ವ್ಯೋಮಾಕಾಶದಲ್ಲಿ ಸ್ಥಿರವಾಗಿ ನಿಂತು ಜ್ಯೋತಿಯಂತೆ ಬೆಳಗುತ್ತಿರುವ ಇಪ್ಪತ್ತೇಳು ನಕ್ಷತ್ರಗಳೂ, ನಿರಂತರವಾಗಿ ಚಲಿಸುತ್ತಿರುವ ಅಪ್ರಕಾಶ ಏಳು ಗ್ರಹಗಳೂ, ರಾಹು-ಕೇತುಗಳೆಂಬ ಎರಡು ಛಾಯಾಗ್ರಹಗಳೂ ಹೊರ ಸೂಸುತ್ತಿರುವ ಪ್ರಭಾಜಾಲವು ಆಬ್ರಹ್ಮ ಕೀಟ ಪರ್ಯಂತ ಸ್ಥಾವರ-ಜಂಗಮಾದಿ ಸಮಸ್ತ ಜೀವರಾಶಿಗಳ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತಲೇ ಇರುತ್ತದೆ. ಜೂನ್ 19 ಗುರುವಾರ ಬೆಳಗ್ಗೆ 7.21 ನಿಮಿಷಕ್ಕೆ ಗುರುಗ್ರಹ ಮಿಥುನರಾಶಿಯಿಂದ ಕಟಕರಾಶಿ ಪ್ರವೇಶಿಸುತ್ತದೆ. ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ದಯಪಾಲಿಸುವ ಬೃಹಸ್ಪತಿಯು ತನ್ನ ಉಚ್ಛಸ್ಥಾನವಾದ ಕಟಕರಾಶಿಯನ್ನು ಪ್ರವೇಶಿಸುವುದರ ಫಲಸ್ವರೂಪವಾಗಿ ದ್ವಾದಶರಾಶಿಯವರಿಗೆ ಏನೇನು ಫಲ ನೀಡುತ್ತಾನೆಂದು ತಿಳಿಯೋಣ.
ಮೇಷ
ನಿಮಗೆ ಚತುರ್ಥ ಗುರು, ಇದರ ಫಲವಾಗಿ ಬಂಧು ಬಾಂಧವರಲ್ಲಿ ವಿವಾದ, ಮಾನಸಿಕ ಅಶಾಂತಿ ಹಾಗೂ ಸಮಚಿತ್ತ ಇರದು. ಶತ್ರುಗಳಂದ ತೊಂದರೆ ಎದುರಾಗಲಿವೆ. ಕೈಗೆ ಬಂದ ಹಣ ಧಾರಾಳವಾಗಿ ವ್ಯಯವಾಗುತ್ತದೆ. ಹಲವು ಬಾರಿ ನಿರ್ವಿಕಾರತೆ ಕಾಡಿಸುತ್ತದೆ. ವೃಥಾ ಅಲೆದಾಟದಿಂದ ದೇಹಾಯಾಸ. ಚತುಷ್ಪಾದ ಪ್ರಾಣಿಗಳಿಂದ ನಷ್ಟ ಹಾಗೂ ತೊಂದರೆ ಸಂಭವಿಸಬಹುದು. ವಿನಾಯಕ ಸೇವೆಯಿಂದ ಮನಃ ಶಾಂತಿ, ಕಡಲೆ ದಾನ.
