'ಧರ್ಮೋ ರಕ್ಷತಿ ರಕ್ಷಿತಃ' ಅಂದರೆ ನಾವು ಧರ್ಮವನ್ನು ಕಾಪಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ- ಎಂಬುದು ಪ್ರಾಚೀನ ಉಕ್ತಿ. ಆದರೆ, ಇಂದು ಧರ್ಮದ ಅಪವ್ಯಾಖ್ಯಾನದಿಂದ ಸಮಾಜ ಅವನತಿಯತ್ತ ಸಾಗುತ್ತಿದೆ.
ಧರ್ಮವೆಂಬುದು 'ಮತ' ಎಂಬ ಸಂಕುಚಿತ ಅರ್ಥದಲ್ಲಿ ಬಳಕೆಯಾಗುತ್ತಿದ್ದು, ತುಂಬಾ ಗೊಂದಲವನ್ನುಂಟು ಮಾಡುವ ಪದವಾಗುತ್ತಿದೆ. 'ಧಾರಣಾತ್ ಧರ್ಮಃ' ಎಂಬುದು ಧರ್ಮದ ನಿಜವಾದ ವ್ಯಾಖ್ಯಾನ. ಯಾವ ಆಚರಣೆಯು ನಮ್ಮನ್ನು ಮನುಷ್ಯತ್ವದಿಂದ ಕೆಳಕ್ಕೆ ಬೀಳದಂತೆ ತಡೆದು, ಎಲ್ಲ ರೀತಿಯ ವಿನಾಶ ಮತ್ತು ಅಧೋಗತಿಯಿಂದ ರಕ್ಷಿಸಿ, ಸರ್ವಾಂಗೀಣ ಉನ್ನತಿಯತ್ತ ಸೆಳೆದೊಯ್ಯುತ್ತದೆಯೋ ಅದೇ ಧರ್ಮ. ಜೀವನದಲ್ಲಿ ಸರಿ ದಾರಿಯಲ್ಲೇ ನಡೆಯುವಂತೆ ನಮ್ಮನ್ನು ಪ್ರೇರಿಸುವ ಪರಂಪರಾಗತ ಆಚರಣೆಗೆ ಸನಾತನ ಧರ್ಮವೆಂದು ಹೆಸರು.
'ಅಹಿಂಸಾ ಪರಮೋಧರ್ಮಃ' ಎಂಬ ಸೂಕ್ತಿ ಪ್ರಸಿದ್ಧವಾಗಿದೆ. ಈ ಧರ್ಮದ ಹರಹು ಅತಿ ವಿಸ್ತಾರ, ಜಟಿಲ ಹಾಗೂ ಸೂಕ್ಷ್ಮವಾದುದು. ಹಿಂಸೆ ಅಧರ್ಮ ಹೌದು. ಆದರೆ ಪ್ರಾಣಿಗಳನ್ನು ಕೊಂದು ತಿನ್ನುವುದು ಬೇಡನ ವೃತ್ತಿ ಧರ್ಮ. ಅವನಿಗೆ ಅದೇ ಬದುಕು. ಧರ್ಮ ನಮ್ಮನ್ನು ಕಾಪಾಡುವಂತಿರಬೇಕು. ಪ್ರಾಣಾಪಾಯದಿಂದ ಪಾರಾಗಲು ಇತರರಿಗೆ ಕೆಡುಕಾಗದಂತೆ ಒಂದು ಸುಳ್ಳನ್ನು ಹೇಳುವುದು ಆತ್ಮರಕ್ಷಾ ಧರ್ಮ. ಬದುಕಿನುದ್ದಕ್ಕೂ ಸುಳ್ಳನ್ನು ಹೇಳುವುದು ಆತ್ಮರಕ್ಷಾ ಧರ್ಮ. ಬದುಕಿನುದ್ದಕ್ಕೂ ಸುಳ್ಳನ್ನು ಹೇಳುವುದನ್ನೇ ಹವ್ಯಾಸವಾಗಿಸಿಕೊಂಡರೆ ಅದು ಅವವನ ಅವನತಿಗೆ ಕಾರಣವಾದ ಅಧರ್ಮ.
