ಮಕ್ಕಳಿದ್ದಾಗ ಬೆರಳು ಚೀಪುವುದನ್ನು ಕಲಿತವರು ದೊಡ್ಡವರಾದರೂ ಅದನ್ನು ಬಿಡುವುದಿಲ್ಲ. ಇದು ಅಭ್ಯಾಸ ಬಲ. ಉಗುರು ಕಚ್ಚುವುದು, ಮೂಗಿಗೆ ಬೆರಳು ಹಾಕುವುದು, ಕಿವಿಯಲ್ಲಿ ಕಡ್ಡಿ ತೂರಿಸಿಕೊಳ್ಳುವುದು, ಮುಖಕ್ಕೆ ಮುಖ ಕೊಟ್ಟು ಮಾತಾಡದಿರುವುದು. ಇವೆಲ್ಲ ಸಣ್ಣ ವಿಷಯಗಳೆನಿಸಿದರೂ ಅವು ಬರಬರುತ್ತಾ ಕೆಟ್ಟ ಚಟಗಳಾಗುತ್ತವೆ. ಇಂಥ ತಪ್ಪುಗಳನ್ನು ಬಿಡಬೇಕೆಂದರೆ ಕನ್ನಡಿಯ ಮುಂದೆ ಈ ಕ್ರಿಯೆಗಳನ್ನು ಜರುಗಿಸಿ. ಆಗ ನಿಮಗೆ ನಿಮ್ಮ ಮೇಲೆ ಅಸಹ್ಯವೆನಿಸುತ್ತದೆ. ಇದು ಆ ತಪ್ಪನ್ನು ಬಿಡಲು ಮನೋನಿರ್ಧಾರ ಮಾಡುವಂತೆ ಪ್ರೇರೇಪಿಸುತ್ತದೆ.
ತಪ್ಪಿಗೆ ಅವಸರ ಕಾರಣ
ನಾವು ಆತುರದಿಂದ ಕೆಲಸದಲ್ಲಿ ತೊಡಗಿದಾಗ ನಮ್ಮ ಒಳ ಮನಸ್ಸು ಕೆಲಸ ಮಾಡಲಾರಂಭಿಸುತ್ತದೆ. ಅವಸರದ ಸ್ಥಿತಿಯಲ್ಲಿ ವೇಗವಾಗಿ ಕೆಲಸವನ್ನು ನಮ್ಮ ಮೆದುಳು ಕೆಲಸದ ಮೇಲೆ ಹೊರಿಸುತ್ತದೆ. ಆಗ ನಾವು ಮಾಡುತ್ತಿರುವ ಕೆಲಸ ಬೇಗನೆ ನಡೆಯುವ ಬದಲು ತಡವಾಗುತ್ತವೆ ಎಂಬುದನ್ನು ಮನೋವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಕೆಲಸದ ಮೇಲೆ ಅವಸರದ ಭಾರ ತಪ್ಪಿಸಿದರೆ ಮೆದುಳಿಗಾಗುವ ಅಧಿಕ ಕಾರ್ಯಭಾರ ತಪ್ಪಿಸಿ ನಿರ್ದಿಷ್ಟ ತಪ್ಪಿನಿಂದ ಮುಕ್ತರಾಗಬಹುದು.
ಮಾಡುವ ಕೆಲಸದಲ್ಲಿ ಆಸಕ್ತಿ ಇಲ್ಲದಿದ್ದರೂ, ಅದು ತಪ್ಪಿಗೆ ಎಡೆ ಮಾಡಿಕೊಡುತ್ತದೆ. ಕೆಲಸದ ಬಗ್ಗೆ ಸದಭಿರುಚಿಯನ್ನು ಬೆಳೆಸಿಕೊಂಡರೆ ಸರಿಯಾದ ಗಮನ ಹರಿಸಿದರೆ ನಿರಾಸಕ್ತಿಯಿಂದಾಗುವ ತಪ್ಪುಗಳಿಂದ ತಪ್ಪಿಸಿಕೊಳ್ಳಬಹುದು. ನಾನು ಒಂದೂ ತಪ್ಪು ಮಾಡಿಲ್ಲ ಎನ್ನುವವರು ತಮ್ಮ ಬಗ್ಗೆ ಯೋಚಿಸಲೇಬೇಕು. ಏಕೆಂದರೆ, ಅವರು ಯಾವ ಹೊಸ ಕೆಲಸಗಳನ್ನು ಮಾಡಲು ಪ್ರಯತ್ನಿಸಿಲ್ಲ ಎಂದರ್ಥ. ನಡೆಯುವವನೇ ಎಡುವುತ್ತಾನೆ. ಕುಳಿತವನು ಎಡವಲಾರ ಎಂದು ಹೇಳುವುದು ಇದಕ್ಕೇ.
ಜೀವನದಲ್ಲಿ ಮುನ್ನುಗ್ಗಿ ಸಾಗುವ ಭರದಲ್ಲಿ ಹಿಂದೆ ನಡೆದು ಬಂದ ದಾರಿಯನ್ನು ಸಿಂಹದಂತೆ ತಿರುಗಿ ತಿರುಗಿ ನೋಡಿದವರೇ ಹೆಚ್ಚು ಸಾಧಕರಾಗಿ ಹೊರಹೊಮ್ಮಿದ್ದಾರೆ. ಹಿಂದೆ ಮಾಡಿದ ತಪ್ಪುಗಳು ಯಾವುವು? ಅವುಗಳಿಗೆ ಕಾರಣವೇನು ಎಂಬುದನ್ನು ಪರಾಮರ್ಶಿಸಿ, ಮುಂದೆ ಅಂಥ ತಪ್ಪುಗಳನ್ನು ಮಾಡದಂತೆ ಎಚ್ಚರವಹಿಸಿ, ದೂರದೃಷ್ಟಿಯಿಂದ ನಮ್ಮ ಜೀವನದಲ್ಲಿ ಬರುವಂಥ ಸಮಸ್ಯೆಯನ್ನು ಮೊದಲೇ ಊಹಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ.
-ಜಯಶ್ರೀ ಅಬ್ಬಿಗೇರಿ