ವೃಷಭ
ಗುರು ತೃತೀಯಕ್ಕೆ ಬರುವುದರಿಂದ ಸ್ಥಾನ ಚಲನ, ಕರ್ಮವಿಘ್ನ, ಬಂಧು ಜನರ ವಿರೋಧ, ಕೈಕೊಂಡ ಕೆಲಸ ಕಾರ್ಯ ಆಮೆಗತಿಯಲ್ಲಿ ಸಾಗುತ್ತವೆ. ಸ್ಥಳಬಿಟ್ಟು ಹೋಗಿ ಪರಸ್ಥಳದಲ್ಲಿ ಬವಣೆ ಪಡುತ್ತೀರಿ. ಮನಸ್ಸಿಗೆ ನಾನಾ ರೀತಿಯಾದ ಚಿಂತೆ ಕಾಡಿಸುತ್ತವೆ. ಸಹೋದರರಲ್ಲಿ ಭಿನ್ನಾಭಿಪ್ರಾಯ. ನಿಮ್ಮವರೇ ಮುಖ ತಿರುಗಿಸುತ್ತಾರೆ. ಶ್ರೀಗುರು ಮಂತ್ರವಾದ ಓಂ ಗ್ರಾಂ ಗ್ರೀಂ ಗ್ರೌಂ ಸಃ ಗುರವೇ ನಮಃ ಮಂತ್ರ ಸದಾಕಾಲ ಜಪಿಸಿ.
ಮಿಥುನ
ದ್ವಿತೀಯ ಗುರುವಿನ ಫಲವೇನೆಂದರೆ- ಹಲವು ಮೂಲಗಳಿಂದ ಧನ ಸಂಚಯ, ಆಸ್ತಿಪಾಸ್ತಿ ಖರೀದಿ, ಉದ್ಯೋಗಾರ್ಥಿಗಳಿಗೆ ಶುಭವಾರ್ತೆ ಬರುವುದು. ಕುಟುಂಬದಲ್ಲಿ ಸುಖ ಸಮೃದ್ಧಿ ಕಾಣುವಿರಿ. ವಿವಾಹಾಕಾಂಕ್ಷಿಗಳಿಗೆ ಕಂಕಣಬಲ ಕೂಡಿ ಬರುವುದು. ವಿದ್ಯಾರ್ಥಿಗಳಿಗೆ ಸಂಶೋಧಕರಿಗೆ ಯಶಸ್ಸು ದೊರೆಯುವುದು. ಪರೋಪಕಾರಿಗಳೆನಿಸಿ ಖ್ಯಾತಿ ಹೊಂದುವಿರಿ.
ಕಟಕ
ಜನ್ಮಗುರು, ನಿಮ್ಮ ಸ್ಥಾನ ಮಾನಗಳಿಗೆ ಚ್ಯುತಿ, ಬರುವ ಆದಾಯಕ್ಕೆ ಅಡೆ-ತಡೆ ಉಂಟುಮಾಡುವನು. ವ್ಯಾಜ್ಯಗಳಿಂದ ಬವಣೆ ಪಡುವಿರಿ. ವ್ಯಾಪಾರ ಉದ್ಯೋಗಗಳಲ್ಲಿ ಪ್ರಗತಿ ಕುಂಠಿತವಾಗುವುದು. ಬಂಧು-ಮಿತ್ರರಲ್ಲಿ ಕಲಹ ಉಂಟಾಗಲಿದೆ. ಜನ್ಮ ಸ್ಥಳದಿಂದ ದೂರವಿರಬೇಕಾದ ಪರಿಸ್ಥಿತಿ. ತಾಳ್ಮೆಯೇ ರಾಮಬಾಣ. ಶ್ರೀದೇವಿ ಉಪಾಸನೆ.
ಸಿಂಹ
ವ್ಯಯಗುರು, ವಿಪರೀತ ಖರ್ಚು, ಯತ್ನ ಕಾರ್ಯಗಳಲ್ಲಿ ವಿಘ್ನ. ನ್ಯಾಯಮಾರ್ಗದಲ್ಲಿ ನಡೆದರೂ ಅಸಫಲತೆ. ವಿಶ್ವಾಸಿಗಳು ಸಂಶಯ ದೃಷ್ಟಿಯಿಂದ ನೋಡುತ್ತಾರೆ. ಸತ್ಪತ್ನಿಯ ಸಹವಾಸ ಸೌಖ್ಯಗಳಿಂದ ವಂಚಿತರಾಗುತ್ತೀರ. ಸರ್ಕಾರಿ ನೌಕರರಿಗೆ ಸ್ಥಳ ಬದಲಾವಣೆ. ಮನಸ್ಸಿಗೆ ಚಿಂತೆ. ವೃಥಾ ಧನವ್ಯಯ, ಗುರುರಾಯರ ಧ್ಯಾನ ಸತತ ಮಾಡಿ.