ಯಾವುದೇ ಒಂದು ನಿಯಮಿತವಾದ ಕಾಲದಲ್ಲಿ ಅಥವಾ ಯಾವನೇ ಒಬ್ಬ ಮೂಲ ಪುರುಷನಿಂದ ಈ ಧರ್ಮವೆಂಬುದು ಪ್ರಾರಂಭವಾಗಿ ಪ್ರಚಾರಕ್ಕೆ ಬಂತು ಎಂದು ಹೇಳಲಾಗದು. ಧರ್ಮಕ್ಕೆ ಎಲ್ಲೆಯಿಲ್ಲ. ಜಗತ್ತಿನಲ್ಲಿ ಜನಿಸಿರುವ ಪ್ರತಿಯೊಬ್ಬರಿಗೂ ಅನ್ವಯವಾಗುವ ಧರ್ಮವೇ ಜಾಗತಿಕ ಧರ್ಮವೆನಿಸಿಕೊಳ್ಳುತ್ತದೆ. ರಾವಣ ದೇವತೆಗಳನ್ನೇ ಗೆದ್ದು ಸೂರ್ಯ ಚಂದ್ರ ದಿಕ್ಪಾಲರನ್ನು ದಾಸರನ್ನಾಗಿಸಿಕೊಂಡು ಸುವರ್ಣ ಲಂಕೆಯಲ್ಲಿ ಮೆರೆದ. ದುರ್ಯೋಧನ ಸ್ವಯಂ ಘೋಷಿತ ಚಕ್ರವರ್ತಿಯಾಗಿ ಹಸ್ತಿನಾವತಿಯನ್ನು ಆಳಿದ, ಪಾಂಡವರನ್ನು ಕಾಡಿದ. ದೇವರೆಲ್ಲಿದ್ದಾನೆ ಎಂಬ ಭ್ರಮೆಯಲ್ಲಿ ಹಿರಣ್ಯಕಶಿಪು ಹಲವು ಬಾರಿ ಮಗನನ್ನೇ ಸಾಯಿಸಲು ಪ್ರಯತ್ನಿಸಿದ. ಇವರೆಲ್ಲರ ಅಂತ್ಯ ಹೇಗಾಯಿತು ಎಂಬ ದೃಷ್ಟಾಂತದ ಮೂಲಕ ಅಧರ್ಮಚಾರಣೆಯಿಂದ ಸರ್ವನಾಶವಾಗುತ್ತದೆಂದು ಬೋಧಿಸುವುದೇ ಧರ್ಮ.
ಆಹಾರ, ನಿದ್ದೆ, ಭಯ, ಮೈಥುನ- ಎಂಬ ನಾಲ್ಕು ವಿಚಾರಗಳು ಮಾನವರಲ್ಲೂ ಪಶುಗಳಲ್ಲೂ ಸಮಾನವಾಗಿರುತ್ತದೆ. ಆದರೆ 'ಮಾನವ ಧರ್ಮ'ವೆಂಬುದು ಆತನ ವೈಶಿಷ್ಟ್ಯ. ಧರ್ಮಬಾಹಿರನಾದ ಮನುಷ್ಯ ಬಾಲಕೊಂಬುಗಳಿಲ್ಲದ ಪಶುವಿಗೆ ಸಮಾನ.
ನಮ್ಮ ಅವಸಾನದಲ್ಲಿ, ನಾವು ಗಳಿಸಿದ್ದ್ದ ಸಂಪತ್ತು ಮಣ್ಣು ಪಾಲಾಗುತ್ತದೆ ಅಥವಾ ತಿಜೋರಿಯಲ್ಲೇ ಉಳಿಯುತ್ತದೆ. ಜೀವನ ಸಂಗಾತಿಯೂ ದುಃಖಿತಳಾಗಿ ಮನೆಯ ಬಾಗಿಲಲ್ಲೇ ಉಳಿದುಕೊಳ್ಳುತ್ತಾಳೆ. ಬಂಧು ಮಿತ್ರರು ಮಸಣದ ತನಕ ಬಂದಾರು. ಆದರೆ ನಾವು ಆಚರಿಸಿದ ಧರ್ಮ ಮಾತ್ರ ಲೋಕಾಂತರದಲ್ಲೂ ನಮ್ಮನ್ನು ಅನುಸರಿಸುತ್ತದೆ. ಪ್ರತಿಯೊಂದು ವೃತ್ತಿಯಲ್ಲೂ ನಿಷ್ಠೆಯಿಂದ ನಿರ್ವಹಿಸುವ ಕರ್ತವ್ಯವೇ ನಿಜವಾದ ಧರ್ಮ. ಸ್ವಂತಕ್ಕಾಗಿಯೂ, ದೇಶಕ್ಕಾಗಿಯೂ ಕ್ರಿಯಾಶೀಲರಾಗಿರುವಿಕೆ, ಕಠೋರ ಶ್ರಮ, ಸ್ವಾತಂತ್ರ್ಯದ ರಕ್ಷಣೆ- ಇವು ಇಂದು ನಾವು ಪಾಲಿಸಬೇಕಾದ ಧರ್ಮ.
ಸತ್ಯಂ ಬ್ರೂಯತ್, ಪ್ರಿಯಂ ಬ್ರೂಯಾತ್‌ನ ಬ್ರೂಯಾತ್ ಸತ್ಯಮಪ್ರಿಯಂ !
ಪ್ರಿಯಂ ಚ ನಾನೈತಂ ಬ್ರೂಯಾತ್ ಏಷಧರ್ಮಃ ಸನಾತನಃ
ಪ್ರಿಯವಾದ ಸತ್ಯವನ್ನೇ ಹೇಳಬೇಕು. ಪ್ರಿಯವೆಂದು ಅಸತ್ಯವನ್ನಾಗಲಿ ಅಪ್ರಿಯವೆಂಬ ಸತ್ಯವನ್ನಾಗಲೀ ಹೇಳಬಾರದು. ಇದೇ ಸನಾತನ ಧರ್ಮ. ಧರ್ಮದ ಬುನಾದಿಯ ಮೇಲೆ ನಮ್ಮೆಲ್ಲ ಸಾಧನೆಯ ಸಾಧನೆಗಳೂ ನಿಲ್ಲಬೇಕು.
= ಎಸ್. ವೆಂಕಟರಮಣ ಅಡಿಗ