ಕನ್ಯಾ
ಲಾಭ ಗುರು, ಸರ್ವ ಕಾರ್ಯಗಳಲ್ಲಿ ಜಯವೂ, ಯಶಃ, ಕೀರ್ತಿ, ಲಾಭಗಳಿಗೆ ಭಾಜನರಾಗುವಿರಿ. ಅವಿವಾಹಿತರಿಗೆ ಬಾಳಸಂಗಾತಿ ದೊರೆತು, ಮಧುಚಂದ್ರದ ಸುಖ. ವಾಹನ ಪ್ರಾಪ್ತಿ, ನೂತನ ಗೃಹ, ನಿವೇಶನ ಹೊಂದಲು ಶುಭಕಾಲ. ಹಲವರಿಗೆ ಪುತ್ರ ಸಂತಾನ ಪ್ರಾಪ್ರಿ, ಸತ್ಕರ್ಮಾಸಕ್ತಿ, ವಿದ್ವಜ್ಜನರ ಭೇಟಿ. ವಿಷ್ಣು ಸಹಸ್ರನಾಮ ಪಠಿಸಿ.
ತುಲಾ
ದಶಮ ಗುರು. ಇದು ಕರ್ಮಭಾವ. ಯತ್ನ ಕಾರ್ಯಗಳಲ್ಲಿ ಅಡತಡೆ, ಕೃಷಿಕರಿಗೆ ಅಲ್ಪಲಾಭ. ಸಂಚಾರದಿಂದ ದೇಹಾಯಾಸ, ವ್ಯಾಪಾರ ವ್ಯವಹಾರದಲ್ಲಿ ಸಾಧಾರಣವಾದ ಪ್ರಗತಿ. ಬಂಧು ಜನರ ವಿರೋಧ. ನಿಮ್ಮವರ ಅನಾದರಣೆಗೆ ಗುರಿಯಾಗುವಿರಿ. ಕಳ್ಳಕಾಕರಿಂದ ತೊಂದರೆ ಉಂಟಾಗಬಹುದು. ಗುರುವಾರ ಉಪವಾಸವಿರಿ. ಶ್ರೀದತ್ತ ಪೂಜೆ ಮಾಡಿ.
ವೃಶ್ಚಿಕ
ನವಮ ಗುರು. ಇದನ್ನು ಲಕ್ಷ್ಮೀ ಸ್ಥಾನವೆಂದು ಕರೆಯುತ್ತಾರೆ. ಇದು ನಿಮ್ಮ ಭಾಗ್ಯೋದಯಕ್ಕೆ ನಾಂದಿ. ಕೈಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸುತ್ತದೆ. ಗೃಹ-ನಿವೇಶನ ಖರೀದಿಗೆ ಕಾಲಕೂಡಿ ಬಂದಿದೆ. ಪುತ್ರ ಪ್ರಾಪ್ತಿ ಹಾಗೂ ಪುತ್ರರಿಗೆ ಉನ್ನತಿ. ಸರ್ಕಾರಿ ನೌಕರರಿಗೆ ಪದೋನ್ನತಿ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಭಾವಿಗಳೆನಿಸುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.
ಧನಸ್ಸು
ಅಷ್ಟಮ ಗುರು. ಸರಳ ಭಾಷೆ ಹೇಳಬೇಕೆಂದರೆ 'ಕಷ್ಟಮ' ಗುರು ಎಂದೇ ಅರ್ಥ. ಅನಾರೋಗ್ಯ, ಸಾಲ ಸೋಲಗಳು ಕಾಡಿಸುತ್ತವೆ. ವ್ಯಾಪಾರದಲ್ಲಿ ನಷ್ಟ ಸಂಭವ. ಪ್ರಯಾಸಕರ ಪ್ರಯಾಣಗಳು. ಸರ್ಕಾರಿ ನೌಕರರಿಗೆ ವರ್ಗಾವಣೆಯ ಭೀತಿ. ಮೇಲಧಿಕಾರಿಗಳ ಅವಕೃಪೆ. ವಾಹನಾಪಘಾತದಿಂದ ಎಚ್ಚರವಿರಿ. ಶ್ರೀ ಶಿರಡಿ ಸಾಯಿಬಾಬಾ ಧ್ಯಾನ ಮಾಡಿ.
ಮಕರ
ಸಪ್ತಮ ಗುರು. ಮನೆಯಲ್ಲಿ ಮಂಗಳ ವಾದ್ಯ ಮೊಳಗೀತು. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಹಾಗೂ ಲಾಭ ಎಲ್ಲ ಕೆಲಸಗಳಲ್ಲಿ ಗೃಹಲಕ್ಷ್ಮಿಯ ಬೆಂಬಲ ದೊರೆಯುವುದು. ಅಧಿಕಾರಿಗಳ ಅನುಗ್ರಹ. ಪ್ರಭುಜನದಿಂದ ಸನ್ಮಾನ. ನಿಮ್ಮ ಬುದ್ಧಿ ಕುಶಲತೆಯಿಂದ ಕಾರ್ಯಸಾಧಿಸಿಕೊಳ್ಳುವಿರಿ. ಸ್ಥಾನ. ಸನ್ಮಾನಗಳೂ ಲಭಿಸುತ್ತವೆ. ಶ್ರೀ ಮಾರುತೀ ಸ್ಮರಣೆ.
ಕುಂಭ
ಷಷ್ಠ ಗುರು. ಫಲವೇನೆಂದರೆ ಮನಃ ಶಾಂತಿ ಇಲ್ಲದಿರುವಿಕೆ. ಶತ್ರುಗಳು ಮೇಲುಗೈ ಸಾಧಿಸುವರು. ಸಾಲ ತರಬೇಕಾದ ಸಂದರ್ಭ ಎದುರಾಗುವುದು. ಮಿತ್ರರಲ್ಲಿ ವಿನಾಕಾರಣವಾದ ವಿರೋಧ. ಅಸಂತುಷ್ಟವಾದ ಮನಸ್ಸು. ಕೊಟ್ಟಸಾಲ ವಾಪಸ್ಸು ಬರದು. ಅಗ್ನಿ ಮತ್ತು ಕಳ್ಳರಿಂದ ಜಾಗೃತರಾಗಿರಿ. ಅನಾರೋಗ್ಯವೂ ಕಾಡಿಸೀತು. ಸತ್ಯನಾರಾಯಣ ಸೇವೆ.
ಮೀನ
ಪಂಚಮ ಗುರು. ಇದು ಗುರುವಿಗೆ ಶುಭ ಸ್ಥಾನ. ನಾನಾ ಮೂಲಗಳಿಂದ ಧನಲಾಭ. ವಸ್ತ್ರಾಭರಣ ಪ್ರಾಪ್ತಿ. ನೂತನ ವಾಹನ ಖರೀದಿ. ಮನೆಗೆ ತೋರಣ ಕಟ್ಟಿ ಮಂಗಳ ಕಾರ್ಯ ಜರುಗುವುದು. ಹಲವರಿಗೆ ಪುತ್ರ ಸಂತಾನ ಪ್ರಾಪ್ತಿಯೋಗ. ಸಜ್ಜನರ ಸಹವಾಸ. ಸರ್ಕಾರದಿಂದ ಅನುಕೂಲಗಳು ದೊರೆಯುವುವು. ಯತ್ನ ಕಾರ್ಯಸಿದ್ಧಿ. ಶ್ರೀ ವಿಷ್ಣು ಸಹಸ್ರನಾಮ ಪಠಿಸಿ. ಮಾಹಿತಿಗಾಗಿ 9740973224
- ಚೈತನ್ಯ ಶ್ರೀ.ವಿ.ಕೇಶವಮೂರ್ತಿ